ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂಜಾ ಸಾಮಗ್ರಿ, ಹೂ–ಹಣ್ಣು ಗಗನಮುಖಿ..!

‘ವರ ಮಹಾಲಕ್ಷ್ಮೀ ವ್ರತ’ ಇಂದು; ಶ್ರದ್ಧಾ ಭಕ್ತಿಯ ಆಚರಣೆಗೆ ಸಕಲ ಸಿದ್ಧತೆ
Last Updated 23 ಆಗಸ್ಟ್ 2018, 15:10 IST
ಅಕ್ಷರ ಗಾತ್ರ

ವಿಜಯಪುರ:ನಗರವೂ ಸೇರಿದಂತೆ ಜಿಲ್ಲೆಯ ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ನಡೆಯಲಿರುವ ‘ವರ ಮಹಾಲಕ್ಷ್ಮೀ ವ್ರತಾಚರಣೆಗೆ’ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಲಕ್ಷ್ಮೀ ಆರಾಧನೆಗೆ ಕ್ಷಣಗಣನೆ ಆರಂಭಗೊಂಡಿದೆ.

ಶ್ರಾವಣ ಆರಂಭಗೊಂಡ ಬೆನ್ನಿಗೆ ಬಜಾರ್‌ನಲ್ಲಿ ತುಟ್ಟಿಯಾಗಿದ್ದ ಹಣ್ಣು–ಹೂವು ಈ ವಾರ ಮತ್ತಷ್ಟು ದುಬಾರಿಯಾಗಿದ್ದವು. ಬಾಳೆಹಣ್ಣು ಒಂದನ್ನು ಹೊರತುಪಡಿಸಿದರೇ ಉಳಿದೆಲ್ಲವೂ ತುಟ್ಟಿ. ಇಡೀ ಮಾರುಕಟ್ಟೆಯಲ್ಲಿ ಚೌಕಾಶಿಯ ವಹಿವಾಟಿರಲಿಲ್ಲ. ದುಬಾರಿ ದುನಿಯಾದಲ್ಲೇ ಖರೀದಿಯೂ ಭರ್ಜರಿಯಿತ್ತು. ವಹಿವಾಟು ಬಿರುಸುಗೊಂಡಿತ್ತು.

ಗುರುವಾರ ಮುಸ್ಸಂಜೆ ನಗರವೂ ಸೇರಿದಂತೆ ಜಿಲ್ಲೆಯ ಪ್ರಮುಖ ಪಟ್ಟಣ, ಗ್ರಾಮಗಳಲ್ಲಿ ವಿಶೇಷ ಮಾರುಕಟ್ಟೆಯೇ ತೆರೆದಿತ್ತು. ಕಿಕ್ಕಿರಿದ ಜನರಿಂದ ತುಂಬಿ ತುಳುಕಿತು. ರಾತ್ರಿಯಾದರೂ ಖರೀದಿ ಬಿರುಸಿನಿಂದ ನಡೆಯಿತು.

ಮುಂಗಾರು ಹಂಗಾಮು ಪ್ರಸ್ತುತ ವರ್ಷ ಕೈಕೊಟ್ಟಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಪೂಜೆಯ ಸಂಭ್ರಮ ಕೊಂಚ ಕಳೆಗುಂದಿದೆ. ಆದರೆ ನಗರ ವಾಸಿಗಳು ಎಂದಿನಂತೆಯೇ ಉತ್ಸಾಹದಿಂದ ಪೂಜಾ ಸಾಮಗ್ರಿ ಖರೀದಿಗೆ ಮುಗಿಬಿದ್ದರು. ಕೆಲ ವಸ್ತುಗಳ ಬೆಲೆ ಗಗನಮುಖಿಯಾಗಿದ್ದರೆ; ಕೆಲವು ಎಲ್ಲರ ಕೈಗೆಟುಕುವ ದರದಲ್ಲಿ ಬಿಕರಿಯಾದವು.

ಪಡುವಣದ ಬಾನಂಚಿನಲ್ಲಿ ದಿನಕರ ಕೆಂಬಣ್ಣದೊಂದಿಗೆ ಇಳಿಜಾರಲಾರಂಭಿಸುತ್ತಿದ್ದಂತೆ, ಮಾರುಕಟ್ಟೆಗೆ ದಾಂಗುಡಿಯಿಡುವ ಜನರ ಸಂಖ್ಯೆ ಹೆಚ್ಚಿತು. ವರಮಹಾಲಕ್ಷ್ಮೀ ವ್ರತಾಚರಣೆ ಹೆಣ್ಮಕ್ಕಳ ಹಬ್ಬವಾಗಿದ್ದರಿಂದ ಕುಟುಂಬ ಸಮೇತ ಖರೀದಿಗೆ ಬಂದಿದ್ದರು.

ನಗರದ ಲಾಲ್‌ಬಹಾದ್ದೂರ್‌ ಶಾಸ್ತ್ರಿ ಮಾರುಕಟ್ಟೆ ಅಂಗಳ ಸೇರಿದಂತೆ ವಿವಿಧ ಬಜಾರ್‌ಗಳಲ್ಲಿ ತಾತ್ಕಾಲಿಕ ಅಂಗಡಿಗಳು ತೆರೆದಿದ್ದವು. ಬಟ್ಟೆ ಅಂಗಡಿಗಳು ರಾತ್ರಿಯಾದರೂ ಮಹಿಳೆಯರಿಂದ ತುಂಬಿ ತುಳುಕಿದವು. ಭರ್ಜರಿ ವಹಿವಾಟು ನಡೆಯಿತು. ಪ್ರಮುಖ ರಸ್ತೆಗಳ ಬದಿಯೇ ಹೂವು, ಕೇದಿಗೆ, ತಾವರೆ, ಬಾಳೆಕಂದುಗಳ ವಹಿವಾಟು ಬಿರುಸಿನಿಂದ ನಡೆಯಿತು.

‘ವ್ರತಾಚರಣೆ ಸಂದರ್ಭ ಹೂವಿಗೆ ಹೆಚ್ಚಿನ ಆದ್ಯತೆ. ಎಷ್ಟೇ ದುಬಾರಿಯಾದರೂ ಖರೀದಿಸುತ್ತೇವೆ. ಈ ಒಳಮರ್ಮ ಅರಿತಿರುವ ವ್ಯಾಪಾರಿಗಳು ಹಬ್ಬದ ಮುನ್ನಾ ದಿನ, ಮುಂಜಾನೆ ಮಾತ್ರ ದುಪ್ಪಟ್ಟು ದರ ವಸೂಲಿ ಮಾಡಿಕೊಳ್ಳುವ ಮೂಲಕ ಸಾಕಷ್ಟು ಲಾಭ ಮಾಡಿಕೊಳ್ಳುತ್ತಿದ್ದಾರೆ’ ಎಂದು ಹೂವಿನ ಖರೀದಿಗಾಗಿಯೇ ಮಾರುಕಟ್ಟೆಗೆ ಬಂದಿದ್ದ ಪ್ರಿಯಾಂಕ ಪೊದ್ದಾರ, ಶಾಂತಾಬಾಯಿ ರಾಠೋಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಂದಿನ ವರ್ಷದಷ್ಟೇ ಧಾರಣೆಯಿದೆ. ಬಾಳೆಹಣ್ಣು ಸಸ್ತಾ ಸಿಕ್ಕಿದೆ. ಹೂವಿನ ದರ ಏರಿದೆ. ಕುಟುಂಬದ ಒಳಿತಿಗೆ ಲಕ್ಷ್ಮೀ ಕೃಪಾಕಟಾಕ್ಷಕ್ಕೆ ಪ್ರಾರ್ಥಿಸುವ ವ್ರತಾಚರಣೆಯಿದು. ದುಡ್ಡಿಗೆ ಆದ್ಯತೆ ನೀಡಲ್ಲ. ಶ್ರದ್ಧಾ ಭಕ್ತಿಯಿಂದ ಲಕ್ಷ್ಮೀ ಆರಾಧಿಸುತ್ತೇವೆ’ ಎಂದು ಡಿ.ಟಿ.ಐಯ್ಯತ್ತವಾಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT