ಸ್ಪೀಕರ್‌ಗೆ ಮುತ್ತಿಗೆ, ವಿಕ್ರಮಸಿಂಘೆ, ರಾಜಪಕ್ಸೆ ಬೆಂಬಲಿಗ ಸಂಸದರ ಹೊಯ್‌–ಕೈ

7
ರಣರಂಗವಾದ ಶ್ರೀಲಂಕಾ ಸಂಸತ್ತು

ಸ್ಪೀಕರ್‌ಗೆ ಮುತ್ತಿಗೆ, ವಿಕ್ರಮಸಿಂಘೆ, ರಾಜಪಕ್ಸೆ ಬೆಂಬಲಿಗ ಸಂಸದರ ಹೊಯ್‌–ಕೈ

Published:
Updated:
Deccan Herald

ಕೊಲಂಬೊ: ದ್ವೀಪರಾಷ್ಟ್ರ ಶ್ರೀಲಂಕಾ ಸಂಸತ್ತು ಗುರುವಾರ ಭಾರೀ ಕೋಲಾಹಲಕ್ಕೆ ಸಾಕ್ಷಿಯಾಯಿತು. ಅವಿಶ್ವಾಸ ನಿಲುವಳಿ ಗೊತ್ತುವಳಿ ವಿಚಾರದಲ್ಲಿ ರಾಜಪಕ್ಸೆ– ವಿಕ್ರಮಸಿಂಘೆ ಬೆಂಬಲಿತ ಸಂಸತ್‌ ಸದಸ್ಯರು ಪರಸ್ಪರ ಕೈ ಕೈ ಮಿಲಾಯಿಸಿದರು. ಈ ವೇಳೆ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ನಿಷ್ಠರೊಬ್ಬರು ಸಂಸದರೊಬ್ಬರು ಗಾಯಗೊಂಡರು.

ಪ್ರಧಾನಿ ಮಹಿಂದಾ ರಾಜಪಕ್ಸೆ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಬುಧವಾರ ಧ್ವನಿಮತದಿಂದ ಅಂಗೀಕರಿಸಲಾಗಿತ್ತು.

ಈ ಕುರಿತಂತೆ ಹೇಳಿಕೆ ನೀಡಲು ರಾಜಪಕ್ಸೆ ಅವರಿಗೆ ಸ್ಪೀಕರ್‌ ಕರು ಜಯಸೂರ್ಯ ಅವರು ಅನುಮತಿ ನೀಡಿದರು. ಈ ವೇಳೆ ಮಾತನಾಡಿದ ರಾಜಪಕ್ಸೆ, ‘ಹೊಸ ಚುನಾವಣೆಗೆ ಎಲ್ಲ 225 ಮಂದಿ ಸದಸ್ಯರು ನನ್ನ ಜೊತೆ ನಿಲ್ಲುವಂತೆ ಮನವಿ ಮಾಡುತ್ತೇನೆ. ನಮಗೆ ಸಾರ್ವತ್ರಿಕ ಚುನಾವಣೆ ಬೇಕಿದೆ, ಈಗಿನ ರಾಜಕೀಯ ಬಿಕ್ಕಟ್ಟು ಬಗೆಹರಿಸಲು, ಹೊಸದಾಗಿ ಚುನಾವಣೆ ನಡೆಸುವುದೇ ಸೂಕ್ತ’ ಎಂದು ತಿಳಿಸಿದರು.

ಧ್ವನಿಮತದ ಬದಲಾಗಿ, ಸದಸ್ಯರ ಹೆಸರನ್ನು ಕರೆದು ಅವಿಶ್ವಾಸ ನಿಲುವಳಿ ಮಂಡಿಸಲಿ ಎಂದು ಯುಎನ್‌ಪಿ ಸಂಸದ ಲಕ್ಷ್ಮಣ್‌ ಕಿರಿಯೆಲ್ಲಾ ಅವರು ಸ್ಪೀಕರ್‌ ಅವರನ್ನು ಒತ್ತಾಯಿಸಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಸ್ಪೀಕರ್‌, ಸದಸ್ಯರು ಒಪ್ಪಿಗೆ ಸೂಚಿಸಿದರೆ, ಮತ್ತೊಮ್ಮೆ ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಿದ್ಧ ಎಂದು ಪ್ರಕಟಿಸಿದರು.

ಸ್ಪೀಕರ್‌ಗೆ ಮುತ್ತಿಗೆ: ಈ ವಿಚಾರ ಪ್ರಸ್ತಾ‍ಪಿಸುತ್ತಿದ್ದಂತೆಯೇ, ಅಧ್ಯಕ್ಷ ಸಿರಿಸೇನಾ, ರಾಜಪಕ್ಸೆ ಬೆಂಬಲಿತ ಸಂಸದರು ಸ್ಪೀಕರ್‌ ಅವರನ್ನು ಸುತ್ತುವರಿದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

‘ನಾನು ಸ್ಪೀಕರ್, ನಾನೇ ನಿರ್ಧರಿಸುತ್ತೇನೆ’ ಎಂದು ಸಂಸದರಿಗೆ ಸ್ಪೀಕರ್‌ ಜಯಸೂರ್ಯ ಅವರು ಎಚ್ಚರಿಕೆ ನೀಡಿದರು. 

‘ಇದರಿಂದ ಆಕ್ರೋಶಗೊಂಡ ಕೆಲವು ಸಂಸದರು ಸ್ಪೀಕರ್ ಕುರ್ಚಿಯತ್ತ ನೀರಿನ ಬಾಟಲಿ, ಪುಸ್ತಕ, ಕಸದ ಬುಟ್ಟಿಗಳನ್ನು ಎಸೆದರು. ಸ್ಪೀಕರ್‌ ಅವರ ಮೈಕ್ರೊಪೋನ್‌ ಮುರಿದ ಸಂಸದ ದಿಲಂ ಅಮುನುಗಮ ಅವರಿಗೆ ಕೈಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ’ ಎಂದು ಎಂದು ಸಂಡೇಟೈಮ್ಸ್‌ ವರದಿ ಮಾಡಿದೆ. 

ಹೊಯ್‌ ಕೈ: ಇದೇ ವೇಳೆ ಸ್ಪೀಕರ್‌ ಅವರ ಬಳಿಯಿದ್ಧ ಸಂಸದ ಪ್ರಸನ್ನ ರಣವೀರ, ನವೀನ್‌ ದಿಸ್ಸಾನಾಯಿಕೆ ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ. ಅರ್ಧ ತಾಸಿನ ತನಕ ಇದೇ ಪರಿಸ್ಥಿತಿ ಮುಂದುವರಿದಿತ್ತು. ಬಳಿಕ ಕಲಾಪವನ್ನು ಸ್ಪೀಕರ್‌ ಮುಂದೂಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !