ಬುಧವಾರ, ಡಿಸೆಂಬರ್ 2, 2020
26 °C
ಶುಲ್ಕ ಪಾವತಿಸಲು ತೆಗೆದು ಇರಿಸಿದ ಮೊತ್ತ ಹೆಚ್ಚಳ

ವೊಡಾಫೋನ್‌, ಏರ್‌ಟೆಲ್‌ ನಷ್ಟ ₹ 74 ಸಾವಿರ ಕೋಟಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮೊಬೈಲ್‌ ಸೇವಾ ಸಂಸ್ಥೆ ವೊಡಾಫೋನ್‌ ಐಡಿಯಾ ಸೆಪ್ಟೆಂಬರ್‌ಗೆ ಅಂತ್ಯಗೊಂಡ ದ್ವಿತೀಯ ತ್ರೈಮಾಸಿಕದಲ್ಲಿ ₹ 50,921 ಕೋಟಿಗಳಷ್ಟು ನಷ್ಟ ದಾಖಲಿಸಿದೆ.

ದೇಶಿ ಕಾರ್ಪೊರೇಟ್‌ ಸಂಸ್ಥೆಯೊಂದರ ಅತಿದೊಡ್ಡ ನಷ್ಟದ ಪ್ರಮಾಣ ಇದಾಗಿದೆ. ಭಾರ್ತಿ ಏರ್‌ಟೆಲ್‌ನ ನಷ್ಟದ ಮೊತ್ತವು ₹ 23,045 ಕೋಟಿಗಳಷ್ಟಾಗಿದೆ. ಈ ಎರಡೂ ಮೊಬೈಲ್‌ ಕಂಪನಿಗಳ ಒಟ್ಟಾರೆ ನಷ್ಟವು ₹ 73,966 ಕೋಟಿಗಳಷ್ಟಾಗಿದೆ. 2018ರ ಡಿಸೆಂಬರ್‌ ತ್ರೈಮಾಸಿಕದಲ್ಲಿ ಟಾಟಾ ಮೋಟರ್ಸ್‌ ₹ 26,961 ಕೋಟಿಗಳಷ್ಟು ನಷ್ಟ ದಾಖಲಿಸಿತ್ತು.

ಹೊಂದಾಣಿಕೆ ಮಾಡಿದ ಒಟ್ಟು ವರಮಾನ (ಎಜಿಆರ್‌) ಪ್ರಕರಣದಲ್ಲಿ ಮೊಬೈಲ್‌ ಕಂಪನಿಗಳು ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ತರಂಗಾಂತರ ಬಳಕೆ ಮತ್ತು ಲೈಸೆನ್ಸ್‌ ಶುಲ್ಕವನ್ನು ದಂಡ, ಬಡ್ಡಿ ಜತೆ ಪಾವತಿಸಬೇಕಾಗಿದೆ. ಈ ಉದ್ದೇಶಕ್ಕೆ ಅವುಗಳು ತಮ್ಮ ವರಮಾನದ ಬಹುಭಾಗವನ್ನು ಪ್ರತ್ಯೇಕವಾಗಿ ತೆಗೆದು ಇರಿಸಬೇಕಾಗಿದೆ. ಹೀಗಾಗಿ ಅವುಗಳ ನಷ್ಟದ ಪ್ರಮಾಣ ಗಣನೀಯವಾಗಿ ಹೆಚ್ಚಳಗೊಂಡಿದೆ.

ಶುಲ್ಕ ಮತ್ತು ದಂಡ ಪಾವತಿಸುವ ಸುಪ್ರೀಂಕೋರ್ಟ್‌ ತೀರ್ಪು ಪರಾಮರ್ಶೆಗೆ ಅರ್ಜಿ ಸಲ್ಲಿಸಲು ವೊಡಾಫೋನ್‌ ಸಿದ್ಧತೆ ನಡೆಸುತ್ತಿದೆ.

ಭಾರತಿ ಏರ್‌ಟೆಲ್‌, ವೊಡಾಫೋನ್‌, ಎಂಟಿಎನ್‌ಎಲ್‌ ಮತ್ತು ಬಿಎಸ್‌ಎನ್‌ಎಲ್‌ ಸೇರಿದಂತೆ ಪ್ರಮುಖ ದೂರಸಂಪರ್ಕ ಕಂಪನಿಗಳು ಪರವಾನಗಿ ಶುಲ್ಕ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ₹ 92,642 ಕೋಟಿ ಬಾಕಿ ಇರಿಸಿಕೊಂಡಿವೆ.

*
ಯಾವುದೇ ಮೊಬೈಲ್ ಕಂಪನಿ ಬಾಗಿಲು ಹಾಕುವುದು ಸರ್ಕಾರಕ್ಕೆ ಇಷ್ಟವಿಲ್ಲ. ಸಂಸ್ಥೆಗಳು ಲಾಭದಾಯಕ ವಹಿವಾಟು ನಡೆಸಬೇಕು ಎನ್ನುವುದು ಸರ್ಕಾರದ ಇಚ್ಛೆ.
-ನಿರ್ಮಲಾ ಸೀತಾರಾಮನ್‌ ಕೇಂದ್ರ ಹಣಕಾಸು ಸಚಿವೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು