ಭಾನುವಾರ, ಮಾರ್ಚ್ 7, 2021
22 °C
ದಸರಾ ಮಹೋತ್ಸವದ ಮೊದಲ ದಿನ ಮನಸೂರೆಗೊಂಡ ಭಕ್ತಿಸುಧೆ, ನಾಟ್ಯಸೌರಭ

ಚಂದನ್ ಮೋಡಿಗೆ ಕುಣಿದ ಜನತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ಮತ್ತು ತಂಡದ ಮೋಡಿಗೆ ನಗರದ ಜನ ಹುಚ್ಚೆದ್ದು ಕುಣಿದರು.

ಜಿಲ್ಲಾ ದಸರಾ ಮಹೋತ್ಸದ ಮೊದಲ ದಿನ ಚಂದನ್ ಶೆಟ್ಟಿ ಮತ್ತು ತಂಡದಿಂದ ರಸಸಂಜೆ ಆಯೋಜಿಸಲಾಗಿತ್ತು.

ತಂಡದ ಪ್ರದರ್ಶನದ ನಿರೀಕ್ಷೆಯಲ್ಲಿ ಸಂಜೆ 6 ಗಂಟೆಗೆ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಅವರು ಸರಿಯಾಗಿ ಅವಕಾಶ ಕೊಟ್ಟಿರಲಿಲ್ಲ. ರಾತ್ರಿ 7.45ಕ್ಕೆ ಕಾರ್ಯಕ್ರಮ ಆರಂಭ ಆಗುತ್ತಲೇ ಜನರ ಕೂಗಾಟ, ಅರಚಾಟ ಮುಗಿಲು ಮುಟ್ಟಿತು.

ಪವರ್ ಚಿತ್ರದ 'ಧಮ್ ಪವರೇ' ಹಾಡಿನ ಮೂಲಕ ವೇದಿಕೆ ಪ್ರವೇಶಿಸಿದ ಚಂದನ್ ಶೆಟ್ಟಿ, 'ಗೆಳೆಯ ಗೆಳೆಯ' ಹಾಗೂ 'ಪಕ್ಕಾ ಚಾಕೊಲೆಟ್ ಗರ್ಲ್' ಬೆನ್ನು ಬೆನ್ನಿಗೆ ಹಾಡಿ, ಪ್ರೇಕ್ಷಕರು ಕುಣಿದು ಕುಪ್ಪಳಿಸುವಂತೆ ಮಾಡಿದರು.

ಗೊರವರ ಕುಣಿತ, ವೀರಗಾಸೆ, ಕಂಸಾಳೆ ನೃತ್ಯದ ವೇಷಭೂಷಣದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡು ವಿಶೇಷ  ಪೋಷಾಕು ತೊಟ್ಟಿದ್ದ ಚಂದನ್ ಶೆಟ್ಟಿ, 'ಒಂದು ವರ್ಷದ ಹಿಂದೆ ಮಹದೇಶ್ವರ ಸ್ವಾಮಿಯ ದರ್ಶನ ಮಾಡಿದ್ದೆ. ಈಗ ಚಾಮರಾಜನಗರದಲ್ಲಿ ಪ್ರದರ್ಶನ ನೀಡುವಂತಾಗಿದೆ' ಎಂದು ಹೇಳಿದರು.

ಚಂದನ್ ತಂಡದ ಭಾಗವಾಗಿದ್ದ ಕನ್ನಡ ಕೋಗಿಲೆ ಖ್ಯಾತಿಯ ನೀತು, ನಿಹಾಲ್, ಕರಿಬಸವಯ್ಯ ಹಾಗೂ ಸಾಗರ್ ಅವರು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಕನ್ನಡವೇ ನಮ್ಮಮ್ಮ, ಕರುನಾಡ ತಾಯಿ ಸದಾ ಚಿನ್ಮಯಿ, ಕೋಡಗನ ಕೋಳಿ ನುಂಗಿತ್ತಾ... ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.

ಮತ್ತೆ ಪ್ರದರ್ಶನ ಮುಂದುವರಿಸಿದ ಚಂದನ್ ಶೆಟ್ಟಿ ‘ಗೊಂಬೆ ಗೊಂಬೆ’, ಹೂ ಆರ್‌ ಯೂ ಟು ಮಿ, ಸುಂಟರಗಾಳಿ, ಶೋಕಿಲಾಲ, ಪೈಲ್ವಾನ್‌ ಸಿನಿಮಾದ ಹಾಡುಗಳನ್ನು ಹಾಡಿ ಚಪ್ಪಾಳೆ ಗಿಟ್ಟಿಸಿದರು. ಅಂತಿಮವಾಗಿ ತಮ್ಮ ‘3 ಪೆಗ್’ ಹಾಡನ್ನು ಹಾಡಿ ಪ್ರದರ್ಶನಕ್ಕೆ ಕೊನೆಹಾಡಿದರು.

ಇದಕ್ಕೂ ಮೊದಲು ಸ್ಥಳೀಯ ಕಲಾವಿದರು ಪ್ರದರ್ಶಿಸಿದ ಭಕ್ತಿ ಸುಧೆ ಮನಸೂರೆಗೊಂಡಿತು.

ಅನುಶ್ರೀಗೂ ಚಪ್ಪಾಳೆ

ಟಿವಿ ನಿರೂಪಕಿ ಅನುಶ್ರೀ ಕಾರ್ಯಕ್ರಮ ನಿರೂಪಣೆ ಮಾಡಿದರು. ಅವರಿಗೂ ಜನ ರಿಂದ ಅಬ್ಬರದ ಚಪ್ಪಾಳೆ ಸ್ವಾಗತ ಸಿಕ್ಕಿತು. ಹುಡುಗ, ಹುಡುಗಿಯರು ಎಂಬ ಭೇದ ವಿಲ್ಲದೆ, ಅನುಶ್ರೀ ಅವರ ಪ್ರತಿ ಮಾತಿಗೂ ಚಪ್ಪಾಳೆ, ಶಿಳ್ಳೆ ಹೊಡೆದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.