ಮಂಗಳವಾರ, ಮಾರ್ಚ್ 21, 2023
23 °C

ಭಾರತದ ಜಿಡಿ‍ಪಿ ಅಂದಾಜು ತಗ್ಗಿಸಿದ ವಿಶ್ವ ಬ್ಯಾಂಕ್

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಹಣದುಬ್ಬರ ಏರಿಕೆ, ಪೂರೈಕೆ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಹಾಗೂ ಜಾಗತಿಕ ಬಿಕ್ಕಟ್ಟುಗಳು ಆರ್ಥಿಕ ಪುನಶ್ಚೇತನಕ್ಕೆ ಅಡ್ಡಿಯಾಗುತ್ತಿರುವ ಕಾರಣ ವಿಶ್ವ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಭಾರತದ ಬೆಳವಣಿಗೆಯ ಅಂದಾಜು ದರವನ್ನು ತಗ್ಗಿಸಿದೆ.

2022–23ರಲ್ಲಿ ಭಾರತದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆಯು ಶೇಕಡ 7.5ರಷ್ಟು ಇರಲಿದೆ ಎಂದು ವಿಶ್ವ ಬ್ಯಾಂಕ್ ಮಂಗಳವಾರ ಹೇಳಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಅಂದಾಜನ್ನು ವಿಶ್ವ ಬ್ಯಾಂಕ್ ಕಡಿಮೆ ಮಾಡುತ್ತಿರುವುದು ಇದು ಎರಡನೆಯ ಬಾರಿ. ಜಿಡಿಪಿ ಬೆಳವಣಿಗೆ ಶೇ 8.7ರಷ್ಟು ಇರಲಿದೆ ಎಂದು ಈ ಹಿಂದೆ ಹೇಳಿದ್ದ ವಿಶ್ವ ಬ್ಯಾಂಕ್, ನಂತರ ಏಪ್ರಿಲ್‌ನಲ್ಲಿ ಅದನ್ನು ಶೇ 8ಕ್ಕೆ ತಗ್ಗಿಸಿತ್ತು. ಈಗ ಇನ್ನಷ್ಟು ಕಡಿಮೆ ಮಾಡಿದೆ.

ದೇಶದ ಖಾಸಗಿ ವಲಯವು ಮಾಡಿರುವ ಹೂಡಿಕೆಗಳು ಹಾಗೂ ಹಲವು ಉತ್ತೇಜನ ಕ್ರಮಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿರುವುದು ಬೆಳವಣಿಗೆಗೆ ಒತ್ತಾಸೆಯಾಗಿ ನಿಲ್ಲಲಿವೆ ಎಂದು ವಿಶ್ವ ಬ್ಯಾಂಕ್ ವರದಿಯು ಹೇಳಿದೆ. 2023–24ರ ವೇಳೆಗೆ ಬೆಳವಣಿಗೆ ಪ್ರಮಾಣವು ಶೇ 7.1ಕ್ಕೆ ತಗ್ಗುವ ಸಾಧ್ಯತೆ ಇದೆ ಎಂದೂ ಅದು ಹೇಳಿದೆ.

ಇಂಧನ, ತರಕಾರಿ ಸೇರಿದಂತೆ ಎಲ್ಲ ಬಗೆಯ ಅಗತ್ಯ ವಸ್ತುಗಳ ಬೆಲೆಯಲ್ಲಿ ಆದ ಹೆಚ್ಚಳವು ದೇಶದ ಸಗಟು ಹಣದುಬ್ಬರ ದರವನ್ನು ಏಪ್ರಿಲ್‌ನಲ್ಲಿ ಶೇ 15.08ಕ್ಕೆ ಹೆಚ್ಚಿಸಿದೆ. ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 7.79ಕ್ಕೆ ತಲುಪಿದೆ.

ವಿಶ್ವ ಬ್ಯಾಂಕ್ ವರದಿಯ ಪ್ರಕಾರ ದೇಶದ ಬೆಳವಣಿಗೆಯ ಪ್ರಮಾಣವು ಈ ವರ್ಷದ ಮೊದಲಾರ್ಧದಲ್ಲಿ ವೇಗ ಕಳೆದುಕೊಂಡಿದೆ. ಕೋವಿಡ್ ಪ್ರಕರಣಗಳಲ್ಲಿನ ಏರಿಕೆ, ಉಕ್ರೇನ್–ರಷ್ಯಾ ಯುದ್ಧ ಹಾಗೂ ಹಣದುಬ್ಬರ ಹೆಚ್ಚಳವು ಇದಕ್ಕೆ ಕಾರಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.