ಹತ್ತು ಗಂಟೆ, 1,500 ಕಲಾವಿದರು, ಲಕ್ಷ ಕಲಾಕೃತಿಗಳು!

7
ನಡೆದಿದೆ ಭರದ ಸಿದ್ಧತೆ * ನಾಲ್ಕು ಸಂಚಾರಿ ಎಟಿಎಂಗಳ ವ್ಯವಸ್ಥೆ * ಗಾಂಧೀಜಿ ಸ್ಮರಣೆಗೆ ಈ ಮೇಳ ಮೀಸಲು

ಹತ್ತು ಗಂಟೆ, 1,500 ಕಲಾವಿದರು, ಲಕ್ಷ ಕಲಾಕೃತಿಗಳು!

Published:
Updated:
Prajavani

ಬೆಂಗಳೂರು: ಸಾಮಾನ್ಯ ಕಲಾವಿದರ ಅಸಾಮಾನ್ಯ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಬಯಲು ವೇದಿಕೆಯಾಗಿರುವ ಚಿತ್ರಸಂತೆಯು ಜನವರಿ 6ರಂದು (ಭಾನುವಾರ) ನಡೆಯಲಿದೆ.

ಕರ್ನಾಟಕ ಚಿತ್ರಕಲಾ ಪರಿಷತ್ತು ಆಯೋಜಿಸುತ್ತಿರುವ 16ನೇ ಆವೃತ್ತಿಯ ಈ ವಾರ್ಷಿಕ ಕಲಾಮೇಳಕ್ಕೆ ಪರಿಷತ್ತಿನ ಆವರಣದಲ್ಲಿ ಭರದಿಂದ ತಯಾರಿಗಳು ನಡೆದಿವೆ. 

ಕರ–ಕುಂಚಗಳ ಕಸೂತಿ ಕೆಲಸದಿಂದ ಸೃಷ್ಟಿಯಾದ ಮೈಸೂರು ಸಾಂಪ್ರದಾಯಿಕ, ತಂಜಾವೂರು, ರಾಜಸ್ಥಾನಿ, ಮಧುಬನಿ ಶೈಲಿಯ ತೈಲ ಮತ್ತು ಜಲವರ್ಣದ ಕಲಾಕೃತಿಗಳು, ಅಕ್ರಿಲಿಕ್‌, ಕೊಲಾಜ್‌, ಲಿಥೋಗ್ರಾಫ್ ಪ್ರಕಾರಗಳ ಕಲಾರಚನೆಗಳು ಈ ಸಂತೆಯಲ್ಲಿ ಕಾಣಸಿಗಲಿವೆ. ಕೊಳ್ಳಲು ಕೈಗೆಟುಕಲಿವೆ. ವ್ಯಂಗ್ಯಚಿತ್ರಗಳೂ ಇರಲಿವೆ. ಕುಂಚದ ಅಂಚಿನಿಂದ ಸ್ಥಳದಲ್ಲೇ ಭಾವಚಿತ್ರಗಳನ್ನು ರಚಿಸಿಕೊಡುವ ಕಲಾವಿದರನ್ನು ಈ ಸಂತೆಯಲ್ಲಿ ಕಾಣಸಿಗುತ್ತಾರೆ.  

ಕುಮಾರಕೃಪಾ ರಸ್ತೆಯ ಗಾಂಧಿ ಭವನದಿಂದ ವಿಂಡ್ಸರ್‌ ಮ್ಯಾನರ್‌ ವೃತ್ತದ ವರೆಗೂ ಹಾಗೂ ಕ್ರೆಸೆಂಟ್‌ ರಸ್ತೆಯ ಕೆಲವು ಭಾಗದಲ್ಲಿ ಕಲಾಕೃತಿಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಈ ಬಾರಿಯ ಚಿತ್ರಸಂತೆಯಲ್ಲಿ 1,500ಕ್ಕೂ ಹೆಚ್ಚು ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶನ ಮಾಡಲಿದ್ದಾರೆ. ಅವರಲ್ಲಿ ರಾಜ್ಯದವರು ಮಾತ್ರವಲ್ಲದೆ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಪಂಜಾಬ್‌, ಪಶ್ಚಿಮ ಬಂಗಾಳ, ಒಡಿಸ್ಸಾ ಸೇರಿದಂತೆ 16 ರಾಜ್ಯಗಳ ಕಲಾವಿದರು ಇದ್ದಾರೆ.

‘ಚಿತ್ರಸಂತೆಯಲ್ಲಿ ಕಲಾ ಪ್ರದರ್ಶನಕ್ಕಾಗಿ 2,600ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಅವುಗಳಲ್ಲಿ 1,500 ಕಲಾವಿದರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ನೋಂದಾಯಿತ ಕಲಾವಿದರಿಂದ ತಲಾ ₹300 ಶುಲ್ಕ ಪಡೆದು ಸ್ಥಳಾವಕಾಶ ಮತ್ತು ಅವರಿಗೆ ಊಟದ ವ್ಯವಸ್ಥೆ ಮಾಡಿದ್ದೇವೆ’ ಎಂದು ಪರಿಷತ್ತಿನ ಅಧ್ಯಕ್ಷ ಬಿ.ಎಲ್‌.ಶಂಕರ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

‘ನಗದಿಗಾಗಿ ನಾಲ್ಕು ಸಂಚಾರಿ ಎ.ಟಿ.ಎಂ.ಗಳು ಚಿತ್ರಸಂತೆಯಲ್ಲಿ ಇರಲಿವೆ. ಸುರಕ್ಷತೆಗಾಗಿ 50 ಸಿ.ಸಿ. ಟಿ.ವಿ.ಕ್ಯಾಮರಾಗಳನ್ನು ಅಳವಡಿಸಿಲಾಗಿದೆ. ಸೇವಾದಳ ಆವರಣ, ಕ್ರೆಸೆಂಟ್ ರಸ್ತೆ ಬದಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಗಾಂಧಿ ತಾತನ ಕನ್ನಡಕವೇ ಪ್ರವೇಶ ದ್ವಾರ

ಮಹಾತ್ಮ ಗಾಂಧೀಜಿ 150ನೇ ಜನ್ಮವರ್ಷಾಚರಣೆಯ ನೆನಪಿಗಾಗಿ ಈ ಬಾರಿಯ ಚಿತ್ರಸಂತೆಯಲ್ಲಿ ರಾಷ್ಟ್ರಪಿತರ ಸ್ಮರಣೆಗೆ ಆದ್ಯತೆ ನೀಡಲಾಗಿದೆ. ಗಾಂಧೀಜಿ ಜೀವನ ಸಂದೇಶಗಳನ್ನು ಬಿತ್ತರಿಸುವ ಪರದೆಗಳನ್ನು ಕಲಾ ಪದವಿ ವಿದ್ಯಾರ್ಥಿಗಳು ಸಿದ್ಧಪಡಿಸಿ, ಪರಿಷತ್ತಿನ ಕಟ್ಟಡದ ಮೇಲೆ ಇಳಿಬಿಟ್ಟಿದ್ದಾರೆ.

ಕಲಾವಿದ ಕೆ.ಎಸ್‌.ಅಪ್ಪಾಜಯ್ಯ ಮಾರ್ಗದರ್ಶನದಲ್ಲಿ 23 ಅಡಿ ಅಗಲ, 19 ಅಡಿ ಉದ್ದ ಮತ್ತು 11 ಅಡಿ ಎತ್ತರದ ಗಾಂಧಿ ಕನ್ನಡಕ ಸಿದ್ಧವಾಗಿದೆ. ಶಿವಾನಂದ ವೃತ್ತದಿಂದ ಸಂತೆಗೆ ಬರುವ ಕಲಾಸಕ್ತರು ಗಾಂಧಿ ತಾತನ ಕನ್ನಡಕದ ಮೂಲಕ ಹಾದು ಬರಬೇಕು. ‘ಆ ಮೂಲಕ ಗಾಂಧೀಜಿ ದೃಷ್ಟಿಕೋನವನ್ನು, ನಡೆನುಡಿಯನ್ನು ಇಂದಿನವರು ಅಳವಡಿಸಿಕೊಳ್ಳುವ ಅಗತ್ಯತೆ ಇದೆ ಎಂಬುದು ಈ ಕಲಾಕೃತಿಯ ಧ್ಯೇಯ’ ಎನ್ನುತ್ತಾರೆ ರಚನಾಕಾರರು.  

ಕಲಾ ಕಾಲೇಜಿನ ಪ್ರಾಂಶುಪಾಲರಾದ ತೇಜೇಂದ್ರ ಸಿಂಗ್‌ ಭವಾನಿ ಪರಿಕಲ್ಪನೆಯಲ್ಲಿ 10 ಅಡಿ ಎತ್ತರದ, 18 ಅಡಿ ಅಗಲದ ಚರಕದ ಪ್ರತಿಕೃತಿ ಸಿದ್ಧಗೊಂಡಿದೆ. ಹೆಸರಾಂತ ಕಲಾವಿದರು ಮಹಾತ್ಮರ ಕುರಿತು ರಚಿಸಿರುವ 50ಕ್ಕೂ ಹೆಚ್ಚು ಕಲಾಕೃತಿಗಳನ್ನು ಪರಿಷತ್ತಿನ ಎರಡು ಗ್ಯಾಲರಿಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಪರಿಷತ್ತಿನ ಕಲಾಶಿಬಿರದಲ್ಲಿ ಮೈದಳೆದ ರಚನೆಗಳನ್ನು ಉಳಿದೆರಡು ಗ್ಯಾಲರಿಗಳಲ್ಲಿ ಕಾಣಬಹುದಾಗಿದೆ.

ಸಂತೆಯಲ್ಲಿ ಗಾಂಧಿ ಕುಟೀರ, ದಂಡಿಯಾತ್ರೆ

ಚಿತ್ರಸಂತೆಯಲ್ಲಿ ನೀವು ಗಾಂಧೀಜಿ ಕುಟೀರವನ್ನೂ ಕಾಣಬಹುದು. ಉಪನ್ಯಾಸಕ ಸೆಂಥಿಲ್‌ ಕುಮಾರ್‌ ನೇತೃತ್ವದಲ್ಲಿ 300 ಬಿದಿರುಗಳನ್ನು ಅಳತೆಗೆ ಅನುಗುಣವಾಗಿ ಕತ್ತರಿಸಿ ಇದನ್ನು ರೂಪಿಸಲಾಗಿದೆ. 60X35 ಅಳತೆಯ ಈ ಆಸರೆ ತಾಣದಲ್ಲಿ ಗಾಂಧಿ ಬದುಕಿನ ಪಯಣದ ಅಪರೂಪದ ಛಾಯಾಚಿತ್ರಗಳನ್ನು ಕಣ್ತುಂಬಿಕೊಳ್ಳಬಹುದು. ಈ ಕುಟೀರ ನಿರ್ಮಾಣಕ್ಕೆ ₹ 3 ಲಕ್ಷ ಖರ್ಚು ಮಾಡಲಾಗಿದೆ.

‘ಗಾಂಧೀಜಿ ಬೆಂಗಳೂರಿಗೆ ಭೇಟಿ ನೀಡಿದ್ದಾಗ ಕುಮಾರಕೃಪ ಅತಿಥಿ ಗೃಹದಲ್ಲಿ ತಂಗುತ್ತಿದ್ದರು. ಈಗ ಪರಿಷತ್ತಿನ ಆವರಣದಲ್ಲಿ ಇರುವ ಬಂಡೆಯ ಮೇಲೆ ಕುಳಿತು ಧ್ಯಾನ ಮಾಡುತ್ತಿದ್ದರಂತೆ. ಆ ನೆನಪಿಗಾಗಿ ಬಂಡೆಯ ಮೇಲೆಯೇ ಕುಟೀರ ನಿರ್ಮಿಸಿದ್ದೇವೆ’ ಎಂದು ಚಿತ್ರಸಂತೆ ಸಮಿತಿ ಅಧ್ಯಕ್ಷ ಜೆ.ಹರೀಶ್ ಪದ್ಮನಾಭ ತಿಳಿಸಿದರು.

ಸಂತೆಯಲ್ಲಿ ದಂಡಿಯಾತ್ರೆ: ಗಾಂಧೀಜಿ ಕೈಗೊಂಡ ದಂಡಿಯಾತ್ರೆಯ ರೂಪಕವನ್ನು ಕಲಾವಿದ್ಯಾರ್ಥಿಗಳು ಸಂತೆಯಲ್ಲಿ ಪ್ರದರ್ಶನ ಮಾಡಲಿದ್ದಾರೆ. ಗಾಂಧಿ, ಸರೋಜಿನಿ ನಾಯ್ಡು ಅವರ ವೇಷಧರಿಸಿ ಸ್ವಾತಂತ್ರ್ಯದ ಘೋಷಣೆಗಳನ್ನು ಕೂಗುತ್ತ, ಫಲಕಗಳನ್ನು ಹಿಡಿದುಕೊಂಡು ಸಂತೆಯಲ್ಲಿ ಜಾಥಾ ಹೊರಡಲಿದ್ದಾರೆ. ಹೋರಾಟಗಾರರನ್ನು ನೆನಪಿಸಲಿದ್ದಾರೆ. ದೇಶಭಕ್ತಿಯ ಗೀತೆಗೆ ಹೆಜ್ಜೆ ಹಾಕಲಿದ್ದಾರೆ. ಬಳಿಕ ಗಾಂಧೀಜಿ ತತ್ವಾದರ್ಶಗಳ ಸಾರ ಹಂಚಲಿದ್ದಾರೆ.

ಕಲಾವಿದರಿಗೆ ಚಿತ್ರಕಲಾ ಸಮ್ಮಾನ್‌

ಮೂವರು ಹಿರಿಯ ಚಿತ್ರಕಲಾವಿದರಿಗೆ ಚಿತ್ರಸಂತೆಯ ಮುನ್ನದಿನ(ಜ.5) ಮಹನೀಯರ ಹೆಸರಿನಲ್ಲಿನ ‘ಚಿತ್ರಕಲಾ ಸಮ್ಮಾನ್‌’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿಗಳು ತಲಾ ₹ 50 ಸಾವಿರ ಒಳಗೊಂಡಿವೆ. 

ಕಲಾವಿದರಾದ ಜೆ.ಎಂ.ಎಸ್‌.ಮಣಿ ಅವರಿಗೆ ಎಚ್‌.ಕೆ.ಕೇಜರಿವಾಲ್ ಪ್ರಶಸ್ತಿ, ಜೆಸು ರಾವಲ್‌ ಅವರಿಗೆ ಡಿ.ದೇವರಾಜ ಅರಸು ಪ್ರಶಸ್ತಿ, ನೀಲಾ ಪಂಚ್‌ ಅವರಿಗೆ ಎಂ.ಆರ್ಯಮೂರ್ತಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

***

ಚಿತ್ರಸಂತೆಯಲ್ಲಿ ಸುಮಾರು 4 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ಈ ಚಿತ್ರಗಳ ಮೇಳ ಆಯೋಜನೆಗೆ ಅಂದಾಜು ₹ 30 ಲಕ್ಷ ವ್ಯಯಿಸಲಾಗುತ್ತಿದೆ

–ಬಿ.ಎಲ್‌.ಶಂಕರ್‌, ಅಧ್ಯಕ್ಷ, ಚಿತ್ರಕಲಾ ಪರಿಷತ್ತು

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !