ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವಿಗೆ ನಿಲುಕದ ಷೇರುಪೇಟೆ ಆಳ

Last Updated 25 ಡಿಸೆಂಬರ್ 2016, 18:42 IST
ಅಕ್ಷರ ಗಾತ್ರ

ಷೇರುಪೇಟೆಯಲ್ಲಿನ  ಬೆಳವಣಿಗೆಗಳಿಗೆ  ಆಧಾರವೇ ಇರದೇ ಕೇವಲ ವ್ಯವಹಾರೀಕರಣ   ದೃಷ್ಟಿಯಿಂದ ವಹಿವಾಟು ನಡೆಸಲಾಗುವುದು ಎಂಬುದಕ್ಕೆ ಮಂಗಳವಾರ ಭಾರತ್ ಫೈನಾನ್ಷಿಯಲ್ ಇನ್‌ಕ್ಲುಷನ್ ಲಿಮಿಟೆಡ್ ಕಂಪೆನಿ ಪ್ರದರ್ಶಿಸಿದ ಏರಿಳಿತಗಳೇ ಸಾಕ್ಷಿ. 

ಅಂದು ಈ ಷೇರಿನ ಬೆಲೆಯು ₹550 ರ ಸಮೀಪದಿಂದ ₹604 ರವರೆಗೂ ಏರಿಕೆ ಕಂಡು ₹581ರ ಸಮೀಪ ಕೊನೆಗೊಂಡಿದೆ.  ಬುಧವಾರ ಸಹ ಈ ಕಂಪೆನಿಯ ಷೇರಿನ ಬೆಲೆಯು ₹575 ರ ಸಮೀಪದಿಂದ ₹596 ರವರೆಗೂ ಏರಿಳಿತ ಪ್ರದರ್ಶಿಸಿದೆ. ಶುಕ್ರವಾರ ₹520ರ ಸಮೀಪ ಕೊನೆಗೊಂಡಿದೆ.
ಇಂತಹ ಭಾರಿ ಕುಸಿತದ ಹಿಂದೆ ನೋಟುಗಳ ಅಮಾನ್ಯತೆ ಇರಬಹುದೇ ಎಂಬ ಶಂಕೆ ಮೂಡಿಸಿದರೂ ಕಂಪೆನಿಯ ಅಂಕಿ ಅಂಶಗಳು ಮಾತ್ರ ಸಕಾರಾತ್ಮಕವಾಗಿವೆ.

ಕ್ಲಾರಿಸ್  ಲೈಫ್ ಸೈನ್ಸಸ್ ಲಿಮಿಟೆಡ್ ಕಂಪೆನಿಯು ತನ್ನ  ಗ್ಲೋಬಲ್ ಜೆನೆರಿಕ್ ಇಂಜೆಕ್ಟಬಲ್ ವ್ಯವಹಾರವನ್ನು ಬಾಕ್ಸ್ಟರ್ ಕಂಪೆನಿಗೆ 6250 ಲಕ್ಷ  ಅಮೇರಿಕನ್ ಡಾಲರ್‌ಗಳಿಗೆ (₹4250 ಕೋಟಿ) ಮಾರಾಟ ಮಾಡುವ ವಿಚಾರದಿಂದ  16ರ ಶುಕ್ರವಾರ ವಹಿವಾಟಿನ ಆರಂಭಿಕ ಕ್ಷಣಗಳಲ್ಲಿ ಷೇರಿನ ಬೆಲೆಯು ₹430.10ರ ವಾರ್ಷಿಕ ಗರಿಷ್ಠಕ್ಕೆ ತಲುಪಿ ನಂತರ ₹356 ರವರೆಗೂ ಕುಸಿಯಿತು. 

ಅದೇ ರೀತಿ ಈ ವಾರವು ಸಹ ಷೇರಿನ ಬೆಲೆಯು ಹೆಚ್ಚಿನ ಏರಿಳಿತ ಪ್ರದರ್ಶಿಸಿತು.  ಅಂದು ₹318 ರ ಸಮೀಪದಿಂದ ₹344 ರ ಸಮೀಪಕ್ಕೆ ಏರಿಕೆ ಕಂಡಿದ್ದು, ನಂತರ ಬೆಲೆಯು ₹323ರ ಸಮೀಪಕ್ಕೆ ಕೊನೆಗೊಂಡಿತು.

ಏರಿಳಿಕೆ ಗಮನಿಸಿ ನಿರ್ಧರಿಸಿ: ಯಾವ ವಿಚಾರಗಳಿಗೆ ಆಗಲಿ ಸ್ಪಂದಿಸುವ ಮುನ್ನ ಷೇರಿನ ದರಗಳ ಏರಿಕೆ - ಇಳಿಕೆ ಗಮನಿಸಿ ನಿರ್ಧರಿಸಬೇಕು. ಬುಧವಾರ ದಿನವಿಡೀ ಸಂವೇದಿ ಸೂಚ್ಯಂಕವು ಏರಿಕೆಯಲ್ಲಿದ್ದು ಅಂತಿಮ ಅರ್ಧ ಗಂಟೆಯಲ್ಲಿ ಭಾರಿ ಕುಸಿತ ಕಂಡು ಅಂತ್ಯದಲ್ಲಿ 65 ಅಂಶ ಇಳಿಕೆ ಪಡೆಯಿತು.
ಷೇರುಪೇಟೆಯ ಚಟುವಟಿಕೆಯ ಪರಿಯನ್ನು ಮುಂಚಿತವಾಗಿ ಅರಿಯುವುದು ಸಾಧ್ಯವಿಲ್ಲದ   ಮಟ್ಟಿಗೆ ಪೇಟೆಗಳು ಸಾಗಿರುವ ಅಂಶ ಶುಕ್ರವಾರ ಅಗ್ರಮಾನ್ಯ ಕಂಪೆನಿ ದಿವೀಸ್ ಲ್ಯಾಬೋರೆಟರೀಸ್ ಲಿಮಿಟೆಡ್‌ ಷೇರಿನ ಬೆಲೆಯ ಚಲನೆಯೇ ಉತ್ತಮ ಉದಾಹರಣೆ.

 ಈ ಕಂಪೆನಿಯ ಷೇರಿನ ಬೆಲೆಯು ಆರಂಭದಿಂದ ದಿನದ ಮಧ್ಯಂತರದವರೆಗೂ ₹1,100 ರ ಮೇಲಿದ್ದು ₹1,109 ರ ಗರಿಷ್ಠ ತಲುಪಿತ್ತು. ನಂತರ  ಷೇರಿನ ಬೆಲೆಯು ಆಳದ ಅರಿವಿಲ್ಲದೆ  ಜಾರುವ ರೀತಿ  ಬಾಂಬೆ ಷೇರು ವಿನಿಮಯ ಕೇಂದ್ರದಲ್ಲಿ  ₹821ರವರೆಗೂ ಕುಸಿದು ₹866ರ ಸಮೀಪ ಕೊನೆಗೊಂಡಿತು.  ಆದರೆ, ಈ ಕುಸಿತವು ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್‌ನಲ್ಲಿ ₹801 ರವರೆಗೂ  ಆಘಾತಕಾರಿ ಮಟ್ಟದಲ್ಲಿದ್ದು ನಂತರ ₹861ರ ಸಮೀಪ ಕೊನೆಗೊಂಡಿತು. 

ಅಗ್ರಮಾನ್ಯ ಕಂಪೆನಿಯೊಂದು  ಒಂದೇ ದಿನ ಸುಮಾರು ₹3೦೦ ರಷ್ಟು ಕುಸಿತ ಕಾಣುತ್ತದೆ ಎಂದರೆ ಪೇಟೆಯ ಹರಿತ ಅರಿವಾಗುವುದು.  ಇಂತಹ ಕಾರಣಗಳಿಂದಲೇ ಪ್ರಾಫಿಟ್ ಬುಕ್ ಕ್ರಿಯೆಗೂ ಹೆಚ್ಚಿನ ಆದ್ಯತೆ ಅಗತ್ಯ. ಸೆಪ್ಟೆಂಬರ್ ತಿಂಗಳಲ್ಲಿ ವಾರ್ಷಿಕ ಗರಿಷ್ಠ  ₹1,380ನ್ನು ತಲುಪಿದ್ದ ಕಂಪೆನಿ ಷೇರಿನ ಬೆಲೆಯು ಶುಕ್ರವಾರ ₹1,108 ರಿಂದ ₹821 ರವರೆಗೂ ಕುಸಿದು ವಾರ್ಷಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ.

ತ್ವರಿತ - ಹರಿತ ಗುಣದ ಕಹಿ ಅನುಭವ: ಇದು ಪೇಟೆಯ ತ್ವರಿತ - ಹರಿತ ಗುಣದ ಕಹಿ ಅನುಭವ. ಬಂಡವಾಳ ಹೆಚ್ಚಾಗುವುದಿರಲಿ ಅಸಲನ್ನು ಸುರಕ್ಷಿತವಾಗಿ ಕಾಯ್ದುಕೊಳ್ಳಲಾಗದೆ ಕಣ್ಮುಂದೆ ಹಣ ಕರಗುವಿಕೆ ನೋಡುವಂತಾಯಿತು. ಕಂಪೆನಿಯ ವಿಶಾಖಪಟ್ಟಣದ ಘಟಕದ ತನಿಖೆ ನಡೆಸಿದ ಅಮೆರಿಕದ ಎಫ್‌ಡಿಎ, ಹಲವು ಕೊರತೆ ಗುರುತಿಸಿದೆ. ಕಂಪೆನಿಯು ಈ ಐದು ಕೊರತೆ ನೀಗಿಸುವ ಬಗ್ಗೆ ನಿಶ್ಚಿತ ಸಮಯದಲ್ಲಿ ಸ್ಪಂದಿಸುವುದೆಂದು ತಿಳಿಸಿದೆ.  

ಸಾಮಾನ್ಯವಾಗಿ ಇಂತಹ ಭಾರಿ ಕುಸಿತಕ್ಕೊಳಗಾದ ಅಗ್ರಮಾನ್ಯ ಕಂಪೆನಿ ಷೇರಿನ ಬೆಲೆಯು ಅಷ್ಟೇ ತ್ವರಿತವಾದ ಏರಿಕೆ ಕಾಣುತ್ತದೆ. ಒಟ್ಟಾರೆ ಹಿಂದಿನ ವಾರದಲ್ಲಿ ಸಂವೇದಿ ಸೂಚ್ಯಂಕವು 448 ಅಂಶ ಇಳಿಕೆ ಪಡೆದು ತನ್ನೊಂದಿಗೆ ಮಧ್ಯಮ  ಶ್ರೇಣಿಯ ಸೂಚ್ಯಂಕವನ್ನು 380ಅಂಶಗಳಷ್ಟು ಮತ್ತು ಕೆಳ ಮಧ್ಯಮ ಶ್ರೇಣಿಯ ಸೂಚ್ಯಂಕ 316 ಅಂಶಗಳ ಇಳಿಕೆ ಕಾಣುವಂತೆ ಮಾಡಿತು. 

ವಿದೇಶಿ ವಿತ್ತೀಯ ಸಂಸ್ಥೆಗಳು ತಮ್ಮ ಸತತ ಮಾರಾಟದಿಂದ ₹4,476 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದರೆ, ಸ್ವದೇಶಿ ವಿತ್ತೀಯ ಸಂಸ್ಥೆಗಳು ₹3,967 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿ ಬೆಂಬಲಿಸಿವೆ. ಪೇಟೆಯ ಬಂಡವಾಳೀಕರಣ ಮೌಲ್ಯವು ₹106.35 ಲಕ್ಷ ಕೋಟಿಯಿಂದ ₹103.85 ಲಕ್ಷ ಕೋಟಿಗೆ ಕುಸಿದಿತ್ತು.

ಬೋನಸ್ ಷೇರು: ಬಾಲ್ಮರ್ ಲೌರಿ  ಆ್ಯಂಡ್ ಕಂಪೆನಿ ವಿತರಿಸಲಿರುವ 3:1ರ ಬೋನಸ್ ಷೇರಿಗೆ  ಈ ತಿಂಗಳ 27 ನಿಗದಿತ ದಿನವಾಗಿದ್ದು, 26 ರಿಂದ ಬೋನಸ್ ಷೇರು ರಹಿತ ವಹಿವಾಟು ಆರಂಭವಾಗಲಿದೆ. ಇಂಜಿನೀಯರ್ಸ್ ಲಿಮಿಟೆಡ್ ವಿತರಿಸಲಿರುವ 1:1 ರ ಅನುಪಾತದ ಬೋನಸ್ ಷೇರಿಗೆ ಜ.2 ಮತ್ತು ಆಯಿಲ್ ಇಂಡಿಯಾ  ಕಂಪೆನಿ ವಿತರಿಸಲಿರುವ 1:3 ಅನುಪಾತದ ಬೋನಸ್ ಷೇರಿಗೆ ಜ.13 ನಿಗದಿತ ದಿನವಾಗಿದೆ.

ಇಶಾನ್ ಡೈಸ್ ಅಂಡ್ ಕೆಮಿಕಲ್ಸ್ ಲಿಮಿಟೆಡ್ ಈ ತಿಂಗಳ 29 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ. ಕಳೆದ ಫೆಬ್ರುವರಿಯಲ್ಲಿ ₹12ರ  ಸಮೀಪವಿದ್ದ ಈ ಕಂಪೆನಿಯ ಷೇರಿನ ಬೆಲೆ ಈಗ ₹95 ರ ಸಮೀಪಕ್ಕೆ ಏರಿಕೆ ಕಾಣುವ ಮೂಲಕ ವಾರ್ಷಿಕ ಗರಿಷ್ಠದ ಸಮೀಪದಲ್ಲಿದೆ. ಇಂತಹ ಕಂಪೆನಿಗಳ ಷೇರು ಕೊಳ್ಳುವಾಗ ಅಪಾಯದ ಮಟ್ಟ ಹೆಚ್ಚಿದ್ದು, ಜಾಗೃತೆಯಿಂದ ಚಟುವಟಿಕೆ ನಡೆಸುವುದು ಒಳ್ಳೆಯದು. 

ಮುಖಬೆಲೆ ಸೀಳಿಕೆ: ಜೆಎಸ್ ಡಬ್ಲ್ಯೂ ಸ್ಟಿಲ್ ಕಂಪೆನಿಯು ಷೇರಿನ ಮುಖಬೆಲೆಯನ್ನು ₹10 ರಿಂದ ₹1 ಕ್ಕೆ ಸೀಳಲು ಜ.5 ನಿಗದಿತ ದಿನವಾಗಿದೆ.
ಹಕ್ಕಿನ ಷೇರು: ಸೌತ್ ಇಂಡಿಯನ್ ಬ್ಯಾಂಕ್ ಕಂಪೆನಿಯು 1:3 ರ ಅನುಪಾತದಲ್ಲಿ ಪ್ರತಿ ಷೇರಿಗೆ ₹14 ರಂತೆ ಹಕ್ಕಿನ ಷೇರು ವಿತರಿಸಲಿದೆ.
ಹೆಸರು ಬದಲಾವಣೆ: ಸ್ಟೋರ್ ಒನ್ ರಿಟೇಲ್ ಇಂಡಿಯಾ ಲಿಮಿಟೆಡ್ ಹೆಸರು ಎಸ್ಓಆರ್ಐಎಲ್ ಇನ್ಫ್ರಾ  ರಿಸೋರ್ಸಸ್ ಲಿಮಿಟೆಡ್ ಎಂದು ಬದಲಾಗಿದೆ.

ಅದೇ ರೀತಿ ಪೃಥ್ವಿ ಸಾಫ್ ಟೆಕ್ ಲಿಮಿಟೆಡ್ ಕಂಪೆನಿಯು ಪೃಥ್ವಿ ಎಕ್ಸ್‌ಚೇಂಜ್(ಇಂಡಿಯಾ) ಲಿಮಿಟೆಡ್, ಶ್ರೇಡರ್ ಡಂಕನ್ ಲಿಮಿಟೆಡ್, ಡಂಕನ್ ಇಂಜಿನೀಯರಿಂಗ್ ಲಿಮಿಟೆಡ್ ಮತ್ತು ಗುಪ್ತಾ ಕಾರ್ಪೆಟ್ಸ್ ಲಿಮಿಟೆಡ್,  ಆಕ್ಸಿಸ್ ರೇಲ್ ಇಂಡಿಯಾ ಲಿಮಿಟೆಡ್ ಎಂದು ಹೆಸರು ಬದಲಿಸಿಕೊಂಡಿವೆ.
ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್- ಎನ್‌ಸಿಡಿ, ಈ ಕಂಪೆನಿಯು ರಿಲಯನ್ಸ್ ಕ್ಯಾಪಿಟಲ್ ಸಮೂಹ ಕಂಪೆನಿಯಾಗಿದ್ದು, ಷೇರು ವಿನಿಮಯ ಕೇಂದ್ರಗಳಲ್ಲಿ ಲಿಸ್ಟಿಂಗ್ ಆಗದೆ ಇರುವ ಕಂಪೆನಿಯಾಗಿದೆ.  ಈ ಕಂಪೆನಿಯು 22 ರಿಂದ ₹3,500 ಕೋಟಿ ಹಣವನ್ನು ಎನ್‌ಸಿಡಿ ಮೂಲಕ ಸಂಗ್ರಹಣೆಗೆ ಮುಂದಾಗಿದೆ.

ಎರಡನೇ ದಿನವಾದ 23ರಂದು  ₹3,124 ಕೋಟಿ ಸಂಗ್ರಹಿಸಿ, ಸ್ಥಗಿತಗೊಳಿಸಿತು. ಅಂದರೆ ನೋಟು ಅಮಾನ್ಯತೆಯ ಕಾರಣ ಆರ್ಥಿಕ ಬಿಗುವಿನ ನಡುವೆಯೂ ಈ ರೀತಿಯ ಸ್ಪಂಧನ ದೊರೆತಿರುವುದು ಗಮನಾರ್ಹವಾದುದು.  ಸಣ್ಣ ಹೂಡಿಕೆದಾರರಿಂದ ಸುಮಾರು ₹759 ಕೋಟಿ ಹಣ ಸಂಗ್ರಹಣೆಯಾಗಿದೆ. ಅಂದರೆ ಉತ್ತಮ ಮ್ಯಾನೇಜ್‌ಮೆಂಟ್ ಕಂಪೆನಿಗಳಿಗೆ ಹೂಡಿಕೆದಾರರ ಬೆಂಬಲವಿರುತ್ತದೆ ಎಂಬ ಅಂಶವನ್ನು ದೃಢಪಡಿಸುತ್ತದೆ.
*
ವಾರದ ವಿಶೇಷ
ಷೇರುಪೇಟೆಯ ಬಗ್ಗೆ ವಿಶ್ಲೇಷಿಸಬೇಕೆಂದರೆ ಅದು ಐದು ಜನ ಕುರುಡರು ಆನೆ ಬಗ್ಗೆ ವಿವರಿಸಿದಂತೆ ಎಂಬಂತಾಗಿದೆ. ಕಳೆದ ಒಂದು ತಿಂಗಳಿನಲ್ಲಿಯೇ ಅಗ್ರಮಾನ್ಯ ಕಂಪೆನಿಗಳಾದ ಭಾರತ್ ಫೋರ್ಜ್   ₹860ರ ಸಮೀಪದಿಂದ ₹1008 ನ್ನು ತಲುಪಿ ನಂತರ ₹900 ರ ಸಮೀಪಕ್ಕೆ ಮರಳಿದೆ.  ಅದೇ ರೀತಿ ಫಾರ್ಮಾ ವಲಯದ ಕ್ಯಾಡಿಲ್ಲ ಹೆಲ್ತ್ ಕೇರ್ ಕಂಪೆನಿಯು ₹370 ರ ಸಮೀಪದಿಂದ ₹414ಕ್ಕೆ ಏರಿಕೆ ಕಂಡು ₹330ನ್ನು ತಲುಪಿ ₹332ರ ಸಮೀಪ ಅಂತ್ಯಗೊಂಡಿದೆ. 

ಅಂತೆಯೇ ಲುಪಿನ್ ಲಿಮಿಟೆಡ್ ಕಂಪೆನಿಯ ಷೇರಿನ ಬೆಲೆಯೂ ₹1,418 ರಿಂದ ₹1,540 ರವರೆಗೂ ಏರಿಕೆ ಕಂಡು ₹1,445 ರ ಸಮೀಪಕ್ಕೆ ಹಿಂದಿರುಗಿದೆ.  ಮತ್ತೊಂದು ಫಾರ್ಮ ಸನ್ ಫಾರ್ಮಾಸ್ಯುಟಿಕಲ್ಸ್ ನವೆಂಬರ್ ಮೊದಲ ವಾರದಲ್ಲಿ  ₹636 ರಲ್ಲಿದ್ದು  ಡಿಸೆಂಬರ್ ಮೊದಲನೇ ದಿನ ₹722 ಕ್ಕೆ ಬಂದು ನಂತರ 22 ರಂದು ₹608 ಕ್ಕೆ ಕುಸಿದಿದೆ.  ಹೀಗೆ ಅಲ್ಪಾವಧಿಯಲ್ಲೇ ಹೆಚ್ಚು ಏರಿಳಿತ ಪ್ರದರ್ಶಿಸುವ ಮೂಲಕ ಹತ್ತಾರು ಅವಕಾಶಗಳನ್ನು ಪೇಟೆಯು ಸೃಷ್ಟಿಸಿಕೊಡುತ್ತಿದೆ.ರಿಲಯನ್ಸ್ ಇನ್ಫ್ರಾ, ಅಬಾನ್ ಆಫ್ ಶೋರ್, ಇನ್ಫೊಸಿಸ್, ಬರ್ಜರ್ ಪೇಂಟ್ಸ್ ಮುಂತಾದವು ಸಹ ಇದೆ ರೀತಿಯ ಚಂಚಲತೆ ಪ್ರದರ್ಶಿಸುತ್ತಿವೆ. ಪೇಟೆಗಳು ಇಳಿಕೆಯಲ್ಲಿದ್ದಾಗ ಮಾತ್ರ ಹೂಡಿಕೆಯನ್ನು ದೀರ್ಘಕಾಲೀನವಾಗಿ ಯೋಚಿಸಬೇಕು. ನಂತರ ದೊರೆತ ಅವಕಾಶ ಉಪಯೋಗಿಸಿಕೊಳ್ಳಬೇಕು.  ಪೇಟೆಯು ಇನ್ನೂ ಇಳಿದು ಹೋಗುತ್ತದೆಂಬ ಶಂಕೆ ಬೇಡ. 

ಪ್ರಮುಖ ಅಂತರ ರಾಷ್ಟ್ರೀಯ ಬ್ಯಾಂಕಿಂಗ್ ಸಂಸ್ಥೆ ಮಾರ್ಗನ್  ಸ್ಟಾನ್ಲಿ  ಗುರುವಾರ 1.13 ಕೋಟಿ ಟೈಟಾನ್ ಕಂಪೆನಿಯ ಷೇರು ಖರೀದಿಸಿ 25 ಲಕ್ಷ ಶ್ರೀ ರಾಮ್ ಟ್ರಾನ್ಸ್ ಪೋರ್ಟ್  ಷೇರು ಮಾರಾಟ ಮಾಡಿದೆ.   ಶುಕ್ರವಾರ 1.23 ಕೋಟಿ ರಿಲಯನ್ಸ್ ಡಿಫೆನ್ಸ್ ಷೇರು ಖರೀದಿಸಿದೆ. ಹೆಚ್ಎಸ್‌ಬಿಸಿ ಗ್ಲೋಬಲ್ ಇನ್ವೆಸ್ಟ್ ಮೆಂಟ್ ಫಂಡ್ ಸಹ ಗುರುವಾರ  4.19 ಲಕ್ಷ ಕ್ವಿಕ್ ಹಿಲ್ ಟೆಕ್ ಷೇರನ್ನು ಖರೀದಿಸಿದೆ.ಈ ರೀತಿಯ ಗಜಗಾತ್ರದ ವಹಿವಾಟುಗಳು ಹೂಡಿಕೆದಾರರಲ್ಲಿ ನಮ್ಮ ಪೇಟೆಗಳ ಮೇಲಿರುವ ನಂಬಿಕೆಯ ಪ್ರತೀಕವಾಗಿವೆ.  ಆತಂಕ ಬೇಡ  ವ್ಯಾಲ್ಯೂ ಪಿಕ್ - ಪ್ರಾಫಿಟ್ ಬುಕ್ ಅಳವಡಿಸಿ, ಅನುಭವಿಸಿ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT