ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿತ್ತೀಯ ಕೊರತೆ ತಗ್ಗಲಿದೆ: ಇಂಡಿಯಾ ರೇಟಿಂಗ್ಸ್‌ ಸಂಸ್ಥೆ ಮಾಹಿತಿ

Last Updated 30 ಡಿಸೆಂಬರ್ 2021, 18:10 IST
ಅಕ್ಷರ ಗಾತ್ರ

ಮುಂಬೈ: ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರೆಗೆ ತೆರಿಗೆ ವರಮಾನ ಸಂಗ್ರಹವು ಉತ್ತಮ ಮಟ್ಟದಲ್ಲಿ ಇರುವುದು ಹಾಗೂ ಹಲವು ಸಚಿವಾಲಯಗಳು ನಿಗದಿಗಿಂತಲೂ ಕಡಿಮೆ ವೆಚ್ಚ ಮಾಡಿರುವುದರಿಂದ ವಿತ್ತೀಯ ಕೊರತೆಯು ಶೇ 6.6ಕ್ಕೆ ಇಳಿಕೆ ಆಗಲಿದೆ ಎಂದು ಇಂಡಿಯಾ ರೇಟಿಂಗ್ಸ್‌ ಸಂಸ್ಥೆಯು ಗುರುವಾರ ಹೇಳಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಪೂರಕ ಬೇಡಿಕೆಗಳಿಗೆ ₹3.73 ಲಕ್ಷ ಕೋಟಿ ಅನುದಾನ ಒದಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ವರಮಾನ ಹೆಚ್ಚಳ ಆಗುತ್ತಿರುವುದರಿಂದ ಇದನ್ನು ಸರಿದೂಗಿಸಬಹುದು ಎಂದು ಅದು ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

ಕೇಂದ್ರ ಸರ್ಕಾರವು ಶೇ 6.8ರ ವಿತ್ತೀಯ ಕೊರತೆ ಗುರಿಯನ್ನು ತಲುಪಲು ಕಷ್ಟವಾಗಲಿದೆ ಎಂದು ಆರ್‌ಬಿಐ ಬುಧವಾರ ಬಿಡುಗಡೆ ಮಾಡಿದ್ದ ತನ್ನ ಆರ್ಥಿಕ ಸ್ಥಿರತೆ ವರದಿಯಲ್ಲಿ ಅಭಿಪ್ರಾಯಪಟ್ಟಿದೆ. ಆದರೆ, ವಿತ್ತೀಯ ಕೊರತೆ ಪ್ರಮಾಣ ಎಷ್ಟಿರಲಿದೆ ಎನ್ನುವುದನ್ನು ಆರ್‌ಬಿಐ ನಿಖರವಾಗಿ ಹೇಳಿಲ್ಲ. ಈ ಬೆನ್ನಲ್ಲೇ ಇಂಡಿಯಾ ರೇಟಿಂಗ್ಸ್‌ ಈ ವರದಿ ಬಿಡುಗಡೆ ಮಾಡಿದೆ.

ಆರ್ಥಿಕ ಬೆಳವಣಿಗೆ ಮತ್ತು ಹಣದುಬ್ಬರ ಎರಡರಿಂದಲೂ ಇದುವರೆಗೆ ಆಗಿರುವ ತೆರಿಗೆ ಸಂಗ್ರಹಗಳು ಭಾರಿ ಲಾಭ ಪಡೆದಿವೆ ಎನ್ನುವುದನ್ನು ಸರ್ಕಾರದ ಹಣಕಾಸು ಅಂಕಿ–ಅಂಶಗಳು ತೋರಿಸುತ್ತಿವೆ. ಹಿಂದಿನ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯು ನಕಾರಾತ್ಮಕ ಮಟ್ಟದಲ್ಲಿ ಇದ್ದಿದ್ದು ಈ ಬಾರಿ ಜಿಡಿಪಿ ಬೆಳವಣಿಗೆಗೆ ಅನುಕೂಲ ಮಾಡಿಕೊಡುತ್ತಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿಯು ಶೇ 9.7ರಷ್ಟು ಗರಿಷ್ಠ ಬೆಳವಣಿಗೆ ಕಂಡಿದೆ. ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು ಶೇ 8.4ರಷ್ಟಾಗಿದೆ.

ಸರಾಸರಿ ತರಿಗೆ ವರಮಾನ ಸಂಗ್ರಹವು ಈ ಹಣಕಾಸು ವರ್ಷದಲ್ಲಿ ₹ 5.9 ಲಕ್ಷ ಕೋಟಿಗಳಷ್ಟು ಆಗಲಿದ್ದು, ಬಜೆಟ್‌ ಅಂದಾಜಿಗಿಂತಲೂ ಗರಿಷ್ಠ ಮಟ್ಟದ್ದಾಗಿರಲಿದೆ. ಒಟ್ಟಾರೆ ತೆರಿಗೆ ಸಂಗ್ರಹದಲ್ಲಿ ಕಾರ್ಪೊರೇಟ್‌ ತೆರಿಗೆ ಶೇ 28.4ರಷ್ಟು, ಆದಾಯ ತೆರಿಗೆ ಶೇ 16.3, ಜಿಎಸ್‌ಟಿ ಶೇ 14.7, ಕಸ್ಟಮ್ಸ್‌ ಸುಂಕ ಶೇ 14.2, ಎಕ್ಸೈಸ್‌ ಸುಂಕ ಶೇ 2.4 ಮತ್ತು ಇತರೆ ತೆರಿಗೆ ಶೇ 3.9ರಷ್ಟು ಇರಲಿದೆ. ಸರಾಸರಿ ತೆರಿಗೆ ಸಂಗ್ರಹದಲ್ಲಿ ನೇರ ತೆರಿಗೆಯ ಪಾಲು ಶೇ 44.7ರಷ್ಟು ಮತ್ತು ನೇರ ತೆರಿಗೆಯ ಪಾಲು ಶೇ 55.3ರಷ್ಟು ಇರಲಿದೆ ಎಂದು ಹೇಳಿದೆ.

ತೆರಿಗೆಯೇತರ ವರಮಾನ ಸಂಗ್ರಹವೂ ಬಜೆಟ್‌ ಅಂದಾಜಿಗಿಂತಲೂ ಹೆಚ್ಚಿಗೆ ಇರಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ತೆರಿಗೆಯೇತರ ವರಮಾನ ₹ 2.4 ಲಕ್ಷ ಕೋಟಿಗಳಷ್ಟು ಸಂಗ್ರಹ ಆಗುವ ಅಂದಾಜು ಮಾಡಲಾಗಿದ್ದು, ₹ 3.1 ಲಕ್ಷ ಕೋಟಿಗಳಷ್ಟು ಸಂಗ್ರಹ ಆಗಲಿದೆ ಎಂದು ಸಂಸ್ಥೆಯು ಹೇಳಿದೆ.

ಸಂಸ್ಥೆಯ ಅಂದಾಜಿನ ಪ್ರಕಾರ, ಸರ್ಕಾರದ ವರಮಾನ ವೆಚ್ಚವು ₹ 2.8 ಲಕ್ಷ ಕೋಟಿಗಳಷ್ಟು ಆಗಲಿದೆ. ಇದು ಬಜೆಟ್‌ನಲ್ಲಿ ಅಂದಾಜು ಮಾಡಿರುವುದಕ್ಕಿಂತಲೂ ಗರಿಷ್ಠ ಮಟ್ಟದ್ದಾಗಿರಲಿದೆ. ಅಲ್ಲದೆ 2021–22ನೇ ಹಣಕಾಸು ವರ್ಷಕ್ಕೆ ಪ್ರಸ್ತಾಪಿತ ವರಮಾನ ವೆಚ್ಚಕ್ಕಿಂತಲೂ ₹ 21,600 ಕೋಟಿಗಳಷ್ಟು ಹೆಚ್ಚಿಗೆ ಇರಲಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT