‘ಚಿಟ್ಟೆ ಅಕ್ಕ’

ಮಂಗಳವಾರ, ಮಾರ್ಚ್ 26, 2019
33 °C
ಕಾಗದದಲ್ಲಿ ಅರಳಿದ ಕೀಟಗಳು

‘ಚಿಟ್ಟೆ ಅಕ್ಕ’

Published:
Updated:
Prajavani

ಕುತೂಹಲ ಎಲ್ಲರಲ್ಲೂ, ಎಲ್ಲ ವಯಸ್ಸಿನವರಲ್ಲೂ ಇರುತ್ತದೆ. ಆ ಕುತೂಹಲ ತಣಿಸಿಕೊಳ್ಳಲು ಹುಡುಕಾಟ ನಡೆಸುತ್ತಾರೆ. ಅಂಥ ಕುತೂಹಲಕಾರಿ ಕೀಟ ಜಗತ್ತನ್ನು ಬೆನ್ನಟ್ಟಿ ಹೊರಟವರು ಕಲಬುರ್ಗಿಯ ಸೈದಾ ಮಂಜರ್ ಫಾತಿಮಾ.

ಪೇಪರ್‌ ಬಳಸಿಕೊಂಡು ಕ್ಷಣ ಮಾತ್ರದಲ್ಲಿ ಕೀಟಗಳ ಮಾದರಿಯನ್ನು ತಯಾರಿಸುತ್ತಾರೆ ಫಾತಿಮ. ನೀವು ಹೇಳಿದ ಕೀಟದ ಮಾದರಿಯನ್ನು ಪೇಪರ್‌ನಲ್ಲಿ ಕತ್ತರಿಸುತ್ತಾರೆ. ಕೀಟಗಳ ಕೈ, ಕಾಲು, ದೇಹದ ಆಕಾರವನ್ನು ನೋಡಿದರೆ, ಜೀವಂತ ಕೀಟಗಳೇ ಪೇಪರ್‌ ಮೇಲೆ ಕುಳಿತಂತೆ ಕಾಣಿಸುತ್ತವೆ. ಇಂಥ ವಿಶೇಷ ಹವ್ಯಾಸದ ಕಾರಣದಿಂದಲೇ, ಫಾತಿಮಾ ಮಕ್ಕಳ ಪಾಲಿಗೆ ‘ಚಿಟ್ಟೆ ಅಕ್ಕ’ ನಾಗಿದ್ದಾರೆ.

ಕಲಬುರ್ಗಿಯ ಮಹಿಳೆಯರ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿ ಸೈದಾ ಮಂಜರ್ ಫಾತಿಮಾಗೆ, ಕೀಟಗಳೆಂದರೆ ಎಲ್ಲಿಲ್ಲದ ಪ್ರೀತಿ. ಆ ಪ್ರೀತಿಯಿಂದಲೇ ಅವುಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವ ಜತೆಗೆ, ಅವುಗಳ ಮೇಲಿರುವ ಭಯವನ್ನು ದೂರ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಮಕ್ಕಳಿಗೆ ಪೇಪರ್‌ ಕೀಟಗಳ ಮಾದರಿ ಮಾಡಿಕೊಡುತ್ತಾರೆ. ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿ ಗಳಿಗೆ ಕೀಟದ ಮಾದರಿ ಮಾಡುವುದನ್ನೂ ಕಲಿಸುತ್ತಾರೆ. ಜತೆಗೆ ಕೀಟಗಳ ಮಾಹಿತಿ ನೀಡುತ್ತಾ ‘ಕೀಟ ಜಾಗೃತಿ’ ಮೂಡಿಸುತ್ತಾರೆ. ಇದೇ ಕಾರಣಕ್ಕೆ ಮಕ್ಕಳು ‘ಚಿಟ್ಟೆ ಅಕ್ಕ’ ಎಂದು ಕರೆಯುತ್ತಾರೆ. 

ಐದನೇ ತರಗತಿಯಲ್ಲಿದ್ದಾಗಲೇ, ಕಾಗದದಲ್ಲಿ ಚಿಟ್ಟೆ ಆಕಾರಗಳನ್ನು ಕತ್ತರಿಸುವ ‌ಚಟುವಟಿಕೆಯಲ್ಲಿ ಫಾತಿಮಾ ಸಕ್ರಿಯವಾಗಿದ್ದರು. ಈಗ ವಿಜ್ಞಾನದ ಮಾದರಿಗಳನ್ನು ಮನೆಯಲ್ಲಿಯೇ ಸಿದ್ಧಪಡಿಸುತ್ತಾರೆ.ಫಾತಿಮಾಳ ಎಲ್ಲ ಕೆಲಸಕ್ಕೂ ಬೆನ್ನೆಲುಬಾಗಿ ನಿಂತವರು ಅವರ ತಂದೆ ಸೈಯದ್ ಸಮಿ ಹೈದರ್ ಹಾಗೂ ತಾಯಿ ಶಾಹೀನ್‌ ಹೈದರ್.

ಕಲಬುರ್ಗಿಯ ಪೀಸ್‌ ಇಂಟರ್‌ ನ್ಯಾಷನಲ್ ಶಾಲೆಯಲ್ಲಿ ವಿಜ್ಞಾನಗಳ ಪ್ರಾತ್ಯಕ್ಷಿಕೆ ತರಬೇತಿ ಹಾಗೂ ಬೋಧಕರಾಗಿರುವ ಹೈದರ್‌ ಅವರಿಗೂ ವಿಜ್ಞಾನ, ತಂತ್ರಜ್ಞಾನಗಳಲ್ಲಿ ಅತೀವ ಆಸಕ್ತಿ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ (ಕೆಆರ್‌ವಿಪಿ) ಸದಸ್ಯರಾಗಿಯೂ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.

ಈಚೆಗೆ ಕಲಬುರ್ಗಿಯ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಸುಮಾರು 54 ಶಾಲಾ–ಕಾಲೇಜುಗಳ ‘ಆವಿಷ್ಕಾರೋತ್ಸವ–2019’ ಸ್ಫರ್ಧೆಯಲ್ಲಿ ಬೆಡ್‌ ಪಗ್, ಕೌ ಪಗ್, ಡಾಗ್‌ ಪ್ಲೈ, ಲುಕೋಸ್ಟಾ, ವೆಬ್‌ಸ್ಪಿನ್ನರ್‌ನಂತಹ ಸುಮಾರು 50ಕ್ಕೂ ಅಧಿಕ ಉಪಕಾರಿ ಕೀಟಗಳು. ಕಿಸ್ಸಿಂಗ್ ಪಗ್, ಸಿಲ್ಕ್‌ ಮೊಂಟ್‌, ಕ್ವೀನ್‌ ಪಗ್, ಜಿಬ್ರಾ ಪ್ಲೈನಂತಹ ಅಪಾಯಕಾರಿಯ 50ಕ್ಕೂ ಅಧಿಕ ಕೀಟ ಪ್ರಭೇದಗಳ ಮಾಹಿತಿ ಸಹಿತ ಪೇಪರ್‌ ಕ್ರಾಫ್ಟ್‌ ಮಾಡಿ ತೋರಿಸಿ ಪ್ರಥಮ ಸ್ಥಾನ ಪಡೆದಿ ದ್ದಾರೆ. ಕೆಆರ್‌ವಿಪಿ 2011ರಲ್ಲಿ ಹಮ್ಮಿಕೊಂಡಿದ್ದ ಯುವ ವಿಜ್ಞಾನಿಗಳ ರಾಜ್ಯಮಟ್ಟದ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನ ಪಡೆದಿದ್ದಾರೆ.

‌ಫಾತಿಮಾ ಸರ್ಕಾರಿ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿರುವುದರಿಂದ ಕನ್ನಡ ಭಾಷೆಯನ್ನು ಸ್ಪಷ್ಟ ಹಾಗೂ ಸರಳ ಮಾತನಾಡುತ್ತಾರೆ. ಎಲ್ಲ ಭಾಷೆಯನ್ನು ಕಲಿಯಬೇಕು. ಭಾಷೆಗೆ ಇಲ್ಲದ ತಾರತಮ್ಯ ಕಲಿಯುವ ನಮಗೇಕೆ ಎನ್ನುವುದು ಅವರ ಅಭಿಪ್ರಾಯ. 

ಕೀಟಗಳ ಅಧ್ಯಯನ ಆಸಕ್ತಿದಾಯಕ
ಕೀಟಗಳಿಂದಲೇ ಪ್ರಕೃತಿ ಸೌಂದರ್ಯ ಇಮ್ಮಡಿಯಾಗಿದೆ. ಅವುಗಳ ಆಕಾರ, ದೇಹ ರಚನೆ, ಚಲನ–ವಲನ, ದೈನಂದಿನ ಕ್ರಿಯೆಗಳು ಮನುಷ್ಯನನ್ನೆ ನಿಬ್ಬೆರಗಾಗಿಸುತ್ತವೆ ಎನ್ನುತ್ತಾರೆ ಫಾತಿಮಾ.

ಸಸ್ತನಿಗಳನ್ನೂ ಪೇಪರ್‌ನಲ್ಲಿ ಕ್ರಾಫ್ಟ್‌ ಮಾಡುತ್ತ ಅಧ್ಯಯನ ಮಾಡುವ ಆಸೆ ಇದೆ. ಹೊಸ ಪಠ್ಯಪುಸ್ತಕಗಳ ವಿಜ್ಞಾನ ಮಾದರಿ ಹಾಗೂ ಕೃಷಿ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಮಾದರಿ ಮತ್ತು ಹೊಸ ಪಠ್ಯಪುಸ್ತಕದ ವಿಜ್ಞಾನ ವಿಷಯದಲ್ಲಿನ ಅನೇಕ ಮಾದರಿಯನ್ನು ಮನೆಯಲ್ಲಿಯೇ ಸಿದ್ಧಪಡಿಸುತ್ತಿದ್ದೇನೆ ಎಂದು ತನ್ನ ಅಧ್ಯಯನದ ಮಾಹಿತಿ ಹಂಚಿಕೊಂಡರು.

ಮನೆಯಲ್ಲಿ ಟಿವಿ ಇಲ್ಲ. ಮೊಬೈಲ್‌ ಬಳಕೆ ತುಂಬಾ ಕಡಿಮೆ. ಹೀಗಾಗಿ ಸಮಯ ಸಿಕ್ಕಾಗಲೆಲ್ಲ ಇಂಥ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೇನೆ. ಹೀಗಾಗಿ ಕೀಟಗಳ ಮಾದರಿಯನ್ನು ತಯಾರಿಸಲು ಆಸಕ್ತಿ ಹೆಚ್ಚಾಯಿತು ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !