ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಒಬ್ಬಟ್ಟು ಯಾರಿಗೆ?

Published 2 ಜೂನ್ 2024, 23:47 IST
Last Updated 2 ಜೂನ್ 2024, 23:47 IST
ಅಕ್ಷರ ಗಾತ್ರ

ಪೇಪರು ಓದುತ್ತಿದ್ದ ಬೆಕ್ಕಣ್ಣ ‘ಇಂಡಿಯಾ ಬಣದವ್ರ ಮನ್ಯಾಗೆ ಒಬ್ಬಟ್ಟು ಮಾಡ್ತಾರಂತೆ. ಊಟಕ್ಕೆ ಹೋಗೂಣು, ಅಡುಗೆ ಮಾಡಬ್ಯಾಡ’ ಎಂದಿತು.

‘ಇನ್ನಾ ರಿಸಲ್ಟೇ ಬಂದಿಲ್ಲ, ಈಗ್ಲೇ ಸಿಹಿಯೂಟ ಹಾಕ್ತಾರಂತ?’ ಅಚ್ಚರಿಯಿಂದ ನಾನು ಬೆಕ್ಕಣ್ಣ ಹಿಡಿದಿದ್ದ ಪೇಪರಿನಲ್ಲಿ ಇಣುಕಿದೆ.

‘ಮಂಗ್ಯಾನಂಥವ್ನೇ... ಅವರು ನಾವು ಒಗ್ಗಟ್ಟಾಗಿರ್ತೀವಿ ಅಂದರೆ ನೀ ಒಬ್ಬಟ್ಟು ಅಂತೀಯಲ್ಲ’ ಎಂದು ಬೈಯ್ದೆ.

‘ಇವ್ರು ಖರೇಖರೇ ಒಗ್ಗಟ್ಟಾಗಿರ್ತಾರೆ ಅಂದ್ರೆ ಒಬ್ಬಟ್ಟು ತಿಂದಷ್ಟೇ ಖುಷಿ ಬಿಡು’ ಎಂದು ಮೂತಿ ತಿರುವಿದ ಬೆಕ್ಕಣ್ಣ, ‘ಅದ್ಸರಿ, ಯಾರಿಗೆ ಎಷ್ಟು ಬರಬೌದು’ ಎಂದು ಮುಗುಮ್ಮಾಗಿ ಕೇಳಿತು.

‘ಒಬ್ಬೊಬ್ಬರು ಚುನಾವಣಾ ಪಂಡಿತರು ಒಂದೊಂಥರಾ ಭವಿಷ್ಯ ಹೇಳ್ಯಾರೆ. ಮತದಾರ ಪ್ರಭುವಿನ ಚಿತ್ತವನು ಬಲ್ಲವರಾರು?’ ಎಂದೆ.

‘ಕಮಲಕ್ಕನ ಮನಿಯವ್ರಿಗೆ 303 ಗ್ಯಾರಂಟಿ ಅಂತ ದೊಡ್ಡ ಪಂಡಿತ್ರು ಪ್ರಶಾಂತ್‌ ಕಿಶೋರ್‌ ಹೇಳ್ಯಾರೆ. ನಮ್ ಮೋದಿ‌ ಮಾಮ 75 ದಿನಗಳಲ್ಲಿ  ನೂರಾರು ರ‍್ಯಾಲಿ, ಪ್ರಚಾರ ಅಭಿಯಾನ ಮತ್ತು ಸಂದರ್ಶನ ನೀಡಿ ದಾಖಲೆ ಬರೆದಿದ್ದು ಫಲ ನೀಡತೈತೆ’ ಬೆಕ್ಕಣ್ಣ ಮೀಸೆ ತಿರುವಿತು.

‘ಈ ಎಲ್ಲಾ ಮತಗಟ್ಟೆ ಸಮೀಕ್ಷೆಗಳ ಭವಿಷ್ಯ ಅತ್ತಾಗೆ ಸರಿಸಿ. ನಮಗೆ ಇನ್ನೂರ ತೊಂಬತ್ತು ಸಿಗತಾವು. ನಮ್ಮದು ಮತಗಟ್ಟೆ ವಾಸ್ತವ ಸಮೀಕ್ಷೆ’ ಅಂತ ಖರ್ಗೆ ಅಜ್ಜಾರು ಹೇಳ್ಯಾರೆ’.

‘ಎಲ್ಲಾ ಎಕ್ಸಿಟ್‌ ಪೋಲ್‌ಗಳೂ ಕಮಲಕ್ಕನ ಮನಿಯವ್ರಿಗೆ ಹೆಚ್ಚೂಕಡಿಮೆ ಮುನ್ನೂರೈವತ್ತು ಅಂದಾವೆ. ಪಾಪ... ಇಂಡಿಯಾ ಬಣದವರಿಗೆ ಒಬ್ಬಟ್ಟು ಮಾಡಿ, ತಿನ್ನೋ ಪ್ರಸಂಗನೇ ಬರಂಗಿಲ್ಲೇನೋ’ ಎಂದಿತು ಬೆಕ್ಕಣ್ಣ.

‘ಒಬ್ಬಟ್ಟು ಹೋಗಲಿ... ರಿಸಲ್ಟು ಬರತಿದ್ದ ಹಂಗೆ ಒಗ್ಗಟ್ಟೂ ಇಲ್ಲ ಅನ್ನೂ ಪರಿಸ್ಥಿತಿ ಬರಬಾರದು ನೋಡು’.

‘ಒಗ್ಗಟ್ಟು ಅನ್ನದೇ ಒಂದು ಒಗಟು. ಒಗ್ಗಟ್ಟಿನಿಂದಿದ್ದರೆ ಮುಂದೆ ಒಬ್ಬಟ್ಟು ಮಾಡಿ ತಿನ್ನಬಹುದು’ ಎಂಬ ಹೊಸ ಗಾದೆಯೊಂದನ್ನು ಹೊಸೆದ ಬೆಕ್ಕಣ್ಣ ‘ಏನಾದರೇನು... ಶ್ರೀಸಾಮಾನ್ಯರು ಹಬ್ಬಗಳಿಗೆ ಒಬ್ಬಟ್ಟು ಮಾಡುವುದಕ್ಕೂ ಹಿಂದೆ ಮುಂದೆ ನೋಡೋ ಪರಿಸ್ಥಿತಿ ತಪ್ಪಂಗಿಲ್ಲ’ ಎಂದು ಹುಳ್ಳಗೆ ನಕ್ಕಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT