ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

IPL 2024 | ರೈಸರ್ಸ್–ಟೈಟನ್ಸ್ ಪಂದ್ಯಕ್ಕೆ ಮಳೆ ಅಡ್ಡಿ; ರದ್ದಾದರೆ ಯಾರಿಗೆ ಲಾಭ?

Published 16 ಮೇ 2024, 16:39 IST
Last Updated 16 ಮೇ 2024, 16:39 IST
ಅಕ್ಷರ ಗಾತ್ರ

ಹೈದರಾಬಾದ್‌: ಆತಿಥೇಯ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಗುಜರಾತ್‌ ಟೈಟನ್ಸ್‌ ನಡುವಣ ಇಂದು ನಡೆಯಬೇಕಿದ್ದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಹೀಗಾಗಿ, ಟಾಸ್‌ ವಿಳಂಬವಾಗಿದೆ.

ಟೈಟನ್ಸ್‌ ಈಗಾಗಲೇ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದೆ. ಆದರೆ, ಮುಂದಿನ ಹಂತಕ್ಕೇರಲು ರೈಸರ್ಸ್‌ಗೆ ಈ ಪಂದ್ಯ ನಿರ್ಣಾಯಕವಾಗಿದೆ.

ಗುಜರಾತ್ ತಂಡ ಲೀಗ್‌ ಹಂತದ 13 ಪಂದ್ಯಗಳಿಂದ 5ರಲ್ಲಿ ಜಯ ಸಾಧಿಸಿದ್ದು, 7 ಸೋಲು ಕಂಡಿದೆ. ಉಳಿದ ಒಂದು ಪಂದ್ಯ ರದ್ದಾಗಿದೆ. ಹೀಗಾಗಿ, ಪ್ಲೇ ಆಫ್‌ ಬಾಗಿಲು ಈ ತಂಡಕ್ಕೆ ಮುಚ್ಚಿದೆ. ಆದರೆ, ಈವರೆಗೆ 12 ಪಂದ್ಯ ಆಡಿರುವ ರೈಸರ್ಸ್‌ ಏಳರಲ್ಲಿ ಗೆದ್ದು 14 ಪಾಯಿಂಟ್‌ಗಳೊಂದಿಗೆ 4ನೇ ಸ್ಥಾನದಲ್ಲಿ ಉಳಿದಿದೆ. ಉಳಿದಿರುವ ಎರಡರಲ್ಲಿ ಒಂದು ಪಂದ್ಯದಲ್ಲಾದರೂ ಗೆಲ್ಲಬೇಕಾದ ಸ್ಥಿತಿ ಈ ತಂಡಕ್ಕಿದೆ.

ಒಂದು ವೇಳೆ ಈ ಪಂದ್ಯ ರದ್ದಾದರೆ, ಆತಿಥೇಯ ತಂಡಕ್ಕೆ ಅನುಕೂಲವಾಗಲಿದೆ. ಉಭಯ ತಂಡಗಳಿಗೆ ಒಂದೊಂದು ಪಾಯಿಂಟ್‌ ಹಂಚಿಕೆಯಾಗಲಿದ್ದು, ರೈಸರ್ಸ್‌ 15 ಪಾಯಿಂಟ್‌ಗಳೊಂದಿಗೆ 3ನೇ ಸ್ಥಾನಕ್ಕೆ ಏರಲಿದೆ. ಹೀಗೇನಾದರೂ ಆದರೆ, ಉಳಿದಿರುವ ಒಂದು ಸ್ಥಾನಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ), ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ), ಡೆಲ್ಲಿ ಕ್ಯಾಪಿಟಲ್ಸ್‌ (ಡಿಸಿ) ಹಾಗೂ ಲಖನೌ ಸೂಪರ್‌ ಜೈಂಟ್ಸ್‌ (ಎಲ್‌ಎಸ್‌ಜಿ) ತಂಡಗಳಿಗೆ ಪೈಪೋಟಿ ಏರ್ಪಡುತ್ತದೆ.

ಚೆನ್ನೈ, ಆರ್‌ಸಿಬಿ ಹೋರಾಟ
ಇಂದಿನ ಪಂದ್ಯ ರದ್ದಾಗಿ ರೈಸರ್ಸ್‌ 3ನೇ ಸ್ಥಾನಕ್ಕೇರಿದರೆ, ಚೆನ್ನೈ 4ನೇ ಸ್ಥಾನಕ್ಕೆ ಕುಸಿಯಲಿದೆ. ಆದರೆ, ಆ ಸ್ಥಾನವನ್ನು ಖಚಿತ ಪಡಿಸಿಕೊಳ್ಳಲು ಲೀಗ್ ಹಂತದಲ್ಲಿ ಆಡುವ ತನ್ನ ಕೊನೇ ಪಂದ್ಯದಲ್ಲಿ ಆರ್‌ಸಿಬಿ ಎದುರು ಸೆಣಸಾಡಬೇಕಿದೆ.

ಪಾಯಿಂಟ್‌ ಪಟ್ಟಿಯಲ್ಲಿ ಸದ್ಯ 3ನೇ ಸ್ಥಾನದಲ್ಲಿರುವ ಚೆನ್ನೈ 14 ಪಾಯಿಂಟ್‌ ಹೊಂದಿದ್ದರೆ, 6ನೇ ಸ್ಥಾನದಲ್ಲಿರುವ ಆರ್‌ಸಿಬಿ 12 ಪಾಯಿಂಟ್‌ ಹೊಂದಿದೆ. ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಹೊಂದಿವೆಯಾದರೂ, ಚೆನ್ನೈ ರನ್‌ರೇಟ್‌ ಆರ್‌ಸಿಬಿಗಿಂತ ಉತ್ತಮವಾಗಿದೆ. ಹಾಗಾಗಿ, ಆ ಪಂದ್ಯದಲ್ಲಿ ಕೊನೇ ಹಂತದ ವರೆಗೆ ಹೋರಾಡಿ ಸೋತರೂ ಪ್ಲೇ ಆಫ್‌ ತಲುಪುವ ಅವಕಾಶ ಸಿಎಸ್‌ಕೆಗೆ ಇದೆ.

ಉತ್ತಮ ಅಂತರದಿಂದ ಗೆದ್ದರಷ್ಟೇ ಆರ್‌ಸಿಬಿ ಮುಂದಿನ ಹಂತಕ್ಕೇರಲು ಸಾಧ್ಯ.

ಲಖನೌ, ಡೆಲ್ಲಿ ಹಾದಿ ಕಠಿಣ
ಲಖನೌ ತಂಡ ಈಗಾಗಲೇ 13 ಪಂದ್ಯಗಳನ್ನು ಆಡಿದೆ. ಇದರಲ್ಲಿ 6ರಲ್ಲಿ ಜಯ ಸಾಧಿಸಿದ್ದು, 12 ಪಾಯಿಂಟ್‌ಗಳನ್ನು ಹೊಂದಿದೆ. ತನ್ನ ಕೊನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಎದುರು ಕಾದಾಡಲಿದೆ. ಆ ಪಂದ್ಯದಲ್ಲಿ ಗೆದ್ದರೂ, ರನ್‌ರೇಟ್‌ ಉತ್ತಮವಾಗಿಲ್ಲದ ಕಾರಣ ಪ್ಲೇ ಆಫ್‌ಗೇರುವ ಸಾಧ್ಯತೆ ಕ್ಷೀಣವಾಗಿದೆ.

ಡೆಲ್ಲಿ ಪಡೆಯ ಸ್ಥಿತಿಯೂ ಇದಕ್ಕೆ ಹೊರತಲ್ಲ. ಈಗಾಗಲೇ ತನ್ನ ಪಾಲಿನ ಎಲ್ಲ ಪಂದ್ಯಗಳನ್ನು ಆಡಿರುವ ಈ ತಂಡ, 7 ಜಯದೊಂದಿಗೆ 14 ಪಾಯಿಂಟ್‌ ಗಳಿಸಿದೆ. ಸದ್ಯ 5ನೇ ಸ್ಥಾನದಲ್ಲಿದ್ದು, ಉಳಿದ ಪಂದ್ಯಗಳ ಫಲಿತಾಂಶವನ್ನು ಎದುರು ನೋಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT