ನವದೆಹಲಿ(ಪಿಟಿಐ): ಪ್ರಸ್ತಾವಿತ ರೂ 5,500 ಕೋಟಿ ಮೊತ್ತದ `ಸಮಗ್ರ ಆವಿಷ್ಕಾರ ನಿಧಿ' ಜೂನ್ ವೇಳೆಗೆ ಅಸ್ತಿತ್ವಕ್ಕೆ ಬರಲಿದೆ ಎಂದು ಕೇಂದ್ರದ `ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ' (ಎಂಎಸ್ಎಂಇ) ಸಚಿವಾಲಯ ಹೇಳಿದೆ.
ಪ್ರವರ್ಧಮಾನಕ್ಕೆ ಬರುತ್ತಿರುವ ಮಧ್ಯಮ ಪ್ರಮಾಣದ ಉದ್ಯಮ ಸಂಸ್ಥೆಗಳನ್ನು `ಆವಿಷ್ಕಾರ ನಿಧಿ' ಮೂಲಕ ಪ್ರೋತ್ಸಾಹಿಸಲಾಗುವುದು. ಇಂತಹ ಘಟಕಗಳಿಗೆ ಬೇಕಿರುವ ಆರ್ಥಿಕ ನೆರವು ನೀಡಲಾಗುವುದು. ಮುಖ್ಯವಾಗಿ ಉದ್ಯೋಗಾವಕಾಶ ಸೃಷ್ಟಿ, ಬಡತನ ನಿರ್ಮೂಲನೆ ಮತ್ತು ಆರ್ಥಿಕ ಪ್ರಗತಿ ಇದರ ಮುಖ್ಯ ಉದ್ದೇಶ. ಈ ಪ್ರಸ್ತಾವವನ್ನು ಇನ್ನೆರಡು ದಿನಗಳಲ್ಲಿ ಸಂಪುಟಕ್ಕೆ ಕಳುಹಿಸಲಾಗುತ್ತದೆ ಎಂದು `ಎಂಎಸ್ಎಂಇ' ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ರಾಷ್ಟ್ರೀಯ ಆವಿಷ್ಕಾರ ಮಂಡಳಿಯ ಸಹಭಾಗಿತ್ವದಲ್ಲಿ `ಎಂಎಸ್ಎಂಇ' ಸಚಿವಾಲಯ ಈ ವಿಶೇಷ ನಿಧಿಯನ್ನು ಸ್ಥಾಪಿಸಲಿದೆ. ಇದಕ್ಕೆ ಬೇಕಿರುವ ಶೇ 20ರಷ್ಟು ಮೂಲಧನವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಉಳಿದ ಮೊತ್ತವನ್ನು ಬ್ಯಾಂಕುಗಳು, ಮತ್ತಿತರ ಹಣಕಾಸು ಸಂಸ್ಥೆಗಳಿಂದ ಸಂಗ್ರಹಿಸಲಾಗುತ್ತದೆ.
ಸದ್ಯ ದೇಶದಲ್ಲಿ 2.60 ಕೋಟಿ `ಎಂಎಸ್ಎಂಇ' ಘಟಕಗಳಿದ್ದು 6 ಕೋಟಿ ಜನರಿಗೆ ಉದ್ಯೋಗ ಒದಗಿಸಿವೆ.