ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟೆನಿಸ್‌ | ಕ್ವಾರ್ಟರ್‌ ಫೈನಲ್‌ಗೆ ಸಿನ್ನರ್‌, ಅಬಲೆಂಕಾ

Published 4 ಜೂನ್ 2024, 3:32 IST
Last Updated 4 ಜೂನ್ 2024, 3:32 IST
ಅಕ್ಷರ ಗಾತ್ರ

ಪ್ಯಾರಿಸ್‌: ಆಸ್ಟ್ರೇಲಿಯಾ ಓಪನ್‌ ಚಾಂಪಿಯನ್‌ಗಳಾದ ಯಾನಿಕ್‌ ಸಿನ್ನರ್‌ ಮತ್ತು ಅರಿನಾ ಸಬಲೆಂಕಾ ಅವರು ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ನ ನಾಲ್ಕನೇ ಸುತ್ತಿನಲ್ಲಿ ಜಯ ಸಾಧಿಸಿ, ಕ್ವಾರ್ಟರ್‌ ಫೈನಲ್‌ ತಲುಪಿದರು.

ಆರಂಭಿಕ ಹಿನ್ನಡೆಯಿಂದ ಚೇತರಿಸಿ ಕೊಂಡ ಎರಡನೇ ಶ್ರೇಯಾಂಕದ, ಇಟಲಿಯ ಸಿನ್ನರ್‌ 2-6, 6-3, 6-2, 6-1 ಸೆಟ್‌ಗಳಿಂದ ಫ್ರಾನ್ಸ್‌ನ ಕೊರೆಂಟಿನ್ ಮೌಟೆಟ್ ಅವರನ್ನು ಮಣಿಸಿದರು. ಎಂಟರ ಘಟ್ಟದ ಹಣಾಹಣಿಯಲ್ಲಿ ಸಿನ್ನರ್‌ ಅವರು 10ನೇ ಶ್ರೇಯಾಂಕದ ಗ್ರಿಗರ್ ಡಿಮಿಟ್ರೋವ್ (ಬಲ್ಗೇರಿಯಾ) ಅವರನ್ನು ಎದುರಿಸುವರು. ಗ್ರಿಗರ್‌ ಅವರು 7-6 (5), 6-4, 7-6 (3) ರಿಂದ ಎಂಟನೇ ಶ್ರೇಯಾಂಕದ ಹುಬರ್ತ್‌ ಹರ್ಕಜ್‌ (ಪೋಲೆಂಡ್‌) ಅವರಿಗೆ ಆಘಾತ ನೀಡಿದರು.

ಮೂರನೇ ಶ್ರೇಯಾಂಕದ ಅಲ್ಕರಾಜ್‌ 6-3, 6-3, 6-1 ಸೆಟ್‌ಗಳಿಂದ ಕೆನಡಾದ ಫೆಲಿಕ್ಸ್ ಆಗರ್ ಅಲಿಯಾಸ್ಸಿಮ್ ಅವರನ್ನು ಸೋಲಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಎಡಗಾಲಿನ ನೋವಿನಿಂದ ಬಳಸುತ್ತಿದ್ದ 21ನೇ ಶ್ರೇಯಾಂಕದ ಫೆಲಿಕ್ಸ್‌ ಆಟದ ಮಧ್ಯೆ ವೈದ್ಯಕೀಯ ನೆರವು ಪಡೆದು ಹೋರಾಟ ನಡೆಸಿದರು. ಎರಡು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದಿರುವ ಸ್ಪೇನ್‌ನ ಅಲ್ಕರಾಜ್‌ ಎಂಟರ ಘಟ್ಟದ ಪಂದ್ಯದಲ್ಲಿ 2021ರ ಆವೃತ್ತಿಯ ರನ್ನರ್‌ ಅಪ್‌, ಒಂಬತ್ತನೇ ಶ್ರೇಯಾಂಕದ ಸ್ಟಿಫಾನೊಸ್‌ ಸಿಟ್ಸಿಪಾಸ್ (ಗ್ರೀಸ್‌) ಅವರನ್ನು ಎದುರಿಸುವರು. ಸಿಟ್ಸಿಪಾಸ್ ಅವರು 3-6, 7-6 (7/4), 6-2, 6-2ರಿಂದ ಇಟಲಿಯ ಮ್ಯಾಡಿಯೊ ಅರ್ನಾಲ್ಡಿ ಅವರನ್ನು ಮಣಿಸಿದರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ಎರಡನೇ ಶ್ರೇಯಾಂಕದ ಸಬಲೆಂಕಾ 6-2, 6-3 ಸೆಟ್‌ಗಳಿಂದ ಅಮೆರಿಕದ ಎಮ್ಮಾ ನವರೊ ಅವರನ್ನು ಸುಲಭವಾಗಿ ಮಣಿಸಿ ಮುನ್ನಡೆದರು. ಮಾರ್ಚ್‌ನಲ್ಲಿ ನಡೆದಿದ್ದ ಇಂಡಿಯನ್‌ ವೆಲ್ಸ್‌ನಲ್ಲಿ ಬೆಲಾರಸ್‌ನ ಆಟಗಾರ್ತಿಗೆ ನವರೊ ಆಘಾತ ನೀಡಿದ್ದರು. ಆ ಸೋಲಿಗೆ ಸಬಲೆಂಕಾ ಇಲ್ಲಿ ಮುಯ್ಯಿ ತೀರಿಸಿಕೊಂಡರು. 

ಅಮೆರಿಕ ಓಪನ್‌ ಚಾಂಪಿಯನ್‌, ಮೂರನೇ ಶ್ರೇಯಾಂಕ ಕೊಕೊ ಗಾಫ್‌ ಕೂಡ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಹಾಕಿದರು. ಅವರು 6-1, 6-2ರಿಂದ ಎಲಿಸಬೆಟ್ಟಾ ಕೊಕಿಯಾರೆಟ್ಟೊ ಅವರನ್ನು ಸುಲಭವಾಗಿ ಪರಾಭವಗೊಳಿಸಿದರು. ಅವರು ಮುಂದಿನ ಸುತ್ತಿನಲ್ಲಿ ಎಂಟನೇ ಶ್ರೇಯಾಂಕದ ಆನ್ಸ್‌ ಜಬೇರ್ (ಟ್ಯುನೀಷಿಯಾ) ಅವರ ಸವಾಲನ್ನು ಎದುರಿಸಲಿದ್ದಾರೆ. ಜಬೇರ್‌ ಅವರು 6-4, 6-4ರಿಂದ ಕ್ಲಾರಾ ಟೌಸನ್ (ಡೆನ್ಮಾರ್ಕ್‌) ಅವರನ್ನು ಮಣಿಸಿದರು.

ಕಜಕಸ್ತಾನದ ಎಲೆನಾ ರಿಬಾಕಿನಾ 6-4, 6-3 ಸೆಟ್‌ಗಳಿಂದ 15ನೇ ಶ್ರೇಯಾಂಕದ ಎಲಿನಾ ಸ್ವಿಟೋಲಿನಾ (ಉಕ್ರೇನ್‌) ಅವರನ್ನು ಮಣಿಸಿದರು. 4ನೇ ಶ್ರೇಯಾಂಕದ ಅವರು ಮುಂದಿನ ಸುತ್ತಿನಲ್ಲಿ 12ನೇ ಶ್ರೇಯಾಂಕ ದ ಜಾಸ್ಮಿನ್ ಪಯೋಲಿನಿರನ್ನು ಎದುರಿಸಲಿದ್ದಾರೆ.

ಬೋಪಣ್ಣ– ಎಬ್ಡೆನ್‌ ಜೋಡಿಗೆ ಜಯ

ಆಸ್ಟ್ರೇಲಿಯಾ ಓಪನ್‌ ಚಾಂಪಿಯನ್‌ ಜೋಡಿಯಾದ ರೋಹನ್‌ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಅವರು ಪುರುಷರ ಡಬಲ್ಸ್‌ನ ಮೂರನೇ ಸುತ್ತಿನಲ್ಲಿ 6-7(2), 6-3, 7-6 (10-8) ಸೆಟ್‌ಗಳ ಪ್ರಯಾಸದ ಗೆಲುವು ಸಾಧಿಸಿ ಕ್ವಾರ್ಟರ್‌ ಫೈನಲ್‌ಗೆ ಮುನ್ನಡೆದರು.

ಎರಡನೇ ಶ್ರೇಯಾಂಕದ ಭಾರತ– ಆಸ್ಟ್ರೇಲಿಯಾದ ಜೋಡಿಗೆ ಭಾರತದ ಎನ್‌.ಶ್ರೀರಾಮ್ ಬಾಲಾಜಿ ಮತ್ತು ಅವರ ಜೊತೆಗಾರ ಮೆಕ್ಸಿಕೊದ ಮಿಗುಯೆಲ್ ಏಂಜೆಲ್ ರೆಯೆಸ್– ವರೆಲಾ ತೀವ್ರ ಪೈಪೋಟಿ ನೀಡಿದರು. 

ಟೈ ಬ್ರೇಕರ್‌ ಮೂಲಕ ಮೊದಲ ಸೆಟ್‌ ಅನ್ನು ಗೆದ್ದುಕೊಂಡ ಬಾಲಾಜಿ– ಮಿಗುಯೆಲ್‌ ಜೋಡಿಯು, ಎರಡನೇ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿತು. ಆದರೆ, ಮೂರನೇ ಸೆಟ್‌ನಲ್ಲಿ ಮತ್ತೆ ಪ್ರಬಲ ಹೋರಾಟ ನೀಡಿತಾದರೂ ಟೈ ಬ್ರೇಕರ್‌ನಲ್ಲಿ ಬೋಪಣ್ಣ– ಎಬ್ಡೆನ್‌ ಜೋಡಿಯು ಮೇಲುಗೈ ಸಾಧಿಸಿತು.

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಬೋಪಣ್ಣ ಅವರಿಗೆ ಇನ್ನೂ ಜೊತೆಗಾರನ ಆಯ್ಕೆ ಅಂತಿಮವಾಗಿಲ್ಲ. ಇಲ್ಲಿ ಸ್ಫೂರ್ತಿಯುತ ಪ್ರದರ್ಶನ ನೀಡಿದ ಬಾಲಾಜಿ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT