ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳುವರಿ ಕುಸಿತ, ತಗ್ಗದ ಆಮದು ಸುಂಕ: ಗೋಧಿ ದರ 8 ತಿಂಗಳಲ್ಲೇ ಗರಿಷ್ಠ

Published 18 ಅಕ್ಟೋಬರ್ 2023, 9:40 IST
Last Updated 18 ಅಕ್ಟೋಬರ್ 2023, 9:40 IST
ಅಕ್ಷರ ಗಾತ್ರ

ಮುಂಬೈ: ಹಬ್ಬದ ಸಂದರ್ಭದಲ್ಲಿ ಬೇಡಿಕೆ ಹೆಚ್ಚಳ, ಪೂರೈಕೆಯಲ್ಲಿನ ವ್ಯತ್ಯಯ ಹಾಗೂ ಆಮದು ಸುಂಕ ಹೆಚ್ಚಳ ಕಾರಣಗಳಿಂದಾಗಿ ಗೋಧಿ ದರವು ಕಳೆದ 8 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.

ಗೋಧಿ ಬೆಲೆ ಏರಿಕೆಯಿಂದಾಗಿ ಆಹಾರದ ಹಣದುಬ್ಬರ ಏರುಮುಖವಾಗಲಿದೆ. ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಬೆಲೆ ಏರಿಕೆಯಾಗಿರುವುದರಿಂದ ಸರ್ಕಾರವು ತನ್ನ ಗೋದಾಮಿನಲ್ಲಿರುವ ಗೋಧಿಯನ್ನು ಬಿಡುಗಡೆ ಮಾಡುವ ಹಾಗೂ ಆಮದು ಸುಂಕ ತಗ್ಗಿಸುವ ಮೂಲಕ ಬೆಲೆ ನಿಯಂತ್ರಿಸುವ ಸಾಧ್ಯತೆ ಇದೆ ಎಂದೆನ್ನಲಾಗಿದೆ.

ಪ್ರತಿ ಟನ್ ಗೋಧಿಗೆ ದೆಹಲಿಯಲ್ಲಿ ₹ 27,390ರಷ್ಟು ದರ ನಿಗದಿಯಾಗಿದೆ. ಹಿಂದಿನ ದರಕ್ಕಿಂತ ಇದು ಶೇ 1.6ರಷ್ಟು ಬೆಲೆ ಏರಿಕೆಯಾಗಿದೆ. ಫೆ. 10ರ ದರಕ್ಕೆ ಹೋಲಿಸಿದಲ್ಲಿ ಶೇ 22ರಷ್ಟು ಏರಿಕೆಯಾಗಿದೆ ಎಂದು ವರ್ತಕರು ತಿಳಿಸಿದ್ದಾರೆ.

‘ಸಾಲು ಸಾಲು ಹಬ್ಬಗಳ ಸಂದರ್ಭದಲ್ಲಿ ಸಹಜವಾಗಿ ಬೇಡಿಕೆ ಹೆಚ್ಚಾಗಿರುವುದರಿಂದ ಗೋಧಿ ಬೆಲೆಯೂ ಏರಿಕೆಯಾಗಿದೆ. ಇಂಥ ಸಂದರ್ಭದಲ್ಲಿ ಜನರ ಹಿತಕ್ಕಾಗಿ ತೆರಿಗೆ ರಹಿತ ಆಮದಿಗೆ ಸರ್ಕಾರ ಅವಕಾಶ ಕಲ್ಪಿಸಬೇಕು’ ಎಂದು ಹಿಟ್ಟಿನ ಗಿರಣಿಗಳ ಒಕ್ಕೂಟದ ಅಧ್ಯಕ್ಷ ಎಸ್. ಪ್ರಮೋದ್ ಕುಮಾರ್ ಆಗ್ರಹಿಸಿದ್ದಾರೆ.

‘ಗೋಧಿ ಆಮದು ಮೇಲೆ ಶೇ 40ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಆದರೆ ಇದನ್ನು ತಕ್ಷಣದಿಂದಲೇ ರದ್ದುಪಡಿಸುವ ಯಾವುದೇ ಚಿಂತನೆ ಸರ್ಕಾರದ ಮುಂದಿಲ್ಲ’ ಎಂದು ಆಹಾರ ಮಂತ್ರಾಲಯ ಹಿರಿಯ ಅಧಿಕಾರಿಯೊಬ್ಬರು ಕಳೆದ ತಿಂಗಳು ಹೇಳಿದ್ದರು.

‘ಅ. 1ರವರೆಗೂ ಸರ್ಕಾರದ ಗೋದಾಮುಗಳಲ್ಲಿ 2.4 ಕೋಟಿ ಟನ್‌ನಷ್ಟು ಗೋಧಿ ದಾಸ್ತಾನು ಇದೆ. ಕಳೆದ ಐದು ವರ್ಷಗಳ ಸರಾಸರಿ 3.7 ಕೋಟಿ ಟನ್‌ಗೆ ಹೋಲಿಸಿದಲ್ಲಿ ಸಾಕಷ್ಟು ಕುಸಿತಗೊಂಡಿದೆ’ ಎಂದು ಪಿಲಿಪ್ ಕ್ಯಾಪಿಟಲ್ ಇಂಡಿಯಾ ಕಂಪನಿಯ ಸರಕು ಸಂಶೋಧನಾ ವಿಭಾಗದ ಮುಖ್ಯಸ್ಥ ಅಶ್ವಿನಿ ಬಡಸೋಡೆ ಹೇಳಿದ್ದಾರೆ.

‘2023ರಲ್ಲಿ 3.4 ಕೋಟಿ ಟನ್‌ನಷ್ಟು ಗೋಧಿ ಸಂಗ್ರಹವಾಗುವ ನಿರೀಕ್ಷೆ ಇತ್ತು. ಆದರೆ 2.6 ಕೋಟಿ ಟನ್‌ನಷ್ಟು ಮಾತ್ರ ಸಂಗ್ರಹಗೊಂಡಿದೆ. ಮಳೆ ಮಾರುತಗಳ ಮೇಲೆ ಎನ್‌ ನಿನೊ ಬೀರಿದ ಪರಿಣಾಮದಿಂದ ಈ ಬಾರಿ ಚಳಿಗಾಲಯದಲ್ಲಿ ವಾಡಿಕೆಗಿಂತ ತಾಪಮಾನ ಹೆಚ್ಚು ಇರಲಿದೆ. ಹೀಗಾಗಿ ಈ ಬಾರಿ ಚಳಿಗಾಲವು ಗೋಧಿ ಬೆಳೆಯ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ’ ಎಂದು ಅವರು ಹೇಳಿದ್ದಾರೆ.

2023ರಲ್ಲಿ 11.2 ಕೋಟಿ ಟನ್‌ನಷ್ಟು ಗೋಧಿ ಉತ್ಪಾದನೆ ಆಗಲಿದ ಎಂದು ಸರ್ಕಾರ ಅಂದಾಜು ಮಾಡಿತ್ತು. ಆದರೆ ವರ್ತಕರು ಅಂದಾಜು ಮಾಡಿರುವಂತೆ ಪ್ರತಿ ವರ್ಷದ ಸರಾಸರಿಗಿಂತ ಶೇ 10ರಷ್ಟು ಕಡಿಮೆ ಉತ್ಪಾದನೆ ಆಗಲಿದೆ ಎಂದಿದ್ದಾರೆ.

‘ಮುಂಬರುವ ದಿನಗಳಲ್ಲಿ ಪೂರೈಕೆಗಿಂತ ಗೋಧಿಗೆ ಬೇಡಿಕೆ ಹೆಚ್ಚಾಗಲಿದೆ. ಆಮದು ಮೇಲಿನ ಸುಂಕವನ್ನು ಸರ್ಕಾರ ಹಿಂಪಡೆಯದಿದ್ದರೆ ಪ್ರತಿ ಟನ್‌ ಗೋಧಿಯ ಬೆಲೆ ₹30 ಸಾವಿರ ದಾಟಲಿದೆ’ ಎಂದು ಮುಂಬೈ ಮೂಲಕ ಜಾಗತಿ ಮಟ್ಟದ ವರ್ತಕರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT