ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿಯುತ್ತಿವೆ ಮಳಿಗೆಗಳು: ಗ್ರಾಹಕರಿಗೆ, ವ್ಯಾಪಾರಸ್ಥರಿಗೆ ಫಜೀತಿ

ಮಾರುಕಟ್ಟೆಯತ್ತ ಬರಲು ಗ್ರಾಹಕರೂ ಹಿಂದೇಟು
Last Updated 22 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಮಡಿಕೇರಿ: ಬಿರುಕು ಬಿಟ್ಟಿರುವ ಗೋಡೆಗಳು, ಒಡೆದು ಹೋಗಿರುವ ಚಾವಣಿ ಶೀಟು, ಎಲ್ಲೆಂದರಲ್ಲಿ ದೂಳು, ದುರ್ವಾಸನೆ... ಜೋರು ಗಾಳಿಗೆ ಮಳಿಗೆಗಳು ಕುಸಿಯುವ ಆತಂಕ, ತ್ಯಾಜ್ಯ ವಿಲೇವಾರಿಗೂ ಸಂಕಷ್ಟ, ರೋಗದ ಭೀತಿ...

ಜಿಲ್ಲಾ ಕೇಂದ್ರದಿಂದ ಬಹುದೂರವಿರುವ ಯಾವುದೋ ಮಾರುಕಟ್ಟೆಯ ಸ್ಥಿತಿಯಲ್ಲ. ‘ಮಂಜಿನ ನಗರಿ’, ಪ್ರವಾಸಿಗರ ಸ್ವರ್ಗ ಮಡಿಕೇರಿಯ ಮಾಂಸದ ಮಾರುಕಟ್ಟೆಯ ನೈಜಸ್ಥಿತಿ.

ಶುಚಿತ್ವದ ಕೊರತೆಯಿಂದ ರೋಗದ ಭೀತಿ ಎದುರಾಗಿದೆ. ಆಗಲೋ– ಈಗಲೋ ಬೀಳುವ ಸ್ಥಿತಿಯಲ್ಲಿ ಕಟ್ಟಡವಿದ್ದು ಜೀವ ಭಯದಲ್ಲಿ ಮಾಂಸದ ವ್ಯಾಪಾರಿಗಳು ಕೆಲಸ ಮಾಡುತ್ತಿದ್ದಾರೆ. ಗ್ರಾಹಕರೂ ಅಲ್ಲಿಗೆ ತೆರಳಿ ಕೋಳಿ– ಕುರಿ ಮಾಂಸ ಹಾಗೂ ಮೀನು ಖರೀದಿಸಲು ಭಯ ಪಡುತ್ತಿದ್ದಾರೆ. ನಗರಸಭೆ ಆಡಳಿತಾವಧಿ ಮುಕ್ತಾಯವಾಗಿ ವರ್ಷ ಕಳೆದಿದ್ದು ವ್ಯಾಪಾರಸ್ಥರು ಹಾಗೂ ಗ್ರಾಹಕರ ಅಳಲು ಆಲಿಸುತ್ತಿಲ್ಲ; ಕಣ್ಣೀರು ಒರೆಸುತ್ತಿಲ್ಲ. ಅಧಿಕಾರಿಗಳೂ ಸ್ಪಂದಿಸುತ್ತಿಲ್ಲ ಎಂಬ ನೋವು ವ್ಯಾಪಾರಿಗಳದ್ದು.

ಮಡಿಕೇರಿಯಲ್ಲಿ ಪ್ರತಿ ಶುಕ್ರವಾರ ನಡೆಯುವ ತರಕಾರಿ ಸಂತೆಗೆ ಸುಸಜ್ಜಿತ ಕಟ್ಟಡ ನಿರ್ಮಿಸಿ ಮಾರಾಟಕ್ಕೆ ಅನುಕೂಲ ಕಲ್ಪಿಸಲಾಗಿದೆ. ಅದೇ ಕಟ್ಟಡದಲ್ಲಿ, ಮಾಂಸದ ವ್ಯಾಪಾರಿಗಳಿಗೂ ವ್ಯವಸ್ಥೆಯಿದ್ದರೂ ಅವರಿಗೆ ಪ್ರತ್ಯೇಕ ಮಳಿಗೆ ನಿರ್ಮಿಸಿಕೊಟ್ಟಿಲ್ಲ. ಹೀಗಾಗಿ, 13 ಮಳಿಗೆಗಳು ಹಳೆಯ ಸ್ಥಳದಲ್ಲಿ ದುರ್ವಾಸನೆಯ ನಡುವೆಯೇ ಕೆಲಸ ಮಾಡುತ್ತಿದ್ದಾರೆ. ಈಚೆಗೆ ಮೂಲಸೌಲಭ್ಯಕ್ಕೆ ಆಗ್ರಹಿಸಿ ಮಾಂಸದ ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದರು. ಅಂದು ಸ್ಥಳಕ್ಕೆ ಬಂದಿದ್ದ ನಗರಸಭೆ ಅಧಿಕಾರಿಗಳು ಸೌಲಭ್ಯ ಕಲ್ಪಿಸುವ ಭರವಸೆ ನೀಡಿ ಹೋಗಿದ್ದರು. ಅದಾದ ಮೇಲೆ, ವಿಧಾನ ಪರಿಷತ್‌ ಸದಸ್ಯ ಎಂ.ಪಿ.ಸುನಿಲ್‌ ಸುಬ್ರಮಣಿ ಅವರೂ ಸುತ್ತು ಹಾಕಿ ಹೋಗಿದ್ದರು. ಬಳಿಕ ಯಾವುದೇ ಕ್ರಮವಾಗಿಲ್ಲ.

ಕೋಳಿ, ಮೀನು ಮಾಂಸದ ತ್ಯಾಜ್ಯಗಳು ಎಲ್ಲೆಂದರಲ್ಲಿ ಹಾಕಿದ ಪರಿಣಾಮ ಮಾರುಕಟ್ಟೆಯೇ ತಿಪ್ಪೆಯಾಗಿದೆ. ಇಲ್ಲಿನ ಈ ವಾತಾವರಣವು ಗ್ರಾಹಕರಿಗೆ ತೀವ್ರ ಕಿರಿಕಿರಿ ತರುತ್ತಿದೆ. ಇಡೀ ಆವರಣ ಗಬ್ಬೆದ್ದು ನಾರುತ್ತಿದೆ. ಮಾರುಕಟ್ಟೆಯಲ್ಲಿ ತ್ಯಾಜ್ಯವನ್ನು ಸಂಗ್ರಹಿಸಲು ನಗರಸಭೆ ವ್ಯವಸ್ಥೆ ಮಾಡಿಲ್ಲ ಎಂಬ ಅಳಲು ವ್ಯಾಪಾರಿಗಳದ್ದು.

‘ಮಾರುಕಟ್ಟೆಯ ಅಂಗಡಿಗಳಿಗೆ ಬಾಡಿಗೆ ಪಾವತಿಸುತ್ತೇವೆ. ಪ್ರತಿ ವರ್ಷ ಬಿಡ್‌ ಮಾಡಿ ಮಳಿಗೆ ನೀಡುತ್ತಾರೆ. ಆದರೆ, ಸೌಲಭ್ಯ ಕಲ್ಪಿಸುತ್ತಿಲ್ಲ. ಮಳಿಗೆಯ ಮುಂದೆ ಕಾಂಕ್ರೀಟ್‌ ಹಾಗೂ ಡಾಂಬರ್‌ ಸಹ ಹಾಕಿಲ್ಲ. ದೂಳು ತೂಗು ಹಾಕಿದ್ದ ಮಾಂಸದ ಮೇಲೂ ರಾಚುತ್ತಿದೆ’ ಎಂದು ವ್ಯಾಪಾರಿಗಳೂ ನೋವು ತೋಡಿಕೊಳ್ಳುತ್ತಾರೆ.

ತುಕ್ಕು ಹಿಡಿದ ಕಬ್ಬಿಣ, ಬಿರುಕು ಬಿಟ್ಟ ಗೋಡೆ:ಸತತ ಎರಡು ವರ್ಷ ಸುರಿದ ಭಾರಿ ಮಳೆಯಿಂದ ಸುಮಾರು 10ಕ್ಕೂ ಹೆಚ್ಚು ಮಳಿಗೆಗೆ ಹಾನಿಯಾಗಿದೆ. ಕೆಲವು ಮಳಿಗೆಯ ಗೋಡೆಗಳು ಬಿರುಕು ಬಿಟ್ಟಿವೆ. ಮಳಿಗೆ ಹಿಂಬದಿಯಲ್ಲಿ ಕಬ್ಬಿಣದ ಸರಳುಗಳು ತುಕ್ಕು ಹಿಡಿದು ಬೀಳುವ ಹಂತ ತಲುಪಿವೆ. ಒಂದುವೇಳೆ ಕಟ್ಟಡ ಕುಸಿದರೆ ಜೀವಹಾನಿಯಾಗುವ ಆತಂಕವಿದೆ. ಅದಕ್ಕೂ ಮೊದಲು ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ವ್ಯಾಪಾರಸ್ಥರು ಕೋರುತ್ತಾರೆ.

ಶುದ್ಧೀಕರಣವೂ ಇಲ್ಲ:ಕೋಳಿ, ಕುರಿ ಹಾಗೂ ಮೀನು ಶುಚಿ ಮಾಡಿದ ಕಲುಷಿತ ನೀರು ಹಿಂಬದಿಯ ದೊಡ್ಡ ಹೊಂಡ ಸೇರಿ ದುರ್ವಾಸನೆ ಬೀರುತ್ತಿದೆ. ಕಲುಷಿತ ನೀರನ್ನು ಶುದ್ಧೀಕರಿಸುತ್ತಿಲ್ಲ. ಇದರಿಂದ ಅಕ್ಕಪಕ್ಕದ ಬಡಾವಣೆಗಳಿಗೂ ರೋಗದ ಭೀತಿ ಎದುರಾಗಿದೆ.

ಏನು ಮಾಡಬಹುದು?:ಈಗಿರುವ ಮಳಿಗೆಗಳನ್ನು ತೆರವು ಮಾಡಿ ಸುಸಜ್ಜಿತ ಮಾಂಸದ ಮಾರುಕಟ್ಟೆ ನಿರ್ಮಿಸಬೇಕು. ಇಲ್ಲವೇ ಖಾಸಗಿ ಜಾಗ ಖರೀದಿಸಿ ಒಂದೇ ಸೂರಿನ ಅಡಿ ಕೋಳಿ, ಕುರಿ ಹಾಗೂ ಮೀನು ಮಾರುಕಟ್ಟೆ ನಿರ್ಮಿಸಬಹುದು. ಅಲ್ಲಿಗೆ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕು. ಮಳೆಗಾಲದಲ್ಲಿ ಮಡಿಕೇರಿಯಲ್ಲಿ ಧೋ... ಎಂದು ಸುರಿಯುವ ಮಳೆಯ ನಡುವೆ ವ್ಯಾಪಾರಕ್ಕೆ ಅನುಕೂಲವಾಗಲಿದೆ. ಇಲ್ಲದಿದ್ದರೆ ಈ ವರ್ಷದ ಮಳೆಗಾಲದಲ್ಲಿ ವ್ಯಾಪಾರಿಗಳಿಗೆ ದಿನದೂಡುವುದೇ ಸವಾಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT