ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ನನ್ನ ಚರಿಗೆ ನನ್ನ ಹಕ್ಕು

Published 29 ಏಪ್ರಿಲ್ 2024, 23:51 IST
Last Updated 29 ಏಪ್ರಿಲ್ 2024, 23:51 IST
ಅಕ್ಷರ ಗಾತ್ರ

ಕಮಲಕ್ಕ ಬೇಕುಬೇಕಾದೋರಿಗೆ ಮಾತ್ರ ಪಂಚಾಯಿತಿ ಬಾವಿ ನೀರು ಬುಡ್ತಳೆ ಅಂತ ಕಾಂಗಕ್ಕನಿಗೂ ಕಮಲಕ್ಕನಿಗೂ ದಿನಾ ಜಗಳ ನಡೀತಿತ್ತು. ಒಂದಿನ ಕಮಲಕ್ಕ ಕಾಂಗಕ್ಕನ ಕೊಡ ಅಂದ್ರೆ ಚರಿಗೇಗೆ ನೀರು ತುಂಬದೇ ಖಾಲಿ ಮಡಗಿದ್ದಳು.

‘ಅಲ್ಲ ಕನೆ ಬಿತ್ತರಿ, ನಮ್ಮನೆ ದನ-ಕರ, ಜನಿಗೆ ಅನುಕೂಲಾಗಲಿ ಅಂತ ನಾನು ಚರಿಗೆ ಮಡಗಿದ್ರೆ ನೀನು ಒಂದು ಚೊಂಬು ನೀರು ಮಾತ್ರ ತುಂಬಿಸ್ತೀಯ. ನಾವೇನು ಮಾಡಿದ್ದವು ನಿನಗೆ?’ ಕಾಂಗಕ್ಕ ಜಗಳಕ್ಕೆ ಬಿದ್ದಿದ್ದಳು.

‘ನಾನೇನು ನಿನ್ನ ಚರಿಗೆ ನೀರು ತಕ್ಕೋಗಿ ಕುಡೀತಿಲ್ಲ ಕನೇ. ನಿನಗೇ ಎಲ್ಲಾ ನೀರು ಹುಯ್ಯಕ್ಕಾದದೇ’ ಅಂತ ಕಮಲಕ್ಕ ಗರ್ಜಿಸಿದಳು.

‘ನೋಡಮ್ಮೋ ನಮ್ಮನೆ ಬೋರಲ್ಲಿ ನೀರಿಲ್ಲ. ನಲ್ಲಿ ನೀರು ಬತ್ತಿಲ್ಲ. ದನಕರೀಗೆ, ಕುಡಿಯ ನೀರಿಗೆ ನಾವೆಲ್ಲಿಗೋಗನೇ? ನಮ್ಮ ಪಾಲಿನ ನೀರು ನಮಿಗೆ ಕೊಟ್ರೆ ಸರಿ’ ಕಾಂಗಕ್ಕ ಕಿರುಚಿದಳು.

‘ನಿನ್ನ ಪಾಲಿನ ನೀರು ಯಾವುದೇ? ಊರೋರೆಲ್ಲ ನೀರಿಲ್ದೆ ಖಾಲಿ ಚರಿಗೆ ಮಡಿಕಂದು ಕುತ್ತವ್ರೆ. ಎಲ್ಲಾರಿಗೂ ನೀರು ಹಂಚಬೇಕಲ್ಲವಾ!’ ಕಮಲಕ್ಕ ವಿವರಿಸಿದಳು.

‘ನಾನು ಕೇಳ್ತಿರದು ನಮಿಗೆ ಬರಬೇಕಾದ ನಮ್ಮ ಪಾಲಿನ ನೀರು ಯಾಕೆ ಕೊಡ್ತಿಲ್ಲ ಅಂತ. ನೀರು ಕೊಟ್ಟೀಯಾ ಇಲ್ವಾ ಅಷ್ಟೇಳು’ ಕಾಂಗಕ್ಕ ಜಿದ್ದಿಗೆ ಬಿದ್ದಳು.

‘ಚರಿಗೆ ನೀರಲ್ಲಿ ಎಲ್ಲರದೂ ಪಾಲದೆ ಕಾ ಬುಡೇ. ಹೆಚ್ಚು-ಕಮ್ಮಿ ನೋಡಿ ಕೊಡಬೇಕಾಯ್ತದೆ ಕವ್ವಾ. ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಅಂತ ನನ್ನ ಬೋದ್ರೆ ಯಂಗೆ?’ ಕಮಲಕ್ಕನೂ ಸಿಟ್ಟಾದಳು.

‘ನನ್ನ ಚರಿಗೆ ನೀರು ಹಂಚಿ ನಿನ್ನ ದೊಡ್ಡಸ್ತಿಕೆ ತೋರದು ನಾನು ಕಾಣೆನೆ. ಒಂದು ತಿಳಕಮ್ಮಿ, ನನ್ನ ಚರಿಗೆ ನನ್ನ ಹಕ್ಕು! ನನ್ನ ಚರಿಗೆ ಕಡೆ ನಿನ್ನ ಲುಕ್ಕು ಬ್ಯಾಡ’ ಕಾಂಗಕ್ಕ ಬಾಯಿ ಜೋರು ಮಾಡಿದಳು. ಈ ಉಸಾಬರಿ ಬ್ಯಾಡಾಂತ ಕಮಲಕ್ಕ ಒಸಿ ಜಾಸ್ತಿ ನೀರು ಬುಟ್ಟವ್ಳಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT