ಶನಿವಾರ, ನವೆಂಬರ್ 23, 2019
18 °C
‘ಕಾರಾಗೃಹ ಸುಧಾರಣಾ ನಿಗಮ’ ಸ್ಥಾಪನೆ: ಗೃಹ ಸಚಿವ

ಸನ್ನಡತೆ: 141 ಕೈದಿಗಳಿಗೆ ಬಿಡುಗಡೆ ಭಾಗ್ಯ

Published:
Updated:
Prajavani

ಬೊಮ್ಮನಹಳ್ಳಿ/ಬೆಂಗಳೂರು: ರಾಜ್ಯದ 7 ಕೇಂದ್ರ ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 141 ಕೈದಿಗಳನ್ನು, ಮಹಾತ್ಮ ಗಾಂಧೀಜಿ 150ನೇ ಜಯಂತಿ ಅಂಗವಾಗಿ ಸನ್ನಡತೆ ಆಧಾರದಲ್ಲಿ ಸೋಮವಾರ ಬಿಡುಗಡೆ ಮಾಡಲಾಯಿತು.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೈದಿಗಳಿಗೆ ಬಿಡುಗಡೆ ಪ್ರಮಾಣ ಪತ್ರ ವಿತರಿಸಿ ಗುಲಾಬಿ ಹೂವು ಕೊಟ್ಟು ಜೈಲಿನಿಂದ ಬೀಳ್ಕೊಟ್ಟರು. 

ಕೈದಿಗಳು ಜೈಲಿನಿಂದ ಹೊರಬರುತ್ತಿದ್ದಂತೆ ಕುಟುಂಬದವರು ಸಂತಸದಿಂದ ಸ್ವಾಗತಿಸಿದರು. ಸಿಹಿ ತಿನ್ನಿಸಿ ಖುಷಿ ಹಂಚಿಕೊಂಡರು. ಭಾವುಕರಾಗಿ ಕಣ್ಣೀರಿಟ್ಟರು. 

‘2001ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಶಿಕ್ಷೆ ಆಗಿತ್ತು. 14 ವರ್ಷ 8 ತಿಂಗಳು ಜೈಲುವಾಸ ಅನುಭವಿಸಿದೆ. ನನಗೀಗ 64 ವರ್ಷ. ತೋಳಿನಲ್ಲಿ ಬಲವಿರುವಷ್ಟು ದಿನ ಕೃಷಿ ಮಾಡಿ ಜೀವನ ಸಾಗಿಸುತ್ತೇನೆ’ ಎಂದು ತರೀಕೆರೆಯ ಓಂಕಾರಪ್ಪ ಪ್ರತಿಕ್ರಿಯಿಸಿದರು.

ಕೈದಿ ಶಿವಮೊಗ್ಗದ ಕೃಷ್ಣಮೂರ್ತಿ, ‘ಗಣೇಶ ಹಬ್ಬದಂದು ನಡೆದ ಕೊಲೆ ಪ್ರಕರಣದಲ್ಲಿ ಶಿಕ್ಷೆ ಆಗಿತ್ತು. ಜೈಲಿಗೆ ಬಂದಾಗ ನನಗೆ 24 ವರ್ಷ. 19 ವರ್ಷ ಜೈಲಿನಲ್ಲಿದ್ದೆ. ನನಗೆ ತಪ್ಪಿನ ಅರಿವಾಗಿದೆ. ಮುಂದೆ ಯಾವುದೇ ತಪ್ಪು ಮಾಡುವುದಿಲ್ಲ’ ಎಂದರು.  

ಕಾರಾಗೃಹ ಸುಧಾರಣಾ ನಿಗಮ ಸ್ಥಾಪನೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ಜೈಲುಗಳ ಸುಧಾರಣೆಗಾಗಿ ರಾಜ್ಯದಲ್ಲಿ ‘ಕಾರಾಗೃಹ ಸುಧಾರಣಾ ನಿಗಮ’ ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ’ ಎಂದರು.

‘ಬೆಂಗಳೂರು, ಶಿವಮೊಗ್ಗ, ಬೀದರ್, ವಿಜಯಪುರ ಮತ್ತು ಮಂಗಳೂರಿನಲ್ಲಿ ಐದು ಹೊಸ ಕಾರಾಗೃಹಗಳನ್ನು ನಿರ್ಮಿಸಲು ಒಪ್ಪಿಗೆ ನೀಡಲಾಗಿದೆ’ ಎಂದು ತಿಳಿಸಿದರು.

ರಾಷ್ಟ್ರಪತಿ ಪದಕ ಪಡೆದ ಜೈಲರ್ ಎಂ.ಎಸ್.ಹೊಸೂರು ಹಾಗೂ ಮುಖ್ಯಮಂತ್ರಿ ಪದಕ ಪಡೆದ 10 ಸಿಬ್ಬಂದಿಯನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಪ್ರತಿಕ್ರಿಯಿಸಿ (+)