ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ಷಿಕ ದಾಖಲೆಯತ್ತ ಸೂಚ್ಯಂಕ!

Last Updated 9 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಕಳೆದ ಶುಕ್ರವಾರದ ಏರಿಳಿತ ಗಮನಿಸಿದರೆ, ಷೇರುಪೇಟೆಯ ವಿಸ್ಮಯಕಾರಿ ಗುಣ ಅರ್ಥವಾಗುತ್ತದೆ. ಇಲ್ಲಿ ಕಲ್ಪಿತ ಸುದ್ದಿ, ಊಹಾಪೋಹಗಳಿಗೆ ಹೆಚ್ಚಿನ ಒತ್ತು ನೀಡಿ ಆ ಸುದ್ದಿಯು ಸತ್ಯ ಘಟನೆಯಾಗಿ ಪರಿವರ್ತನೆಗೊಂಡಾಗ ಅದಕ್ಕೆ ಮನ್ನಣೆ ಇಲ್ಲ. ಗುರುವಾರದ ಅಂತಿಮ ಕ್ಷಣದಲ್ಲಿ ಸೂಚ್ಯಂಕಗಳು ವೇಗವಾದ ಏರಿಕೆ ಪ್ರದರ್ಶಿಸಿದವು.

ಕಾರಣ ರಾಜ್ಯಸಭೆಯಲ್ಲಿ ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳಕ್ಕೆ ಅವಕಾಶ ಕಲ್ಪಿಸುವ ನಿರ್ಧಾರಕ್ಕೆ ಸ್ಪಷ್ಟ ಬೆಂಬಲ ಲಭ್ಯವಾಗುವುದಾಗಿದೆ. ಶುಕ್ರವಾರ ಆರಂಭದಲ್ಲಿ ಏರಿಕೆ ಕಂಡು ಅಂತಿಮ ಕ್ಷಣಗಳಲ್ಲಿ ಅದರಲ್ಲೂ ಈ ನಿರ್ದಾರಕ್ಕೆ ಜಯ ದೊರೆತ ಮೇಲೂ ಮಾರಾಟದ ಒತ್ತಡ ಉಂಟಾಯಿತು. ಇದು ಹೆಚ್ಚಿನ ಲಾಭದ ನಗದೀಕರಣದಿಂದಾಗಿದೆ. ಅತ್ಯಂತ ವೇಗವಾಗಿ ಏರಿಕೆ ಅಥವಾ ಇಳಿಕೆ ಪಡೆದದ್ದು ಸ್ಥಿರತೆ ಕಾಣುವುದಿಲ್ಲ ಎಂಬಂತಾಯಿತು.

ಗುರುವಾರದಂದು ಸಂವೇದಿ ಸೂಚ್ಯಂಕ 19,523 ಅಂಶಗಳನ್ನು ಮಧ್ಯಂತರದಲ್ಲಿ ತಲುಪಿ ವಾರ್ಷಿಕ ಗರಿಷ್ಠದ ದಾಖಲೆ ನಿರ್ಮಿಸಿದರೆ ಶುಕ್ರವಾರ 19,561 ಅಂಶಗಳನ್ನು ಮಧ್ಯಂತರದಲ್ಲಿ ತಲುಪಿ ಹೊಸ ವಾರ್ಷಿಕ ಗರಿಷ್ಠ ದಾಖಲಿಸಿತು. ಅಂತ್ಯದಲ್ಲಿ 19,424 ಅಂಶಗಳಲ್ಲಿದ್ದ ಈ ಸೂಚ್ಯಂಕದ ಪ್ರತಿ ಹೆಜ್ಜೆಯು ವಾರ್ಷಿಕ ದಾಖಲೆಯಾಗುವ ಹಂತದಲ್ಲಿದೆ.

ಕೇವಲ ಸಂವೇದಿ ಸೂಚ್ಯಂಕವನ್ನು ಗಮನಿಸಿದರೆ ವಾರದಲ್ಲಿ ಕೇವಲ 84 ಅಂಶಗಳ ಏರಿಕೆ ಮಾತ್ರ ಕಾಣಬಹುದು. ಆದರೆ ನಿಜವಾದ ಚೇತರಿಕೆಯನ್ನು ಮಧ್ಯಮ ಹಾಗೂ ಕೆಳಮಧ್ಯಮ ಶ್ರೇಣಿ ಸೂಚ್ಯಂಕ ಹಾಗೂ ಬ್ಯಾಂಕೆಕ್ಸ್ ಸೂಚ್ಯಂಕಗಳಲ್ಲಿ ಬಿಂಬಿತವಾಗಿದೆ. ಮಧ್ಯಮ ಶ್ರೇಣಿ ಸೂಚ್ಯಂಕವು 168 ಅಂಶಗಳಷ್ಟು ಹಾಗೂ ಕೆಳಮಧ್ಯಮ ಶ್ರೇಣಿ ಸೂಚ್ಯಂಕವು 170 ಅಂಶಗಳಷ್ಟು  ಏರಿಕೆ ಮತ್ತು ಬ್ಯಾಂಕೆಕ್ಸ್ ಸೂಚ್ಯಂಕವು 231 ಅಂಶಗಳಷ್ಟು ಏರಿಕೆ ಕಂಡಿವೆ.

ಆಟೋ ಇಂಡೆಕ್ಸ್ ಸಹ 121 ಅಂಶಗಳಷ್ಟು ಏರಿಕೆ ಪಡೆದಿದೆ. ಬ್ಯಾಂಕಿಂಗ್ ಮಸೂದೆ ಸಹ ಸೋಮವಾರದಂದು ಮಂಡಿಸಲಾಗುವುದೆಂಬ ಸುದ್ದಿಯು ಗುರುವಾರ ಕೊನೆ ಗಳಿಗೆಯಲ್ಲಿ ಬ್ಯಾಂಕಿಂಗ್ ಷೇರುಗಳ ಏರಿಕೆಗೆ ಕಾರಣವಾಯಿತು. ಕೇಂದ್ರ ಸರ್ಕಾರದ ಚಟುವಟಿಕೆಯು ಸುಧಾರಣೆಗಳತ್ತ ತಿರುಗಿರುವುದು ವಿದೇಶಿ ವಿತ್ತೀಯ ಸಂಸ್ಥೆಗಳಿಂದ ಹಣದ ಒಳಹರಿವಿಗೆ ಕಾರಣವಾಗಿದೆ. ಈ ವಾರದಲ್ಲಿ ಸತತವಾಗಿ ಎಲ್ಲಾ 5 ದಿನ ವಿದೇಶಿ ವಿತ್ತೀಯ ಸಂಸ್ಥೆಗಳು ಹೂಡಿಕೆ ಮಾಡಿ ಒಟ್ಟು ರೂ3,201 ಕೋಟಿ ತೊಡಗಿಸಿವೆ.

ಸ್ಥಳೀಯ ವಿತ್ತೀಯ ಸಂಸ್ಥೆಗಳು ಸತತವಾದ ಮಾರಾಟದಿಂದ ಒಟ್ಟು ರೂ2,871 ಕೋಟಿ ಮೌಲ್ಯ ಹಿಂಪಡೆದಿದೆ. ಪೇಟೆಯ ಬಂಡವಾಳ ಮೌಲ್ಯವು ಹಿಂದಿನ ವಾರದ ರೂ 67.38 ಲಕ್ಷ ಕೋಟಿಯಿಂದ ರೂ68.23 ಲಕ್ಷ ಕೋಟಿಗೆ ಏರಿಕೆಯಾಗಿದೆ. ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್‌ನ ನಿಪ್ಟಿಯು 5,907 ಪಾಯಿಂಟುಗಳಲ್ಲಿ ಸ್ಥಿರತೆ ಕಂಡಿದೆ.

ಲಾಭಾಂಭ ವಿಚಾರ
ಜಿಯೋದಿಸಿಕ್ ಲಿ. ಶೇ 100 (ಮುಖಬೆಲೆ ರೂ2), ಆಮ್‌ಟೆಕ್ ಆಟೋ ಶೇ 25 (ಮು.ಬೆ. ರೂ2), ಎಂಫೆಸಿಸ್ ಶೇ 170, ನೆಸ್ಲೆ ಶೇ 180.

ಬೋನಸ್ ಷೇರಿನ ವಿಚಾರ
ಸುಂದರಂ ಫೈನಾನ್ಸ್ ಲಿ. ಕಂಪೆನಿಯು ವಿತರಿಸಲಿರುವ 1:1ರ ಅನುಪಾತದ ಬೋನಸ್‌ಗೆ 14ನೇ ಡಿಸೆಂಬರ್ ನಿಗದಿತ ದಿನವಾಗಿದೆ.
ಪೆಂಟೂಕಿ ಆರ್ಗನಿ ಲಿ. ಕಂಪೆನಿ ವಿತರಿಸಲಿರುವ 2:3ರ ಅನುಪಾತದ ಬೋನಸ್‌ಗೆ ಡಿಸೆಂಬರ್ 14 ನಿಗದಿತ ದಿನವಾಗಿದೆ.

ಮುಖಬೆಲೆ ಸೀಳಿಕೆ ವಿಚಾರ
ಪ್ರಕಾಶ್ ಕಾನ್ಸ್‌ಟ್ರೂವಲ್ ಲಿ. ಕಂಪೆನಿಯ ಷೇರಿನ ಮುಖಬೆಲೆಯನ್ನು ರೂ10 ರಿಂದ ರೂ1ಕ್ಕೆ ಸೀಳಲು ಡಿಸೆಂಬರ್ 14 ನಿಗದಿತ ದಿನವಾಗಿದೆ.

ಹೊಸ ಷೇರಿನ ವಿಚಾರ
ಕೊಲ್ಕತ್ತಾದ ಶ್ರೀ ಲೆದರ್ಸ್ ಲಿಮಿಟೆಡ್ ಕಂಪೆನಿ ಕಲ್ಕತ್ತಾ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಲಿಸ್ಟಿಂಗ್ ಆಗಿದೆ ಈ ಕಂಪೆನಿಯ ಷೇರುಗಳು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಟಿ. ಗುಂಪಿನಲ್ಲಿ 5 ರಿಂದ ವಹಿವಾಟು ನಡೆಸಲು ಅನುಮತಿಸಲಾಗಿದೆ.

ಇತ್ತೀಚೆಗೆ ಪ್ರತಿ ಷೇರಿಗೆ ರೂ 230 ರಂತೆ ಸಾರ್ವಜನಿಕ ಷೇರು ವಿತರಣೆ ಮಾಡಿದ ತಾರಾ ಜುವೆಲ್ಸ್ ಲಿ. 6 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದ್ದು, ರೂ218.70 ರಲ್ಲಿ ವಾರಾಂತ್ಯ ಕಂಡಿದೆ.

 ಸಿಗ್ನಿಟಿ ಟೆಕ್ನಾಲಜೀಸ್ ಲಿ. ಕಂಪೆನಿಯು ಹೈದರಾಬಾದ್‌ನಲ್ಲಿದ್ದು ಬೆಂಗಳೂರು ಸ್ಟಾಕ್ ಎಕ್ಸ್‌ಚೇಂಜ್ ಹಾಗೂ ಮದ್ರಾಸ್ ಸ್ಟಾಕ್ ಎಕ್ಸ್‌ಚೇಂಜ್‌ಗಳಲ್ಲಿ ಲೀಸ್ಟಿಂಗ್ ಆಗಿದೆ. ಈ ಕಂಪೆನಿಯು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಟಿ ಗುಂಪಿನಲ್ಲಿ 10 ರಿಂದ ವಹಿವಾಟು ನಡೆಸಲು ಅನುಮತಿಸಲಾಗಿದೆ.

 ಅಲ್ಲಾಟ್‌ಮೆಂಟ್
ಕ್ರೆಡಿಟ್ ಅನಾಲಿಸಿಸ್ ರಿಸರ್ಚ್ ಲಿ. ಕಂಪೆನಿಯು ಆರಂಭಿಕ ಷೇರು ವಿತರಣೆಗೆ ಮುಂಚೆ ಆಂಕರ್ ಇನ್ವೆಸ್ಟರ್ಸ್‌ಗೆ ಪ್ರತಿ ಷೇರಿಗೆ ರೂ750 ರಂತೆ 10,79,954 ಷೇರನ್ನು ಅಲ್ಲಾಟ್ ಮಾಡಿದೆ. ಇದರಲ್ಲಿ ಗೋಲ್ಡ್‌ಮನ್ ಸ್ಯಾಕ್ಸ್, ಈಸ್ಟ್‌ಸ್ಟ್ರಿಂಗ್ಸ್ ಇನ್ವೆಸ್ಟ್‌ಮೆಂಟ್ಸ್ - ಇಂಡಿಯಾ ಈಕ್ವಿಟಿ ಫಂಡ್, ಡಿ ಬಿ ಇಂಟರ್‌ನ್ಯಾಶನಲ್ (ಏಶಿಯಾ), ವೆಲ್ಲಿಂಗ್‌ಟನ್ ಮ್ಯಾನೇಜ್‌ಮೆಂಟ್ ಕಂಪೆನಿಗಳಿಗೆ ತಲಾ ಒಂದು ಲಕ್ಷ ಷೇರು, ಮಾರಿಷಸ್‌ನ ಸೆಂಚುರಾ ಇನ್ವೆಸ್ಟ್‌ಮೆಂಟ್ಸ್‌ಗೆ 1,86,200 ಷೇರನ್ನು ವಿತರಿಸಿದೆ.

ಉಳಿದಂತೆ ಟಾಟಾ ಎಐಜಿ ಲೈಪ್, ಬಿರ್ಲಾಸಸ್ ಲೈಫ್, ಸುಂದರಂ ಮ್ಯೂಚುವಲ್ ಫಂಡ್, ರಿಲೈಯನ್ಸ್ ಕ್ಯಾಪಿಟಲ್ ಟ್ರಸ್ಟೀ ಕಂ. ಪ್ರಾಂಕಲಿನ್ ಟೆಂಪಾಲ್‌ಟನ್, ಎಚ್.ಡಿ.ಎಫ್.ಸಿ. ಟ್ರಸ್ಟೀ ಕಂಪೆನಿಗಳಿಗೂ ಈ ಯೋಜನೆಯಡಿ ಷೇರು ವಿತರಿಸಲಾಗಿದೆ.

ತೆರೆದ ಕರೆ
ಗ್ಲಾಕ್ಸೊ ಸ್ಮಿತ್ ಕ್ಲೈಸ್ ಕನ್ಸೂಮರ್ಸ್ ಹೆಲ್ತ್ ಕೇರ್ ಲಿ. ಕಂಪೆನಿಯ ಪ್ರವರ್ತಕರಿಂದ ಯು.ಕೆ.ಯ ಗ್ಲಾಕ್ಸೊ ಸ್ಮಿತ್ ಕ್ಲೈನ್ ಸಂಸ್ಥೆಯು ಶೇ 31.8 ರಷ್ಟು ಭಾಗಿತ್ವದ ಅಂದರೆ 1,33,89,410 ಷೇರುಗಳನ್ನು ಸಾರ್ವಜನಿಕರಿಂದ ಕೊಳ್ಳಲು ತೆರೆದ ಕರೆ ನೀಡಲಿದೆ. ಈ ತೆರೆದ ಕರೆಯು, ಪ್ರತಿ ಷೇರಿಗೆ ರೂ3900 ರಂತೆ ನೀಡಲಾಗುವುದು.

ಜನವರಿ 17 ರಿಂದ 30ರ ವರೆಗೂ ತೆರೆದಿರುತ್ತದೆ. ಈ ಕಾರಣದಿಂದಾಗಿ ಕಂಪೆನಿಯು ರೂ 5220 ಕೋಟಿ ಹಣ ವಿನಿಯೋಗಿಸಲಿದೆ. ಕಳೆದ ಡಿಸೆಂಬರ್ ಅಂತ್ಯದಲ್ಲಿ ಭಾರತದ ಕಂಪೆನಿಯು ರೂ2,800 ಕೋಟಿ ವಹಿವಾಟು ನಡೆಸಿತ್ತು.

ವಾರದ ಪ್ರಶ್ನೆ
ಇತ್ತೀಚೆಗೆ ಹೊಸದಾಗಿ ಪೇಟೆ ಪ್ರವೇಶಿಸಿದ ಕಂಪೆನಿಗಳಲ್ಲಿ ಈ ಹಿಂದೆ ಇದ್ದಂತಹ ವಾಲ್ಯೂಂ ಆಗಲಿ ಅಥವಾ ಏರುಪೇರಾಗಲಿ ಕಾಣುತ್ತಿಲ್ಲ. ಕಾರಣವೇನು?

ಉತ್ತರ: ಈ ಹಿಂದೆ ಅಂದರೆ 2011 ರಲ್ಲಿ ಬಂದಂತಹ ಆರಂಭಿಕ ಷೇರು ವಿತರಣೆಗಳಲ್ಲಿ ಅತೀವ ಸಟ್ಟಾ ವ್ಯಾಪಾರ ಪ್ರದರ್ಶಿತವಾಗಿ ಹೂಡಿಕೆದಾರರು ವಿಶೇಷವಾಗಿ ಸಣ್ಣ ಹೂಡಿಕೆದಾರರು ಅಪಾರವಾದ ಹಾನಿ ಅನುಭವಿಸಿದ್ದಾರೆ. ಎಸ್.ಕೆ.ಎಸ್. ಮೈಕ್ರೊ ಫೈನಾನ್ಸ್ ಕಂಪೆನಿ ಆರಂಭದಲ್ಲಿ ವಿತರಣೆ ಬೆಲೆ  ರೂ 985ಕ್ಕೂ ಹೆಚ್ಚಿನ ಬೆಲೆಯಲ್ಲಿ ವಹಿವಾಟಾಗಿ ನಂತರದಲ್ಲಿ ಷೇರಿನ ಬೆಲೆ ಎರಡಂಕಿಗೆ ಕುಸಿದಿತ್ತು.

ಅಂತಯೇ ರಾಂಕಿ ಇನ್‌ಫ್ರಾಸ್ಟ್ರಕ್ಚರ್, ಕ್ಯಾಂಟಿಬಿಲ್ ರೀಟೇಲ್, ತಿರುಪತಿ ಇಂಕ್ಸ್, ಮೈಕ್ರೊಸೆಕ್ ಫೈನಾನ್ಶಿಯಲ್ಸ್, ಮಿಡ್ ಫೀಲ್ಡ್ ಇಂಡಸ್ಟ್ರೀಸ್‌ಗಳಲ್ಲದೆ ಸಾರ್ವಜನಿಕ ವಲಯದ ಶಿಫ್ಟಿಂಗ್ ಕಾರ್ಪೊರೇಷನ್, ಎನ್‌ಹೆಪಿಸ್, ಎಸ್.ಜೆ.ವಿ.ಎನ್.ಎಲ್.ಗಳು ಹೂಡಿಕೆದಾರರ ಹಣವನ್ನು ಕರಗಿಸಿವೆ.

 ಬ್ರೂಕ್ಸ್ ಲ್ಯಾಬ್ ಕಂಪೆನಿಯು ವಿತರಿಸಿದ ಬೆಲೆ  ರೂ100 ಆದರೆ ಕೆಲವೇ ದಿನಗಳಲ್ಲಿ ಅದರ ಬೆಲೆಯು ರೂ12ರ ಸಮೀಪಕ್ಕೆ ಕುಸಿದು ಈಗಲೂ ರೂ. 22ರ ಸಮೀಪವಿದೆ. ಹಾಗೆಯೇ ತಕ್ಷೀಲ್ ಸೊಲುಷನ್ಸ್ ಕಂಪೆನಿಯ ವಿತರಣೆ ಬೆಲೆ ಪ್ರರಿ ಷೇರಿಗೆ   ರೂ 150. ಆದರೆ ಬೆಲೆಯು ಕೇವಲ ರೂ9.74ಕ್ಕೆ ಕುಸಿದಿದ್ದನ್ನು ಕಂಡರೆ ಚಟುವಟಿಕೆಯ ಪರಿ ಅರಿವಾಗುವುದನ್ನು ಇಂತಹ ಅಸ್ವಾಭಾವಿಕ ಏರಿಳಿತಗಳಿಗೆ ಹೂಡಿಕೆದಾರರು ಬಲಿಯಾಗುವುದನ್ನು ತಡೆಯಲು ಪ್ರತಿಯೊಂದು ಹೊಸ ಲೀಸ್ಟಿಂಗ್ ಕಂಪೆನಿಯನ್ನು ಟಿ ಗುಂಪಿನಲ್ಲಿ ಬಿಡುಗಡೆ ಮಾಡುವರು.

ಇಲ್ಲಿ ಕೊಂಡರೆ ಹಣ ತೆರಬೇಕು, ಮಾರಾಟ ಮಾಡಿದರೆ ಷೇರು ನೀಡಲೇ ಬೇಕಾಗಿರುವುದರಿಂದ ಸಟ್ಟಾ ವ್ಯಾಪಾರಕ್ಕೆ ಕಡಿವಾಣ ಬಿದ್ದು, ಸಹಜ ಮಾಲ್ಯಾನ್ವೇಷಣೆಗೆ ದಾರಿ ಮಾಡಿಕೊಟ್ಟಂತಾಗುವುದು. 15 ದಿನದ ನಂತರ ಈ ಹೊಸ ಕಂಪೆನಿಯನ್ನು ಬಿ ಗುಂಪಿಗೆ ವರ್ಗಾಯಿಸಿ ವಹಿವಾಟು ಸುಸೂತ್ರವಾಗುವಂತೆ ಅವಕಾಶ ಕಲ್ಪಿಸಲಾಗಿದೆ. ಇದು ಹೂಡಿಕೆದಾರ ಸ್ನೇಹಿ ಬೆಳವಣಿಗೆಯಾಗಿದ್ದು ಉತ್ತಮವಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT