ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ತೈಲ: ತಗ್ಗಿದ ರಿಯಾಯಿತಿ

Published 9 ಜುಲೈ 2023, 20:26 IST
Last Updated 9 ಜುಲೈ 2023, 20:26 IST
ಅಕ್ಷರ ಗಾತ್ರ

ನವದೆಹಲಿ: ರಷ್ಯಾದಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲಕ್ಕೆ ಭಾರತದ ಕಂಪನಿಗಳಿಗೆ ಸಿಗುವ ರಿಯಾಯಿತಿ ಕಡಿಮೆ ಆಗಿದೆ. ಆದರೆ, ಆಮದು ಕಚ್ಚಾ ತೈಲದ ಸಾಗಾಟಕ್ಕೆ ಮಾಡುವ ವೆಚ್ಚವು ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.

ರಷ್ಯಾವು ಭಾರತದ ಕಂಪನಿಗಳಿಗೆ ಮಾರಾಟ ಮಾಡುವ ಕಚ್ಚಾ ತೈಲಕ್ಕೆ ಪ್ರತಿ ಬ್ಯಾರೆಲ್‌ಗೆ 60 ಡಾಲರ್‌ಗಿಂತ ಕಡಿಮೆ ದರ ನಿಗದಿ ಮಾಡಿದೆ. ಆದರೆ ಬಾಲ್ಟಿಕ್ ಸಮುದ್ರ, ಕಪ್ಪು ಸಮುದ್ರ ಮೂಲಕ ಭಾರತದ ಪಶ್ಚಿಮ ಕರಾವಳಿಗೆ ರವಾನಿಸುವ ಕಚ್ಚಾ ತೈಲಕ್ಕೆ ಬ್ಯಾರೆಲ್‌ಗೆ ಗರಿಷ್ಠ 19 ಡಾಲರ್‌ ಸಾಗಣೆ ವೆಚ್ಚ ಪಡೆಯುತ್ತಿದೆ. ಇದು ಮಾಮೂಲಿಗಿಂತ ಎರಡು ಪಟ್ಟು ಹೆಚ್ಚಿನ ದರ ಎಂದು ಮೂಲಗಳು ಹೇಳಿವೆ.

ಕಳೆದ ವರ್ಷದ ಮಧ್ಯ ಭಾಗದಲ್ಲಿ ರಷ್ಯಾವು ಭಾರತದ ಕಂಪನಿಗಳಿಗೆ ಮಾರಾಟ ಮಾಡುವ ಕಚ್ಚಾ ತೈಲಕ್ಕೆ ಬ್ರೆಂಟ್ ಕಚ್ಚಾ ತೈಲದ ಬೆಲೆಗಿಂತ 30 ಡಾಲರ್‌ವರೆಗೆ ರಿಯಾಯಿತಿ ನೀಡುತ್ತಿತ್ತು. ಈಗ ರಿಯಾಯಿತಿಯನ್ನು ಬ್ಯಾರೆಲ್‌ಗೆ 4 ಡಾಲರ್‌ಗೆ ತಗ್ಗಿಸಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಮಂಗಳೂರು ರಿಫೈನರಿ ಆ್ಯಂಡ್‌ ಪೆಟ್ರೊಕೆಮಿಕಲ್ಸ್ ಲಿ, ಖಾಸಗಿ ಕಂಪನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ನಯಾರಾ ಎನರ್ಜಿ ಪ್ರತ್ಯೇಕವಾಗಿ ಖರೀದಿ ಮಾತುಕತೆ ನಡೆಸುತ್ತಿರುವ ಕಾರಣ ರಿಯಾಯಿತಿ ಪ್ರಮಾಣ ಕಡಿಮೆ ಆಗುತ್ತಿದೆ ಎನ್ನಲಾಗಿದೆ.

ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿರುವ ಕಚ್ಚಾ ತೈಲದಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳ ಪಾಲು ಹೆಚ್ಚು ಇದೆ. ಈ ಕಂಪನಿಗಳು ಒಟ್ಟಾಗಿ ಖರೀದಿ ಮಾತುಕತೆ ನಡೆಸಿದಲ್ಲಿ ರಿಯಾಯಿತಿ ಇನ್ನಷ್ಟು ಹೆಚ್ಚಬಹುದು ಎಂದು ಮೂಲಗಳು ಹೇಳಿವೆ.

ರಷ್ಯಾ ಸಮುದ್ರಮಾರ್ಗದ ಮೂಲಕ ರಫ್ತು ಮಾಡುವ ಕಚ್ಚಾ ತೈಲವನ್ನು ಅತಿಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿರುವ ದೇಶಗಳ ಸಾಲಿನಲ್ಲಿ ಈಗ ಭಾರತವೇ ಮೊದಲ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT