ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ಒಳನೋಟ | ಕುಲಕಸುಬಿಗೆ ಅವಕಾಶ ಕೊಡಿ: ದಶಕಗಳಿಂದ ಬೋವಿಗಳ ಆಗ್ರಹ
ಒಳನೋಟ | ಕುಲಕಸುಬಿಗೆ ಅವಕಾಶ ಕೊಡಿ: ದಶಕಗಳಿಂದ ಬೋವಿಗಳ ಆಗ್ರಹ
Published 1 ಜೂನ್ 2024, 23:14 IST
Last Updated 1 ಜೂನ್ 2024, 23:14 IST
ಅಕ್ಷರ ಗಾತ್ರ

ಮೈಸೂರು: ‘ಕುಲಕಸುಬಿನಲ್ಲಿ ಅಭಿವೃದ್ಧಿ ಹೊಂದಲು ಮೇದಾರರು, ಮೀನುಗಾರರು, ಚಮ್ಮಾರ, ಕುಂಬಾರ, ಕುರಿ ಸಾಕುವವರಿಗೂ ಸರ್ಕಾರವು ಹಲವು ನೆರವು ಕೊಡುತ್ತಿದೆ. ಆದರೆ ಕಲ್ಲು ಹೊಡೆಯುವುದನ್ನೇ ನೆಚ್ಚಿಕೊಂಡಿರುವ ಬೋವಿಗಳಿಗೆ ಯಾವ ನೆರವೂ ಇಲ್ಲ. ಸರ್ಕಾರವೂ ಜಾಗ ಕೊಡಲ್ಲ. ಕಲ್ಲು ಹೊಡೆಯುವಂತೆಯೂ ಇಲ್ಲ. ಎಷ್ಟು ವರ್ಷವೆಂದು ಕ್ವಾರಿಗಳಲ್ಲಿ ಗುತ್ತಿಗೆದಾರರ ಬಳಿ ಕೂಲಿಯಾಳುಗಳಾಗಿ ಕೆಲಸ ಮಾಡಬೇಕು?’

– ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಹೋಬಳಿಯ ಶ್ರೀರಾಂಪುರದಲ್ಲಿ ತಲೆಮಾರುಗಳಿಂದ ಕಲ್ಲು ಹೊಡೆಯುವ ಕೆಲಸವನ್ನೇ ಮಾಡಿಕೊಂಡು ಬಂದವರ ಮನದಾಳ ಇದು.

90 ವರ್ಷದಿಂದ ಜನ ಇಲ್ಲಿ ಬಿಸಿಲು, ಮಳೆ, ಚಳಿ, ಗಾಳಿ ಲೆಕ್ಕಿಸದೆ ಕಲ್ಲು ಹೊಡೆಯುತ್ತಲೇ ಇದ್ದಾರೆ. ಇವರೆಲ್ಲ ಕೆಆರ್‌ಎಸ್‌ ಜಲಾಶಯ ಕಟ್ಟಲು ಬಂದ ಕುಟುಂಬದವರು. ಅವರಲ್ಲಿ ತಮಿಳು, ತೆಲುಗು,‌ ಕನ್ನಡ ಮಾತನಾಡುವ ಬೋವಿ ಕುಟುಂಬದವರಿದ್ದಾರೆ.

160 ಕುಟುಂಬಗಳಿರುವ ಈ ಚಿಕ್ಕ ಊರಿನ ಸುತ್ತ ದಶಕಗಳಿಂದ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಕ್ರಶರ್‌ಗಳೂ ದೊಡ್ಡ ಸಂಖ್ಯೆಯಲ್ಲೇ ಇವೆ. ಇಲ್ಲಿರುವ ಬೃಹತ್ತಾದ ಕಲ್ಲು ಬೆಟ್ಟಗಳು ಕರಗಲು ಈ ಕುಟುಂಬಗಳ ತಲೆಮಾರುಗಳ ಶ್ರಮ ಕಾರಣ. ಇಲ್ಲೇ ಹುಟ್ಟಿ ಇಲ್ಲೇ ಬೆಳೆದ ಬಹುತೇಕರ ಜೀವನ ಇಲ್ಲೇ ಕರಗುತ್ತಿದೆ. ಹೊಸ ತಲೆಮಾರಿಗೆ ಶಿಕ್ಷಣವೂ ದುಬಾರಿ. ಕುಲಕಸುಬಿಗೆ ಅವಕಾಶಗಳಿಲ್ಲದೆ ಸ್ವಾವಲಂಬನೆಯೂ ಇಲ್ಲ. ನೆಮ್ಮದಿಯೂ ಇಲ್ಲ. ಊರೂ ಅಭಿವೃದ್ಧಿಯಾಗಿಲ್ಲ. ಚುನಾವಣೆಗೊಮ್ಮೆ ಮಾತ್ರ ಮತ ಕೇಳುವ ಜನ ಇತ್ತ ಹೋಗುತ್ತಾರೆ.

ಭಾರತೀಯ ಬೋವಿ ಓಲ್ಡ್ ಕಮ್ಯುನಿಟಿ ಕೌನ್ಸಿಲ್ ಆಫ್ ಇಂಡಿಯಾದ ಮಂಡ್ಯ ಜಿಲ್ಲಾ ಶಾಖೆ ನೀಡಿರುವ ಗುರುತಿನ ಚೀಟಿ ಬಿಟ್ಟರೆ ಬೇರೆ ಯಾವುದೇ ಚೀಟಿ ಅವರ ಬಳಿ ಇಲ್ಲ. ಗುರುತಿನ ಚೀಟಿ ಪಡೆದ 700 ಮಂದಿ ಜಿಲ್ಲೆಯಲ್ಲಿದ್ದಾರೆ. ‘ಸರ್ಕಾರವೇ ಗುರುತಿನ ಚೀಟಿ ನೀಡಿ ಕೈಹಿಡಿಯಬೇಕು’ ಎಂಬ ಬೇಡಿಕೆಯೂ ಈಡೇರಿಲ್ಲ. ‘ಇದರ ಜೊತೆಯಲ್ಲಿ ಜಾತಿನಿಂದನೆ, ದೌರ್ಜನ್ಯವನ್ನೂ ನಿರಂತರವಾಗಿ ಎದುರಿಸಬೇಕು’ ಎಂಬುದು ಅವರ ಅಳಲು.

ಬಂಡೆ, ಕ್ವಾರಿಗಳಿರುವೆಡೆಯೇ ವಾಸಿಸುವುದು ಅನಿವಾರ್ಯ. ಜನ, ವಾಹನ ಸಂಪರ್ಕವಿಲ್ಲದೆ, ಉಳಿ, ಸುತ್ತಿಗೆಯ ಶಬ್ದ ಮತ್ತು ದೂಳಿನಲ್ಲೇ ಅವರ ಬದುಕು. ಹತ್ತಿರದ ಶ್ರೀರಾಂಪುರದಲ್ಲಿ ಅಂಗನವಾಡಿ ಇದೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. 6ನೇ ಕ್ಲಾಸ್‌ ಓದಲು 3 ಕಿಮೀ ದೂರದ ಜಕ್ಕನಹಳ್ಳಿಗೆ ಅಥವಾ 5 ಕಿಮೀ ದೂರದ ಟಿ.ಎಂ.ಹೊಸೂರಿಗೆ ಹೋಗಬೇಕು. ಆದರೆ ಇಲ್ಲಿಗೆ ಬಸ್‌ ಬರಲ್ಲ. ಬೈಸಿಕಲ್‌ ತುಳಿಯಬೇಕು ಅಥವಾ ತಂದೆ ಇಲ್ಲವೇ ತಾಯಿಯೇ ಶಾಲೆಗೆ ಕರೆದೊಯ್ಯಬೇಕು. ದಾರಿ ಸುರಕ್ಷವಲ್ಲ ಎನ್ನುವ ಕಾರಣಕ್ಕೆ ಹಲವು ಹೆಣ್ಣುಮಕ್ಕಳನ್ನು ಪ್ರೌಢಶಾಲೆಗೂ ಕಳಿಸಿಲ್ಲ.

ಕುಲಕಸುಬಿನ ಸಲಕರಣೆಗಳೊಂದಿಗೆ ಮಂಡ್ಯದ ಶ್ರೀರಾಂಪುರದ ಬೋವಿ ಸಮುದಾಯ

ಕುಲಕಸುಬಿನ ಸಲಕರಣೆಗಳೊಂದಿಗೆ ಮಂಡ್ಯದ ಶ್ರೀರಾಂಪುರದ ಬೋವಿ ಸಮುದಾಯ

ಇಲ್ಲಿಂದ ಶ್ರೀರಂಗಪಟ್ಟಣ 10 ಕಿಮೀ ದೂರ. ಮಂಡ್ಯ 15 ಕಿಮೀ ದೂರವಷ್ಟೇ. ಆದರೆ ಅಲ್ಲಿಗೆ ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್‌ ಬರಲು ಕನಿಷ್ಠ ಎರಡು ಗಂಟೆ ಬೇಕು. ಏಕೆಂದರೆ ಅಲ್ಲಿ ರಸ್ತೆಗಳಿರುವುದು ಕಲ್ಲು, ಜಲ್ಲಿ, ಜಲ್ಲಿಪುಡಿ ಸಾಗಿಸುವ ಲಾರಿಗಳಿಗಾಗಿ ಮಾತ್ರ. ಬೈಕ್‌, ಆಟೋ ಸಂಚಾರ ಕಡುಕಷ್ಟ. ಈ ಊರಿನ ಸುತ್ತಮುತ್ತ ಸುಮಾರು ನೂರು ಕ್ರಶರ್‌ಗಳಾದರೂ ಇರಬಹುದು. ಆದರೆ ಅಲ್ಲಿಯೂ ನಿಯಮಿತ ಕೆಲಸವಿಲ್ಲ. ಸ್ವಂತ ಜಮೀನೂ ಇಲ್ಲ. ಇವರ ಸಾಂಪ್ರದಾಯಿಕ ವೃತ್ತಿಯೇ ಸರ್ಕಾರಕ್ಕೆ, ಗುತ್ತಿಗೆದಾರರಿಗೆ ದೊಡ್ಡ ಆದಾಯದ ಮೂಲ. ಆದರೆ, ಇವರಿಗೆ ಮಾತ್ರ ಉದ್ಯೋಗದ ಅಭದ್ರತೆಯಿಂದ ಮುಕ್ತಿಯೇ ಇಲ್ಲ. ಹೀಗಾಗಿಯೇ ಜೀವನವೂ ನಿರಂತರ ಅಭದ್ರ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳಲ್ಲಿ 10ರಿಂದ 12 ಸಾವಿರ ಬೋವಿಗಳಿದ್ದು, ಕೆಲವರಷ್ಟೇ ಕೃಷಿ ಮಾಡುತ್ತಿದ್ದಾರೆ. ಶೇ 60ರಷ್ಟು ಮಂದಿ ಕಲ್ಲು ಒಡೆಯುತ್ತಾರೆ. ಕೆಲವರು ಶಿಲ್ಪಿಗಳಿದ್ದಾರೆ. ಶೇ 25ರಷ್ಟು ನಿರುದ್ಯೋಗಿಗಳಿದ್ದಾರೆ. ಮಹಿಳೆಯರೂ ಕಲ್ಲಿನ ಕೆಲಸ ಮಾಡುತ್ತಿದ್ದಾರೆ. ಇಂದಿಗೂ ಹರಿದ ಜೋಪಡಿಯ ಕೆಳಗೆ, ಗಿಡಗಳ ನೆರಳಿನಲ್ಲಿ ವೃತ್ತಿ ಮತ್ತು ಬದುಕನ್ನು ಸಾಗಿಸುತ್ತಿದ್ದಾರೆ.

ವ್ಯಾಪಾರ ಮಾಡಲು ಶಾಶ್ವತ ಜಾಗವೇ ಇಲ್ಲ. ಕಲ್ಲುಗಳನ್ನು ಒಡೆದು ದೇವಸ್ಥಾನದ ಮಾಲಗಂಬ, ದ್ವಾರಬಾಗಿಲು, ಶಿಖರ ಕಲ್ಲು, ಮೂರ್ತಿ, ದೇವರ ಪಾದ, ಮನೆಗಳಿಗೆ ಬೇಕಾದ ಮಾರಿಗಲ್ಲು, ಸೈಜುಗಲ್ಲು, ಕುದುರೆಕಲ್ಲು, ಚಾವಣಿಕಲ್ಲು, ಬೀಸುವ ಕಲ್ಲು, ಹಿಂಡಿಕಲ್ಲು, ಒರಳು ಕಲ್ಲು ಮಾರಾಟ ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ, ಮುದ್ದೇಬಿಹಾಳ ಹಾಗೂ ಮಿಣಜಗಿ ಫರಸಿ, ಬೀಸುವ ಕಲ್ಲಿಗೆ ಹೊರ ರಾಜ್ಯಗಳಿಂದಲೂ ಬೇಡಿಕೆ ಇತ್ತು. ಈಗ ಇದರ ಬಳಕೆಯೇ ಕಡಿಮೆಯಾಗಿದೆ.

ದಶಕದಿಂದೀಚೆಗೆ ಸೈಜು ಕಲ್ಲು ಬಳಕೆ ಕಡಿಮೆಯಾಗಿರುವುದರಿಂದ, ಆ ಕೆಲಸ ಮಾಡುತ್ತಿದ್ದ ಬಾಗಲಕೋಟೆಯ ಬೋವಿಗಳು ಬೇರೆ ಕೆಲಸಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. ಇಳಕಲ್‌ ತಾಲ್ಲೂಕಿನ ಬಲಕುಂದಿ, ಬಲಕುಂದಿ ತಾಂಡಾ, ಗುಡೂರ ಎಸ್.ಬಿ, ಹನಮನಾಳ, ಹಿರೇಕೊಡಗಲಿ, ಚಿಕ್ಕಕೊಡಗಲಿ, ಗುಳೇದಗುಡ್ಡ ಸೇರಿದಂತೆ ಹಲವೆಡೆ ಈ ಕೆಲಸ ಸಂಪೂರ್ಣ ನಿಂತಿದೆ.

ಕಟ್ಟಡ ನಿರ್ಮಾಣಕ್ಕೆ ಕಲ್ಲು ಬಳಕೆ ಕಡಿಮೆಯಾಗಿರುವುದು ಹಾಗೂ ಉದ್ಯಮಿಗಳು ಕಲ್ಲು ಗಣಿಗಾರಿಕೆ ಪ್ರವೇಶಿಸಿರುವುದರಿಂದ ಬೋವಿಗಳಿಗೆ ಗುತ್ತಿಗೆ ಪಡೆಯಲು ಸಾಧ್ಯವಾಗುತ್ತಿಲ್ಲ. ಯಂತ್ರಗಳೂ ಬಂದಿರುವುದರಿಂದ ಉದ್ಯೋಗ ಕಡಿಮೆಯಾಗಿದೆ. ಕಟ್ಟಡದ ಅಡಿಪಾಯಕ್ಕೆ ಕಚ್ಚಾ ಕಲ್ಲು (ರಬ್ಲಿ ಕಲ್ಲು) ಹಾಗೂ ಗ್ರಾನೈಟ್ ಗಣಿಗಾರಿಕೆಯಲ್ಲಿ ತ್ಯಾಜ್ಯ ರೂಪದಲ್ಲಿ ದೊರೆಯುವ ಕಲ್ಲುಗಳನ್ನು ಬಳಸಲಾಗುತ್ತಿದೆ.

ಗದಗ ತಾಲ್ಲೂಕಿನ ಚಿಂಚಲಿ ಹಾಗೂ ಬಸಾಪೂರ ಗ್ರಾಮದಲ್ಲಿ ಅತಿ ಹೆಚ್ಚು ಬೋವಿ ಸಮುದಾಯದವರಿದ್ದು, ಅನಾದಿಕಾಲದಿಂದಲೂ ಸ್ಫೋಟಕ ರಹಿತ ಕಲ್ಲು ಒಡೆಯುವುದು, ಮನೆ ಹಾಗೂ ದೇವಸ್ಥಾನಗಳ ನಿರ್ಮಾಣದಂತಹ ಕುಲಕಸುಬಿನಲ್ಲೇ ತೊಡಗಿಕೊಂಡಿದ್ದಾರೆ. ಚಿಂಚಲಿಯ 200ಕ್ಕೂ ಹೆಚ್ಚು ಕುಟುಂಬಗಳು ಅದನ್ನೇ ನೆಚ್ಚಿಕೊಂಡಿದ್ದು, ಜೀವನಮಟ್ಟ ಮಾತ್ರ ಸುಧಾರಿಸಿಲ್ಲ. ಇವರ ಹಣಕಾಸಿನ ಸ್ಥಿತಿ ಅಷ್ಟಕಷ್ಟೆ. ರಾಜ್ಯದಾದ್ಯಂತ್ಯ ಇದೇ ಕಥೆ. ವಾಸಿಸುವ ಸ್ಥಳದ ಹೆಸರು ಮಾತ್ರ ಬದಲಾಗುತ್ತದೆ.

‘ಈ ಪ್ರದೇಶದ ಸುತ್ತಮುತ್ತಲಿನ ಕಲ್ಲುಗುಡ್ಡಗಳಲ್ಲಿ ಸ್ಫೋಟಕ ಗಣಿಗಾರಿಕೆ ಬಂದಾಗಿನಿಂದ ಬದುಕು ಕಷ್ಟವಾಗಿದೆ. ಆದರೂ ಕೆಲವರು ಸ್ಫೋಟಕ ರಹಿತ ಕಲ್ಲುಗಣಿಗಾರಿಕೆ ಮಾಡಿಯೇ ಜೀವನ ಸಾಗಿಸುತ್ತಿದ್ದು, ಅದಕ್ಕೂ ಗಣಿ ಮತ್ತು ಪೊಲೀಸ್ ಅಧಿಕಾರಿಗಳು ಅಡ್ಡಿಪಡಿಸುತ್ತಾರೆ’ ಎಂದು ಹಲವು ಬಾರಿ ಪ್ರತಿಭಟನೆಗಳೂ ನಡೆದಿವೆ.

ಇದು ಬರಿ ಮೂರ್ನಾಲ್ಕು ಜಿಲ್ಲೆಗಳ ಕತೆ ಅಲ್ಲ. ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೊಪ್ಪಳ, ರಾಯಚೂರು, ಕಲಬುರಗಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಈ ಸಮುದಾಯದವರೆಲ್ಲರ ಕತೆ. ಸನ್ನಿವೇಶಗಳು ಭಿನ್ನವಿರಬಹುದು. ಆದರೆ ಕಷ್ಟದ ಪರಿಸ್ಥಿತಿ, ಅತಂತ್ರ, ಅಭದ್ರ ಬದುಕಿನಲ್ಲಿ ಯಾವುದೇ ವ್ಯತ್ಯಾಸವಿಲ್ಲ.

ಶಿಕ್ಷಣದ ಅವಕಾಶವಿಲ್ಲದ್ದರಿಂದ ಉದ್ಯೋಗದ ಅವಕಾಶವೂ ಇಲ್ಲ. ರಾಜಕೀಯ ಅವಕಾಶಗಳೆನ್ನುವುದು ಸಹ ಅವರಿಗೆ ನಕ್ಷತ್ರದ ರೀತಿ. ನೋಡಿ ನಲಿಯಬೇಕಷ್ಟೇ. ಬೀಸುವ, ರುಬ್ಬುವ ಕಲ್ಲಿನಿಂದ ಬೃಹತ್‌ ಅಣೆಕಟ್ಟು ನಿರ್ಮಾಣದವರೆಗೆ ಮಹತ್ವದ ಪಾತ್ರ ವಹಿಸಿರುವ ಸಮುದಾಯಕ್ಕೆ ಆಧುನಿಕತೆ, ಗಣಿಗಾರಿಕೆಯ ಹೊಸ ನಿಯಮಗಳೇ ಉಳಿಪೆಟ್ಟು ನೀಡುತ್ತಿವೆ.

ನಮ್ಮ ಕೆಲಸ ನಮಗೆ ಕೊಡಿ...:

ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಬೋವಿ (ವಡ್ಡರ) ಸಮುದಾಯವು, ‘ನಮ್ಮ ಕೆಲಸ ನಮಗೆ ಕೊಡಿ. ಸ್ವಾವಲಂಬನೆಗೆ ದಾರಿ ಮಾಡಿ’ ಎಂದು ಹಲವು ದಶಕಗಳಿಂದ ಆಗ್ರಹಿಸುತ್ತಲೇ ಇದೆ. ‘ಕುಲಕಸುಬಾದ ಕಲ್ಲು ಗಣಿಗಾರಿಕೆ ಮಾಡಲು ಅವಕಾಶಗಳಿಲ್ಲದೆ, ಗಣಿ ಗುತ್ತಿಗೆದಾರರ ಬಳಿ ಕೂಲಿ ಕೆಲಸ ಮಾಡಿಕೊಂಡೇ ಜೀವನ ಸಾಗಿಸಬೇಕೇ’ ಎಂಬುದು ಅವರ ಪ್ರಶ್ನೆ. ‘ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಮತ್ತು ರಾಜಕೀಯ ಭದ್ರತೆಯೂ ಇಲ್ಲ’ ಎಂಬುದು ಅಸಹಾಯಕತೆ.

‘ವಿವಿಧ ಸಾಂಪ್ರದಾಯಿಕ ವೃತ್ತಿಗಳನ್ನು ನಿರ್ವಹಿಸುವ ಇತರೆ ಸಮುದಾಯಗಳಿಗೆ ವಿವಿಧ ಯೋಜನೆಗಳಿರುವಂತೆ ಭೋವಿಗಳಿಗೂ, ಅವರ ಸಾಂಪ್ರದಾಯಿಕ ವೃತ್ತಿಯನ್ನು ಉತ್ತೇಜಿಸಲು ಯಾವುದೇ ಯೋಜನೆ ಇಲ್ಲ’ ಎಂಬ ಕೊರಗು ದಶಕಗಳಿಂದ ಅವರನ್ನು ಬಾಧಿಸುತ್ತಿದೆ. ಕಲ್ಲುಗಣಿಗಾರಿಕೆ ನಡೆಯುವ ಆಸುಪಾಸಿನಲ್ಲೇ ಜೀವಿಸುವ ಅವರ ಕುಟುಂಬಗಳು ಮೂಲಸೌಕರ್ಯಗಳಿಲ್ಲದೆ ನಲುಗುತ್ತಿವೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲೂ ಆಗದ ಪರಿಸ್ಥಿತಿಯಲ್ಲಿ ಬದಲಾವಣೆಯಾಗಿಲ್ಲ.

‘ಸರ್ಕಾರಿ ಜಮೀನುಗಳಲ್ಲಿ ಹರಾಜು ರಹಿತವಾಗಿ ಕಟ್ಟಡ ಕಲ್ಲು ಗಣಿ ಗುತ್ತಿಗೆ ಮಂಜೂರು ಮಾಡಲು, ಈಗ ಇರುವ ಗಣಿಗಾರಿಕೆ ಕಾನೂನು ಸಡಿಲಗೊಳಿಸಿ, 31 ಜಡ್‌ಸಿ ನಿಯಮವನ್ನು ರದ್ದುಪಡಿಸಬೇಕು. ಅವಕಾಶವಿರುವೆಡೆ ಎಲ್ಲ ಗ್ರಾಮಗಳಲ್ಲೂ ಸ್ಫೋಟಕ ರಹಿತ ಗಣಿ ಕೆಲಸವನ್ನು ಸ್ವತಂತ್ರವಾಗಿ ಮಾಡಲು ಅನುವು ಮಾಡಬೇಕು. ಗುರುತಿನ ಚೀಟಿ ಕೊಡಬೇಕು’ ಎಂಬ ಬೇಡಿಕೆಯೂ ಅರಣ್ಯರೋದನವಾಗಿಯೇ ಉಳಿದಿದೆ.

ಕಾಯುವುದೇ ಕಾಯಕ!:

ಬೋವಿ ಸಮುದಾಯದವರು ಸೇರಿದಂತೆ ರಾಜ್ಯದಲ್ಲಿ ಸಾವಿರಾರು ಮಂದಿ ಗಣಿಗಾರಿಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿ ಕಾಯುತ್ತಲೇ ಇದ್ದಾರೆ. ಅವರ ಮನವಿ ಇಷ್ಟೇ: ಸ್ಫೋಟಕ ರಹಿತವಾಗಿ ಸಾಂಪ್ರದಾಯಿಕ ಕಲ್ಲು ಗಣಿಗಾರಿಕೆ ನಡೆಸಲು ಹರಾಜು ರಹಿತವಾಗಿ ಕನಿಷ್ಠ ಒಬ್ಬೊಬ್ಬರಿಗೆ ಅರ್ಧ ಎಕರೆಯನ್ನಾದರೂ ಹಂಚಿಕೆ ಮಾಡಿ’. ಆದರೆ, ಬದಲಾದ ನಿಯಮಗಳಲ್ಲಿ ಅದಕ್ಕೆ ಅವಕಾಶವಿಲ್ಲ.

ಕೋಲಾರ ಜಿಲ್ಲೆಯಲ್ಲಿ ಸುಮಾರು 700 ಮಂದಿ ₹2 ಸಾವಿರ ಮೊತ್ತದ ಡಿ.ಡಿ ಜೊತೆ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಎರಡು ವರ್ಷಗಳಾಗಿವೆ. ಜಿಲ್ಲೆಯ ಟೇಕಲ್‌ನಲ್ಲಿ ಕಲ್ಲು ಒಡೆಯುವವರಿಗೆಂದು 113 ಬ್ಲಾಕ್‌ ವಿಂಗಡಿಸಲಾಗಿದೆ. ಈಗಾಗಲೇ ಟೇಕಲ್‌, ಹುಣಸೀಕೋಟೆ, ಜಂಗಾನಹಳ್ಳಿ, ಉಳ್ಳೇರಹಳ್ಳಿ, ವೀರಕಪುತ್ರ, ಕದಿರೇನಹಳ್ಳಿ, ಅನಿಗಾನಹಳ್ಳಿ ಸೇರಿದಂತೆ ಸುತ್ತಲಿನ ಬೆಟ್ಟಗಳಲ್ಲಿ ಕಲ್ಲು ಸೀಳುವ ಕೆಲಸದಲ್ಲಿ ಹಲವರು ತೊಡಗಿಕೊಂಡಿದ್ದಾರೆ. ಹೆಚ್ಚಿನವರಿಗೆ ಪರವಾನಗಿ ಇಲ್ಲ. ‘ನಾವು ಮಾಡುವ ಕೆಲಸದ ಸ್ಥಳದಲ್ಲೇ ಪರವಾನಗಿ ಕೊಟ್ಟು, ರಾಜಧನ ಕಟ್ಟಿಸಿಕೊಳ್ಳಿ‘ ಎಂಬ ಮನವಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎನ್ನುವ ಬೇಸರ ಇವರಲ್ಲಿದೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಕಲ್ಲುಗಳನ್ನು ಒಡೆಯುವ ಕಾರ್ಯದಲ್ಲಿ ನಿರತ ಕಾರ್ಮಿಕ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಕಲ್ಲುಗಳನ್ನು ಒಡೆಯುವ ಕಾರ್ಯದಲ್ಲಿ ನಿರತ ಕಾರ್ಮಿಕ.

ಸ್ಥಳೀಯ ಕುಲಕಸುಬಿನವರ ಜತೆ ಬೇರೆ ಕಡೆಯವರು, ಉದ್ಯಮಿಗಳೂ ಅರ್ಜಿ ಸಲ್ಲಿಸಿರುವುದು ಅಡ್ಡಿಯಾಗಿ ಪರಿಣಮಿಸಿದೆ. ನೈಜ ಕಲ್ಲುಕುಟುಕರನ್ನು ಪತ್ತೆ ಹಚ್ಚಿ ಅವರ ಉದ್ಯೋಗವನ್ನು ಸಕ್ರಮಗೊಳಿಸಬೇಕು. ಏಕೆಂದರೆ, ಸರ್ಕಾರದ ಪ್ರಕಾರ ಹಲವರು ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಅದೇ ಕಾರಣಕ್ಕೆ, ಅವರ ಕಸುಬಿನ ಸಲಕರಣೆಗಳನ್ನು ಗಣಿ ಮತ್ತು ಭೂ ವಿಜ್ಞಾ ಇಲಾಖೆ ಅಧಿಕಾರಿಗಳು, ಪೊಲೀಸರು ವಶಕ್ಕೆ ಪಡೆಯುವ ಘಟನೆಗಳು ನಡೆಯುತ್ತಲೇ ಇವೆ. ಮತ್ತೆ ಅವುಗಳನ್ನು ವಾಪಸು ಪಡೆಯುವುದು ಕೂಡ ದೊಡ್ಡ ಸಾಹಸವೇ.

ಇಂಥ ಸಂಘರ್ಷಮಯ ವೃತ್ತಿ–ಬದುಕು ಹಸನಾಗಬೇಕು ಎಂಬ ಆಗ್ರಹ ಎಲ್ಲೆಡೆ ಕೇಳಿಬಂದರೂ ಗಟ್ಟಿ ಹೋರಾಟದ ಕೊರತೆಯೂ ಕಾಣುತ್ತದೆ. ಅದಕ್ಕೆ ಈ ಸಮುದಾಯಗಳ ಮುಖಂಡರು ಮೊದಲು ಒಟ್ಟಾಗಬೇಕು. ಆರ್ಥಿಕ ಹಾಗೂ ಸಾಮಾಜಿಕವಾಗಿ ಬಲಾಡ್ಯರಲ್ಲದ ಸಮುದಾಯದ ಮನವಿಗಳಿಗೆ ಸರ್ಕಾರವೂ ಸ್ಪಂದಿಸಬೇಕು. ಕಲ್ಲು ನೆಚ್ಚಿಕೊಂಡ ಬದುಕನ್ನು ಹಸನುಗೊಳಿಸಲು, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಬಲ ತುಂಬುವ ಕೆಲಸವೂ ಆಗಬೇಕು.

ನಿಗಮದಿಂದ ಸಾಲ ಸೌಲಭ್ಯವಷ್ಟೇ ಸಾಕೆ?

‘2016ರಲ್ಲಿ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಸ್ಥಾಪನೆಯಾದ ಕರ್ನಾಟಕ ಬೋವಿ ಅಭಿವೃದ್ಧಿ ನಿಗಮವು ಸಮುದಾಯಕ್ಕೆ ಸಾಲ ಸೌಲಭ್ಯಗಳನ್ನು ನೀಡುವಷ್ಟಕ್ಕೆ ಮಾತ್ರ ಸೀಮಿತವಾಗಿದೆ. ಸ್ವಯಂ ಉದ್ಯೋಗ ಯೋಜನೆ, ಮೈಕ್ರೋ ಕ್ರೆಡಿಟ್‌ ಯೋಜನೆ, ಉದ್ಯಮಶೀಲತಾ ಯೋಜನೆ, ಭೂ ಒಡೆತನ ಯೋಜನೆ, ಗಂಗಾ ಕಲ್ಯಾಣ ಯೋಜನೆ ಅಡಿ ನೆರವು ನೀಡಲಾಗುತ್ತಿದೆ. ಕುಲಕಸುಬನ್ನು ಮಾಡಲು ಇರುವ ಕಾನೂನು ತೊಡಕುಗಳ ನಿವಾರಣೆಗೆ ಪ್ರಯತ್ನ ಮಾಡಿಲ್ಲ’ ಎಂಬ ಅಸಮಾಧಾನವೂ ಸಮುದಾಯದಲ್ಲಿದೆ.

‘ರಾಜಕೀಯ ವ್ಯಕ್ತಿಗಳ ಪ್ರಭಾವದಿಂದ, ನಿಗಮದ ಯೋಜನೆಗಳ ಲಾಭ ಕುಲವೃತ್ತಿ ಮಾಡುವವರಿಗೆ ದೊರಕುತ್ತಿಲ್ಲ. ಕೂಲಿಕಾರರು ಕೂಲಿಕಾರರಾಗಿಯೇ ಇದ್ದು, ಸರ್ಕಾರದ ವಿವಿಧ ಹುದ್ದೆಗಳಲ್ಲಿರುವ ಬೆರಳೆಣಿಕೆಯಷ್ಟು ಮಂದಿಗೂ ಸಮುದಾಯದ ಬಡವರ ಅಭಿವೃದ್ಧಿಯ ಕಾಳಜಿ ಅತಿಕಡಿಮೆ’ ಎಂದು ಮುದ್ದೇಬಿಹಾಳದ ಬೋವಿ ಸಮಾಜದ ಮುಖಂಡ ಪರಶುರಾಮ ನಾಲತವಾಡ ವಿಷಾದಿಸುತ್ತಾರೆ.

‘ಬೋವಿ ಜನಾಂಗದವರು ಕಲ್ಲು ಒಡೆಯುವುದು, ಕೆರೆ ತೊಡುವುದು, ಕಟ್ಟಡ ಕಟ್ಟುವುದು, ಮಣ್ಣು ಕೆಲಸ, ಗಾರೆ ಮತ್ತು ಇತರ ಕೂಲಿ ಕೆಲಸವನ್ನು ಮಾಡುತ್ತಿದ್ದು, ಸದರಿ ಜನಾಂಗದವರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಮಾಡಲು ಮತ್ತು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ನಿಗಮದ ವಿವಿಧ ಯೋಜನೆಯಡಿ ಆರ್ಥಿಕ ಸೌಲಭ್ಯ ಒದಗಿಸಲಾಗುತ್ತಿದೆ’ ಎಂಬ ಟಿಪ್ಪಣಿಯು ನಿಗಮದ ವೆಬ್‌ಸೈಟ್‌ನ ಮುಖಪುಟದಲ್ಲಿದೆ. ಕುಲಕಸುಬಿನಲ್ಲೇ ಸ್ವಾವಲಂಬಿಗಳಾಗಿಸುವ ಆಶಯ ಅಲ್ಲಿ ಕಂಡುಬರುವುದಿಲ್ಲ.

‘31 ಜಡ್‌ಸಿ ರದ್ದುಪಡಿಸಿ’

‘ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು 1994ರ ನಿಯಮ 3ಎಫ್ ಅಡಿ ಸರ್ಕಾರಿ ಜಮೀನುಗಳಲ್ಲಿ ಹರಾಜು ರಹಿತವಾಗಿ ಕಟ್ಟಡ ಕಲ್ಲು ಗಣಿ ಗುತ್ತಿಗೆ ಮಂಜೂರು ಮಾಡಲು 31 ಜಡ್‌ಸಿ ನಿಯಮವನ್ನು ರದ್ದುಪಡಿಸಿದರೆ ಮಾತ್ರ ಬೋವಿಗಳ ಕುಲಕಸುಬು ಉಳಿಯಲು ಸಾಧ್ಯ’ ಎಂಬುದು ಬೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ, ಮೈಸೂರಿನ
ಜಿ.ವಿ.ಸೀತಾರಾಮು ಅವರ ಪ್ರತಿಪಾದನೆ.

‘ಎಂ ಸ್ಯಾಂಡ್‌ ಉತ್ಪಾದನೆಯನ್ನು ಹೆಚ್ಚಿಸಲೆಂದೇ ರೂಪಿಸಿದ ಈ ನಿಯಮದಿಂದ, ಬೋವಿ ಸಮುದಾಯ ದವರಿಗೆ ಸ್ವಂತ ಕಲ್ಲು ಗಣಿಗಾರಿಕೆ ಮಾಡುವ ಅವಕಾಶವೇ ಇಲ್ಲ. ಒಂದು ವೇಳೆ ಗಣಿಗಾರಿಕೆ ಮಾಡಿದರೆ ಅದು ಅಕ್ರಮವಾಗುತ್ತದೆ, ಇದು ಸಾಂಪ್ರದಾಯಿಕ ವೃತ್ತಿಪರರನ್ನು ಸಂಕಷ್ಟಕ್ಕೆ ದೂಡಿದೆ. ಹೀಗಾಗಿ ಅಂಥವರಿಗೆ ನೇರವಾಗಿ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಅಥವಾ ಜಿಲ್ಲಾಧಿಕಾರಿ ಮೂಲಕ ಸ್ಫೋಟಕ ರಹಿತ ಗಣಿಗಾರಿಕೆ ಮಾಡಲು ಆಯಾ ತಾಲ್ಲೂಕುಗಳಲ್ಲಿ ಬೋವಿ ಸಮುದಾಯದವರಿಗೆ ಗುರುತಿನ ಚೀಟಿ ನೀಡಲು ಅನುಕೂಲ ವಾಗುವಂತೆ ಕಾನೂನು ರೂಪಿಸಬೇಕು ಎಂದು ಕೋರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

’ 31 ಜಡ್‌ಸಿ ಪ್ರಕಾರ ಸಲ್ಲಿಸಿರುವ 1,500 ಅರ್ಜಿದಾರರಿಗೆ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿದರೆ, ಬೋವಿ ಸಮುದಾಯದವರಿಗೆ 1 ಗುಂಟೆಯೂ ಸಿಗುವುದಿಲ್ಲ’ ಎಂದೂ ಪ್ರತಿಪಾದಿಸಿದರು. ಈ ಕುರಿತು, ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಕೂಡ ಇದೇ ಜನವರಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.

ರಾಜಕೀಯ ಪ್ರಾತಿನಿಧ್ಯವೂ ದೂರ

ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 101 ಜಾತಿಗಳ ಜನಸಂಖ್ಯೆಗೆ ಹೋಲಿಸಿದರೆ, ಭೋವಿ ಸಮುದಾಯ ಮೂರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ. ಆದರೆ, ರಾಜಕೀಯ ಪ್ರಾತಿನಿಧ್ಯ ಮಾತ್ರ ನಿಶಾದಾಯಕವಾಗಿದೆ.

ಪ್ರಜಾಪ್ರತಿನಿಧಿ ಸಭೆ, ವಿಧಾನಪರಿಷತ್‌, ರಾಜ್ಯಸಭೆಗೆ ನೇಮಕವಾದವರು, ಲೋಕಸಭೆ ಚುನಾವಣೆಯಲ್ಲಿ ಗೆದ್ದವರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಈಗಿನ ಕಾಂಗ್ರೆಸ್‌ ಸರ್ಕಾರ ಬೋವಿ ಅಭಿವೃದ್ಧಿ ನಿಗಮಕ್ಕೆ ಇನ್ನೂ ಅಧ್ಯಕ್ಷರನ್ನೂ ನೇಮಿಸಿಲ್ಲ.

‘ಬೋವಿ ಸಮುದಾಯಕ್ಕೆ ರಾಜ್ಯದಲ್ಲಿ ನಾಲ್ಕು ದಶಕಕ್ಕೂ ಹೆಚ್ಚು ಕಾಲದಿಂದ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಅಸಮಾಧಾನವೂ ಅರಣ್ಯರೋದನವಾಗಿದೆ.  80ರ ದಶಕದವರೆಗೂ ಸಮುದಾಯದ ಕೆಲವರು ವಿಧಾನ ಪರಿಷತ್‌ ಸೇರಿದಂತೆ ವಿವಿಧ ಸಾಂವಿಧಾನಿಕ ಸ್ಥಾನಗಳನ್ನು ಪಡೆದಿದ್ದರು. ನಂತರ ಆ ಅವಕಾಶ ಒದಗಿ ಬಂದಿಲ್ಲ’ ಎನ್ನುತ್ತಾರೆ ಮುಖಂಡ ಜಿ.ವಿ.ಸೀತಾರಾಂ

ಬ್ಲಾಕ್ ಇಟ್ಟಿಗೆ, ಸಿಮೆಂಟ್ ಕಾಲಂಗಳ ಮಾರಾಟ ಹೆಚ್ಚಿದ್ದರಿಂದ ಶೇ 90ರಷ್ಟು ಉದ್ಯೋಗ ಕುಸಿದಿದೆ. ಕಾನೂನು ತೊಡಕಿರುವುದರಿಂದ ಕುಲಕಸುಬನ್ನು ಬಿಟ್ಟು ಬಹುತೇಕರು ಹೊರರಾಜ್ಯಕ್ಕೆ ಗುಳೆ ಹೋಗುತ್ತಿದ್ದಾರೆ.
ಪರಶುರಾಮ ನಾಲತವಾಡ, ಮುದ್ದೇಬಿಹಾಳದ ಬೋವಿ ಸಮಾಜದ ಮುಖಂಡ
ದೂಳು, ಅವಮಾನದಲ್ಲೇ ನಮ್ಮವರು ದಿನ ದೂಡುತ್ತಿದ್ದಾರೆ. ನಮ್ಮದೆಂಬ ಜಮೀನಿನಲ್ಲಿ ನಿಂತು ಕಲ್ಲು ಗಣಿಗಾರಿಕೆ ಮಾಡುವ ಅವಕಾಶ ಸಿಕ್ಕರೆ ಮಾತ್ರ ಬದುಕು ಬದಲಾಗುತ್ತದೆ.
ಟಿ.ಸಿ.ಗುರಪ್ಪ, ಅಧ್ಯಕ್ಷ, ಭಾರತೀಯ ಬೋವಿ ಓಲ್ಡ್ ಕಮ್ಯುನಿಟಿ ಕೌನ್ಸಿಲ್ ಆಫ್ ಇಂಡಿಯಾ, ಮಂಡ್ಯ ಜಿಲ್ಲಾ ಶಾಖೆ
ಕಲ್ಲು ಒಡೆಯುವುದಕ್ಕೆ ಅನುಮತಿ ನೀಡಿ, ಸರ್ಕಾರಿ ಜಮೀನನ್ನು ಗುತ್ತಿಗೆಗೆ ಕೊಡಬೇಕು ಎಂದು ಕಟ್ಟಡ ಕಾರ್ಮಿಕರ ಸಂಘಟನೆಯ ಮೂಲಕ ಸರ್ಕಾರಕ್ಕೆ ಹಲವು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಹನಮಂತ ಬಂಡಿವಡ್ಡರ್, ಹಿರೇಕೊಡಗಲಿ, ಬಾಗಲಕೋಟೆ ಜಿಲ್ಲೆ
ಗಣಿಗಾರಿಕೆಯ ಕಾನೂನು ಬಿಗಿಗೊಳಿಸಿರುವುದರಿಂದ ಬೋವಿ ಸಮಾಜದವರು ಕಲ್ಲು ಗಣಿಗಾರಿಕೆಯಿಂದ ದೂರ ಸರಿದರು. ಈಗ ಗಾರೆ ಕೆಲಸ ಮಾಡುತ್ತಿದ್ದಾರೆ. ಕೆಲವರು ಕೆಲಸ ಹುಡುಕಿಕೊಂಡು ಗುಳೆ ಹೋಗಿದ್ದಾರೆ.
ಅಶೋಕ ಲಿಂಬಾವಳಿ, ಬಳ್ಳಾರಿ
ಬೋವಿ ಸಮುದಾಯದ ಜನರ ಕುಲಕಸುಬಿಗೆ ಸರ್ಕಾರ ಸೌಲಭ್ಯ ಮತ್ತು ಕಾನೂನುಬದ್ಧವಾಗಿ ಅನುಕೂಲ ಕಲ್ಪಿಸಿದರೆ ಮಾತ್ರ ಏಳಿಗೆ ಸಾಧ್ಯ.
ಎಚ್.ವೈ.ಸಂಕದ, ಗದಗ ಜಿಲ್ಲಾ ಭೋವಿ ಸಮುದಾಯದ ಅಧ್ಯಕ್ಷ

ಪೂರಕ ಮಾಹಿತಿ: ಕೆ.ಓಂಕಾರಮೂರ್ತಿ, ಬಸವರಾಜ ಹವಾಲ್ದಾರ, ಸತೀಶ ಬೆಳ್ಳಕ್ಕಿ, ಹರಿಶಂಕರ್ ಆರ್, ಶಂಕರ ಈ.ಹೆಬ್ಬಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT