ಮುಳವಾಡ ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆ ಮೂಲಕ ಕೆರೆಗೆ ನೀರು: ಎಂ.ಬಿ.ಪಾಟೀಲ

ಸೋಮವಾರ, ಮೇ 27, 2019
33 °C
ಕಾಲುವೆ ಕಾಮಗಾರಿ

ಮುಳವಾಡ ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆ ಮೂಲಕ ಕೆರೆಗೆ ನೀರು: ಎಂ.ಬಿ.ಪಾಟೀಲ

Published:
Updated:
Prajavani

ವಿಜಯಪುರ: ‘ಮುಳವಾಡ ಏತ ನೀರಾವರಿ ಯೋಜನೆಯ ವಿಜಯಪುರ ಮುಖ್ಯ ಕಾಲುವೆಯಿಂದ, ಬುಧವಾರದಿಂದ ನೀರು ಹರಿಸಲು ಎಲ್ಲ ಸಿದ್ಧತೆಗಳು ಪೂರ್ಣಗೊಳ್ಳುತ್ತಿವೆ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.

‘ವಿಜಯಪುರ ಮುಖ್ಯ ಕಾಲುವೆಯ ಕೂಡಗಿ ಹತ್ತಿರದ ರೈಲ್ವೆ ಲೈನ್ ಪಾಸಿಂಗ್ ಕಾಮಗಾರಿ ತಾಂತ್ರಿಕ ತೊಂದರೆಯಿಂದ ವಿಳಂಬವಾಗಿ ಸಾಗಿದ್ದು, ಈಗಾಗಲೇ ಗುತ್ತಿಗೆ ಅವಧಿ 18 ತಿಂಗಳು ಪೂರ್ಣಗೊಂಡು, ಅವಧಿ ವಿಸ್ತರಣೆಯ 6 ತಿಂಗಳು ಸಹ ಮುಗಿದರೂ ಈ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ.’

‘ಚಲಿಸುವ ರೈಲ್ವೆ ಲೈನ್‌ಗಳ ಕೆಳಭಾಗದಲ್ಲಿಯೇ ಬೃಹತ್ ಕಾಮಗಾರಿ ನಡೆಯುತ್ತಿರುವುದು ವಿಳಂಬಕ್ಕೆ ಕಾರಣವಾಗಿದೆ. ರೈಲುಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಇಲಾಖೆಯವರು ಒಪ್ಪುತ್ತಿಲ್ಲ. ಕಳೆದ ವರ್ಷದಂತೆ ಈ ಬಾರಿಯೂ ತಾತ್ಕಾಲಿಕ ಪುಸ್ಸಿಂಗ್ ಕಾಮಗಾರಿ ಮೂಲಕ ನೀರು ಹರಿಸಲು ಸೂಚಿಸಲಾಗಿದ್ದು, ಇದಕ್ಕಾಗಿ ₹ 60 ಲಕ್ಷ ಹೆಚ್ಚುವರಿ ಅನುದಾನ ಒದಗಿಸಲಾಗಿದೆ’ ಎಂದು ಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

‘93 ಕ್ಯೂಮೆಕ್ಸ್ ನೀರು ಹರಿಸುವ ಸಾಮರ್ಥ್ಯ ಹೊಂದಿರುವ, ವಿಜಯಪುರ ಮುಖ್ಯ ಕಾಲುವೆಯಲ್ಲಿ ತಾತ್ಕಾಲಿಕ ಪೈಪ್‌ ಪುಸ್ಸಿಂಗ್‌ನಿಂದ ಕೇವಲ 22 ಕ್ಯೂಮೆಕ್ಸ್ ನೀರು ಮಾತ್ರ ಹರಿಯಲಿದ್ದು, ವಿಜಯಪುರ ಮುಖ್ಯ ಕಾಲುವೆಯಲ್ಲಿ 136 ಕಿ.ಮೀ. ಜಾಲವಾದವರೆಗೆ ನೀರು ಹರಿಸಿ, ಕಗ್ಗೋಡ, ಕುಮಟಗಿ, ಪಡಗಾನೂರ, ದೇವರಹಿಪ್ಪರಗಿ, ಮಣೂರ, ಮಾರ್ಕಬ್ಬಿನಹಳ್ಳಿ, ಬೊಮ್ಮನಜೋಗಿ ಕೆರೆಗಳನ್ನು ತುಂಬಲಾಗುವುದು.’

‘ಹೂವಿನ ಹಿಪ್ಪರಗಿ ಶಾಖಾ ಕಾಲುವೆಯಿಂದ 40 ಕಿ.ಮೀ.ವರೆಗೆ ನೀರು ಹರಿಸಿ, ನಾಗವಾಡ, ಮಣೂರ, ಮೂಕರ್ತಿಹಾಳ, ಅಲಕೊಪ್ಪರ, ರೂಢಗಿ ಹಾಗೂ ಬಸವನಬಾಗೇವಾಡಿ ಶಾಖಾ ಕಾಲುವೆಯಿಂದ 40 ಕಿ.ಮೀ. ನೀರು ಹರಿಸಿ, ಡೋಣೂರ, ಬಿಸನಾಳ, ರೆಬಿನಾಳ, ಸಾತಿಹಾಳ ಕೆರೆಗಳನ್ನು ಮತ್ತು ತಿಡಗುಂದಿ ಶಾಖಾ ಕಾಲುವೆಗೆ 2.7 ಕಿ.ಮೀ. ವರೆಗೆ ನೀರು ಹರಿಸಿ, ಮದಬಾವಿ, ನಾಗಠಾಣ ಕೆರೆಗಳನ್ನು ಕುಡಿಯುವ ನೀರಿನ ಅಗತ್ಯಕ್ಕೆ ಮಾತ್ರ ತುಂಬಿಸಲು ಉದ್ದೇಶಿಸಲಾಗಿದೆ’ ಎಂದಿದ್ದಾರೆ.

‘ಈ ಕೆರೆಗಳಲ್ಲಿ ಕೆಲವು ಕೆರೆಗಳ ಮೇಲೆಯೇ ಬಹುಹಳ್ಳಿಗಳ ಕುಡಿಯುವ ನೀರಿನ ಯೋಜನೆಗಳು ಅವಲಂಬಿತವಾಗಿದ್ದು, ಆ ಎಲ್ಲ ಯೋಜನೆಗಳಿಗೆ ವಿಜಯಪುರ ಮುಖ್ಯ ಕಾಲುವೆಗಳಿಂದ ನೀರು ಹರಿಸುವುದರಿಂದ ಅನುಕೂಲವಾಗಲಿದೆ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ನೀರಿನ ತೀವ್ರ ಅಭಾವ ಇರುವುದರಿಂದಾಗಿ ವಾರಾಬಂಧಿ ಪದ್ಧತಿಯನ್ನು ಕಟ್ಟು ನಿಟ್ಟಾಗಿ ಅನುಸರಿಸಿ ನೀರು ಹರಿಸಲಾಗುತ್ತಿದ್ದು, ರೈತರು ಸಹಕರಿಸಬೇಕು’ ಎಂದು ಸಚಿವರು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !