ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 WC: ವೇಗಿ ಎನ್ರಿಚ್ ದಾಳಿಗೆ ಪರದಾಡಿದ ಲಂಕಾ; ದಕ್ಷಿಣ ಆಫ್ರಿಕಾ ತಂಡದ ಶುಭಾರಂಭ

Published 3 ಜೂನ್ 2024, 14:36 IST
Last Updated 3 ಜೂನ್ 2024, 16:29 IST
ಅಕ್ಷರ ಗಾತ್ರ

ನ್ಯೂಯಾರ್ಕ್: ವೇಗಿ ಎನ್ರಿಚ್ ನಾಕಿಯ ಅವರ ಅಮೋಘ ದಾಳಿಯ ಬಲದಿಂದ ದಕ್ಷಿಣ ಆಫ್ರಿಕಾ ತಂಡವು ಸೋಮವಾರ ಇಲ್ಲಿ ನಡೆದ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ನಾಸೌ ಕೌಂಟಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಡಿ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

ಆದರೆ ನಾಯಕ ವನಿಂದು ಹಸರಂಗಾ ಅವರ ಲೆಕ್ಕಾಚಾರ ತಲೆಕೆಳಗಾಯಿತು. ದಕ್ಷಿಣ ಆಫ್ರಿಕಾ ತಂಡದ ನಾಕಿಯಾ (7ಕ್ಕೆ4) ದಾಳಿಯ ಮುಂದೆ ಶ್ರೀಲಂಕಾ 19.1 ಓವರ್‌ಗಳಲ್ಲಿ 77 ರನ್ ಗಳಿಸಿ ಆಲೌಟ್ ಆಯಿತು.

ಗುರಿ ಬೆನ್ನಟ್ಟಿದ್ದ ದಕ್ಷಿಣ ಆಫ್ರಿಕಾ ತಂಡವು 16.2 ಓವರ್‌ಗಳಲ್ಲಿ 4 ವಿಕೆಟ್‌ಗೆ 80 ರನ್ ಗಳಿಸಿತು. ಆರು ವಿಕೆಟ್‌ಗಳಿಂದ ಜಯಿಸಿತು. 

ಅಲ್ಪಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು ಸುಲಭವಾಗಿ ಜಯಿಸಲು ಸಾಧ್ಯವಾಗಲಿಲ್ಲ. ಶ್ರೀಲಂಕಾದ ಬೌಲರ್‌ಗಳು ಸವಾಲೊಡ್ಡಿದರು.

ರೀಜಾ ಹೆಂಡ್ರಿಕ್ಸ್ (4), ಏಡನ್‌ ಮರ್ಕರಂ (12) ಮತ್ತು ಟ್ರಿಸ್ಟನ್ ಸ್ಟಬ್ಸ್‌ (13) ನಿರಾಸೆ ಮೂಡಿಸಿದರು.

ಆರಂಭಿಕ ಆಟಗಾರ ಕ್ವಿಂಟ್‌ನ ಡಿಕಾಕ್ (20, 27ಎ) ಹಾಗೂ ಮಧ್ಯಮ ಕ್ರಮಾಂಕದ ಹೆನ್ರಿಚ್‌ ಕ್ಲಾಸೆನ್ (ಅಜೇಯ 19, 22) ಅವರು ತಾಳ್ಮೆಯ ಆಟವಾಡಿ ಗೆಲುವಿಗೆ ಕಾಣಿಕೆ ನೀಡಿದರು. 

ಲಂಕಾ ಬ್ಯಾಟಿಂಗ್ ವೈಫಲ್ಯ: ಇನಿಂಗ್ಸ್‌ ಆರಂಭಿಸಿದ ಲಂಕಾ ಬ್ಯಾಟಿಂಗ್ ಪಡೆ ಎಡವಿತು.

 ನಾಲ್ಕನೇ ಓವರ್‌ನಲ್ಲಿ ಒಟನೀಲ್ ಬಾರ್ತ್‌ಮನ್ ಅವರ ದಾಳಿಯಲ್ಲಿ ಪಥುಮ ಸಿಸಾಂಕಾ (3 ರನ್) ಔಟಾದರು.

ಈ ಹಂತದಲ್ಲಿ ಕುಶಾಲ ಮೆಂಡಿಸ್ (19 ರನ್) ಮತ್ತು ಕಮಿಂದು ಮೆಂಡಿಸ್ (11 ರನ್) ಜೊತೆಗೂಡಿ ಬಲ ತುಂಬುವ ಪ್ರಯತ್ನ ಮಾಡಿದರು.

ಆದರೆ ಎಂಟನೇ ಓವರ್‌ನಲ್ಲಿ ಕಮಿಂದು ವಿಕೆಟ್ ಕಬಳಿಸಿದ ನಾಕಿಯಾ ಪೆಟ್ಟುಕೊಟ್ಟರು. ಇನ್ನೊಂದು ಬದಿಯಿಂದ ವೇಗಿ ಕಗಿಸೊ ರಬಾಡ ಕೂಡ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಮೇಲೆ ಒತ್ತಡ ಹೇರಿದರು.

ಶ್ರೀಲಂಕಾ ನಾಯಕ ಹಸರಂಗಾ ಮತ್ತು ಸಮರವಿಕ್ರಮ ಅವರಿಬ್ಬರ ವಿಕೆಟ್‌ಗಳನ್ನೂ ಸ್ಪಿನ್ನರ್ ಕೇಶವ್ ಮಹಾರಾಜ್ ಗಳಿಸಿದರು. ‌

ಇಬ್ಬರೂ ಬ್ಯಾಟರ್‌ಗಳಿಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಇದು ತಂಡಕ್ಕೆ ಬಹಳ ದೊಡ್ಡ ಹಿನ್ನಡೆಯಾಯಿತು.  

ತಂಡದ ಮೊತ್ತ ಹೆಚ್ಚಿಸುವ ಪ್ರಯತ್ನ ಮಾಡಿದ ಅನುಭವಿ ಆಟಗಾರ ಏಂಜೆಲೊ ಮ್ಯಾಥ್ಯೂಸ್ ಹಾಗೂ ಅಸಲಂಕಾ ಅವರ ವಿಕೆಟ್‌ಗಳನ್ನೂ ನಾಕಿಯ ಗಳಿಸಿದರು. ಇದರಿಂದಾಗಿ ತಂಡದ ಮೊತ್ತವು ಮೂರಂಕಿ ಮುಟ್ಟಲಿಲ್ಲ. 

ಕುಶಾಲ, ಕಮಿಂದು ಮತ್ತು ಮ್ಯಾಥ್ಯೂಸ್ ಅವರು ಮಾತ್ರ ಎರಡಂಕಿ ಸ್ಕೋರ್ ಗಳಿಸಿದ ಬ್ಯಾಟರ್‌ಗಳು. ‌

ಲಂಕಾ ಇನಿಂಗ್ಸ್‌ನಲ್ಲಿ ಮೂರು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ದಾಖಲಾದವು. 

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 19.1 ಓವರ್‌ಗಳಲ್ಲಿ 77 (ಕುಶಾಲ ಮೆಂಡಿಸ್ 19, ಕಮಿಂದು ಮೆಂಡಿಸ್ 11, ಏಂಜೆಲೊ ಮ್ಯಾಥ್ಯೂಸ್ 16, ಕಗಿಸೊ ರಬಾಡ 21ಕ್ಕೆ2, ಕೇಶವ್ ಮಹಾರಾಜ 22ಕ್ಕೆ2, ಎನ್ರಿಚ್ ನಾಕಿಯಾ 7ಕ್ಕೆ4) 

ದಕ್ಷಿಣ ಆಫ್ರಿಕಾ: 16.2 ಓವರ್‌ಗಳಲ್ಲಿ 4 ವಿಕೆಟ್‌ಗೆ 80 (ಕ್ವಿಂಟನ್ ಡಿಕಾಕ್ 20, ಟ್ರಿಸ್ಟನ್ ಸ್ಟಬ್ಸ್‌ 13, ಹೆನ್ರಿಚ್ ಕ್ಲಾಸೆನ್ ಅಜೇಯ 19, ವನಿಂದು ಹಸರಂಗಾ 22ಕ್ಕೆ2, ದಾಸುನ್ ಶನಕಾ 6ಕ್ಕೆ1).

ಪಂದ್ಯ ಶ್ರೇಷ್ಠ: ಎನ್ರಿಚ್ ನಾಕಿಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT