ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತದ ಎದುರು ಆಡುವಾಗ ಮನೋಬಲ ಕುಸಿತ, ಪಾಕಿಸ್ತಾನಕ್ಕೆ ಕೊಹ್ಲಿ ಭೀತಿ: ಮಿಸ್ಬಾ

Published 15 ಮೇ 2024, 14:01 IST
Last Updated 15 ಮೇ 2024, 14:01 IST
ಅಕ್ಷರ ಗಾತ್ರ

ನವದೆಹಲಿ: ಅಮೆರಿಕ ಹಾಗೂ ವೆಸ್ಟ್‌ ಇಂಡೀಸ್‌ನಲ್ಲಿ ಮುಂದಿನ ತಿಂಗಳು ಆರಂಭವಾಗಲಿರುವ ಟಿ20 ಕ್ರಿಕೆಟ್ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡವನ್ನು ಮಣಿಸುವುದು ಪಾಕಿಸ್ತಾನಕ್ಕೆ ಕಠಿಣವಾಗಲಿದೆ. ಐಸಿಸಿ ಟೂರ್ನಿಗಳಲ್ಲಿ ಟೀಂ ಇಂಡಿಯಾ ವಿರುದ್ಧ ಆಡುವಾಗ ಪಾಕ್‌ ಪಡೆ ಮಾನಸಿಕವಾಗಿ ಹಿನ್ನಡೆ ಅನುಭವಿಸುತ್ತದೆ ಎಂದು ಮಾಜಿ ಕ್ರಿಕೆಟಿಗ ಮಿಸ್ಬಾ ಉಲ್‌ ಹಕ್‌ ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನ ತಂಡದ ಮಾಜಿ ನಾಯಕರೂ ಆಗಿರುವ ಮಿಸ್ಬಾ, 'ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಆಡುವುದನ್ನು ಪಾಕಿಸ್ತಾನದ ದುರದೃಷ್ಟ ಎನ್ನಬಹುದು. ಇಬ್ಬರು ಸ್ಪಿನ್ನರ್‌ಗಳನ್ನೊಳಗೊಂಡ ಬಲಿಷ್ಠ ಬೌಲಿಂಗ್‌ ಹೊಂದಿರುವ ಕೌಶಲ್ಯಪೂರ್ಣ ಭಾರತದ ವಿರುದ್ಧ ಆಡುವಾಗ ಪಾಕ್‌ ತಂಡ ಸಾಕಷ್ಟು ಪರಿಶ್ರಮ ಹಾಕಬೇಕಾಗುತ್ತದೆ' ಎಂದು ಹೇಳಿದ್ದಾರೆ

'ಭಾರತ ತಂಡ ಜಸ್‌ಪ್ರಿತ್‌ ಬೂಮ್ರಾ, ಮೊಹಮ್ಮದ್‌ ಸಿರಾಜ್‌ ಮತ್ತು ಹಾರ್ದಿಕ್‌ ಪಾಂಡ್ಯ ಅವರಂತಹ ಶ್ರೇಷ್ಠ ವೇಗಿಗಳನ್ನು ಹೊಂದಿದೆ. ಟೀಂ ಇಂಡಿಯಾದ ಗುಣಮಟ್ಟ ಸಾಕಷ್ಟು ಪಟ್ಟು ಹೆಚ್ಚಾಗಿದೆ. ಅವರ ಮನೋ ಧೋರಣೆ ಸಾಕಷ್ಟು ಪರಿಣಾಮ ಬೀರುತ್ತದೆ. ಅದನ್ನು ಒಡೆಯುವುದು ತುಂಬಾ ಕಷ್ಟ. ಭಾರತದ ಆಟಗಾರರ ಮನೋಬಲವನ್ನು ಆಸ್ಟ್ರೇಲಿಯಾ ತಂಡ ಅಚ್ಚುಕಟ್ಟಾಗಿ ನಿಯಂತ್ರಿಸುತ್ತದೆ' ಎಂದೂ ಹೇಳಿದ್ದಾರೆ.

'ಹೆಚ್ಚುವರಿ ಒತ್ತಡದ ಹೊರೆ ಆಸ್ಟ್ರೇಲಿಯಾಕ್ಕೆ ಇಲ್ಲ' ಎಂದಿರುವ ಪಾಕ್‌ ಮಾಜಿ ಆಟಗಾರ, 'ಭಾರತ ಮತ್ತು ಪಾಕಿಸ್ತಾನ ಹೇಗೆ ಒತ್ತಡವನ್ನು ಮೆಟ್ಟಿ ನಿಲ್ಲುತ್ತವೆ ಎಂಬುದನ್ನು ಕಾದುನೋಡಬೇಕಿದೆ' ಎಂದಿದ್ದಾರೆ.

'ಪಾಕಿಸ್ತಾನಕ್ಕೆ ಕೊಹ್ಲಿ ಭೀತಿ'
ಪಾಕಿಸ್ತಾನ ತಂಡದ ವಿರುದ್ಧ ಸಾಕಷ್ಟು ಸ್ಮರಣೀಯ ಇನಿಂಗ್ಸ್‌ಗಳನ್ನು ಆಡಿರುವ ವಿರಾಟ್‌ ಕೊಹ್ಲಿ, ತಮ್ಮ ತಂಡಕ್ಕೆ ಮತ್ತೆ ದೊಡ್ಡ ಭೀತಿಯಾಗಿದ್ದಾರೆ ಎಂದು ಮಿಸ್ಬಾ ಹೇಳಿದ್ದಾರೆ.

'ಕೊಹ್ಲಿಯ ಆಟ ಪ್ರಮುಖವಾಗಲಿದೆ. ಅವರು ಸಾಕಷ್ಟು ಸಲ ಪಾಕಿಸ್ತಾನಕ್ಕೆ ಆಘಾತ ನೀಡಿದ್ದಾರೆ. ನಮ್ಮ ತಂಡದ ಎದುರು ಮಾನಸಿಕವಾಗಿ ಪ್ರಭುತ್ವ ಸಾಧಿಸಿದ್ದಾರೆ. ಅವರು ದೊಡ್ಡ ದೊಡ್ಡ ಪಂದ್ಯಗಳಿಂದ ಸ್ಫೂರ್ತಿ ಪಡೆಯುತ್ತಾರೆಯೇ ಹೊರತು ಒತ್ತಡವನ್ನು ಎಳೆದುಕೊಳ್ಳುವುದಿಲ್ಲ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಕೊಹ್ಲಿಯ ಪರಿಣಾಮ ಖಂಡಿತವಾಗಿಯೂ ಇರಲಿದೆ. ಅವರೊಬ್ಬ ಶ್ರೇಷ್ಠ ಕ್ರಿಕೆಟಿಗ. ಪಂದ್ಯ ಗೆದ್ದುಕೊಡಬಲ್ಲ ಆಟಗಾರನಾಗಿರುವ ಕೊಹ್ಲಿಯ ವಿಚಾರದಲ್ಲಿ ಸ್ಟ್ರೈಕ್‌ರೇಟ್‌ ಮುಖ್ಯವೇ ಆಗುವುದಿಲ್ಲ. ಉತ್ತಮ ಆಟಗಾರರು ಟೀಕೆಗಳಿಂದ ಉತ್ತೇಜನ ಪಡೆಯುತ್ತಾರೆ' ಎಂದು ಸಮರ್ಥಿಸಿಕೊಂಡಿದ್ದಾರೆ.

'2007ರ ವಿಶ್ವಕಪ್‌ ಬಳಿಕ ಅಪಾರ ಮನ್ನಣೆ'
ದಕ್ಷಿಣ ಆಫ್ರಿಕಾದಲ್ಲಿ 2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 157 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಪಾಕ್‌, ಇನ್ನೂ 3 ಎಸೆತಗಳು ಬಾಕಿ ಇರುವಂತೆಯೇ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 152 ರನ್ ಗಳಿಸಿ ಆಲೌಟ್‌ ಆಗಿತ್ತು.

ಪಾಕ್‌ ತಂಡವನ್ನು ಗೆಲುವಿನತ್ತ ಕರೆದೊಯ್ಯುತ್ತಿದ್ದ ಮಿಸ್ಬಾ, 38 ಎಸೆತಗಳಲ್ಲಿ 43 ರನ್‌ ಗಳಿಸಿದ್ದಾಗ ಕೊನೇ ವಿಕೆಟ್‌ ರೂಪದಲ್ಲಿ ಔಟಾಗಿದ್ದರು. ಅದರೊಂದಿಗೆ ಪಾಕ್‌ ತಂಡ 5 ರನ್‌ ಅಂತರದ ಸೋಲೊಪ್ಪಿಕೊಂಡಿತ್ತು.

ಪಾಕಿಸ್ತಾನ ಪ್ರಶಸ್ತಿ ಗೆಲ್ಲದಿದ್ದರೂ, 2007ರ ಟಿ20 ವಿಶ್ವಕಪ್‌ ಟೂರ್ನಿಯೇ ಚುಟುಕು ಕ್ರಿಕೆಟ್‌ನ ಬೆಳವಣಿಗೆಗೆ ಕಾರಣವಾಯಿತು ಎಂದು ಮಿಸ್ಬಾ ಪ್ರತಿಪಾದಿಸಿದ್ದಾರೆ.

'ಮೊದಲ ಟಿ20 ವಿಶ್ವಕಪ್‌ ಟೂರ್ನಿಯನ್ನು ಯಾವ ತಂಡವೂ ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಭಾರತ, ಯುವ ಆಟಗಾರ ಮಹೇಂದ್ರ ಸಿಂಗ್‌ ಧೋನಿ ಅವರಿಗೆ ನಾಯಕತ್ವ ನೀಡಿತ್ತು. ಭಾರತ ಮತ್ತು ಪಾಕಿಸ್ತಾನ ವಿರುದ್ಧ ನಡೆದ ಆ ಟೂರ್ನಿಯ ಫೈನಲ್‌, ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ಹಣಾಹಣಿಯಾಗಿದೆ. ಆ ಪಂದ್ಯದ ಬಳಿಕ ಟಿ20 ಕ್ರಿಕೆಟ್ ಪಡೆದ ಮನ್ನಣೆ ಅಪಾರವಾದದ್ದು' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT