ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅಭಿವೃದ್ಧಿ | ಐದು ವರ್ಷದಲ್ಲಿ ಅಮೆರಿಕಕ್ಕೆ ಸೆಡ್ಡು: ಸಚಿವ ಗಡ್ಕರಿ ವಿಶ್ವಾಸ

Published 20 ಡಿಸೆಂಬರ್ 2023, 16:04 IST
Last Updated 20 ಡಿಸೆಂಬರ್ 2023, 16:04 IST
ಅಕ್ಷರ ಗಾತ್ರ

ತಿರುವನಂತಪುರ: ‘ಮುಂದಿನ ಐದು ವರ್ಷಗಳಲ್ಲಿ ದೇಶದ ರಸ್ತೆ ಮೂಲಸೌಕರ್ಯವನ್ನು ಅಮೆರಿಕಕ್ಕೆ ಸರಿಸಾಟಿಯಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

‘ದೇಶದ ಮಹಾನಗರಗಳಲ್ಲಿ ಸಂಚಾರ ದಟ್ಟಣೆ ನಿವಾರಣೆ, ಪ್ರಯಾಣದ ಅವಧಿ ಕಡಿತ ಮತ್ತು ರಸ್ತೆ ಅಪಘಾತಗಳ ಸಂಖ್ಯೆ ತಗ್ಗಿಸಲು ಸಮಗ್ರ ಕಾರ್ಯವಿಧಾನಕ್ಕೆ ಬದ್ಧ’ ಎಂದು ‘ಮನೋರಮಾ ಇಯರ್‌ಬುಕ್ 2024’ಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ದೇಶದಲ್ಲಿ ರಸ್ತೆ ಸುರಕ್ಷಿತ ಮತ್ತು ಸುಸ್ಥಿತಿಗೆ ಸಚಿವಾಲಯವು ಒತ್ತು ನೀಡಿದೆ. ಇದಕ್ಕಾಗಿ ಕಳೆದ ಬಂಬತ್ತು ವರ್ಷಗಳಲ್ಲಿ ₹50 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅಸ್ತಿತ್ವದಲ್ಲಿರುವ ನೀತಿಗಳನ್ನು ಸುಧಾರಿಸುವ ಮೂಲಕ ಗುತ್ತಿಗೆ ಮಂಜೂರಾತಿ ವಿಧಾನವನ್ನೂ ಸರಳೀಕರಿಸಿದೆ ಎಂದು ಮಾಹಿತಿ ನೀಡಿದ್ದಾರೆ. 

‘ಗುತ್ತಿಗೆಗೆ ಅನುಮತಿ ಕೋರಿ ಗುತ್ತಿಗೆದಾರರು ನನ್ನ ಬಳಿಗೆ ಬರುವ ಅಗತ್ಯವಿಲ್ಲ. ಪಾರದರ್ಶಕತೆ, ಕಾಲಮಿತಿ, ಫಲಿತಾಂಶ ಆಧಾರಿತ ಹಾಗೂ ಸದೃಢವಾದ ನಿರ್ಧಾರ ತೆಗೆದುಕೊಳ್ಳುವ ವೇಗವನ್ನೂ ಹೆಚ್ಚಿಸಲಾಗಿದೆ. ಸಚಿವಾಲಯ, ಗುತ್ತಿಗೆದಾರರು ಮತ್ತು ಬ್ಯಾಂಕ್‌ಗಳನ್ನು ಒಂದೇ ಕುಟುಂಬವೆಂದು ಪರಿಗಣಿಸಿದ್ದೇವೆ ಎಂದು ಹೇಳಿದ್ದಾರೆ.

ಎಥೆನಾಲ್ ಬಳಕೆ: ಸಾಂಪ್ರದಾಯಿಕ ಇಂಧನ ಬಳಕೆಯನ್ನು ಕಡಿಮೆಗೊಳಿಸಲು ಎಲೆಕ್ಟ್ರಿಕ್ ಮತ್ತು ಫ್ಲೆಕ್ಸ್ ಇಂಧನ ವಾಹನಗಳನ್ನು ಪರಿಚಯಿಸಲಾಗುತ್ತಿದೆ ಎಂದ್ದಾರೆ.

ಫ್ಲೆಕ್ಸ್ ಎಂಜಿನ್ ಹೊಂದಿರುವ ಕೆಲವು ವಾಹನಗಳು ಈಗ ಪೆಟ್ರೋಲ್ ಬದಲಿಗೆ ಎಥೆನಾಲ್‌ನಿಂದ ಚಲಿಸುತ್ತಿವೆ. ಪ್ರಸ್ತುತ ಎಥೆನಾಲ್ ದರ ಲೀಟರ್‌ಗೆ ₹60 ಆಗಿದೆ. ಇದು ಇಂಧನದ ಸರಾಸರಿ ವೆಚ್ಚವನ್ನು ₹15ಕ್ಕೆ ತಗ್ಗಿಸುತ್ತದೆ ಎಂದು ವಿವರಿಸಿದ್ದಾರೆ. 

ದೇಶದ ಆಟೊಮೊಬೈಲ್ ವಲಯವು ಜಪಾನ್ ಅನ್ನು ಹಿಂದಿಕ್ಕಿದೆ. ಚೀನಾ ಮತ್ತು ಅಮೆರಿಕದ ಬಳಿಕ ಮೂರನೇ ಸ್ಥಾನದಲ್ಲಿದೆ. ಇದನ್ನು ಅಗ್ರಪಟ್ಟಕ್ಕೇರಿಸಲು ನಿರ್ಧರಿಸಲಾಗಿದೆ
-ನಿತಿನ್‌ ಗಡ್ಕರಿ, ಕೇಂದ್ರ ಸಾರಿಗೆ ಸಚಿವ

ಅಪಘಾತ: ಪ್ರತಿವರ್ಷ 1.50 ಲಕ್ಷ ಸಾವು

‘ಕೇಂದ್ರ ಸರ್ಕಾರವು ರಸ್ತೆ ಸುರಕ್ಷತೆಗೆ ಒತ್ತು ನೀಡಿದರೂ ಅಪಘಾತಗಳ ಸಂಖ್ಯೆಯನ್ನು ಶೇ 50ರಷ್ಟು ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಗಡ್ಕರಿ ಒಪ್ಪಿಕೊಂಡಿದ್ದಾರೆ. ‘ಪ್ರತಿವರ್ಷ ಐದು ಲಕ್ಷ ಅಪಘಾತಗಳು ಸಂಭವಿಸುತ್ತಿದ್ದು 1.50 ಲಕ್ಷ ಮಂದಿ ಮೃತಪಡುತ್ತಿದ್ದಾರೆ. ಇದರಿಂದ ಜಿಡಿಪಿ ಶೇ 3ರಷ್ಟು ನಷ್ಟವಾಗುತ್ತದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT