ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೂಡಿಕೆದಾರರ ಹಿತ ಕಾಪಾಡಿ: ಸಿಜೆಐ ಚಂದ್ರಚೂಡ್‌

Published 4 ಜುಲೈ 2024, 15:18 IST
Last Updated 4 ಜುಲೈ 2024, 15:18 IST
ಅಕ್ಷರ ಗಾತ್ರ

ಮುಂಬೈ: ‘ಷೇರುಪೇಟೆಗಳು ದಿಢೀರ್‌ ಏರಿಕೆ ಕಾಣುತ್ತಿವೆ. ಹಾಗಾಗಿ,  ಹೂಡಿಕೆದಾರರ ಹಿತಕಾಯಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ  ಮತ್ತು ಷೇರುಪೇಟೆ ಮೇಲ್ಮನವಿ ನ್ಯಾಯಮಂಡಳಿಯು (ಎಸ್‌ಎಟಿ) ಎಚ್ಚರಿಕೆವಹಿಸಬೇಕಿದೆ’ ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಸಲಹೆ ನೀಡಿದರು.

ಗುರುವಾರ ನಡೆದ ಷೇರುಪೇಟೆ ಮೇಲ್ಮನವಿ ನ್ಯಾಯಮಂಡಳಿಯ ಹೊಸ ಕಚೇರಿ ಆವರಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಷೇರುಪೇಟೆಗಳಲ್ಲಿ ಪ್ರತಿದಿನವೂ ವಹಿವಾಟುಗಳ ಸಂಖ್ಯೆ ಹೆಚ್ಚುತ್ತಿದೆ. ಹೊಸ ನಿಯಮಾವಳಿಗಳು ಜಾರಿಗೊಂಡಿವೆ. ಇದರಿಂದ ಮೇಲ್ಮನವಿ ನ್ಯಾಯಮಂಡಳಿ ಮೇಲಿನ ಕಾರ್ಯಭಾರವೂ ಹೆಚ್ಚಿದೆ. ಹಾಗಾಗಿ, ಹೊಸ ಪೀಠಗಳ ಸ್ಥಾಪನೆಗೆ ಒತ್ತು ನೀಡಬೇಕಿದೆ’ ಎಂದರು.

‘ಸೆನ್ಸೆಕ್ಸ್‌ 80 ಸಾವಿರ ದಾಟಿದೆ ಎಂಬ ಸುದ್ದಿಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ. ಸೂಚ್ಯಂಕಗಳ ಏರಿಕೆ ನಡುವೆಯೇ ಹೂಡಿಕೆದಾರರಲ್ಲಿನ ತಳಮಳ ಮತ್ತು ಸಮತೋಲನ ಸ್ಥಿತಿ ಕಾಯ್ದುಕೊಳ್ಳುವಲ್ಲಿ ಸೆಬಿಯ ಹೊಣೆಗಾರಿಕೆ ಹೆಚ್ಚಿದೆ. ಪೇರುಪೇಟೆಗಳ ಏರಿಕೆಯನ್ನು ಸಂಭ್ರಮಿಸುವ ಜೊತೆಗೆ ಸ್ಥಿರತೆ ಕಾಯ್ದುಕೊಳ್ಳುವತ್ತಲೂ ಗಮನಹರಿಸಬೇಕಿದೆ’ ಎಂದರು.

‘ನಾವು ಹೂಡಿಕೆ ಮಾಡಿದ ಹಣಕ್ಕೆ ಕಾನೂನಿನ ರಕ್ಷಣೆ ಇದೆ ಎಂದು ಹೂಡಿಕೆದಾರರು ಭಾವಿಸುತ್ತಾರೆ. ಹಾಗಾಗಿ, ವಿವಾದಗಳನ್ನು ಪರಿಹರಿಸಲು ಪರಿಣಾಮಕಾರಿಯಾದ ವ್ಯವಸ್ಥೆಯನ್ನು ರೂಪಿಸಬೇಕು. ಆಗ ದೇಶೀಯ ಮಾರುಕಟ್ಟೆಗಳಲ್ಲಿ ಹೂಡಿಕೆದಾರರು ಹೆಚ್ಚು ಹೂಡಿಕೆ ಮಾಡುತ್ತಾರೆ. ಈ ಒಳಹರಿವು ಏರಿಕೆಯು ಆರ್ಥಿಕತೆ ವೃದ್ಧಿಗೆ ಸಹಕಾರಿಯಾಗಲಿದೆ. ಉದ್ಯೋಗ ಸೃಷ್ಟಿಗೂ ನೆರವಾಗಲಿದೆ’ ಎಂದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT