₹ ಬೆಲೆ ಸಾರ್ವಕಾಲಿಕ ಕುಸಿತ

7
ಟರ್ಕಿಯ ಕರೆನ್ಸಿ ಮೌಲ್ಯ ಇಳಿಕೆಯಿಂದಾಗಿ ಪರಿಣಾಮ

₹ ಬೆಲೆ ಸಾರ್ವಕಾಲಿಕ ಕುಸಿತ

Published:
Updated:
Deccan Herald

ಮುಂಬೈ : ಇಲ್ಲಿಯ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ, ಅಮೆರಿಕದ ಡಾಲರ್‌ ಎದುರು ರೂಪಾಯಿ ಬೆಲೆಯು ಸೋಮವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಕುಸಿದಿದೆ.

ಟರ್ಕಿಯ ಹಣಕಾಸು ಬಿಕ್ಕಟ್ಟು ಜಾಗತಿಕ ಆರ್ಥಿಕತೆಯನ್ನು ಆವರಿಸಿಕೊಳ್ಳಲಿದೆ ಎನ್ನುವ ಆತಂಕವು, ವಿಶ್ವದ ಇತರ ಕರೆನ್ಸಿಗಳ ವಿನಿಮಯ ದರವು ಗಮನಾರ್ಹ ಕುಸಿತ ಕಾಣಲು ಕಾರಣವಾಗಿದೆ. ಹೂಡಿಕೆದಾರರು ಡಾಲರ್‌ ಬೆಂಬಲಿತ ಸಂಪತ್ತಿನಲ್ಲಿ ಹೂಡಿಕೆ ಮಾಡಲು ಒಲವು ತೋರುತ್ತಿದ್ದಾರೆ. 

ಟರ್ಕಿ ಕರೆನ್ಸಿ ಕುಸಿತ: ಟರ್ಕಿಯ ಕರೆನ್ಸಿ ‘ಲಿರಾ’ ಶೇ 8ರಷ್ಟು ಕುಸಿತ ಕಂಡ ನಂತರ ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ಮಾರಾಟ ಒತ್ತಡ ಕಂಡು ಬಂದಿತು.  ರೂಪಾಯಿ ಬೆಲೆ ಕುಸಿತಕ್ಕೂ ಈ ವಿದ್ಯಮಾನವೇ ಪ್ರಮುಖ ಕಾರಣವಾಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆ ಹರಿವಿನ ಕೊರತೆ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯು ಕೂಡ ರೂಪಾಯಿ ಬೆಲೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ ಎಂದು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಅಧಿಕಾರಿಯೊಬ್ಬರು ವಿಶ್ಲೇಷಿಸಿದ್ದಾರೆ.

ರೂಪಾಯಿ ದರ ಈ ಪ್ರಮಾಣದ ಭಾರಿ ಕುಸಿತಕ್ಕೆ ಒಳಗಾಗಿರುವುದು ಭಾರತೀಯ ರಿಸರ್ವ್‌ ಬ್ಯಾಂಕ್‌ ಪಾಲಿಗೂ ಅಹಿತಕರ ವಿದ್ಯಮಾನವಾಗಿದೆ. ಈ ಕುಸಿತ ಪ್ರತಿ ಡಾಲರ್‌ಗೆ ₹ 70ರವರೆಗೂ ಹೋಗಲಿದೆ ಎಂದು ಅಂದಾಜಿಸಲಾಗಿದೆ. ಆರ್‌ಬಿಐ ನಿರ್ದೇಶನದಂತೆ, ಕೆಲ ಬ್ಯಾಂಕ್‌ಗಳು ಡಾಲರ್‌ ಮಾರಾಟ ಮಾಡಿ, ರೂಪಾಯಿ ಕುಸಿತ ತಡೆಗಟ್ಟಲು ಪ್ರಯತ್ನಿಸಿದವು.

ದಿನದ ವಹಿವಾಟಿನ ಆರಂಭದಲ್ಲಿ 41 ಪೈಸೆಗಳಷ್ಟು (68.42) ಏರಿಕೆ ಕಂಡಿದ್ದ ರೂಪಾಯಿ ಬೆಲೆ, ಜಾಗತಿಕ ಮಾರುಕಟ್ಟೆಯಲ್ಲಿನ ಹಠಾತ್‌ ಕುಸಿತದ ಕಾರಣಕ್ಕೆ ಇಳಿಕೆ ದಾಖಲಿಸಿತು. ಆರ್‌ಬಿಐ ಮಧ್ಯಪ್ರವೇಶದಿಂದ ಭಾರಿ ನಷ್ಟದಿಂದ ಚೇತರಿಕೆ ಕಂಡಿತು. ಆದರೆ, ಡಾಲರ್‌ಗೆ ಕಂಡು ಬಂದ ಭಾರಿ ಬೇಡಿಕೆ ಫಲವಾಗಿ ದಿನದ ಅಂತ್ಯಕ್ಕೆ 69.93ಕ್ಕೆ ಕುಸಿಯಿತು. ಐದು ವರ್ಷಗಳಲ್ಲಿ ದಿನದ ಗರಿಷ್ಠ ಕುಸಿತ ಇದಾಗಿದೆ. ಹಿಂದಿನ ದರಕ್ಕೆ ಹೋಲಿಸಿದರೆ ಈ ಕುಸಿತವು ₹ 1.10 ಅಥವಾ ಶೇ 1.57ರಷ್ಟಿತ್ತು.

ವ್ಯತಿರಿಕ್ತ ಪರಿಣಾಮ

ರೂಪಾಯಿ ಬೆಲೆ ಕುಸಿತವು ಇದೇ ರೀತಿ ಮುಂದುವರಿದರೆ ಅದು ದೇಶಿ ಆರ್ಥಿಕತೆ ಮೇಲೆ ಹಲವಾರು ಬಗೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಲಿದೆ.

ಕಚ್ಚಾ ತೈಲ ಆಮದು ವೆಚ್ಚ ಮತ್ತು ಚಾಲ್ತಿ ಖಾತೆ ಕೊರತೆ ಹೆಚ್ಚಿಸಲಿದೆ. ಹಣದುಬ್ಬರ ಏರಿಕೆಗೆ ಪುಷ್ಟಿ ನೀಡಲಿದೆ. ಉದ್ದಿಮೆ ಸಂಸ್ಥೆಗಳ ಲಾಭದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಷೇರುಪೇಟೆಯಲ್ಲಿನ ವಿದೇಶಿ ಹೂಡಿಕೆ ತಗ್ಗಿಸಲಿದೆ. ಆಮದುದಾರರು ಮತ್ತು ತೈಲ ಮಾರಾಟ ಸಂಸ್ಥೆಗಳಿಗೆ ನಷ್ಟ ಉಂಟಾಗಲಿದೆ. ರಫ್ತು ವಹಿವಾಟನ್ನು ಹೆಚ್ಚಿಸಲಿದೆ. ಆದರೆ, ಸದ್ಯದ ಜಾಗತಿಕ ಹಣಕಾಸು ಪರಿಸ್ಥಿತಿಯಲ್ಲಿ ಅಂತಹದನ್ನು ನಿರೀಕ್ಷಿಸುವಂತಿಲ್ಲ.

 

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 3

  Sad
 • 1

  Frustrated
 • 1

  Angry

Comments:

0 comments

Write the first review for this !