ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಎನ್‌ಡಿಸಿ ಜತೆ ಉಬರ್‌ ಒಪ್ಪಂದ

ಸಂಕಷ್ಟ ಅರಿಯಲು ಚಾಲಕರ ಜೊತೆ ಸಿಇಒ ಪ್ರಯಾಣ
Published 22 ಫೆಬ್ರುವರಿ 2024, 15:31 IST
Last Updated 22 ಫೆಬ್ರುವರಿ 2024, 15:31 IST
ಅಕ್ಷರ ಗಾತ್ರ

ಬೆಂಗಳೂರು: ಡಿಜಿಟಲ್‌ ವಾಣಿಜ್ಯಕ್ಕಾಗಿನ ಮುಕ್ತ ವ್ಯವಸ್ಥೆಯೊಟ್ಟಿಗೆ (ಒಎನ್‌ಡಿಸಿ) ಉಬರ್‌ ಕಂಪನಿಯು ಗುರುವಾರ ಒಡಂಬಡಿಕೆಗೆ ಸಹಿ ಹಾಕಿದೆ.

ಇ–ವಾಣಿಜ್ಯ ವಹಿವಾಟುಗಳು ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಕೇಂದ್ರ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯು ಒಎನ್‌ಡಿಸಿ ವೇದಿಕೆಯನ್ನು ಆರಂಭಿಸಿದೆ. ಈ ಒಪ್ಪಂದದಿಂದ ಉಬರ್‌ ಆ್ಯಪ್‌ ಹೆಚ್ಚಿನ ಸಂಖ್ಯೆಯ ಗ್ರಾಹಕರಿಗೆ ತಲುಪಲು ನೆರವಾಗಲಿದೆ ಎಂದು ಕಂಪನಿ ಹೇಳಿದೆ.

ಅಲ್ಲದೆ, ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಲು ನಿರ್ಧರಿಸಿರುವ ಕಂಪನಿಯ ಉದ್ದೇಶವೂ ಸಾಕಾರವಾಗಲಿದೆ ಎಂದು ತಿಳಿಸಿದೆ. 

ಚಾಲಕರ ಜೊತೆ ಪ್ರಯಾಣ:

‘ನಾನು ಉಬರ್‌ ವಾಹನಗಳಲ್ಲಿ ಪ್ರಯಾಣ ಮಾಡುತ್ತೇನೆ. ಆ ವೇಳೆ ಚಾಲಕರ ಜೊತೆ ಮಾತಾಡುತ್ತೇನೆ. ಅವರು ಚಾಲನೆ ಮಾಡುವಾಗ ಎದುರಿಸುತ್ತಿರುವ ಸಂಕಷ್ಟಗಳನ್ನು ಅರ್ಥೈಸಿಕೊಂಡು ಪರಿಹಾರ ಕೈಗೊಳ್ಳಲು ಇದರಿಂದ ಸಹಕಾರಿಯಾಗುತ್ತಿದೆ’ ಎಂದು ಉಬರ್‌ ಗ್ಲೋಬಲ್‌ ಸಿಇಒ ದಾರಾ ಖೋಸ್ರೋಶಾಹಿ ಹೇಳಿದರು.

ನಗರದಲ್ಲಿ ಆಯೋಜಿಸಿದ್ದ ‘ಬಿಲ್ಡಿಂಗ್‌ ಪಾಪ್ಯುಲೇಷನ್‌ ಸ್ಕೇಲ್‌ ಟೆಕ್ನಾಲಜಿ’ ವಿಷಯ ಕುರಿತು ಇನ್ಫೊಸಿಸ್‌ ಅಧ್ಯಕ್ಷ ನಂದನ್‌ ನಿಲೇಕಣಿ ಜೊತೆ ಚರ್ಚಿಸಿದ ಅವರು, ‘ಭಾರತದಲ್ಲಿ ಉಬರ್‌ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ವಿಸ್ತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಭಾರತದ ಡಿಜಿಟಲ್ ಸಾರ್ವಜನಿಕ ಮೂಲ ಸೌಕರ್ಯದ (ಡಿಪಿಐ) ಬಗ್ಗೆ ವಿಶ್ವದಾದ್ಯಂತ ಇರುವ ಕಂಪನಿಗಳು ಮತ್ತಷ್ಟು ಮಾಹಿತಿ ಅರಿಯಲು ಒಎನ್‌ಡಿಸಿ ಜೊತೆಗಿನ ಒಪ್ಪಂದ ವೇದಿಕೆಯಾಗಲಿದೆ ಎಂದರು.

ದೇಶೀಯ ಮಾರುಕಟ್ಟೆಯು ಉಬರ್‌ಗೆ ಉತ್ತಮ ವೇದಿಕೆ ಕಲ್ಪಿಸಿದೆ. ಕಂಪನಿ ಸಹ ಮತ್ತಷ್ಟು ಗ್ರಾಹಕರನ್ನು ತಲುಪಲು ತಂತ್ರಜ್ಞಾನದ ಅಭಿವೃದ್ಧಿಯತ್ತ ಹೆಜ್ಜೆ ಇಟ್ಟಿದೆ ಎಂದರು.

ಇನ್ಫೊಸಿಸ್ ಅಧ್ಯಕ್ಷ ನಂದನ್‌ ನಿಲೇಕಣಿ ಮಾತನಾಡಿ, ‘ಜಗತ್ತಿನಲ್ಲಿಯೇ ಭಾರತವು ನೇರ ನಗದು ವರ್ಗಾವಣೆಯಲ್ಲಿ (ಡಿಬಿಟಿ) ಮುಂಚೂಣಿಯಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾಹಿತಿ ತಂತ್ರಜ್ಞಾನ ವಲಯದ ಅಭಿವೃದ್ಧಿಗೆ ಉತ್ತೇಜನ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯು ಎಲ್ಲಾ ಭಾಷೆಗಳಲ್ಲಿ ಲಭ್ಯವಾಗಲಿದ್ದು, ದೇಶವು ವೇಗವಾಗಿ ಬೆಳವಣಿಗೆ ಹೊಂದಲು ನೆರವಾಗಲಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಪ್ರಭಜೀತ್‌ ಸಿಂಗ್‌ ಮತ್ತು ಒಎನ್‌ಡಿಸಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಟಿ. ಕೋಶಿ ಅವರು ಪರಸ್ಪರ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು.

ಓಎನ್‌ಡಿಸಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಟಿ. ಕೋಶಿ ಮತ್ತು ಊಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಪ್ರಭಜೀತ್‌ ಸಿಂಗ್‌ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದರು.
ಓಎನ್‌ಡಿಸಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಟಿ. ಕೋಶಿ ಮತ್ತು ಊಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಪ್ರಭಜೀತ್‌ ಸಿಂಗ್‌ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದರು.

ದೇಶದ 125 ನಗರಗಳಲ್ಲಿ ಜನರಿಗೆ ಸುರಕ್ಷಿತ ಮತ್ತು ಕೈಗೆಟಕುವ ದರದಲ್ಲಿ ಉಬರ್‌ ಸೇವೆ ನೀಡಲಾಗುತ್ತಿದೆ. ಇದರ ಮತ್ತಷ್ಟು ವಿಸ್ತರಣೆಗೆ ಈ ಒಪ್ಪಂದ ನೆರವಾಗಲಿದೆ

-ದಾರಾ ಖೋಸ್ರೋಶಾಹಿ ಗ್ಲೋಬಲ್‌ ಉಬರ್‌ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT