ಮಂಗಳವಾರ, ಡಿಸೆಂಬರ್ 10, 2019
19 °C
ಬೆಲೆ ಹೆಚ್ಚಳದ ನಿರೀಕ್ಷೆ; ದರಕ್ಕಾಗಿ ಹರಾಜು ಬಹಿಷ್ಕಾರ, ಸರಣಿ ಪ್ರತಿಭಟನೆ

ಸಂಕಷ್ಟದ ಸುಳಿಯಲ್ಲಿ ತಂಬಾಕು ಬೆಳೆಗಾರರು

Published:
Updated:
Prajavani

ಮೈಸೂರು: ವನ್ಯಮೃಗಗಳ ಹಾವಳಿಯಿಂದ ತಪ್ಪಿಸಿಕೊಳ್ಳಲು ಅನಿವಾರ್ಯವಾಗಿ ತಂಬಾಕು ಬೆಳೆಯುತ್ತಿರುವ ಕಾಡಂಚಿನ ಬಹುತೇಕ ರೈತರು ಇದೀಗ ಬೆಳೆಗೆ ಸೂಕ್ತ ಬೆಲೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಂಬಾಕು ಬೆಳೆಗೆ ಮಾರುಕಟ್ಟೆಯಲ್ಲಿ ಸಮರ್ಪಕ ದರ ಸಿಗದೇ ಕಂಗಾಲಾಗಿರುವ ಅವರು, ಸಾಕಷ್ಟು ಸಲ ಪ್ರತಿಭಟನೆ ನಡೆಸಿದ್ದಾರೆ. ಹಲವು ಸಲ ಹರಾಜು ಪ್ರಕ್ರಿಯೆಯನ್ನೂ ಬಹಿಷ್ಕರಿಸಿದ್ದಾರೆ. ಅವರ ಪ್ರತಿಭಟನೆ ಇದುವರೆಗೂ ಫಲ ನೀಡಿಲ್ಲ. ನಿರೀಕ್ಷಿತ ದರ ಸಿಗದೇ ಹತಾಶರಾಗಿರುವ ಅವರು, ತಂಬಾಕಿನ ಸಹವಾಸವೇ ಬೇಡ ಎನ್ನುತ್ತಿದ್ದಾರೆ.

‘ಮೂರು ದಶಕದಿಂದ ತಂಬಾಕು ಬೆಳೆಯುತ್ತಿದ್ದೇವೆ. ಎರಡೆರೆಡು ಪರವಾನಗಿ ಪಡೆದಿದ್ದೇವೆ. ಬೆಳೆಯಿಂದ ಲಾಭ ಸಿಕ್ಕಿದ್ದು ಅಷ್ಟಕ್ಕಷ್ಟೇ. ನಷ್ಟವೇ ಹೆಚ್ಚು. ಒಂದು ಬೆಳೆಗೆ ಮಾಡಿದ ಸಾಲ ತೀರಿಸಲಾಗದೆ ಮತ್ತೆ ಮತ್ತೆ ಸಾಲ ಮಾಡುತ್ತಿದ್ದೇವೆ. ಭವಿಷ್ಯ ಏನೆಂಬುದೇ ಅರಿಯದಾಗಿದೆ. ಬಹುತೇಕ ತಂಬಾಕು ಬೆಳೆಗಾರರು ಸಾಲಗಾರರೇ ಆಗಿದ್ದಾರೆ’ ಎಂದು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಮುದ್ದನಹಳ್ಳಿಯ ತಂಬಾಕು ಬೆಳೆಗಾರ ಮಹೇಶ್ ಅಲವತ್ತುಕೊಳ್ಳುತ್ತಾರೆ.

‘ಒಂದು ಕೆ.ಜಿ. ತಂಬಾಕು ಬೆಳೆಯಲು ಕನಿಷ್ಠ ₹ 130 ಖರ್ಚಾಗುತ್ತದೆ. ಇದೀಗ ಮಾರುಕಟ್ಟೆಯಲ್ಲಿ ಸರಾಸರಿ ₹ 135ರಿಂದ ₹ 139 ಸಿಗುತ್ತಿದೆ. ಬೇಸಾಯ, ನಾಟಿ, ಕೊಯ್ಲು, ಹದಗೊಳಿಸುವಿಕೆ ಸೇರಿದಂತೆ ಏಳೆಂಟು ತಿಂಗಳಿನ ಪರಿಶ್ರಮಕ್ಕೆ ಬೆಳೆಗಾರರಿಗೆ ಪ್ರತಿಫಲ ಸಿಗುತ್ತಿಲ್ಲ’ ಎಂದು ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ತಾಲ್ಲೂಕಿನ ಭೀಮನಹಳ್ಳಿಯ ತಂಬಾಕು ಬೆಳೆಗಾರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ವಿ.ಬಸವರಾಜು ‘ಪ್ರಜಾವಾಣಿ’ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

‘ನಮ್ಮದು ಕಾಡಂಚಿನ ಗ್ರಾಮ. ಇಲ್ಲಿ ತಂಬಾಕು ಬಿಟ್ಟರೆ ಬೇರೆ ಬೆಳೆ ಬೆಳೆಯುವುದು ಕಷ್ಟಸಾಧ್ಯ. ಕಾಡಾನೆ, ಕಾಡುಪ್ರಾಣಿಗಳ ಉಪಟಳ ತಪ್ಪಿಸಿಕೊಳ್ಳಲು ನಾವು ಸಹ ಅನಿವಾರ್ಯವಾಗಿ ತಂಬಾಕನ್ನೇ ಬೆಳೆಯುತ್ತಿದ್ದೇವೆ. ಈ ಬಾರಿ ಹೆಚ್ಚು ಸುರಿದ ಮಳೆಯಿಂದ ಗುಣಮಟ್ಟದ ತಂಬಾಕು ದೊರಕಲಿಲ್ಲ. ಧಾರಣೆಯೂ ಸಿಗುತ್ತಿಲ್ಲ’ ಎಂದು ರಾಜೇಗೌಡನಹುಂಡಿಯ ಚಂದ್ರೇಗೌಡ ಅಳಲು ತೋಡಿಕೊಂಡರು.

‘ಅತಿವೃಷ್ಟಿಯಿಂದ ಈ ಬಾರಿ ಕೊನೆ ಗ್ರೇಡ್‌ನ ತಂಬಾಕಿನ ಉತ್ಪನ್ನವೇ ಬೆಳೆಗಾರರ ಬಳಿ ಹೆಚ್ಚಿದೆ. ಮಾರಾಟಕ್ಕಾಗಿ ಇದನ್ನು ಮಾರುಕಟ್ಟೆಗೆ ಹೊತ್ತೊಯ್ದರೆ, ಕಂಪನಿ ಪ್ರತಿನಿಧಿಗಳು ‘ನೋ ಬಿಡ್’ ಅಂತಾರೆ. ದಿಕ್ಕೇ ತೋಚದಂತಾಗಿದೆ. ಮರಳಿ ಮನೆಗೆ ತರಬೇಕೆಂದರೆ ಮತ್ತೊಮ್ಮೆ ಬಾಡಿಗೆ ಭರಿಸುವ ಶಕ್ತಿ ಇಲ್ಲ. ಹೀಗಾಗಿ, ಕನಿಷ್ಠ ದರಕ್ಕೇ ಮಾರುತ್ತಿದ್ದೇವೆ. ಒಂದು ಕೆ.ಜಿ.ಗೆ ₹ 90 ನೀಡುತ್ತಾರೆ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಯಾರೊಬ್ಬರೂ ತಂಬಾಕು ಬೆಳೆಗಾರರ ನೆರವಿಗೆ ಬರುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಕೊನೇ ಗ್ರೇಡ್‌ ಧಾರಣೆಯಷ್ಟೇ ಕಡಿಮೆ

‘1 ಮತ್ತು 2ನೇ ಗ್ರೇಡ್‌ನ 1 ಕೆ.ಜಿ.ತಂಬಾಕಿಗೆ ಪ್ರಸ್ತುತ ₹ 174.50 ದರ ಇದೆ. 2, 3ನೇ ಗ್ರೇಡ್‌ಗೆ ₹ 145 ಇದ್ದರೆ, ಕೊನೆ ಗ್ರೇಡ್‌ಗೆ ₹ 109ರ ಧಾರಣೆಯಿದೆ. ಹಿಂದಿನ ವರ್ಷ ಕ್ರಮವಾಗಿ ₹ 161, ₹ 142, ₹ 119 ಇತ್ತು. ಕೊನೆ ಗ್ರೇಡ್‌ನ ತಂಬಾಕಿಗೆ ಹಿಂದಿನ ವರ್ಷಕ್ಕೆ ಹೋಲಿಸಿದಾಗ ಪ್ರಸ್ತುತ ಕೆ.ಜಿ.ಗೆ ₹ 10 ಕಡಿಮೆ ಸಿಗುತ್ತಿದೆ. ಉಳಿದ ಗ್ರೇಡ್‌ನ ದರ ಹೆಚ್ಚಿದೆ’ ಎಂದು ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕ ಎಸ್.ಎಸ್‌.ಪಾಟೀಲ ತಿಳಿಸಿದರು.

‘38 ಕಂಪನಿಗಳು ಮಾರುಕಟ್ಟೆಯಲ್ಲಿ ನೋಂದಾಯಿಸಿಕೊಂಡಿವೆ. 16–17 ಕಂಪನಿಗಳು ಹರಾಜಿನಲ್ಲಿ ಭಾಗವಹಿಸುತ್ತವೆ. ನಿತ್ಯವೂ 6–7 ಪ್ರಮುಖ ಕಂಪನಿಗಳು ತಂಬಾಕು ಖರೀದಿಯಲ್ಲಿ ತೊಡಗಿದ್ದು, ಇದುವರೆಗೆ 27 ಲಕ್ಷ ಕೆ.ಜಿ. ಹೊಗೆಸೊಪ್ಪು ಖರೀದಿಸಿವೆ. ‘ಇದರಲ್ಲಿ ಶೇ 18ರಷ್ಟು ಉತ್ಕೃಷ್ಟ ದರ್ಜೆಯ ಹೊಗೆಸೊಪ್ಪಿದ್ದರೆ, ಶೇ 42 ಮಧ್ಯಮ ದರ್ಜೆಯದ್ದಿದೆ. ಶೇ 35ಕ್ಕೂ ಹೆಚ್ಚಿನದ್ದು ಕೊನೆಯ ದರ್ಜೆಯದ್ದು’ ಎಂದು ಮಾಹಿತಿ ನೀಡಿದರು.

ಪರಿಹಾರಕ್ಕೆ ಒತ್ತಾಯ

ತಂಬಾಕು ಬಿಟ್ಟರೆ ಪರ್ಯಾಯವಿಲ್ಲ. ಎಲೆ ಸ್ವಲ್ಪ ಕಪ್ಪಾದರೂ ನಮ್ಮ ಬದುಕೇ ಸರ್ವನಾಶ. ಇದರ ಸಹವಾಸವೇ ಬೇಡ. ನಮಗೆ ಪರ್ಯಾಯದ ಪರಿಹಾರ ಕೊಡಿ ಎನ್ನುತ್ತಾರೆ ತಂಬಾಕು ಬೆಳೆಗಾರ ಚಂದ್ರೇಗೌಡ.

ಸರಾಸರಿ ₹ 150 ಸಿಕ್ಕರೂ ಬೆಳೆಗಾರ ಸ್ವಲ್ಪ ಉಸಿರಾಡಬಲ್ಲ. ಸದ್ಯ ನಮ್ಮ ಸ್ಥಿತಿ ಚಿಂತಾಜನಕವಾಗಿದೆ ಎನ್ನುವುದು ಮತ್ತೋರ್ವ ಬೆಳೆಗಾರ ಬಿ.ವಿ.ಬಸವರಾಜು ಅವರ ಅಭಿಪ್ರಾಯ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು