ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಟೆನ್‌ಕೆ: ಕೆನ್ಯಾ ಅಥ್ಲೀಟ್‌ಗಳ ಪಾರಮ್ಯ

ಪೀಟರ್‌, ಲಿಲಿಯನ್‌ ಮುಡಿಗೆ ಕಿರೀಟ: ಕಿರಣ್ ಮಾತ್ರೆಗೆ ದಾಖಲೆ ಸಂಭ್ರಮ
Published 28 ಏಪ್ರಿಲ್ 2024, 22:11 IST
Last Updated 28 ಏಪ್ರಿಲ್ 2024, 22:11 IST
ಅಕ್ಷರ ಗಾತ್ರ

ಬೆಂಗಳೂರು: ಕೆನ್ಯಾದ ಪೀಟರ್ ಮ್ವಾನಿಕಿ ಮತ್ತು ಲಿಲಿಯನ್ ಕಸಾಯಿತ್  ಉದ್ಯಾನನಗರಿಯಲ್ಲಿ ಭಾನುವಾರ ನಡೆದ  ಟಿಸಿಎಸ್‌ ವಿಶ್ವ ಟೆನ್‌ಕೆ ಓಟದಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆದರು. 

16ನೇ ಆವೃತ್ತಿಯ ಓಟದಲ್ಲಿ ಈ ಬಾರಿಯೂ ಕೆನ್ಯಾದ ಅಥ್ಲೀಟ್‌ಗಳು ತಮ್ಮ ಪಾರಮ್ಯ ಮುಂದುವರಿಸಿದರು. ಆಗಸದಲ್ಲಿ ಸೂರ್ಯ ಉದಯಿಸುವ ಮುನ್ನವೇ ಕಬ್ಬನ್‌ ರಸ್ತೆಯ ಮಾಣೇಕ್‌ ಶಾ ಮೈದಾನದ ಬಳಿ ಜಮಾಯಿಸಿದ್ದ ಸಹಸ್ರಾರು ಮಂದಿಯ ಮುಖದಲ್ಲಿ ಉತ್ಸಾಹದ ಚಿಲುಮೆ ಪುಟಿಯುತ್ತಿತ್ತು. ರಂಗುರಂಗಿನ ಪೋಷಾಕು ತೊಟ್ಟು ಬಂದಿದ್ದ ಅವರು ಓಟದ ಗಮ್ಮತ್ತು ಹೆಚ್ಚಿಸಿದರು. ಒಂದೆಡೆ ವಾತಾವರಣ ಬಿಸಿಯೇರುತ್ತಿದ್ದರೆ ಮತ್ತೊಂದೆಡೆ ಡಿಜೆ ಸಂಗೀತ ಕಾವೇರಿಸಿತ್ತು. ಈ ಸಂಭ್ರಮದ ನಡುವೆಯೇ ಓಟದಲ್ಲಿ ಕೆನ್ಯಾ, ಇಥಿಯೋಪಿಯಾದ ಘಟಾನುಘಟಿ ಅಥ್ಲೀಟ್‌ಗಳು ಮಿಂಚು ಹರಿಸಿದರು.  

ಪೀಟರ್‌, 28 ನಿಮಿಷ 15 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಅವರಿಗೆ ಸ್ವದೇಶದ ಸ್ನೇಹಿತ ಹಿಲರಿ ಚೆಪ್ಕ್‌ವೋನಿ ತೀವ್ರ ಪೈಪೋಟಿ ನೀಡಿದರು. ಕಳೆದ ಆವೃತ್ತಿಯಲ್ಲಿ ಮೂರನೇ ಸ್ಥಾನ ಪಡೆದಿದ್ದ ಹಿಲರಿ ಈ ಬಾರಿ 18 ಸೆಕೆಂಡ್‌ ಅಂತರದಲ್ಲಿ ಚಿನ್ನ ತಪ್ಪಿಸಿಕೊಂಡರು. ಇಥಿಯೋಪಿಯಾದ 17 ವರ್ಷದ ಹ್ಯಾಗೋಸ್ ಐಯೋಬ್ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಪೀಟರ್‌ ಅವರು ವೆಲೆನ್ಸಿಯಾದಲ್ಲಿ ಈಚೆಗೆ ಟೆನ್‌ಕೆ ಸ್ಪರ್ಧೆಯಲ್ಲಿ (26ನಿ. 59 ನಿ) ಕಂಚು ಗೆದ್ದಿದ್ದರು. 

ಅಕೋಲ್‌ಗೆ ಆಘಾತ: ಅಚ್ಚರಿಯೆಂಬಂತೆ ವಿಶ್ವದ ಎರಡನೇ ಅತಿ ವೇಗದ ಟೆನ್‌ಕೆ ಓಟಗಾರ್ತಿ ಕೆನ್ಯಾದ ಇಮಾಕ್ಯುಲೆಟ್ ಅನ್ಯಾಂಗೊ ಅಕೋಲ್ ಅವರನ್ನು ಹಿಂದಿಕ್ಕಿದ ಲಿಲಿಯನ್ ಚಿನ್ನ ಗೆದ್ದುಕೊಂಡರು.

ಆರಂಭದಿಂದಲೇ ಮುನ್ನಡೆ ಕಾಯ್ಡುಕೊಂಡಿದ್ದ ಅಕೋಲ್‌ ಅವರನ್ನು 7.1 ಕಿ.ಮೀ. ಅಂತರದಲ್ಲಿ ಕಸಾಯಿತ್‌ ಹಿಂದಿಕ್ಕಿದರು. ಅವರು 30 ನಿಮಿಷ 56 ಸೆಕೆಂಡುಗಳಲ್ಲಿ ಗುರಿ ತಲುಪಿದರೆ, 21 ಸೆಕೆಂಡುಗಳ ಅಂತರದಲ್ಲಿ ಬಂದ ಅಕೋಲ್ ಬೆಳ್ಳಿ ಗೆದ್ದರು. ಇಥಿಯೋಪಿಯಾದ ಲೆಮ್ಲೆಮ್ ಹೈಲು ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಸಂಜೀವನಿಗೆ ಚಿನ್ನ: ಭಾರತದ ಮಹಿಳೆಯರ ಎಲೀಟ್‌ ವಿಭಾಗದಲ್ಲಿ ಕೂಟ ದಾಖಲೆಯನ್ನು ಹೊಂದಿರುವ ಮಹಾರಾಷ್ಟ್ರದ ಸಂಜೀವನಿ ಮತ್ತೆ ಚಾಂಪಿಯನ್‌ ಆಗಿ ಹೊರಹೊಮ್ಮಿದರು.

2018ರ ಕೂಟ ದಾಖಲೆಯ (33 ನಿ. 38ಸೆ) ಸಮಯಕ್ಕಿಂತ 25 ಸೆಕೆಂಡ್‌ ತಡವಾಗಿ ಗುರಿ ಮುಟ್ಟಿದರು. 26 ವರ್ಷದ ಅವರು 2022ರ ಆವೃತ್ತಿಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಪಶ್ಚಿಮ ಬಂಗಾಳದ ಲಿಲ್ಲಿ ದಾಸ್‌ ಮತ್ತು ದೆಹಲಿಯ ಪ್ರೀನು ಯಾದವ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಕ್ಕೆ ಮುತ್ತಿಕ್ಕಿದರು. ಕಳೆದ ಬಾರಿಯ ಚಾಂಪಿಯನ್‌ ತಂಶಿ ಸಿಂಗ್‌ ಅವರು ಒಂಬತ್ತನೇ ಸ್ಥಾನ ಪಡೆದರು.

ಟಿಸಿಎಸ್ ವಿಶ್ವ ಟೆನ್‌ಕೆ ಓಟದಲ್ಲಿ ಭಾರತದ ಪುರುಷರ ಎಲೀಟ್‌ ವಿಭಾಗದಲ್ಲಿ ಚಿನ್ನ ಗೆದ್ದ ಮಹಾರಾಷ್ಟ್ರದ ಕಿರಣ್‌ ಮಾತ್ರೆ
–ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್
ಟಿಸಿಎಸ್ ವಿಶ್ವ ಟೆನ್‌ಕೆ ಓಟದಲ್ಲಿ ಭಾರತದ ಪುರುಷರ ಎಲೀಟ್‌ ವಿಭಾಗದಲ್ಲಿ ಚಿನ್ನ ಗೆದ್ದ ಮಹಾರಾಷ್ಟ್ರದ ಕಿರಣ್‌ ಮಾತ್ರೆ –ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್
ಟಿಸಿಎಸ್ ವಿಶ್ವ ಟೆನ್‌ಕೆ ಓಟದಲ್ಲಿ ಭಾರತದ ಮಹಿಳೆಯರ ಎಲೀಟ್‌ ವಿಭಾಗದಲ್ಲಿ ಚಿನ್ನ ಗೆದ್ದ ಸಂಜೀವಿನಿ ಜಾಧವ್‌
ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್
ಟಿಸಿಎಸ್ ವಿಶ್ವ ಟೆನ್‌ಕೆ ಓಟದಲ್ಲಿ ಭಾರತದ ಮಹಿಳೆಯರ ಎಲೀಟ್‌ ವಿಭಾಗದಲ್ಲಿ ಚಿನ್ನ ಗೆದ್ದ ಸಂಜೀವಿನಿ ಜಾಧವ್‌ ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್

ಫಲಿತಾಂಶಗಳು

ಎಲೀಟ್‌ ಪುರುಷರು: ಪೀಟರ್‌ ಮ್ವಾನಿಕಿ (ಕೆನ್ಯಾ)–1 ಸಮಯ: 28 ನಿ. 15 ಸೆ. ಹಿಲರಿ ಚೆಪ್ಕ್‌ವೋನಿ (ಕೆನ್ಯಾ)–2 ಹ್ಯಾಗೋಸ್ ಐಯೋಬ್ (ಇಥಿಯೋಪಿಯಾ)–3. ಎಲೀಟ್‌ ಮಹಿಳೆಯರು: ಲಿಲಿಯನ್ ಕಸಾಯಿತ್ (ಕೆನ್ಯಾ)–1 ಸಮಯ: 30 ನಿ. 56 ಸೆ. ಇಮಾಕ್ಯುಲೆಟ್ ಅನ್ಯಾಂಗೊ ಅಕೋಲ್ (ಕೆನ್ಯಾ)–2 ಲೆಮ್ಲೆಮ್ ಹೈಲು (ಇಥಿಯೋಪಿಯಾ)–3 ಭಾರತೀಯರ ವಿಭಾಗ: ಪುರುಷರು: ಕಿರಣ್‌ ಮಾತ್ರೆ (ಕೂಟ ದಾಖಲೆ: 29 ನಿ.32 ಸೆ) (ಮಹಾರಾಷ್ಟ್ರ)–1 ಸಮಯ:29 ನಿ. 32 ಸೆ. ರಂಜಿತ್‌ ಕುಮಾರ್‌ ಪಟೇಲ್‌ (ಉತ್ತರ ಪ್ರದೇಶ)2 ಧರ್ಮೇಂದ್ರ (ರಾಜಸ್ಥಾನ)–3 ಮಹಿಳೆಯರು: ಸಂಜೀವಿನಿ ಜಾಧವ್‌ (ಮಹಾರಾಷ್ಟ್ರ)–1 ಸಮಯ: 34 ನಿ.03 ಸೆ. ಲಿಲ್ಲಿ ದಾಸ್‌ (ಪಶ್ಚಿಮ ಬಂಗಾಳ)–2 ಪ್ರೀನು ಯಾದವ್ (ದೆಹಲಿ)–3

ಎಂಟು ವರ್ಷಗಳ ಹಿಂದಿನ ದಾಖಲೆ ಮುರಿದ ಕಿರಣ್‌

ಮಹಾರಾಷ್ಟ್ರದ ಕಿರಣ್‌ ಮಾತ್ರೆ ಭಾರತದ ಪುರುಷರ ಎಲೀಟ್‌ ವಿಭಾಗದಲ್ಲಿ ಕೂಟ ದಾಖಲೆ ಬರೆದರು. 22 ವರ್ಷದ ಅವರು ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ಎಂಟು ವರ್ಷಗಳ ಹಿಂದಿನ ದಾಖಲೆಯನ್ನು ಮುರಿದು ಗಮನ ಸೆಳೆದರು. 29 ನಿಮಿಷ 32 ಸೆಕೆಂಟ್‌ನಲ್ಲಿ ಗುರಿ ಮುಟ್ಟಿದ ಅವರು 2016ರಲ್ಲಿ ಸುರೇಶ್‌ ಕುಮಾರ್‌ (29 ನಿ.49 ಸೆ.) ನಿರ್ಮಿಸಿದ್ದ ಮೈಲಿಗಲ್ಲನ್ನು ಮೀರಿ ನಿಂತರು. ಕಿರಣ್‌ ಅವರಿಗೆ ತೀವ್ರ ಪೈಪೋಟಿ ನೀಡಿದ ಉತ್ತರ ಪ್ರದೇಶದ ರಂಜಿತ್‌ ಕುಮಾರ್‌ ಪಟೇಲ್‌ (29 ನಿ. 35ಸೆ) ರಾಜಸ್ಥಾನದ ಧರ್ಮೇಂದ್ರ (29 ನಿ. 45ಸೆ) ಉತ್ತರಖಂಡದ ದೀಪಕ್‌ ಭಟ್‌ (29 ನಿ. 45ಸೆ) ಅವರೂ ಹಿಂದಿನ ಕೂಟ ದಾಖಲೆಯನ್ನು ಮೀರಿದರು. ಪುರುಷರ ಎಲೀಟ್‌ ವಿಭಾಗದಲ್ಲಿ ಒಟ್ಟಾರೆ ಒಂಬತ್ತನೇ ಸ್ಥಾನ ಗಳಿಸಿದ ಶ್ರೇಯಕ್ಕೆ ಪಾತ್ರವಾದ ಕಿರಣ್‌ ಕಳೆದ ಆವೃತ್ತಿಯಲ್ಲಿ ಭಾರತದ ಎಲೀಟ್‌ ವಿಭಾಗದಲ್ಲಿ 12ನೇ ಸ್ಥಾನ ಪಡೆದಿದ್ದರು. ರಂಜಿತ್‌ ಮತ್ತು ಧರ್ಮೇಂದ್ರ ಅವರು ಹಿಂದಿನ ಕೂಟದಲ್ಲಿ ಕ್ರಮವಾಗಿ 9 ಮತ್ತು 10ನೇ ಸ್ಥಾನ ಗಳಿಸಿದ್ದರು. ಅವರು ಈ ವರ್ಷ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಆಕ್ರಮಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT