ರಾಜ್ಯದ ಏಕೈಕ ನಿಂಬೆ ಮಾರುಕಟ್ಟೆಯಿದು..!

7
ನಿಂಬೆ ಮಾರುಕಟ್ಟೆಗೆ ಮೂರು ದಶಕದ ಐತಿಹ್ಯ; ವಿದೇಶಕ್ಕೂ ರಫ್ತು

ರಾಜ್ಯದ ಏಕೈಕ ನಿಂಬೆ ಮಾರುಕಟ್ಟೆಯಿದು..!

Published:
Updated:
Deccan Herald

ವಿಜಯಪುರ: ವಿಜಯಪುರ ಜಿಲ್ಲೆ ‘ನಿಂಬೆಯ ಕಣಜ’ ಎಂದು ಮನೆ ಮಾತಾಗಿದೆ. ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿರುವ ನಿಂಬೆ ಮಾರುಕಟ್ಟೆ, ರಾಜ್ಯದಲ್ಲಿರುವ ಏಕೈಕ ಮಾರುಕಟ್ಟೆ. ಬಹುಪಾಲು ನಿಂಬೆಯ ವಹಿವಾಟು ನಡೆಯುವುದು ಇಲ್ಲಿಯೇ.

ನಿಂಬೆ ಬೆಳೆಯಲ್ಲಿ ಇಂಡಿ ತಾಲ್ಲೂಕು ಸಿಂಹಪಾಲು ಹೊಂದಿದೆ. ಇದರ ಪರಿಣಾಮವಾಗಿಯೇ ಇಂಡಿ ಪಟ್ಟಣದಲ್ಲಿ ನಿಂಬೆ ಅಭಿವೃದ್ಧಿ ಪ್ರಾಧಿಕಾರ ವರ್ಷದ ಹಿಂದೆಯೇ ಶಾಸಕ ಯಶವಂತರಾಯಗೌಡ ಪಾಟೀಲ ಪರಿಶ್ರಮದಿಂದ ಸ್ಥಾಪನೆಯಾಗಿದ್ದು, ಇಲ್ಲಿ ಉಲ್ಲೇಖಾರ್ಹ.

ವಿಜಯಪುರ ಎಪಿಎಂಸಿಯ ನಿಂಬೆ ಮಾರುಕಟ್ಟೆಗೆ 70% ಉತ್ಪನ್ನ ಬರುವುದು ಇಂಡಿ ತಾಲ್ಲೂಕಿನಿಂದ. ಉಳಿದಂತೆ ವಿಜಯಪುರ, ಸಿಂದಗಿ ತಾಲ್ಲೂಕಿನ ಉತ್ಪನ್ನ ತಲಾ 15% ಬಂದರೇ, ಬಸವನಬಾಗೇವಾಡಿ, ಮುದ್ದೇಬಿಹಾಳ ತಾಲ್ಲೂಕಿನಿಂದ ಆವಕವಾಗುವುದು ಕೊಂಚವಷ್ಟೇ ಎಂದು ಎಪಿಎಂಸಿ ಕಾರ್ಯದರ್ಶಿ ವಿ.ರಮೇಶ ತಿಳಿಸಿದರು.

ವರ್ಷವಿಡೀ ಕ್ರಿಯಾಶೀಲ: ‘ವರ್ಷದ ಎಲ್ಲಾ ಅವಧಿಯಲ್ಲೂ ನಿಂಬೆ ಮಾರುಕಟ್ಟೆ ಕ್ರಿಯಾಶೀಲವಾಗಿರುತ್ತದೆ. ಆಯಾ ಪ್ರದೇಶದ ವಾತಾವರಣಕ್ಕೆ ಅನುಗುಣವಾಗಿ ಇಲ್ಲಿಂದ ನಿಂಬೆ ರಫ್ತಾಗುವುದು ವಿಶೇಷ’ ಎನ್ನುತ್ತಾರೆ ನಿಂಬೆ ವಹಿವಾಟುದಾರ ಸಲೀಂ ಸಾಗರ.

‘ಮಾರ್ಚ್‌ನಿಂದ ಜುಲೈವರೆಗೂ ಉತ್ತರ ಭಾರತದ ರಾಜ್ಯಗಳಾದ ಪಂಜಾಬ್‌, ನವದೆಹಲಿ, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ ಇನ್ನಿತರೆ ರಾಜ್ಯಗಳಿಗೆ ನಿಂಬೆ ರಫ್ತಾಗಲಿದೆ. ಆಗಸ್ಟ್‌ನಿಂದ ಒಂದೆರೆಡು ತಿಂಗಳು ಬೆಂಗಳೂರು, ಮೈಸೂರು, ರಾಜ್ಯದ ಇತರೆಡೆ ಆಂಧ್ರಪ್ರದೇಶದ ಉತ್ಪನ್ನ ಬಾರದಿರುವುದರಿಂದ ಇಲ್ಲಿಂದಲೇ ಕಳುಹಿಸಿಕೊಡುತ್ತೇವೆ.

ನವೆಂಬರ್‌ನಿಂದ ಫೆಬ್ರುವರಿಯವರೆಗೆ ಅರಬ್‌ ದೇಶಗಳಿಗೆ ವಾರಕ್ಕೊಂದು ಕಂಟೈನರ್‌ ನಿಂಬೆ ರಫ್ತು ಮಾಡುತ್ತೇವೆ. ಒಂದು ಕಂಟೈನರ್ 25 ಟನ್‌ ಉತ್ಪನ್ನ ಹೊಂದಿರುತ್ತದೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಆಗಸ್ಟ್‌ನಿಂದ ಮಾರುಕಟ್ಟೆಗೆ ನಿಂಬೆ ಉತ್ಪನ್ನ ಆವಕವಾಗುವುದು ಇಳಿಮುಖಗೊಳ್ಳುತ್ತದೆ. ಆದರೂ ಧಾರಣೆ ಗಗನಮುಖಿಯಾಗಲ್ಲ. ಅಗ್ಗವಿರುತ್ತದೆ. ನವೆಂಬರ್‌ನಿಂದ ಮಾರ್ಚ್‌ವರೆಗೂ ನಿಂಬೆಯ ಸುಗ್ಗಿ. ಗುಣಮಟ್ಟದ ಉತ್ಪನ್ನ ಮಾರುಕಟ್ಟೆಗೆ ಪೂರೈಕೆಯಾಗುತ್ತದೆ. ಈ ಅವಧಿಯಲ್ಲೇ ಹಸಿರು ನಿಂಬೆಕಾಯಿಯನ್ನು ಅರಬ್‌ ರಾಷ್ಟ್ರಗಳಿಗೆ ರಫ್ತು ಮಾಡಲಾಗುವುದು’ ಎಂದು ಸ್ಟಾರ್‌ ಲೆಮೆನ್‌ ಅಂಗಡಿಯ ವರ್ತಕ ಎ.ಕೆ.ಬಾಗವಾನ ಹೇಳಿದರು.

‘ಏಪ್ರಿಲ್‌ ತಿಂಗಳಲ್ಲಿ ನಿಂಬೆ ಆವಕ ಕೊಂಚ ಕುಸಿಯಲಿದೆ. ಬೇಸಿಗೆಯ ತಾಪಮಾನ ಸಹ ಹೆಚ್ಚಿರುವುದರಿಂದ ಸಹಜವಾಗಿಯೇ ಬೇಡಿಕೆ ಹೆಚ್ಚಿ, ಧಾರಣೆಯೂ ಗಗನಮುಖಿಯಾಗಿರಲಿದೆ. ಮೇ ತಿಂಗಳಿಂದ ಜುಲೈವರೆಗೂ ಮತ್ತೆ ನಿಂಬೆಯ ಆವಕ ಮಾರುಕಟ್ಟೆಗೆ ಹೆಚ್ಚಾಗಲಿದೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !