ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಮುಂದಿನ ಭವಿಷ್ಯಕ್ಕೆ ಉತ್ತಮ ಉಳಿತಾಯ ಯೋಜನೆ

Last Updated 8 ಜೂನ್ 2021, 20:45 IST
ಅಕ್ಷರ ಗಾತ್ರ

*ಪ್ರಶ್ನೆ: ನನ್ನ ವಯಸ್ಸು 44 ವರ್ಷ. ನಾನು ವ್ಯಾಪಾರಿ. ನನ್ನ ತಂದೆಯ ಬಳಿ ತುಮಕೂರು ಸಮೀಪ ಆರು ಎಕರೆ ಕೃಷಿ ಜಮೀನಿದೆ. ಅದನ್ನು ಮಾರಾಟ ಮಾಡಿ ಬೇರೆ ಕೃಷಿ ಜಮೀನು ಕೊಳ್ಳಬಹುದೇ ಅಥವಾ ನಿವೇಶನ ಕೊಳ್ಳಬಹುದೇ? ಬಂಡವಾಳ ವೃದ್ಧಿ ತೆರಿಗೆ ವಿಚಾರದಲ್ಲಿ ಮಾಹಿತಿ ಇಲ್ಲ.

-ಕಿರಣ್‌, ಬೆಂಗಳೂರು

ಉತ್ತರ: ಸೆಕ್ಷನ್‌ 54 ಬಿ ಆಧಾರದಲ್ಲಿ ಬಂಡವಾಳ ವೃದ್ಧಿ ತೆರಿಗೆ ಉಳಿಸಲು, ಕೃಷಿ ಜಮೀನು ಮಾರಾಟದಿಂದ ಬಂದ ಸಂಪೂರ್ಣ ಹಣವನ್ನು ಎರಡು ವರ್ಷಗಳ ಒಳಗೆ ತೊಡಗಿಸಿ ಇನ್ನೊಂದು ಕೃಷಿ ಜಮೀನು ಕೊಳ್ಳಬಹುದು. ಆದರೆ, ನಿವೇಶನ ಕೊಳ್ಳುವಂತಿಲ್ಲ. ಹೀಗೆ ಕೊಂಡ ಕೃಷಿ ಜಮೀನನ್ನು ಖರೀದಿಸಿದ ತಾರೀಕಿನಿಂದ ಮೂರು ವರ್ಷಗಳೊಳಗೆ ಮಾರಾಟ ಮಾಡುವಂತಿಲ್ಲ. ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾಗಿದ್ದರೆ ನನಗೆ ಕರೆ ಮಾಡಿ.

*ಪ್ರಶ್ನೆ: ನಾನು, ನನ್ನ ಪತಿ ಇಬ್ಬರೂ ಐ.ಟಿ. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ನನ್ನ ವಯಸ್ಸು 27. ಪತಿಯ ವಯಸ್ಸು 32. ನಮಗೆ ಕ್ರಮವಾಗಿ ತಿಂಗಳಿಗೆ ₹ 80 ಸಾವಿರ ಹಾಗೂ ₹ 1.20 ಲಕ್ಷ ಸಂಬಳ ಬರುತ್ತಿದೆ. ನಾಲ್ಕು ವರ್ಷ ವಯಸ್ಸಿನ ಒಂದು ಹೆಣ್ಣು ಮಗು ಇದೆ. ತೆರಿಗೆ ಉಳಿಸಲು, ಮುಂದಿನ ಭವಿಷ್ಯಕ್ಕೆ ಉತ್ತಮ ಉಳಿತಾಯ ಯೋಜನೆ ತಿಳಿಸಿ. ನನಗೆ ಪಿತ್ರಾರ್ಜಿತ ಆಸ್ತಿ ಬರುವುದಿದೆ. ಕೆಲವು ವೈಯಕ್ತಿಕ ಹಣಕಾಸಿನ ವಿಚಾರಗಳಿಗೆ ಸಂಪರ್ಕಿಸಬಹುದೇ?

-ಸುಶ್ಮಿತಾ, ಊರುಬೇಡ

ಉತ್ತರ: ನಿಮ್ಮ ಇದುವರೆಗಿನ ಉಳಿತಾಯ ಅಥವಾ ಹೂಡಿಕೆ ಬಗ್ಗೆ ತಿಳಿಸಿಲ್ಲ. ನಿಮ್ಮ ದೂರವಾಣಿ ಸಂಖ್ಯೆ ಕೂಡಾ ನೀಡಿಲ್ಲ. ಮನೆ ಬಾಡಿಗೆ, ಪೆಟ್ರೋಲ್‌, ಮನೆ ಖರ್ಚು, ಆದಾಯ ತೆರಿಗೆ ಹಾಗೂ ಇನ್ನಿತರ ವೈಯಕ್ತಿಕ ಖರ್ಚುಗಳಿಗೆ ಗರಿಷ್ಠ ₹ 75 ಸಾವಿರ ತೆಗೆದಿಟ್ಟು ಉಳಿದ ₹ 1.25 ಲಕ್ಷ ನೀವು ಉಳಿತಾಯ ಮಾಡಬಹುದು. ಸೆಕ್ಷನ್‌ 80ಸಿ ಆಧಾರದ ಮೇಲೆ ಪಿಪಿಎಫ್ ಹಾಗೂ ಜೀವ ವಿಮೆಯಲ್ಲಿ ಇಬ್ಬರೂ ಗರಿಷ್ಠ ₹ 1.50 ಲಕ್ಷ ಹೂಡಿಕೆ ಮಾಡಿ. ಹಾಗೆಯೇ ಎನ್‌ಪಿಎಸ್‌ನಲ್ಲಿ ಕನಿಷ್ಠ ₹ 50 ಸಾವಿರ ಹೂಡಿಕೆ ಮಾಡಿ. ನಿಮಗೆ ಸೆಕ್ಷನ್‌ 16 (1ಎ) ಆಧಾರದ ಮೇಲೆ ₹ 50 ಸಾವಿರ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಇದೆ. ಒಟ್ಟಿನಲ್ಲಿ ಸೆಕ್ಷನ್‌ 80ಸಿ, 80ಸಿಸಿಡಿ (1ಬಿ) ಮತ್ತು 16 (1ಎ) ಆಧಾರದ ಮೇಲೆ ₹ 2.50 ಲಕ್ಷ ನಿಮ್ಮ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ಕಂಪನಿಯಿಂದ ಆರೋಗ್ಯ ವಿಮೆ ಸವಲತ್ತು ಇದ್ದಲ್ಲಿ ವಾರ್ಷಿಕ ₹ 25 ಸಾವಿರ ಕಂತು ತುಂಬಿ ಸೆಕ್ಷನ್‌ 80ಡಿ ಅಧಾರದ ಮೇಲೆ ಪ್ರತ್ಯೇಕವಾಗಿ ವಿನಾಯಿತಿ ಪಡೆಯಬಹುದು. ಮಗಳ ಸಲುವಾಗಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ವಾರ್ಷಿಕವಾಗಿ ₹ 1.5 ಲಕ್ಷ ತುಂಬಲು ಪ್ರಾರಂಭಿಸಿ ಹಾಗೂ ಕನಿಷ್ಠ 20 ಗ್ರಾಂ ಬಂಗಾರದ ನಾಣ್ಯ ಈ ವರ್ಷದಿಂದಲೇ ಖರೀದಿಸಲು ಆರಂಭಿಸಿ. ಈ ಪ್ರಕ್ರಿಯೆ ಮಗಳ ಮದುವೆ ತನಕ ಮುಂದುವರಿಸಿ. ಇದೇ ವೇಳೆ, ಸಾಧ್ಯವಾದರೆ ಗೃಹ ಸಾಲ ಪಡೆದು ಸ್ವಂತ ಮನೆ ಮಾಡಿಕೊಳ್ಳಲು ಆಲೋಚಿಸಿ. ಗೃಹ ಸಾಲದ ಬಡ್ಡಿಯನ್ನು ಸೆಕ್ಷನ್‌ 24(ಬಿ) ಆಧಾರದ ಮೇಲೆ ಗರಿಷ್ಠ ₹ 2 ಲಕ್ಷ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ಇನ್ನೂ ಹೆಚ್ಚಿನ ಮಾಹಿತಿಯ ಅವಶ್ಯವಿದ್ದರೆ ಮಾತ್ರ ಕರೆ ಮಾಡಿ.

*ಪ್ರಶ್ನೆ: ನನಗೆ ರಾಮನಗರದ ಸಮೀಪ 8 ಎಕರೆ ಕೃಷಿ ಜಮೀನಿದೆ. ಇದು ಪಿತ್ರಾರ್ಜಿತ. ನಮಗೆ ಮೂವರು ಮಕ್ಕಳು. 8 ಎಕರೆ ಮಾರಾಟ ಮಾಡಿದರೆ ಸರಿಸುಮಾರು ₹ 1.5 ಕೋಟಿ ಸಿಗಬಹುದು. ಕೃಷಿ ಜಮೀನು ಮಾರಾಟ ಮಾಡಿದರೆ ತೆರಿಗೆ ಬರುವುದಿಲ್ಲ ಎಂಬುದಾಗಿ ಸ್ನೇಹಿತರು ಹೇಳುತ್ತಾರೆ. ಒಂದು ವೇಳೆ ತೆರಿಗೆ ಕೊಡಬೇಕಾದರೆ ಮೂವರು ಮಕ್ಕಳ ಹೆಸರಿನಲ್ಲಿ ಪ್ರತ್ಯೇಕವಾಗಿ ₹ 50 ಲಕ್ಷ ಬಾಂಡ್‌ನಲ್ಲಿ ಇರಿಸಬಹುದೇ?

-ಆಂಜನಪ್ಪ, ರಾಮನಗರ

ಉತ್ತರ: ಸೆಕ್ಷನ್‌ 48 ಆಧಾರದ ಮೇಲೆ ಕೃಷಿ ಜಮೀನು ಮಾರಾಟ ಮಾಡಿದಾಗ ಬಂಡವಾಳ ವೃದ್ಧಿ ತೆರಿಗೆ ಬಾರದೇ ಇದ್ದರೂ ನಿಮ್ಮ ಆಸ್ತಿ ರಾಮನಗರಕ್ಕೆ ಸಮೀಪ ಇರುವುದರಿಂದ ಮಾರಾಟ ಮಾಡಿದಾಗ ತೆರಿಗೆ ಕೊಡಬೇಕಾಗುತ್ತದೆ. ನಿಮ್ಮ ಆಸ್ತಿ ಪಿತ್ರಾರ್ಜಿತ ಆಗಿದ್ದು, ಮಕ್ಕಳಿಗೆ ಸಮಾನ ಹಕ್ಕು ಬರುವುದರಿಂದ ಮೂವರು ಮಕ್ಕಳ ಹೆಸರಿನಲ್ಲಿ ಗರಿಷ್ಠ ₹ 50 ಲಕ್ಷದ ಎನ್‌ಎಚ್‌ಎಐ ಅಥವಾ ಆರ್‌ಇಸಿ ಬಾಂಡ್‌ನಲ್ಲಿ ತೊಡಗಿಸಿದರೆ ತೆರಿಗೆ ಬರುವುದಿಲ್ಲ. ಆಸ್ತಿ ಮಾರಾಟ ಮಾಡಿ ಬರುವ ಹಣ ಚೆಕ್‌ ಅಥವಾ ಡಿ.ಡಿ. ಮೂಲಕ ಪ್ರತ್ಯೇಕವಾಗಿ ಮಕ್ಕಳ ಹೆಸರಿನಲ್ಲಿಯೇ ಪಡೆಯಬೇಕಾಗುತ್ತದೆ. ನಿಮಗೊಂದು ಕಿವಿಮಾತು. ಜಮೀನು ಮಾರಾಟ ಮಾಡುವಾಗ ದೊಡ್ಡ ಮೊತ್ತ ಬಂದ ಹಾಗೆ ಕಂಡರೂ ಮುಂದೆ ಜಮೀನು ಬೇಕಾದಲ್ಲಿ ಕೊಳ್ಳಲು ಸಾಧ್ಯವಿಲ್ಲ. ಅತೀ ಅವಶ್ಯಕತೆ ಇದ್ದರೆ ಮಾತ್ರ ಜಮೀನು ಮಾರಾಟ ಮಾಡಿ.

ಯು.ಪಿ. ಪುರಾಣಿಕ್
ಯು.ಪಿ. ಪುರಾಣಿಕ್

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001.
ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT