ಭಾನುವಾರ, ಆಗಸ್ಟ್ 25, 2019
26 °C

‘ಎನ್‌ಪಿಎ’ ಇಳಿಕೆ: ಪುನರ್ಧನಕ್ಕೆ ಬೇಡಿಕೆ

Published:
Updated:

ನವದೆಹಲಿ:  ವಸೂಲಾಗದ ಸಾಲದ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಬಹುತೇಕ ಬ್ಯಾಂಕ್‌ಗಳು ತಿಳಿಸಿವೆ.

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ) ಮತ್ತು ಭಾರತೀಯ ಬ್ಯಾಂಕ್‌ಗಳ ಸಂಘ (ಐಬಿಎ) ಜಂಟಿಯಾಗಿ ನಡೆಸಿದ್ದ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಬ್ಯಾಂಕ್‌ಗಳಲ್ಲಿ ಅರ್ಧಕ್ಕೂ ಹೆಚ್ಚು ಬ್ಯಾಂಕ್‌ಗಳು ‘ಎನ್‌ಪಿಎ’ ಕಡಿಮೆಯಾಗುತ್ತಿರುವುದನ್ನು ಒಪ್ಪಿಕೊಂಡಿವೆ.

ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಎದುರಿಸುತ್ತಿರುವ (ಎನ್‌ಬಿಎಫ್‌ಸಿ) ನಗದು ಬಿಕ್ಕಟ್ಟು ಬಗೆಹರಿಸಲು ಕ್ರಮ ಕೈಗೊಳ್ಳುವ ಅಗತ್ಯ ಇದೆ ಎಂದು ತಿಳಿಸಿವೆ.

2018–19ರಲ್ಲಿ ವಾಣಿಜ್ಯ ಬ್ಯಾಂಕ್‌ಗಳ ‘ಎನ್‌ಪಿಎ’ ₹ 1.02 ಲಕ್ಷ ಕೋಟಿಗಳಷ್ಟು ಕಡಿಮೆಯಾಗಿ
₹ 9.34 ಲಕ್ಷ ಕೋಟಿಗೆ ತಲುಪಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರೂ
ಇತ್ತೀಚೆಗೆ ಸಂಸತ್ತಿಗೆ ಮಾಹಿತಿ ನೀಡಿದ್ದರು.

ಬ್ಯಾಂಕ್‌ಗಳ ನಿರೀಕ್ಷೆ: ಈ ವರ್ಷದ ಜನವರಿ ಮತ್ತು ಜೂನ್‌ ಅವಧಿಯಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು. ಮೂಲಸೌಕರ್ಯ, ಲೋಹ, ರಿಯಲ್‌ ಎಸ್ಟೇಟ್‌, ವಾಹನ ಬಿಡಿಭಾಗ, ಔಷಧಿ ಮತ್ತು ಆಹಾರ ಸಂಸ್ಕರಣೆ ಕ್ಷೇತ್ರಗಳು ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾಲಕ್ಕೆ ಬೇಡಿಕೆ ಸಲ್ಲಿಸಲಿವೆ ಎನ್ನುವುದು ಬ್ಯಾಂಕ್‌ಗಳ ನಿರೀಕ್ಷೆಯಾಗಿದೆ.

ಸರ್ಕಾರಿ ಸ್ವಾಮ್ಯದ, ಖಾಸಗಿ ವಲಯದ, ವಿದೇಶಿ  ಮತ್ತು ಸಣ್ಣ ಹಣಕಾಸು ಬ್ಯಾಂಕ್‌ಗಳು ಸೇರಿದಂತೆ ಒಟ್ಟು 23 ಬ್ಯಾಂಕ್‌ಗಳು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದವು.

2019–20ರ ಸಾಲಿನ ಪೂರ್ಣ ಪ್ರಮಾಣದ ಬಜೆಟ್‌ ಮಂಡನೆ ಮೊದಲೇ ಈ ಸಮೀಕ್ಷೆ ನಡೆಸಲಾಗಿತ್ತು. ಬಜೆಟ್‌ನಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ₹ 70 ಸಾವಿರ ಕೋಟಿ ಮೊತ್ತದ ಪುನರ್ಧನದ ನೆರವು ಘೋಷಿಸಲಾಗಿದೆ.

Post Comments (+)