ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡಿಪಿ: 3ವರ್ಷದಲ್ಲಿ ಶೇ8ರಷ್ಟು ವೃದ್ಧಿ

ನೀತಿ ಆಯೋಗದ ಕರಡು ಕಾರ್ಯಸೂಚಿ
Last Updated 28 ಏಪ್ರಿಲ್ 2017, 19:37 IST
ಅಕ್ಷರ ಗಾತ್ರ

ನವದೆಹಲಿ: ಎರಡರಿಂದ ಮೂರು ವರ್ಷಗಳಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಶೇ 8 ಕ್ಕಿಂತಲೂ ಹೆಚ್ಚಿನ ಪ್ರಗತಿ ಕಾಣಲಿದೆ ಎಂದು ನೀತಿ ಆಯೋಗ ವಿಶ್ವಾಸ ವ್ಯಕ್ತಪಡಿಸಿದೆ. ಮುಂದಿನ 10 ವರ್ಷಗಳಲ್ಲಿ ಬಡತನ ಪ್ರಮಾಣ ಗಣನೀಯವಾಗಿ ತಗ್ಗಲಿದೆ ಎಂದೂ ಆಯೋಗವು ಅಂದಾಜಿಸಿದೆ.

ದೇಶದ ಆರ್ಥಿಕ ಪ್ರಗತಿಗೆ ಸಂಬಂಧಿಸಿದಂತೆ 208 ಪುಟಗಳ ಕರಡು ಕಾರ್ಯಸೂಚಿ ಸಿದ್ಧಪಡಿಸಿದ್ದು,  ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡಲಾಗಿದೆ.

ದೇಶದ ಸರ್ವತೋಮುಖ ಬೆಳವಣಿಗೆಗೆ ತೆರಿಗೆ, ಕೃಷಿ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆಯ ಅಗತ್ಯವಿದೆ ಎಂದು ಕಾರ್ಯಸೂಚಿಯಲ್ಲಿ ಹೇಳಲಾಗಿದೆ. ಪಂಚವಾರ್ಷಿಕ ಯೋಜನೆಗೆ ಬದಲಾಗಿ ಈ ಕಾರ್ಯಸೂಚಿ ಸಿದ್ಧಪಡಿಸಲಾಗಿದೆ. ಮಾರ್ಚ್‌ 31ಕ್ಕೆ 12ನೇ ಪಂಚವಾರ್ಷಿಕ ಯೋಜನೆ ಅಂತ್ಯವಾಗಿದೆ.

ಕಾರ್ಪೊರೇಟ್‌ ತೆರಿಗೆಯನ್ನು ಶೇ 34 ರಿಂದ (ಹೆಚ್ಚುವರಿ ಮತ್ತು ಸೆಸ್‌ ಸೇರಿ) ಶೇ 25ಕ್ಕೆ ತಗ್ಗಿಸುವ  ಪ್ರಸ್ತಾವನೆ ಮುಂದಿಟ್ಟಿದೆ. ಕಾರ್ಪೊರೇಟ್ ತೆರಿಗೆಯನ್ನು ಹಂತ ಹಂತವಾಗಿ ಶೇ 25ಕ್ಕೆ ತಗ್ಗಿಸುವುದಾಗಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಈಗಾಗಲೇ ಘೋಷಿಸಿದ್ದಾರೆ.

ಹೆಚ್ಚಿನ ಜನರನ್ನು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕಾದರೆ ಆದಾಯ ತೆರಿಗೆ ವಿನಾಯ್ತಿ ಮಿತಿ ಯಥಾಸ್ಥಿತಿಯಲ್ಲಿಯೇ ಇರುವುದು ಉತ್ತಮ ಎಂಬ ಸಲಹೆಯನ್ನೂ ನೀಡಿದೆ. ಆದರೆ, ಕಡಿಮೆ ಆದಾಯ ಹೊಂದಿರುವ ತೆರಿಗೆದಾರರಿಗೆ ಅನುಕೂಲ ಆಗುವಂತೆ ತೆರಿಗೆ ಹಂತದಲ್ಲಿ, ಅತ್ಯಂತ ಕನಿಷ್ಠ ತೆರಿಗೆ ದರದ ವಿಸ್ತರಣೆಯ ಅಗತ್ಯವಿದೆ ಎಂದು ಹೇಳಿದೆ.

2017–18ರ ಸಾಲಿನ ಬಜೆಟ್‌ನಲ್ಲಿ ₹2.5 ಲಕ್ಷದಿಂದ ₹5 ಲಕ್ಷದವರೆಗೆ ಆದಾಯ ಹೊಂದಿರುವವರಿಗೆ ತೆರಿಗೆ ದರವನ್ನು ಶೇ 10 ರಿಂದ ಶೇ 5ಕ್ಕೆ ತಗ್ಗಿಸಲಾಗಿದೆ. ಕೃಷಿಯೇತರ ಸಂಸ್ಥೆಗಳು ತಮ್ಮ ವರಮಾನದ ಮೂಲ ಕೃಷಿ ಎಂದು ಘೋಷಿಸಿಕೊಂಡು, ತೆರಿಗೆ ವಂಚನೆ ಮಾಡುವುದನ್ನು ತಪ್ಪಿಸಬೇಕು. ಇದಕ್ಕಾಗಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದೂ ಹೇಳಿದೆ.

2022ರ ವೇಳೆಗೆ ರೈತರ ಆದಾಯ ದುಪ್ಪಟ್ಟು ಮಾಡಲು ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಕಾಯ್ದೆಗೆ ಸುಧಾರಣೆ ತರುವಂತೆ ಸಲಹೆ ನೀಡಿದೆ.
ಮಾನವ ಸಂಪನ್ಮೂಲದ ಸದ್ಬಳಕೆ, ಇ–ಆಡಳಿತದ ಮೂಲಕ ನಾಗರೀಕ ಸೇವೆಗಳನ್ನು ಬಲಪಡಿಸುವಂತೆಯೂ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT