ಸರ ಅಪಹರಣ: ಒಂದೇ ತಂಡದ ಕೃತ್ಯ?

ಗುರುವಾರ , ಜೂಲೈ 18, 2019
24 °C
ಕೆಲವೇ ಗಂಟೆಗಳ ಅಂತರದಲ್ಲಿ ನಾಲ್ಕು ಕಡೆ ಕೈಚಳಕ ತೋರಿದ ಕಳ್ಳರು

ಸರ ಅಪಹರಣ: ಒಂದೇ ತಂಡದ ಕೃತ್ಯ?

Published:
Updated:

ಬೆಂಗಳೂರು: ಕೆಲವೇ ಗಂಟೆಗಳ ಅಂತರದಲ್ಲಿ ನಗರದ ನಾಲ್ಕು ಕಡೆಗಳಲ್ಲಿ ನಡೆದ ಸರ ಅಪಹರಣ ಘಟನೆಗಳು ಮಹಿಳೆಯರನ್ನು ಬಿಚ್ಚಿ ಬೀಳಿಸಿವೆ. ಹೆಲ್ಮೆಟ್‌ ಧರಿಸಿ ಬೈಕ್‌ನಲ್ಲಿ ಬಂದ ಇಬ್ಬರು ಈ ಕೃತ್ಯ ಎಸಗಿದ್ದು, ಎಲ್ಲ ನಾಲ್ಕೂ ಕಡೆಗಳಲ್ಲಿ ಒಂದೇ ತಂಡ ಕೈಚಳಕ ತೋರಿರುವ ಅನುಮಾನ ವ್ಯಕ್ತವಾಗಿದೆ.

ಮಲ್ಲೇಶ್ವರದ ಈಜುಕೊಳ ಬಡಾವಣೆಯ 12ನೇ ಅಡ್ಡ ರಸ್ತೆಯ ನಿವಾಸಿ ಯಶೋಧ ಅವರು ಮಧ್ಯಾಹ್ನ 12.30ರ ಸುಮಾರಿಗೆ ಮನೆ ಸಮೀಪದ ಅಂಗಡಿಯೊಂದರಿಂದ ಸಾಮಾನುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು, ₹1.20 ಲಕ್ಷ ಮೌಲ್ಯದ 50 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಅಪಹರಿಸಿಪರಾರಿಯಾಗಿದ್ದಾರೆ.

ಕಳ್ಳರ ಈ ಕೃತ್ಯ ಸ್ಥಳೀಯ ಸಿ.ಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ವೈಯಾಲಿಕಾವಲ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಂತರ, ಮಧ್ಯಾಹ್ನ 12.50ರ ಸುಮಾರಿಗೆ ವೈಯಾಲಿ ಕಾವಲ್‌ನ 13ನೇ ಅಡ್ಡ ರಸ್ತೆಯ ನಿವಾಸಿ ಮಧುಮತಿ ಅವರ ಕತ್ತಿನಲ್ಲಿದ್ದ ₹2.20 ಲಕ್ಷ ಮೌಲ್ಯದ 60 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಬೈಕ್‌ನಲ್ಲಿ ಬಂದ ಇಬ್ಬರು ಅಪಹರಿಸಿ ಪರಾರಿಯಾಗಿದ್ದಾರೆ. ಮಲ್ಲೇಶ್ವರದ 18ನೇ ಅಡ್ಡ ರಸ್ತೆಯಲ್ಲಿರುವ ಬೆಂಗಳೂರು ಒನ್‌ ಘಟಕಕ್ಕೆ ಕಂದಾಯ ಪಾವತಿಸಲು ಅವರು ತೆರಳುತ್ತಿದ್ದಾಗ ಈ ಕೃತ್ಯ ನಡೆದಿದೆ. ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲವೇ ಗಂಟೆಗಳ ಬಳಿಕ ವಿಜಯನಗರದ ಆರ್‌.ಪಿ.ಸಿ ಲೇಔಟ್‌ ಬಳಿ ಸರ ಅಪಹರಣ ನಡೆದಿದೆ. ಸ್ಥಳೀಯ ಸಂಕಷ್ಟಹರ
ದೇವಸ್ಥಾನದಲ್ಲಿ ಭಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದ್ದ ಜಗದಂಬಾ ಎಂಬುವರ ಕತ್ತಿನಲ್ಲಿದ್ದ ₹2 ಲಕ್ಷ ಮೌಲ್ಯದ 85 ಗ್ರಾಂ ಚಿನ್ನದ ಸರ ಕಳವು ಆಗಿದೆ. ಈ ಬಗ್ಗೆ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಪ್ಪನ ಅಗ್ರಹಾರದ ಸಿಂಗಸಂದ್ರದ ಬಳಿ ಮಧ್ಯಾಹ್ನ 3.50ಕ್ಕೆ ಮತ್ತೊಂದು ಸರ ಅಪಹರಣ ಪ್ರಕರಣ ನಡೆದಿದೆ. ಮೊಮ್ಮಗಳನ್ನು ಅಂಗನವಾಡಿ ಕೇಂದ್ರದಿಂದ ಮನೆಗೆ ಕರೆದುಕೊಂಡು ಹೋಗುತ್ತಿದ್ದ ಚಂದ್ರಮ್ಮ ಎಂಬುವರ ಕತ್ತಿನಲ್ಲಿದ್ದ 38 ಗ್ರಾಂ ತೂಕದ ಚಿನ್ನದ ಸರವನ್ನು ಕಳ್ಳರು ಅಪಹರಿಸಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೈಯಾಲಿಕಾವಲ್‌, ಮಲ್ಲೇಶ್ವರ, ಆರ್‌.ಪಿ.ಸಿ ಲೇಔಟ್‌ ಮತ್ತು ಪರಪ್ಪನ ಅಗ್ರಹಾರ ಬಳಿ ಕೃತ್ಯ ಎಸಗಿದ ಬಳಿಕ ಕಳ್ಳರು ಹೊಸೂರು ಮಾರ್ಗವಾಗಿ ತಮಿಳುನಾಡಿಗೆ ಪರಾರಿಯಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ವಿಶೇಷ ತಂಡ: ನಗರದಲ್ಲಿ ನಡೆಯುತ್ತಿರುವ ಸರಗಳವು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್‌ ಕಮಿಷನರ್‌ ಅಲೋಕ್‌ ಕುಮಾರ್‌, ಸ್ಥಳೀಯ ಠಾಣೆಗಳ ಇನ್‌ಸ್ಪೆಕ್ಟರ್‌ಗಳೂ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳ ಜೊತೆ ಚರ್ಚೆ
ನಡೆಸಿದ್ದಾರೆ. ಕಳ್ಳರ ಪತ್ತೆಗೆ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸುವಂತೆ ಸಲಹೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !