ಬಯಲು ಗ್ಯಾಲರಿಯಲ್ಲಿ ಕಲಾಸಕ್ತರ ವಿಹಾರ

7
ಕುಮಾರ ಕೃಪಾ ರಸ್ತೆಯಲ್ಲಿ ಸೃಷ್ಟಿಯಾದ ಕಲಾಲೋಕ; ಚಿತ್ರಸಂತೆಗೆ ಬಂದ ಲಕ್ಷಾಂತರ ಜನ; ಗಾಂಧಿ ಸ್ಮರಣೆ

ಬಯಲು ಗ್ಯಾಲರಿಯಲ್ಲಿ ಕಲಾಸಕ್ತರ ವಿಹಾರ

Published:
Updated:

ಬೆಂಗಳೂರು: ರಸ್ತೆಯ ಇಕ್ಕೆಲಗಳಲ್ಲಿ ಚಿತ್ತಾಕರ್ಷಕ ಚಿತ್ರಗಳ ಸಾಲು, ತಮ್ಮಿಷ್ಟದ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳುತ್ತಿದ್ದ ಕಲಾಸಕ್ತರ ಹೊನಲು. ಗಿಜಿಗುಡುವ ವಾತಾವರಣದ ನಡುವೆಯೇ ಕಲಾಕೃತಿ ರಚಿಸುವುದರಲ್ಲಿ, ಅವುಗಳ ಬಗ್ಗೆ ವಿವರಿಸುವುದರಲ್ಲಿ ತನ್ಮಯವಾಗಿದ್ದ ಕಲಾವಿದರು. 

ಕುಮಾರಕೃಪಾ ರಸ್ತೆ ಭಾನುವಾರದ ಮಟ್ಟಿಗೆ ಬಯಲು ಗ್ಯಾಲರಿಯಂತಾಗಿತ್ತು. ಚಿತ್ರಸಂತೆಯು ಹಲವಾರು ರಾಜ್ಯಗಳ, ರಾಜ್ಯದ ಬಹುತೇಕ ಜಿಲ್ಲೆಗಳ ಕಲಾವಿದರ ಸಂಗಮ ತಾಣವಾಗಿತ್ತು.   

ಅಂಚೆಚೀಟಿಗಳ ಮೇಲೆ ಛಾಪಿಸಿದ್ದ ಜೈಪುರದ ಮಿನಿಯೇಚರ್‌ ಚಿತ್ರಗಳು, ತಂಜಾವೂರು ಕಲೆಯ ಬಂಗಾರ ಲೇಪಿತ ಪೌರಾಣಿಕ ದೈವಗಳ ಪಟಗಳು, ಸೂಕ್ಷ್ಮ ಕುಂಚಕಲೆಯ ಮತ್ತು ಎದ್ದುಕಾಣುವ ಬಣ್ಣಬಳಕೆಯ ಮೈಸೂರು ಸಂಪ್ರದಾಯದ ಕಲಾರಚನೆಗಳು, ಒಡಿಸ್ಸಾದ ಜಾನಪದೀಯ ಪ್ರಕಾರದ ಪಟಚಿತ್ರದ ರಚನೆಗಳು, ಮಹಾರಾಷ್ಟ್ರದ ಗ್ರಾಮಾಂತರ ಭಾಗದ ನೋಟಗಳನ್ನು ಪರಿಚಯಿಸುವ ತೈಲ ಮತ್ತು ಜಲವರ್ಣದ ಕಲಾಕೃತಿಗಳು ಅಲ್ಲಿ ಕಾಣಸಿಕ್ಕವು. ಅಕ್ರಿಲಿಕ್‌, ಕೊಲಾಜ್‌, ಲಿಥೋಗ್ರಾಫ್, ಲ್ಯಾಂಡ್‌ಸ್ಕೇಪ್‌ ಪ್ರಕಾರಗಳ ಕಲಾರಚನೆಗಳು ಈ ಸಂತೆಯಲ್ಲಿದ್ದವು. ಕುಂಚಗಳಿಂದ ಸ್ಥಳದಲ್ಲೇ ಭಾವಚಿತ್ರಗಳನ್ನು ರಚಿಸಿಕೊಡುವ ಕಲಾವಿದರು ಈ ಸಂತೆಯಲ್ಲಿ ಕಲಾಧ್ಯಾನ ಮಾಡುತ್ತಿದ್ದರು.

ಸೂರ್ಯನ ಕಿರಣಗಳು ತಾಗಿ ಮಿಂಚುತ್ತಿದ್ದ ತಂಜಾವೂರು ಶೈಲಿಯ ರಚನೆಗಳು ಕಲಾ ರಸಿಕರನ್ನು ಕೈಬೀಸಿ ಕರೆಯುತ್ತಿದ್ದವು. ಹಲಗೆ, ಆಕರ್ಷಕ ಬಣ್ಣ, ಬಂಗಾರ ಲೇಪಿತ ಹುಬ್ಬುಗಳಿಂದ ರೂಪಗೊಂಡ ಈ ಕಲಾಕೃತಿಗಳ ಬೆಲೆ ಕನಿಷ್ಠ ₹3 ಸಾವಿರದಿಂದ ಗರಿಷ್ಠ ನಾಲ್ಕೈದು ಲಕ್ಷಗಳಷ್ಟು ಇತ್ತು. ಇವುಗಳನ್ನು ರಚಿಸಲು ಸಹ ತಿಂಗಳುಗಟ್ಟಲೇ ಸಮಯ ಬೇಕಾಗುತ್ತದೆಯಂತೆ.

ಕಲ್ಲುಗಳನ್ನೇ ಅರೆದು, ಅದರಿಂದ ಬಣ್ಣ ತೆಗೆದು, ಹಳೆಯ ಅಂಚೆಚೀಟಿ ಹಾಗೂ ಕಾಗದಗಳ ಮೇಲೆ ಹೊಸ ಮಿನಿಯೇಚರ್‌ ಚಿತ್ರಗಳನ್ನು ಚಿತ್ರಿಸಿ ತಂದಿದ್ದರು ಜೈಪುರದ ಕಲಾವಿದರು. ಚಿಕ್ಕ ಕುಂಚಗಳ ಸೂಕ್ಷ್ಮ ಗೆರೆಗಳಿಂದ ರಚಿಸಿದ್ದ ಈ ಚಿತ್ರಗಳಲ್ಲಿ ರಾಜ–ಮಹಾರಾಜರು, ಖಗ–ಮೃಗಗಳು ಮೈದಳೆದಿದ್ದವು. 

ಸಕಲ ಸುಖ ಪರಿತ್ಯಾಗಿಯಾದ ಗೌತಮ ಬುದ್ಧನ ಕುಂತಿದ್ದ ಮೂರ್ತಿಗೆ ₹4.50 ಲಕ್ಷ  ಹಾಗೂ ನಿಂತಿರುವ ಗೌತಮನಿಗೆ ₹ 6.80 ಲಕ್ಷ ನಿಗದಿ ಪಡಿಸಿದ್ದರು ಕಲಾವಿದ ಕೃಷ್ಣ ನಾಯ್ಕ.

ಚಿತ್ರಸಂತೆಗೆ ಬಂದಿದ್ದ ಆಸಕ್ತರು ಮನೆಯ ಭಿತ್ತಿಗಳನ್ನು ಅಲಂಕರಿಸಲು ಕಲಾವಿದರ ಕಲ್ಪನೆಗಳನ್ನು, ಕಲಾ ಶ್ರಮವನ್ನು ಜೋಪಾನದಿಂದ ಕೊಂಡೊಯ್ದರು. ಮಹಿಳೆಯರ ಅಲಂಕಾರಿಕ ಪರಿಕರಗಳಾದ ಓಲೆ–ಮಾಲೆಗಳ ಮಾರಾಟವೂ ಜೋರಾಗಿತ್ತು.

ಡಿಕಾಕ್ಷನ್‌ನಲ್ಲಿ ಮೂಡಿದ ಕಲೆ
ಕಪ್‌ ಕಾಫಿಯ ಡಿಕಾಕ್ಷನ್‌ನಿಂದಲೇ ಸಾವಿರಾರು ರೂಪಾಯಿ ಮೌಲ್ಯದ ಚಿತ್ರಗಳ ಕಲೆ ರಚಿಸಿದ್ದರು ಛತ್ತೀಸಗಡದ ಅಮಿತ್‌ ದೇವಾರೆ. ಕಲಾಸಂತೆಯಲ್ಲಿದ್ದ ಟೆರ್‍ರಾಕೊಟ ಕಲೆಯ ರಚನೆಗಳು, ಕ್ಯಾಲಿಗ್ರಫಿಯ ಆಕರ್ಷಕ ಬರಹ ರಚನೆಗಳು, ಪೇಪರ್‌ ಕಟ್ಟಿಂಗ್‌ ಆರ್ಟ್‌ ಸಹ ಗಮನ ಸೆಳೆಯಿತು.  

ಖಾದಿ ಮಾರಾಟ ದ್ವಿಗುಣ
ಚಿತ್ರಕಲಾ ಪರಿಷತ್‌ ಬದಿಯ ಗಾಂಧಿ ಭವನದ ಆವರಣದಲ್ಲಿ ಖಾದಿ ಎಂಪೋರಿಯಮ್‌ ಇದೆ. ಈ ಬಾರಿಯ ಸಂತೆಯ ಥೀಮ್‌ ಕೂಡ ಗಾಂಧಿ ಸ್ಮರಣೆ ಆಗಿತ್ತು. ಹಾಗಾಗಿ ಈ ಎಂಪೋರಿಯಮ್‌ಗೆ ಬರುತ್ತಿದ್ದ ಗ್ರಾಹಕರ ಸಂಖ್ಯೆ ದ್ವಿಗುಣವಾಗಿತ್ತು.

‘ಪ್ರತಿದಿನ ಸರಾಸರಿ ₹ 50,000 ವ್ಯಾಪಾರ ಆಗುತ್ತಿತ್ತು. ಸಂತೆಯಿಂದಾಗಿ ಸಂಜೆ ವೇಳೆಗೆ ₹ 3 ಲಕ್ಷ ವಹಿವಾಟು ಆಯಿತು. ಅದರಲ್ಲಿ ಖಾದಿ ಬಟ್ಟೆಗಳು, ಕರಕುಶಲ ವಸ್ತುಗಳೇ ಹೆಚ್ಚು ಬಿಕರಿಯಾದವು’ ಎಂದು ಎಂಪೋರಿಯಮ್‌ ವ್ಯವಸ್ಥಾಪಕಿ ಬಿ.ಆರ್‌.ವಿಜಯ ಕುಮಾರಿ ತಿಳಿಸಿದರು.


ಕಲಾಕೃತಿಗಳನ್ನು ಖರೀದಿಸುತ್ತಿರುವ ಕಲಾರಸಿಕರು 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !