ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಮಾರುಕಟ್ಟೆ: ಏಪ್ರಿಲ್‌ನಿಂದ ಎಲ್‌ಇಡಿ ಟಿ.ವಿ. ಬೆಲೆ ಮತ್ತಷ್ಟು ಏರಿಕೆ

Last Updated 11 ಮಾರ್ಚ್ 2021, 16:49 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ಒಂದು ತಿಂಗಳಿನಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಓಪನ್‌ ಸೆಲ್‌ ಪ್ಯಾನಲ್‌ಗಳ ಬೆಲೆ ಶೇಕಡ 35ರವರೆಗೆ ಏರಿಕೆ ಆಗಿರುವುದರಿಂದ ಎಲ್‌ಇಡಿ ಟಿ.ವಿ.ಗಳ ಬೆಲೆ ಏಪ್ರಿಲ್‌ನಿಂದ ಮತ್ತಷ್ಟು ಏರಿಕೆಯಾಗಲಿದೆ.

ಪ್ಯಾನಾಸಾನಿಕ್, ಹಾಯರ್‌ ಮತ್ತು ಥಾಮ್ಸನ್‌ ಕಂಪನಿಗಳು ಏಪ್ರಿಲ್‌ನಿಂದ ಬೆಲೆ ಏರಿಕೆ ಮಾಡಲು ಆಲೋಚನೆ ನಡೆಸಿವೆ.

ಪ್ಯಾನಲ್‌ ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಲೇ ಇದ್ದು, ಟಿ.ವಿ. ಬೆಲೆಯೂ ಏರಿಕೆಯಾಗಿದೆ. ಏಪ್ರಿಲ್‌ನಲ್ಲಿ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಪ್ಯಾನಾಸಾನಿಕ್‌ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಮನೀಶ್ ಶರ್ಮಾ ಹೇಳಿದ್ದಾರೆ.

ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ, ಬೆಲೆಯಲ್ಲಿನ ಹೆಚ್ಚಳವು ಶೇ 5ರಿಂದ ಶೇ 7ರವರೆಗೂ ಇರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಬೆಲೆ ಹೆಚ್ಚಳದ ಹೊರತಾಗಿ ಬೇರಾವುದೇ ಮಾರ್ಗ ಇಲ್ಲ ಎಂದು ಹಾಯರ್‌ ಅಪ್ಲಯನ್ಸಸ್‌ ಇಂಡಿಯಾದ ಅಧ್ಯಕ್ಷ ಎರಿಕ್‌ ಬ್ರಿಗಾನ್ಸಾ ಹೇಳಿದ್ದಾರೆ.

ಒಂದು ಟಿ.ವಿ.ಯ ಬೆಲೆಯು ₹ 2 ಸಾವಿರದಿಂದ ₹ 3 ಸಾವಿರದವರೆಗೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಸೂಪರ್‌ ಪ್ಲಾಸ್ಟ್ರಾನಿಕ್ಸ್‌ ಪ್ರೈವೇಟ್‌ ಲಿಮಿಟೆಡ್‌ (ಎಸ್‌ಎಸ್‌ಪಿಎಲ್‌) ತಿಳಿಸಿದೆ.

ಕೇಂದ್ರ ಸರ್ಕಾರವು ಟಿ.ವಿ. ತಯಾರಿಕೆಯನ್ನು ಉತ್ಪಾದನೆ ಆಧಾರಿತ ಉತ್ತೇಜನ (ಪಿಎಲ್‌ಐ) ಯೋಜನೆಯಡಿ ತರಬೇಕು. ಆಗ ದೇಶದ ಟಿ.ವಿ. ಉದ್ಯಮವು ಜಾಗತಿಕವಾಗಿ ಹೆಚ್ಚು ಸ್ಪ‍ರ್ಧಾತ್ಮಕವಾಗಿ ಬೆಳೆಯಲು ಸಾಧ್ಯವಾಗಲಿದೆ ಎಂದು ಎಸ್‌ಎಸ್‌ಪಿಎಲ್‌ನ ಸಿಇಒ ಅವ್ನೀತ್‌ ಸಿಂಗ್‌ ಮಾರ್ವಾ ಅಭಿಪ್ರಾಯಪಟ್ಟಿದ್ದಾರೆ.

32 ಇಂಚಿನ ಟಿ.ವಿ. ಬೆಲೆಯು ₹ 5 ಸಾವಿರದಿಂದ ₹ 6 ಸಾವಿರದವರೆಗೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವಿಡಿಯೊಟೆಕ್ ಇಂಟರ್‌ನ್ಯಾಷನಲ್‌ ಗ್ರೂಪ್‌ನ ನಿರ್ದೇಶಕ ಅರ್ಜುನ್‌ ಬಜಾಜ್‌ ಹೇಳಿದ್ದಾರೆ.

ಜನವರಿ ಮತ್ತು ಫೆಬ್ರುವರಿಯಲ್ಲಿ ಬೆಲೆ ಏರಿಕೆ ಮಾಡಿದ್ದೇವೆ. ಹಿಗಾಗಿ ಮತ್ತೆ ಬೆಲೆ ಏರಿಕೆ ಮಾಡುವುದಿಲ್ಲ ಎಂದು ಎಲ್‌ಜಿ ಹೇಳಿದೆ.

ಓಪನ್‌ ಸೆಲ್‌ ಮಾರುಕಟ್ಟೆಯಲ್ಲಿ ಚೀನಾದ ತಯಾರಕರ ಪ್ರಾಬಲ್ಯ ಹೆಚ್ಚಿದೆ. ಟಿ.ವಿ. ಪ್ಯಾನಲ್‌ಗಳನ್ನು ಆಮದು ಮಾಡಿಕೊಳ್ಳಲು ಸದ್ಯದ ಮಟ್ಟಿಗೆ ಚೀನಾಕ್ಕೆ ಪರ್ಯಾಯ ಇಲ್ಲ ಎಂದು ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾದ ಉಪಾಧ್ಯಕ್ಷ ವಿಜಯ್ ಬಾಬು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT