ಥಂಡಾ ಥಂಡ ಗುಹೆ

ಬುಧವಾರ, ಏಪ್ರಿಲ್ 24, 2019
32 °C
ಬೇಸಿಗೆಯ ಸುತ್ತಾಟಕ್ಕ ‘ತಣ್ಣನೆಯ ಗವಿ’

ಥಂಡಾ ಥಂಡ ಗುಹೆ

Published:
Updated:
Prajavani

‘ಸರ್, ವರ್ಷಪೂರ್ತಿ ತಂಪಿನ ಅನುಭವ ನೀಡಿರುವ ಗುಹೆಯೊಂದಿದೆ. ಅದನ್ನು ನೋಡಿ ಬನ್ನಿ, ಇಷ್ಟವಾಗುತ್ತದೆ’ ಎಂದು ಗೆಳೆಯ ಇಮಾಮ್ ಆಗಾಗ ಹೇಳುತ್ತಲೇ ಇದ್ದರು. ಹೇಗೂ ಈಗ ಬೇಸಿಗೆ ಆರಂಭವಾಗಿದೆ. ಆ ಗುಹೆಯಲ್ಲಿ ಎಂಥ ವಾತಾವರಣವಿದೆ ಎಂದು ನೋಡುವ ಕುತೂಹಲದಿಂದ ಹೊರಟೇ ಬಿಟ್ಟೆವು. ಬಿರುಬಿಸಿಲಿನಲ್ಲಿ ಬಳಲಿ ಹೋದ ನಮಗೆ ಗುಹೆಯಲ್ಲಿನ ನಿಸರ್ಗ ನಿರ್ಮಿತ ಹವಾನಿಯಂತ್ರಣ ವ್ಯವಸ್ಥೆ ಮೈ–ಮನಕ್ಕೆ ತಣ್ಣನೆಯ ಅನುಭವ ನೀಡಿತು.

ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಚುಳಕಿ ಗ್ರಾಮದ ಹೊರವಲಯದಲ್ಲಿರುವ ಅವಧೂತ ಕಲ್ಮೇಶ್ವರ ಸ್ವಾಮೀಜಿ ಮಹಾಗವಿ ವಿಶೇಷವಿದು. ಇದು ಈ ಭಾಗದಲ್ಲಿ ‘ಕೋಲ್ಡ್‌ ಗವಿ’, ‘ಎಸಿ ಗವಿ’ ಎಂದೇ ಹೆಸರುವಾಸಿಯಾಗಿದೆ.

ಗ್ರಾಮಸ್ಥರೇ ಕೊರೆದದ್ದು

ಅವಧೂತ ಕಲ್ಮೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಚುಳಕಿ ಗ್ರಾಮಸ್ಥರು ಕೊರೆದ ಈ ಗವಿ, ಅಪರೂಪದ ಧಾರ್ಮಿಕ ಕೇಂದ್ರದೊಂದಿಗೆ ಪ್ರವಾಸಿ ತಾಣವಾಗಿಯೂ ಹೊರಹೊಮ್ಮಿದೆ. ಇದು ಸರ್ವಧರ್ಮಗಳ ಸಮನ್ವಯ ತಾಣವಾಗಿಯೂ ಗುರುತಿಸಿಕೊಂಡಿದೆ.

ಸುತ್ತಲಿನ ತೆಂಗಿನಮರಗಳ ಕಡೆಯಿಂದ ಬೀಸುವ ತಣ್ಣನೆಯ ಗಾಳಿ ಅಲ್ಲಿನ ವಾತಾವರಣವನ್ನು ಮತ್ತಷ್ಟು ತಂಪಾಗಿಸುತ್ತವೆ; ಮನಸೂರೆಗೊಳ್ಳುತ್ತವೆ. ‘ಬೇಸಿಗೆಯಲ್ಲಿ ತಂಪು, ಚಳಿಗಾಲ ಮತ್ತು ಮಳೆಗಾಲದಲ್ಲಿ ಬಿಸಿ ಅನುಭವವಾಗುತ್ತದೆ’ ಎನ್ನುತ್ತಾರೆ ಸ್ಥಳೀಯರು.

ಭೂ ಮಂಡಲ, ತಾರಾ ಮಂಡಲ ಹಾಗೂ ದೇವ ಮಂಡಲ ಎಂದು ಮೂರು ವಿಭಾಗಗಳನ್ನಾಗಿ ಮಹಾಗವಿಯನ್ನು ರೂಪಿಸಲಾಗಿದೆ. ಮಹಾಗವಿ ಪ್ರವೇಶಿಸುತ್ತಿದ್ದಂತಯೇ ಭೂಮಂಡಲ ಸಿಗುತ್ತದೆ.

ಇಲ್ಲಿ ಈಶ್ವರ ಲಿಂಗ ಹಾಗೂ ನಂದಿ ವಿಗ್ರಹಗಳಿವೆ. ಇಲ್ಲಿಂದ ತಾರಾಮಂಡಲ ಮತ್ತು ದೇವಮಂಡಲಕ್ಕೆ ಹೋಗಬೇಕು. ಭೂಮಂಡಲದ ಮೂಲಕ ಮಾತ್ರವೇ ಪ್ರವೇಶವಿದೆ. ಅಲ್ಲಿನ ಕೂಲ್‌ ಕೂಲ್‌ ವಾತಾವರಣ ದಣಿದ ಮನಗಳನ್ನು ತಣಿಸುತ್ತದೆ!

ಈ ದೊಡ್ಡ ಗುಡ್ಡದ ಬುಡದಲ್ಲಿ 9 ಕಂಬಗಳಿವೆ. ನವಗ್ರಹದಂತೆ ನಿರ್ಮಾಣಗೊಂಡ ಈ ಕಂಬಗಳ ಮಧ್ಯದಲ್ಲಿ ಕಮಾನಿನ ಗವಿ ಆಕಾರದ ಮಾರ್ಗಗಳಿವೆ. ತಾರಾಮಂಡಲವು ಭೂ ಮಂಡಲ ಮತ್ತು ದೇವ ಮಂಡಲದ ಮಧ್ಯದಲ್ಲಿದೆ. ಎರಡೂ ಮಂಡಲಗಳ ನಡುವೆ ಅಂಕಣಗಳ ಆಕಾರದಲ್ಲಿ ಗವಿ ಕೊರೆದಿರುವುದು ವಿಶೇಷ.

ಸಂಕಷ್ಟ ಪರಿಹಾರದ ನಂಬಿಕೆ

ದೇವಮಂಡಲ ಕೊಂಚ ವಿಭಿನ್ನವಾಗಿದೆ. ಇದಕ್ಕೆ 12 ಕಂಬಗಳಿದ್ದು, ಜ್ಯೋತಿರ್ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ. 12 ಕಂಬಗಳ ಹೊರಗಿನ ಆವರಣದಲ್ಲಿ ಇತರ ಧರ್ಮದ ದೇವರನ್ನೂ ಕಾಣಬಹುದು. ಕಂಬಗಳ ಮಧ್ಯದಲ್ಲಿ ಕಮಾನಿನ ಆಕಾರದಲ್ಲಿ ಗುಹೆಗಳನ್ನು ನಿರ್ಮಿಸಲಾಗಿದೆ.

‌ಗುಡ್ಡದ ಪೂರ್ವ ಭಾಗದ ಕಡೆಗಿನ ಕಣಿವೆಯಲ್ಲಿ 21 ಕಂಬಗಳನ್ನು ಕೊರೆದು ಗುಹೆ ರೂಪಿಸಲಾಗಿದೆ. ಪ್ರತಿ ಗುಹೆಯಲ್ಲೂ ಜ್ಯೋತಿರ್ಲಿಂಗ ಇದೆ.

‘ಈ ಮಹಾಗವಿಯನ್ನು ಭೂಮಂಡಲದಿಂದ ಪ್ರವೇಶಿಸಿ, ತಾರಾಮಂಡಲ ಹಾಗೂ ದೇವಮಂಡಲದ ಬಲ ಭಾಗದಿಂದ 21 ಕಂಬಗಳನ್ನು ಪ್ರದಕ್ಷಿಣಿ ಹಾಕಿದರೆ ಸಂಕಷ್ಟಗಳು ಪರಿಹಾರವಾಗುತ್ತವೆ’ ಎಂಬ ನಂಬಿಕೆಯೂ ಇದೆ. ದೇವಮಂಡಲದ ಒಂದು ಗವಿಯಲ್ಲಿ ಮುಸ್ಲಿಂ ಧರ್ಮದ ಪಂಜಾ ಮತ್ತು ಡೋಲಿ ಇಡಲಾಗಿದೆ. ಆ ಧರ್ಮದ ಪ್ರಕಾರ ಇವುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.

ದೇವಮಂಡಲ ಸುತ್ತುವರಿದ ಎಲ್ಲ ಗವಿಗಳಲ್ಲೂ ಹಿಂದೂ ದೇವರನ್ನು ಪ್ರತಿಷ್ಠಾಪಿಸಲಾಗಿದೆ. ಹಿಂದೂ ಧರ್ಮದ ಪ್ರಕಾರ ಪೂಜೆ ನಡೆಯುತ್ತದೆ. ಕೊನೆಯ ಗುಹೆಯಲ್ಲಿ ಪಾಂಡುರಂಗ-ರುಕ್ಮಿಣಿ ವಿಗ್ರಹಗಳಿವೆ. ಗವಿ ಮೇಲೆ 125 ಅಡಿ ಅಳತೆಯ ಮಹಾಲಿಂಗ ಗಮನಸೆಳೆಯುತ್ತದೆ.

ಚಿತ್ರಗಳು: ಲೇಖಕರವು

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !