ತಾಪಮಾನದಲ್ಲಿ ಏರಿಳಿತ; ಚಳಿಗೆ ತತ್ತರ

7
ವಿಜಯಪುರದಲ್ಲಿ ವಿಪರೀತ ಚಳಿ; ನಸುಕಿನಲ್ಲಿ ನಡುಗುತ್ತಿರುವ ಜನರು

ತಾಪಮಾನದಲ್ಲಿ ಏರಿಳಿತ; ಚಳಿಗೆ ತತ್ತರ

Published:
Updated:
Prajavani

ವಿಜಯಪುರ: ಜಿಲ್ಲೆಯ ತಾಪಮಾನದಲ್ಲಿ ನಿತ್ಯ ಏರಿಳಿತ ನಡೆದಿದೆ. ಕನಿಷ್ಠ ತಾಪಮಾನ ತೀವ್ರ ಕುಸಿದಿರುವುದರಿಂದ ಚಳಿ ವಿಪರೀತವಾಗಿದೆ. ಮೈಕೊರೆವ ಚಳಿಗೆ ಜನರು ತತ್ತರಿಸಿದ್ದಾರೆ. ನಸುಕಿನಲ್ಲಿ ಕೆಲಸ ಮಾಡಲೇಬೇಕಿರುವ ಅನಿವಾರ್ಯ ಇರುವವರು ಥಂಡಿ ತಡೆಯಲಾಗದೆ ನಡುಗುತ್ತಿದ್ದಾರೆ.

ಒಂದು ವಾರದ ಅವಧಿಯ ತಾಪಮಾನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಡಿ.27ರ ಗುರುವಾರ ಕನಿಷ್ಠ ತಾಪಮಾನ 18.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದರೆ, 28ರ ಶುಕ್ರವಾರ, 24 ತಾಸಿನ ಅಂತರದಲ್ಲೇ 7 ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿದಿದೆ.

ಈಚೆಗಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಒಂದೇ ದಿನ ಕನಿಷ್ಠ ತಾಪಮಾನ, ಭಾರಿ ಪ್ರಮಾಣದಲ್ಲಿ ಕುಸಿತಗೊಂಡ ದಾಖಲೆಯೂ ಡಿ.28ರಂದು ನಿರ್ಮಾಣಗೊಂಡಿದೆ ಎಂದು ವಿಜಯಪುರದ ಹೊರ ವಲಯದಲ್ಲಿರುವ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದ ಹವಾಮಾನ ವಿಭಾಗದ ಮೂಲಗಳು ತಿಳಿಸಿವೆ.

ಡಿ.29ರ ಶನಿವಾರ ಮತ್ತೆ 2 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ಕುಸಿದಿದ್ದು, ಜಿಲ್ಲೆಯಾದ್ಯಂಥ ಮೈಕೊರೆಯ ಚಳಿ ಹೆಚ್ಚಿದೆ. ಜ.3ರ ಗುರುವಾರ ಕನಿಷ್ಠ ತಾಪಮಾನ 8.8 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ನಿತ್ಯವೂ ತಾಪಮಾನದಲ್ಲಿ ಒಂದು–ಎರಡು ಡಿಗ್ರಿ ಏರಿಳಿತಗೊಳ್ಳುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ.

ನಸುಕಿನಲ್ಲೇ ಕೃಷಿ, ಹೈನುಗಾರಿಕೆ ಚಟುವಟಿಕೆಗಳಲ್ಲಿ ತಲ್ಲೀನರಾಗುವ ರೈತರು, ಹಾಲು ಮಾರುವವರು, ಪತ್ರಿಕೆ ವಿತರಿಸುವವರು, ವಾಯು ವಿಹಾರಿಗಳು, ಗೃಹಿಣಿಯರು, ಶಾಲೆಗೆ ತೆರಳುವ ಮಕ್ಕಳು, ಇನ್ನಿತರೆ ಕೆಲಸ ನಿರ್ವಹಿಸುವವರು ಮೈಕೊರೆವ ಚಳಿಗೆ ತತ್ತರಿಸಿದ್ದಾರೆ. ಬೆಚ್ಚನೆ ಉಡುಪಿನ ಮೊರೆ ಹೊಕ್ಕರೂ ಪ್ರಯೋಜನವಿಲ್ಲದಂತಾಗಿದೆ.

‘ಬೆಳಿಗ್ಗೆ 10 ದಾಟಿದರೂ ಚಳಿಯ ತೀವ್ರತೆ ಕಡಿಮೆಯಾಗಿರಲ್ಲ. ಭಾಳ ಚಳಿ ಇರುತ್ತದೆ. ಬೆಳಿಗ್ಗೆ 11ರ ತನಕವೂ ಮನೆಯಿಂದ ಹೊರ ಬೀಳಲ್ಲ. ಬಿಸಿಲು ಹೆಚ್ಚಾದ ಬಳಿಕವೇ ಕೆಲಸಕ್ಕೆ ಹೊರ ಬರುವೆ. ಇದಕ್ಕೂ ಮುನ್ನ ಪತ್ರಾಸಿನ ಮನೆಯ ಬಾಗಿಲು ಭದ್ರ ಮಾಡಿಕೊಂಡು, ಕುಳಿರ್ಗಾಳಿ ಒಳ ನುಸುಳದಂತೆ ಮಾಡಿಕೊಳ್ಳುವೆ. ಮನೆಯೊಳಗೆ ಎಲ್ಲ ಕೆಲಸ ನಿರ್ವಹಿಸುತ್ತಿರುವೆ’ ಎಂದು ವಯೋವೃದ್ಧೆ ಚಂದ್ರಭಾಗ ಸಾಳುಂಕೆ ತಿಳಿಸಿದರು.

‘ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಚಳಿ ವಿಪರೀತವಾಗಿದೆ. ಹಗಲು ಹೊತ್ತು ನೆತ್ತಿ ಸುಡುವ ಸೂರ್ಯನ ಪ್ರಖರ ಬಿಸಿಲಿದ್ದರೂ ತಂಪು ತಂಪಿರುತ್ತದೆ. ತಂಗಾಳಿ ಮೈಗೆ ಸೋಕಿ, ಚಳಿಯ ಅನುಭವವನ್ನು ತೀವ್ರಗೊಳಿಸುತ್ತಿದೆ’ ಎಂದು ಹೂವಿನ ಹಿಪ್ಪರಗಿಯ ಸುರೇಶ ಗಬ್ಬೂರ ಹೇಳಿದರು.

ಬೆಚ್ಚಗಿರಿ
‘ಚಳಿಯ ತೀವ್ರತೆ ಹೆಚ್ಚಿದಂತೆ ವಯೋವೃದ್ಧರು, ಆರು ವರ್ಷದೊಳಗಿನ ಮಕ್ಕಳು, ಅಪೌಷ್ಟಿಕತೆಯಿಂದ ಬಳಲುವವರು ಸಹಜವಾಗಿಯೇ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಇಂಥವರು ಮನೆಯಿಂದ ಹೊರಗೆ ಬರಬಾರದು. ಬಂದರೂ ಬೆಚ್ಚನೆಯ ಉಡುಪು ಧರಿಸುವುದು ಒಳ್ಳೆಯದು’ ಎಂದು ವೈದ್ಯ ಅರವಿಂದ ಡಾಣೂಕಶಿರೂರ ತಿಳಿಸಿದರು.

‘ಹೃದಯಾಘಾತ, ಲಕ್ವ, ಕೈ–ಕಾಲು ಸೀಳುವಿಕೆ, ಮಂಡಿ ನೋವು, ಮುಖ ಬಿರಿಯುವುದು, ಮಾಂಸಖಂಡಗಳು ಸೆಟೆದುಕೊಳ್ಳುವುದು, ಯೂರಿನ್‌ ಸಮಸ್ಯೆ ಬಿಗಡಾಯಿಸುವುದು, ಮೂರ್ಛೆ ರೋಗ ಕಾಡುವುದು, ಆಸ್ತಮಾ, ಶೀತ, ಕೆಮ್ಮು, ಅಲರ್ಜಿ ಇನ್ನಿತರೆ ಸಮಸ್ಯೆಗಳು ಬಾಧಿಸುವ ಸಾಧ್ಯತೆ ಹೆಚ್ಚಿರುತ್ತವೆ’ ಎಂದು ಹೇಳಿದರು.

ವಿಜಯಪುರ ಜಿಲ್ಲೆಯ ತಾಪಮಾನದ ಚಿತ್ರಣ
ದಿನ; ಗರಿಷ್ಠ ತಾಪಮಾನ ; ಕನಿಷ್ಠ ತಾಪಮಾನ
ಡಿ.27 ; 31.6 ; 18.4
ಡಿ.28 ; 29.2 ; 11.5
ಡಿ.29 ; 27.2 ; 9.0
ಡಿ.30 ; 27.5 ; 9.0
ಡಿ.31 ; 27.8 ; 9.4
ಜ.1 ; 28.0 ; 8.5
ಜ.2 ; 30.6 ; 9.5
ಜ.3 ; 31.0 ; 8.8

ಆಧಾರ: ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದ ಹವಾಮಾನ ವಿಭಾಗ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !