ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Share Market | ಸೆನ್ಸೆಕ್ಸ್‌ 732 ಅಂಶ ಕುಸಿತ

ಹೂಡಿಕೆದಾರರಿಗೆ ₹2.25 ಲಕ್ಷ ಕೋಟಿ ಸಂಪತ್ತು ನಷ್ಟ
Published 3 ಮೇ 2024, 15:35 IST
Last Updated 3 ಮೇ 2024, 15:35 IST
ಅಕ್ಷರ ಗಾತ್ರ

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್‌, ಎಲ್‌ ಆ್ಯಂಡ್‌ ಟಿ, ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಶುಕ್ರವಾರ ಷೇರು ಸೂಚ್ಯಂಕಗಳು ಇಳಿಕೆ ಕಂಡಿವೆ.  

ಒಂದೇ ದಿನ ಹೂಡಿಕೆದಾರರ ಸಂಪತ್ತು ₹2.25 ಲಕ್ಷ ಕೋಟಿ ಕರಗಿದೆ. 

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 732 ಅಂಶ (ಶೇ 0.98ರಷ್ಟು) ಕುಸಿತ ಕಂಡು 73,878 ಅಂಶಗಳಲ್ಲಿ ವಹಿವಾಟನ್ನು ಮುಕ್ತಾಯಗೊಳಿಸಿತು. ದಿನದ ಆರಂಭಿಕ ವಹಿವಾಟಿನಲ್ಲಿ 484 ಅಂಶ ಏರಿಕೆ ಕಂಡಿತ್ತು. 

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 172 ಅಂಶ ಇಳಿಕೆ ಕಂಡು (ಶೇ 0.76ರಷ್ಟು) 22,475 ಅಂಶಗಳಲ್ಲಿ ಸ್ಥಿರಗೊಂಡಿತು. ಬೆಳಿಗ್ಗಿನ ವಹಿವಾಟಿನಲ್ಲಿ 146 ಅಂಶ ಏರಿಕೆ ಕಂಡು ಗರಿಷ್ಠ ಮಟ್ಟವಾದ 22,794 ಅಂಶಕ್ಕೆ ತಲುಪಿತ್ತು. 

‘ಅಮೆರಿಕದ ಫೆಡರಲ್‌ ರಿಸರ್ವ್‌ನ ಬಡ್ಡಿದರ ಕಡಿತ ಅನಿಶ್ಚಿತತೆಯಿಂದ ಕೂಡಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟು ಇನ್ನೂ ಶಮನಗೊಂಡಿಲ್ಲ. ವಿದೇಶಿ ಹೂಡಿಕೆದಾರರು ಬಂಡವಾಳದ ಹಿಂತೆಗೆತಕ್ಕೆ ಮುಂದಾಗಿದ್ದರಿಂದ ದೇಶದ ಷೇರುಪೇಟೆಗಳು ಕುಸಿತ ಕಂಡಿವೆ’ ಎಂದು ಮೆಹ್ತಾ ಸೆಕ್ಯುರಿಟೀಸ್‌ನ ಉಪಾಧ್ಯಕ್ಷ (ಸಂಶೋಧನೆ) ಪ್ರಶಾಂತ್‌ ತಾಪ್ಸೆ ಹೇಳಿದ್ದಾರೆ.

ಹೂಡಿಕೆದಾರರು ಲಾಭ ಗಳಿಕೆಗಾಗಿ ಷೇರುಗಳ ಮಾರಾಟಕ್ಕೆ ಮುಂದಾಗಿದ್ದಾರೆ. ಅಲ್ಲದೆ, ಅಮೆರಿಕದ ಕಾರ್ಮಿಕ ಇಲಾಖೆ ಪ್ರಕಟಿಸಲಿರುವ ಉದ್ಯೋಗ ದರ ವರದಿಯು ಷೇರುಪೇಟೆಗಳ ಮೇಲೆ ಪರಿಣಾಮ ಬೀರಿದೆ. ಕೊನೆಯ ತ್ರೈಮಾಸಿಕದಲ್ಲಿ ಹಲವು ಕಂಪನಿಗಳು ನಿರೀಕ್ಷಿತ ಮಟ್ಟದಲ್ಲಿ ನಿವ್ವಳ ಲಾಭ ಗಳಿಕೆಯಲ್ಲಿ ವಿಫಲವಾಗಿವೆ. ಇದು ಕೂಡ ಸೂಚ್ಯಂಕಗಳು ಇಳಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. 

ಸೆನ್ಸೆಕ್ಸ್ ಗುಚ್ಛದಲ್ಲಿನ ಎಲ್‌ ಆ್ಯಂಡ್‌ ಟಿ, ಮಾರುತಿ ಸುಜುಕಿ, ರಿಲಯನ್ಸ್ ಇಂಡಸ್ಟ್ರೀಸ್‌, ನೆಸ್ಲೆ ಇಂಡಿಯಾ, ಭಾರ್ತಿ ಏರ್‌ಟೆಲ್‌, ಅಲ್ಟ್ರಾಟೆಕ್‌ ಸಿಮೆಂಟ್‌, ಕೋಟಕ್‌ ಮಹೀಂದ್ರ ಬ್ಯಾಂಕ್‌, ಜೆಎಸ್‌ಡಬ್ಲ್ಯು ಸ್ಟೀಲ್‌ ಷೇರುಗಳು ಕುಸಿತ ಕಂಡಿವೆ. ‌

ಬಜಾಜ್‌ ಫಿನ್‌ಸರ್ವ್‌, ಮಹೀಂದ್ರ ಆ್ಯಂಡ್‌ ಮಹೀಂದ್ರ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಐಸಿಐಸಿಐ ಬ್ಯಾಂಕ್‌, ಇನ್ಫೊಸಿಸ್ ಷೇರುಗಳು ಗಳಿಕೆ ಕಂಡಿವೆ.

ಟೆಲಿಕಮ್ಯೂನಿಕೇಷನ್‌ ಸೂಚ್ಯಂಕ ಶೇ 1.42, ರಿಯಾಲ್ಟಿ ಸೂಚ್ಯಂಕ ಶೇ 1.09, ಸೇವಾ ಸೂಚ್ಯಂಕ ಶೇ 1.01, ಟೆಕ್‌ ಸೂಚ್ಯಂಕ ಶೇ 0.96, ಐಟಿ ಸೂಚ್ಯಂಕ ಶೇ 0.64 ಹಾಗೂ ಸರಕು ಸೂಚ್ಯಂಕ ಶೇ 0.29ರಷ್ಟು ಕುಸಿದಿವೆ.

ಬ್ರೆಂಟ್‌ ಕಚ್ಚಾ ತೈಲದ ದರ ಶೇ 0.06ರಷ್ಟು ಇಳಿಕೆಯಾಗಿದ್ದು, ಪ್ರತಿ ಬ್ಯಾರಲ್‌ಗೆ 83.62 ಡಾಲರ್‌ ಆಗಿದೆ.

ಬಜಾಜ್‌ ಫೈನಾನ್ಸ್‌ ಷೇರು ಏರಿಕೆ:

ಕಳೆದ ವರ್ಷದ ನವೆಂಬರ್‌ನಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಬಜಾಜ್‌ ಫೈನಾನ್ಸ್‌ನ ಇ–ಕಾಮ್‌ ಮತ್ತು ಇನ್‌ಸ್ಟಾ ಇಎಂಐ ಕಾರ್ಡ್‌ ಮೇಲೆ ನಿರ್ಬಂಧ ವಿಧಿಸಿತ್ತು. 

ಈ ಆನ್‌ಲೈನ್‌ ಡಿಜಿಟಲ್‌ ವೇದಿಕೆಗಳ ಮೂಲಕ ಸಾಲ ವಿತರಿಸದಂತೆ ಸೂಚಿಸಿತ್ತು. ಸದ್ಯ ಈ ನಿರ್ಬಂಧವನ್ನು ತೆರವುಗೊಳಿಸಿದೆ. ಹಾಗಾಗಿ, ಕಂಪನಿಯ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT