ಪತ್ರಿಕಾಗೋಷ್ಠಿ ನಡೆಸಿದ್ದವರ ಬಂಧನ

7
ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ; ಪ್ರಕರಣ ದಾಖಲು

ಪತ್ರಿಕಾಗೋಷ್ಠಿ ನಡೆಸಿದ್ದವರ ಬಂಧನ

Published:
Updated:

ಬೆಂಗಳೂರು: ‘ಹೆಚ್ಚುವರಿ ಪೊಲೀಸ್ ಕಮಿಷನರ್‌ (ಅಪರಾಧ) ಅಲೋಕ್‌ಕುಮಾರ್, ಆ್ಯಂಬಿಡೆಂಟ್ ಕಂಪನಿಯ ಫರೀದ್ ರಕ್ಷಣೆಗೆ ನಿಂತಿದ್ದಾರೆ’ ಎಂದು ಆರೋಪಿಸಿ ಪತ್ರಿಕಾಗೋಷ್ಠಿ ನಡೆಸಿದ್ದ ಹೂಡಿಕೆದಾರ ಜಯೀದ್‌ ಖಾನ್‌ ಹಾಗೂ ಸಿರಾಜುದ್ದೀನ್ ಎಂಬುವರನ್ನು ಸಿಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

‘ಆ್ಯಂಬಿಡೆಂಟ್ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಅದರ ಮಧ್ಯೆಯೇ ಜಯೀದ್‌ಖಾನ್ ಹಾಗೂ ಸಿರಾಜುದ್ದೀನ್, ಪತ್ರಿಕಾಗೋಷ್ಠಿ ನಡೆಸಿ ಸಿಸಿಬಿ ವಿರುದ್ಧವೇ ಸುಳ್ಳು ಆರೋಪ ಮಾಡಿದ್ದಾರೆ. ಅದನ್ನು ಗಂಭೀರವಾಗಿ ಪರಿಗಣಿಸಿ, ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಸುಳ್ಳು ಹೇಳಿಕೆ ನೀಡಿದ ಆರೋಪದಡಿ ಅವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಅಲೋಕ್‌ಕುಮಾರ್ ತಿಳಿಸಿದರು. 

ಸಿಬಿಐ ತನಿಖೆಗೆ ಒತ್ತಾಯಿಸಿದ್ದರು: ಬುಧವಾರವಷ್ಟೇ ಪತ್ರಿಕಾಗೋಷ್ಠಿ ನಡೆಸಿದ್ದ ಜಯೀದ್ ಖಾನ್, ‘ಪ್ರಕರಣದ ತನಿಖೆ ಹಳ್ಳ ಹಿಡಿಯುತ್ತಿದೆ. ತನಿಖೆಯನ್ನು ಸಿಬಿಐಗೆ ಒಪ್ಪಿಸಿ’ ಎಂದು ಒತ್ತಾಯಿಸಿದ್ದರು.

ಕಚೇರಿ ಮೇಲೆ ದಾಳಿ: ಪ್ರಕರಣದ ವಿಚಾರಣೆಗೆ ಗೈರಾಗಿದ್ದರಿಂದಾಗಿ ಉದ್ಯಮಿ ವಿಜಯ ಟಾಟಾ ಅವರ ಮನೆ ಹಾಗೂ ಕಚೇರಿ ಮೇಲೆ ಸಿಸಿಬಿ ಪೊಲೀಸರು ಗುರುವಾರ ದಾಳಿ ಮಾಡಿದರು.

ಆರ್‌.ಟಿ.ನಗರದಲ್ಲಿರುವ ಕಚೇರಿ ಹಾಗೂ ಅಮೃತಹಳ್ಳಿಯಲ್ಲಿರುವ ಮನೆಯಲ್ಲಿ ಶೋಧ ನಡೆಸಿದ ಅಧಿಕಾರಿಗಳು, ಕೆಲವು ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ ಎಂದು ಗೊತ್ತಾಗಿದೆ.

‘ವಿಚಾರಣೆಗೆ ಬರುವಂತೆ ಹಲವು ಬಾರಿ ನೋಟಿಸ್‌ ನೀಡಿದರೂ ಗೈರಾಗಿದ್ದರು. ಹೀಗಾಗಿ ದಾಳಿ ನಡೆಸಲಾಯಿತು. ವಿಚಾರಣೆಗೆ ಬರುವಂತೆ ವಿಜಯ್ ಟಾಟಾಗೆ ಮತ್ತೊಂದು ನೋಟಿಸ್‌ ನೀಡಲಾಯಿತು’ ಎಂದು ಸಿಸಿಬಿ ಮೂಲಗಳು ತಿಳಿಸಿವೆ. 

₹104 ಕೋಟಿ ವಂಚನೆ; ₹60 ಕೋಟಿಗೆ ಮಾತ್ರ ಲೆಕ್ಕ

‘ಆ್ಯಂಬಿಡೆಂಟ್ ಕಂಪನಿಯಿಂದ ಹೂಡಿಕೆದಾರರಿಗೆ ₹104 ಕೋಟಿ ವಂಚನೆಯಾಗಿರುವುದಾಗಿ ಹೇಳುತ್ತಿರುವ ಆರೋಪಿಗಳು, ₹60 ಕೋಟಿಗೆ ಮಾತ್ರ ಲೆಕ್ಕ ನೀಡುತ್ತಿದ್ದಾರೆ’ ಎಂದು ಸಿಸಿಬಿ ತಿಳಿಸಿದೆ.

ಆ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಸಿಸಿಬಿ ಅಧಿಕಾರಿಗಳು, ‘ಪ್ರಕರಣದ ಆರೋಪಿಗಳಾದ ಕಂಪನಿಯ ಸೈಯದ್ ಫರೀದ್ ಅಹಮದ್ ಮತ್ತು ಸೈಯದ್ ಅಫಾಕ್ ಅಹಮದ್ ಅವರು ತನಿಖೆಗೆ ಸಹಕರಿಸುತ್ತಿಲ್ಲ. ಹಣವನ್ನೆಲ್ಲ ಎಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಬಗ್ಗೆಯೂ ಹೇಳುತ್ತಿಲ್ಲ. ಅವರಿಬ್ಬರ ಜಾಮೀನು ರದ್ದುಪಡಿಸುವಂತೆ ನ್ಯಾಯಾಲಯಕ್ಕೂ ಮನವಿ ಸಲ್ಲಿಸಿದ್ದೇವೆ’ 
ಎಂದಿದ್ದಾರೆ.

‘2016ರ ಡಿಸೆಂಬರ್‌ನಲ್ಲಿ ಆರಂಭವಾದ ಆ್ಯಂಬಿಡೆಂಟ್ ಕಂಪನಿ, ಹೂಡಿಕೆದಾರರಿಗೆ ವಂಚಿಸಿದ ಬಗ್ಗೆ ಡಿ.ಜೆ.ಹಳ್ಳಿ ಸೇರಿದಂತೆ ಹಲವು ಠಾಣೆಗಳಲ್ಲಿ 6 ಪ್ರಕರಣಗಳು ದಾಖಲಾಗಿದ್ದವು. ಅವುಗಳ ತನಿಖೆಯ ಹೊಣೆಯನ್ನು ನಗರ ಪೊಲೀಸ್ ಕಮಿಷನರ್ ಅವರು ಸಿಸಿಬಿಗೆ ವಹಿಸಿದ್ದರು’.

‘ಆರೋಪಿ ರಮೇಶ್, ಆಲಿಖಾನ್, ಜನಾರ್ದನ ರೆಡ್ಡಿ, ಇನಾಯತ್ ಉಲ್ಲಾ ವಹಾಬ್‌ ಅವರನ್ನು ಬಂಧಿಸಲಾಗಿತ್ತು. ಈ ಮೂವರು ಹಾಗೂ ಫರೀದ್ ಮತ್ತು ಅಫಾಕ್ ಜಾಮೀನು ಪಡೆದುಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.

’ಆರೋಪಿಗಳಿಂದ ಹಣ ವಾಪಸ್‌ ಹಿಂಪಡೆಯುವ ಪ್ರಕ್ರಿಯೆ ಆರಂಭವಾಗಿದೆ. ಡಿಡಿ ರೂಪದಲ್ಲಿ ನ್ಯಾಯಾಲಯದ ಹೆಸರಿನಲ್ಲಿರುವ ಎಸ್‌ಬಿಐ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ. ಹಣ ಮರಳಿಸದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ಕಂಪನಿಯ ಫರೀದ್ ಆಸ್ತಿಯ ಬಗ್ಗೆ ಮಾಹಿತಿ ಇದ್ದರೆ ತಿಳಿಸಬಹುದು (ಮೊಬೈಲ್ 9480801030)’ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !