ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಪೊ ದರ ಗರಿಷ್ಠ ಶೇ 0.35ರಷ್ಟು ಹೆಚ್ಚಳ ಸಂಭವ

ಇಂದಿನಿಂದ ಮೂರು ದಿನ ಹಣಕಾಸು ನೀತಿ ಸಮಿತಿ ಸಭೆ
Last Updated 4 ಡಿಸೆಂಬರ್ 2022, 10:48 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಈ ಬಾರಿ ರೆಪೊ ದರವನ್ನು ಕಡಿಮೆ ಪ್ರಮಾಣದಲ್ಲಿ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಆರ್‌ಬಿಐನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಸೋಮವಾರದಿಂದ ಬುಧವಾರದವರೆಗೆ ಸಭೆ ಸೇರಲಿದ್ದು, ಬುಧವಾರ ‌ತನ್ನ ನಿರ್ಧಾರ ಪ್ರಕಟಿಸಲಿದೆ. ಆರ್‌ಬಿಐ ಈಗಾಗಲೇ ರೆಪೊ ದರವನ್ನು ಮೂರು ಬಾರಿ ಶೇ 0.50ರಂತೆ ಹೆಚ್ಚಿಸಿದೆ. ಚಿಲ್ಲರೆ ಹಣದುಬ್ಬರವು ಕಡಿಮೆ ಆಗುತ್ತಿರುವುದರಿಂದ ಹಾಗೂ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ಸಲುವಾಗಿ ರೆಪೊ ದರವನ್ನು ಶೇ 0.25 ರಿಂದ ಶೇ 0.35ರವರೆಗೆ ಹೆಚ್ಚಿಸಬಹುದು ಎಂದು ತಜ್ಞರು ಅಂದಾಜು ಹೇಳಿದ್ದಾರೆ.

ಅಮೆರಿಕದ ಫೆಡರಲ್‌ ರಿಸರ್ವ್‌ ಸಹ ಬಡ್ಡಿದರವನ್ನು ಶೇ 0.50ರಷ್ಟು ಹೆಚ್ಚಿಸುವ ಸುಳಿವು ನೀಡಿದೆ. ಆರ್‌ಬಿಐ ಇದನ್ನು ಸಹ ಪರಿಗಣಿಸುವ ಸಾಧ್ಯತೆ ಇದೆ. ಫೆಡರಲ್‌ ರಿಸರ್ವ್‌ ಹಣದುಬ್ಬರವನ್ನು ನಿಯಂತ್ರಿಸಲು ಈ ಹಿಂದೆ ಬಡ್ಡಿದರವನ್ನು ಶೇ 0.75ರಂತೆ ನಾಲ್ಕು ಬಾರಿ ಹೆಚ್ಚಳ ಮಾಡಿದೆ.

ಚಿಲ್ಲರೆ ಹಣದುಬ್ಬರವು ಜನವರಿಯಿಂದಲೂ ಶೇ 6ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಇದ್ದಿದ್ದರಿಂದ ಆರ್‌ಬಿಐ ಮೇ ತಿಂಗಳಿನಿಂದ ಈವರೆಗೆ ರೆಪೊ ದರವನ್ನು ಶೇ 1.90ರಷ್ಟು ಏರಿಕೆ ಮಾಡಿದೆ.

‘ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಪ್ರಮಾಣ ತಗ್ಗಿರುವುದು ಹಾಗೂ ಹಣದುಬ್ಬರವು ಶೇ 6ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಇರುವುದನ್ನು ಗಮನದಲ್ಲಿ ಇಟ್ಟುಕೊಂಡು ಆರ್‌ಬಿಐ ತನ್ನ ಹಣಕಾಸು ನೀತಿಯನ್ನು ಪ್ರಕಟಿಸಲಿದೆ. ಈ ಬಾರಿಯೂ ಎಂಪಿಸಿಯು ಬಡ್ಡಿದರ ಹೆಚ್ಚಿಸಲಿದೆ. ಆದರೆ, ಹೆಚ್ಚಳದ ಪ್ರಮಾಣವು ಶೇ 0.25–0.35ರ ಮಟ್ಟದಲ್ಲಿ ಇರುವ ಸಾಧ್ಯತೆ ಇದೆ’ ಎಂದು ಬ್ಯಾಂಕ್‌ ಆಫ್‌ ಬರೋಡದ ಮುಖ್ಯ ಆರ್ಥಿಕ ತಜ್ಞ ಮದನ್‌ ಸಬ್ನವೀಸ್‌ ಹೇಳಿದ್ದಾರೆ

ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು ಶೇ 6.3ರಷ್ಟು ಆಗಿದೆ. ಆದರೆ, ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಬೆಳವಣಿಗೆ ದರವು ಶೇ 13.5ರಷ್ಟು ಇತ್ತು. ಗ್ರಾಹಕ ದರ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇ 6.77ಕ್ಕೆ ಇಳಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT