ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ask ಅಮೆರಿಕ | ಯು.ಎಸ್.ಕಾನ್ಸುಲೇಟ್, ಚೆನ್ನೈ

Last Updated 3 ನವೆಂಬರ್ 2012, 19:30 IST
ಅಕ್ಷರ ಗಾತ್ರ

1. ಗಣಪತಿ ಹಾಸ್ಪುರ, ಉತ್ತರ ಕನ್ನಡ ಜಿಲ್ಲೆ
ಅಮೆರಿಕದಲ್ಲಿ ಅಧ್ಯಕ್ಷೀಯ ಮಾದರಿ ಸರ್ಕಾರ ಆಡಳಿತ ನಡೆಸುತ್ತಿದೆ. ಹಾಗೆಂದರೇನು? ಅಲ್ಲಿನ ಅಧ್ಯಕ್ಷರನ್ನು ಆಯ್ಕೆ ಮಾಡುವ ಪದ್ಧತಿ ಹೇಗೆ ? ವಿವರಿಸಿ.

ಅಮೆರಿಕ ಅಧ್ಯಕ್ಷರು ರಾಷ್ಟ್ರದ ಮುಖ್ಯಸ್ಥರೆ ಅಲ್ಲದೇ ಸರ್ಕಾರದ ಮುಖ್ಯಸ್ಥರೂ ಹೌದು.  ಮಾತ್ರವಲ್ಲ, ರಕ್ಷಣಾ ಪಡೆಗಳ ಅಧಿನಾಯಕರೂ ಅವರೇ. ಅಮೆರಿಕ ಸಂಸತ್ತು ಅಂಗೀಕರಿಸಿದ ಎಲ್ಲ ಕಾನೂನುಗಳನ್ನು ಜಾರಿ ಮಾಡುವ ಜವಾಬ್ದಾರಿಯೂ ಸರ್ಕಾರದ ಮುಖ್ಯಸ್ಥರಾಗಿರುವ ಅಧ್ಯಕ್ಷರದ್ದೆೀ ಆಗಿದೆ. 

ಇತರ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ವ್ಯವಹಾರಗಳಲ್ಲಿ ಅಧ್ಯಕ್ಷರೇ ರಾಷ್ಟ್ರದ ಮುಖ್ಯಸ್ಥರಾಗಿ ಪಾಲ್ಗೊಳ್ಳುತ್ತಾರೆ.ಅಮೆರಿಕ ಅಧ್ಯಕ್ಷರನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯ್ಕೆ ಮಾಡಲಾಗುತ್ತದೆ. ಮೂವತ್ತೈದು ವರ್ಷ ಮೇಲ್ಪಟ್ಟ, ಅರ್ಹರಾದ ಅಮೆರಿಕನ್ನರು ತಮ್ಮ ಉಮೇದುವಾರಿಕೆಯನ್ನು ಅಧಿಕೃತವಾಗಿ ಪ್ರಕಟಿಸಿ ಹಾಗೂ ಫೆಡರಲ್ ಚುನಾವಣಾ ಆಯೋಗಕ್ಕೆ ಸೂಕ್ತ ದಾಖಲೆಗಳನ್ನು ಸಲ್ಲಿಸುವ ಮೂಲಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಬಹುದು. 

ಚುನಾವಣಾ ವರ್ಷದ ಜನವರಿ ತಿಂಗಳ ಆರಂಭದಿಂದಲೇ ಅಮೆರಿಕದಲ್ಲಿರುವ ವಿವಿಧ ರಾಜ್ಯಗಳಲಿರ‌್ಲುವ ಮತದಾರರು ಸಭೆ ಸೇರಿ, ಸಂಭವನೀಯ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಲು ಆರಂಭಿಸುತ್ತಾರೆ.  ಇವುಗಳನ್ನು ಪ್ರೈಮರಿ ಅಥವಾ ಕ್ಯಾಕಸ್  ಎಂದೂ ಕರೆಯುತ್ತಾರೆ.  ಆ ವರ್ಷದ ಸೆಪ್ಟೆಂಬರ್ ಹೊತ್ತಿಗೆ, ರಾಜಕೀಯ ಪಕ್ಷಗಳು ಏರ್ಪಡಿಸುವ ಸಮಾವೇಶಗಳಲ್ಲಿ ಪಕ್ಷದ ಪ್ರತಿನಿಧಿಗಳು ಸೇರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ. 

ಅಕ್ಟೋಬರ್ ತಿಂಗಳಲ್ಲಿ ಪಕ್ಷದಿಂದ ಆಯ್ಕೆಯಾದ ಅಭ್ಯರ್ಥಿಗಳು, ವಿವಿಧ ವಿಷಯಗಳ ಕುರಿತು ತಮ್ಮ ನಿಲುವನ್ನು ಬಹಿರಂಗಪಡಿಸುವ ಮಹತ್ವದ ಭಾಷಣಗಳನ್ನು ಮಾಡುವುದರ ಜೊತೆಗೆ ಚರ್ಚೆಗಳಲ್ಲಿಯೂ ಪಾಲ್ಗೊಳ್ಳುತ್ತಾರೆ.  ಅಲ್ಲದೇ, ಚುನಾವಣೆಗಾಗಿ ನಿಧಿ ಸಂಗ್ರಹಿಸುತ್ತಾರೆ.  ನವೆಂಬರ್ ತಿಂಗಳ ಮೊದಲ ಸೋಮವಾರದ ನಂತರ ಬರುವ ಮಂಗಳವಾರದಂದು ಮತದಾನ ನಡೆಯುತ್ತದೆ. 

`ಅಧ್ಯಕ್ಷರ ಆಯ್ಕೆ ಮಾಡುವ ಮತದಾರ~ರನ್ನು ಚುನಾಯಿಸಲು ನಾಗರಿಕರು ಮತದಾನ ಮಾಡುತ್ತಾರೆ.  ಬಹುತೇಕ ರಾಜ್ಯಗಳಲ್ಲಿ `ವಿಜೇತರಿಗೆ ಎಲ್ಲವೂ~ ಎಂಬ ನಿಯಮ ಜಾರಿಯಲ್ಲಿದೆ.  ಅತಿ ಹೆಚ್ಚು  ಶೇಕಡಾವಾರು ಮತಗಳನ್ನು ಪಡೆದಿರುವ ಪಕ್ಷವು ಆ ರಾಜ್ಯದಲಿರ‌್ಲುವ ಎಲ್ಲ ಮತದಾರ-ಪ್ರತಿನಿಧಿ ಸ್ಥಾನಗಳನ್ನು ಪಡೆಯುತ್ತದೆ.

ಹೀಗೆ ಆಯ್ಕೆಯಾದ ಮತದಾರ ಪ್ರತಿನಿಧಿಗಳು, ಅಧ್ಯಕ್ಷರನ್ನು ಆಯ್ಕೆ ಮಾಡುವ ಮತದಾರ ಮಂಡಳಿಯ ಸದಸ್ಯರಾಗುತ್ತಾರೆ ಹಾಗೂ ಅಲ್ಲಿ ಎಲ್ಲ ಮತದಾರರ ಮತದ ಮೌಲ್ಯ ಒಂದೇ ಆಗಿರುತ್ತದೆ. ಈ ಮತದಾರ ಮಂಡಳಿಯು ಡಿಸೆಂಬರ್ ತಿಂಗಳಲ್ಲಿ ಸಭೆ ಸೇರಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಔಪಚಾರಿಕವಾಗಿ ಚುನಾಯಿಸುತ್ತದೆ.  ಸಾಮಾನ್ಯವಾಗಿ ಅತಿ ಹೆಚ್ಚು ಮತದಾರ ಪ್ರತಿನಿಧಿಗಳನ್ನು ಪಡೆದವರೇ, ಅಧ್ಯಕ್ಷರಾಗಿ ಚುನಾಯಿತರಾಗುತ್ತಾರೆ.

2. ಎಸ್. ಸೋಮಶೇಖರ್, ಭದ್ರಾವತಿ
ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸರ್ಕಾರದ ಎಷ್ಟು ಹಣ ಖರ್ಚಾಗುತ್ತದೆ ? ಅಲ್ಲದೇ, ಚುನಾವಣೆಗೆ ಅಭ್ಯರ್ಥಿಗಳು ಎಷ್ಟು ಹಣ ಖರ್ಚು ಮಾಡಬೇಕಾಗಬಹುದು ?

ಅಧ್ಯಕ್ಷೀಯ ಅಭ್ಯರ್ಥಿಗಳು ತಮ್ಮ ಚುನಾವಣಾ ಅಭಿಯಾನಕ್ಕಾಗಿ ಸಾರ್ವಜನಿಕ ಹಾಗೂ ಖಾಸಗಿ ನಿಧಿಯನ್ನು ಬಳಸಿಕೊಳ್ಳುತ್ತಾರೆ.  ಅರ್ಹ ಅಭ್ಯರ್ಥಿಯೊಬ್ಬ ನಿರ್ದಿಷ್ಟ ಮಾರ್ಗದರ್ಶಿ ಸೂತ್ರಗಳಿಗೆ ಬದ್ಧವಾಗಿದ್ದರೆ, ಅಂಥವರಿಗೆ ಸಾರ್ವಜನಿಕ ಸಬ್ಸಿಡಿ ಸೌಕರ್ಯಗಳು ಲಭಿಸುತ್ತವೆ.

ಪ್ರಾಥಮಿಕ ಅಭಿಯಾನದ ಸಂದರ್ಭದಲ್ಲಿ ಸಾರ್ವಜನಿಕ ನಿಧಿಯ ನೆರವು ಪಡೆಯಲು ಅಭ್ಯರ್ಥಿಗಳು ಕನಿಷ್ಠ 20 ರಾಜ್ಯಗಳಲ್ಲಿ ತಲಾ 5,000 ಡಾಲರುಗಳಷ್ಟು ಖಾಸಗಿ ನಿಧಿಯನ್ನು ಸಂಗ್ರಹಿಸಿರಲೇಬೇಕು. ಸಾರ್ವಜನಿಕ ನಿಧಿ ನೀಡಿಕೆಯಲ್ಲಿ ಹಲವಾರು ಬಗೆಗಳಿವೆ.

ಪ್ರಾಥಮಿಕ ಹಂತದ ಅಭಿಯಾನದಲ್ಲಿ ದೊರೆಯುವ ಪ್ರತಿಯೊಂದು ದೇಣಿಗೆಗೂ 250 ಡಾಲರ್ ನೀಡುವ `ಹೊಂದಾಣಿಕೆ~ ಕಾರ್ಯಕ್ರಮ, ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿ ನಾಮನಿರ್ದೇಶನ, ಸಮಾವೇಶಗಳ ಪ್ರಾಯೋಜನೆ ಹಾಗೂ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಚುನಾವಣಾ ಪ್ರಚಾರದ ವೆಚ್ಚವನ್ನು ಭರಿಸುವಂಥ ಹಲವಾರು ನೆರವು ಕಾರ್ಯಕ್ರಮಗಳುಂಟು. ಸಾರ್ವಜನಿಕ ನಿಧಿ ನೆರವಿನ ಕಾಯ್ದೆ ಬದ್ಧ ಮಿತಿಗೆ ಒಳಪಡ ಬಯಸದಿದ್ದಲ್ಲಿ ಖಾಸಗಿಯಾಗಿ ಸಂಗ್ರಹಿಸಿದ ನಿಧಿಯನ್ನು ಎಷ್ಟು ಬೇಕಾದರೂ ವೆಚ್ಚ ಮಾಡಲು ಅಭ್ಯರ್ಥಿಗಳು ಸ್ವತಂತ್ರರು.

3. ಪೀರ್ ಲೋಹಾರ್, ಕೆ. ಆರ್. ಪುರ, ಬೆಂಗಳೂರು
ಭಾರತದಲ್ಲಿನ ಐಎಎಸ್, ಐಪಿಎಸ್, ಐಎಫ್‌ಎಸ್, ಐಆರ್‌ಎಸ್ - ನಾಗರಿಕ ಸೇವಾ ಶ್ರೇಣಿಗೆ ಸಮಾನವಾದ ಆಡಳಿತಾತ್ಮಕ ಹುದ್ದೆಗಳು ಅಮೆರಿಕದಲ್ಲಿ ಇವೆಯೇ ? ಇದ್ದರೆ, ಅವುಗಳಿಗೆ ಆಯ್ಕೆ ಹೇಗೆ ನಡೆಯುತ್ತದೆ ?

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಅನೇಕ ಸರ್ಕಾರಿ ಏಜನ್ಸಿಗಳು ಹಾಗೂ ಇಲಾಖೆಗಳಿವೆ.  ವಿದೇಶಾಂಗ ಇಲಾಖೆ, ವಾಣಿಜ್ಯ ಇಲಾಖೆ, ಶಿಕ್ಷಣ ಇಲಾಖೆ, ಹಣಕಾಸು ಇಲಾಖೆ ಹಾಗೂ ಸಾಮಾಜಿಕ ಸುರಕ್ಷೆ ಆಡಳಿತ ಇಲಾಖೆಗಳು ಕೆಲ ಉದಾಹರಣೆಗಳು.  ವಿದೇಶಾಂಗ ಇಲಾಖೆ, ವಾಣಿಜ್ಯ ಇಲಾಖೆ ಹಾಗೂ ಕೃಷಿ ಇಲಾಖೆಗಳಲ್ಲಿ ವಿದೇಶಾಂಗ ಸೇವೆಯ ಹುದ್ದೆಗಳೂ ಉಂಟು. 

ಪ್ರತಿಯೊಂದು ಇಲಾಖೆಯಲ್ಲೂ ಸಿಬ್ಬಂದಿ ನೇಮಕಕ್ಕೆ ಅವುಗಳದ್ದೇ ಆದ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಶಿಕ್ಷಣ ಹಾಗೂ ಅನುಭವಗಳಂಥ ಮಾನದಂಡಗಳು ಇರುತ್ತವೆ.  ಭಾರತದಲ್ಲಿ ಕೇಂದ್ರ ಸಚಿವ ಮಟ್ಟದ ಹುದ್ದೆಯನ್ನು ಅಮೆರಿಕದಲ್ಲಿ ಸೆಕ್ರೆಟರಿ ಎಂದು ಕರೆಯಲಾಗುತ್ತದೆ.  ಇಲಾಖೆಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುವ ಈ ಸೆಕ್ರೆಟರಿಗಳನ್ನು ಉದಾಹರಣೆಗಾಗಿ ಹೇಳುವುದಾದರೆ, ಸೆಕ್ರೆಟರಿ ಆಫ್ ಸ್ಟೇಟ್, ಸೆಕ್ರೆಟರಿ ಆಫ್ ಹೋಂ ಲ್ಯಾಂಡ್ ಸೆಕ್ಯೂರಿಟಿ, ಅಧ್ಯಕ್ಷರೇ ನೇಮಿಸುತ್ತಾರೆ. 

ಈ ನೇಮಕಗಳನ್ನು ಸೆನೆಟ್ ಊರ್ಜಿತಗೊಳಿಸುತ್ತದೆ.  ಅಮೆರಿಕದ ಅಂಚೆ ಸೇವೆ ಹಾಗೂ ಸೈನಿಕರನ್ನು ಹೊರತುಪಡಿಸಿ, 2010ರ ಅಂಕಿ ಅಂಶದಂತೆ,  28 ಲಕ್ಷ ನಾಗರಿಕರು ಅಮೆರಿಕದ ಕೇಂದ್ರ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  ಅಮೆರಿಕ ಸರ್ಕಾರದ ಏಜನ್ಸಿಗಳು ಹಾಗೂ ಇಲಾಖೆಗಳ ಸಂಪೂರ್ಣ ಪಟ್ಟಿಗಾಗಿ ಈ ಮುಂದಿನ ವೆಬ್ ಸೈಟಿಗೆ http://www.usa.gov ಭೇಟಿ ನೀಡಿ.

4. ಇ. ವೀರೇಶ್, ಇಂಗಳಗಿ, ಸವದತ್ತಿ ತಾಲೂಕು.
ಮೊಟ್ಟ ಮೊದಲಿಗೆ ವೀಸಾ ಕಂಡು ಹಿಡಿದವರು ಯಾರು  ? ವೀಸಾದ ಮೌಲ್ಯ ಹಾಗೂ ಅದರ ಮಹತ್ವವೇನು ?

ವೀಸಾಗಳ ಇತಿಹಾಸ ತಿಳಿಯುವ ಮೊದಲು, ಪಾಸ್‌ಪೋರ್ಟ್ ಗಳ ಇತಿಹಾಸವನ್ನು ಅರಿಯುವ ಅಗತ್ಯವಿದೆ. ಅಮೆರಿಕದಲ್ಲಿ ಪಾಸ್‌ಪೋರ್ಟಿನ ಮೊದಲ ಬಳಕೆ ದಾಖಲಾಗಿರುವುದು 1775ರಲ್ಲಿ. ಆಗ ನಡೆದ ಸ್ವತಂತ್ರ ಯುದ್ಧದಲ್ಲಿ ಅಮೆರಿಕ ದೇಶದ ಫ್ರಾನ್ಸ್ ಸಚಿವರಾಗಿದ್ದ ಸಚಿವ ಬೆಂಜಮಿನ್ ಫ್ರಾಂಕ್ಲಿನ್ ಅವರು ಫ್ರೆಂಚ್ ಪಾಸ್‌ಪೋರ್ಟ್ ಮಾದರಿಯ ದಾಖಲೆಯೊಂದನ್ನು ವಿನ್ಯಾಸಗೊಳಿಸಿದರು.

ಆ ಪಾಸ್‌ಪೋರ್ಟ್ ಒಂದು ಪುಟದಷ್ಟು ದೊಡ್ಡದಾಗಿದ್ದು, ಸಂಬಂಧಿಸಿದ ವ್ಯಕ್ತಿಯ ವಿವರಗಳನ್ನು ಹೊಂದಿರುತ್ತಿತ್ತು. ಆದರೆ ಭಾವಚಿತ್ರ ಇರುತ್ತಿರಲಿಲ್ಲ. ಪಾಸ್‌ಪೋರ್ಟ್ ಬಳಕೆಯನ್ನು ಮೊದಲ ಬಾರಿಗೆ  ಅಂತಾರಾಷ್ಟ್ರೀಯ ಪ್ರಯಾಣದ ಸಂದರ್ಭದಲ್ಲಿ ಬಳಸಿದ್ದು 1918ರಲ್ಲಿ ಪಾಸ್‌ಪೋರ್ಟ್ ನಿಯಂತ್ರಣ ಕಾಯ್ದೆ ಬಂದ ಮೇಲೆ. 

ಪಾಸ್‌ಪೋರ್ಟಿನ ಮುಖ್ಯ ಉದ್ದೆೀಶ ಅಂತಾರಾಷ್ಟ್ರೀಯ ಪ್ರಯಾಣ ಮಾಡುತ್ತಿರುವ ವ್ಯಕ್ತಿಯ ಗುರುತು ಹಾಗೂ ರಾಷ್ಟ್ರೀಯತೆಯನ್ನು ಸೂಚಿಸುವುದು. ಬೇರೊಂದು ದೇಶವನ್ನು ಪ್ರವೇಶಿಸಲು ಪಾಸ್‌ಪೋರ್ಟ್ ನೆರವು ನೀಡುತ್ತದೆ.  ಆದರೆ, ಇದು ಇಚ್ಛಿತ ದೇಶಕ್ಕೆ ಪ್ರವೇಶವನ್ನು ಖಾತರಿ ಪಡಿಸುವುದಿಲ.  ಪಾಸ್‌ಪೋರ್ಟ್ ಹೊಂದಿರುವವರು ತಮ್ಮ ರಾಷ್ಟ್ರೀಯತೆಯನ್ನು ಹೊಂದಿರುವ ಸ್ವದೇಶಕ್ಕೆ  ಹಿಂದಿರುಗುವ ಹಕ್ಕು ಇದ್ದೆೀ ಇರುತ್ತದೆ. 

ನಾಗರಿಕರಲದ್ಲವರು ತನ್ನ ದೇಶಕ್ಕೆ ಭೇಟಿ ನೀಡಿ, ಪ್ರಯಾಣ ಮಾಡುವ ಹಾಗೂ ನಿರ್ದಿಷ್ಟ ಸಮಯದವರೆಗೂ ತಂಗಲು ಅವಕಾಶ ನೀಡುವ ರಾಷ್ಟ್ರವೊಂದರ ಅನುಮತಿಗೆ ವೀಸಾ ಎನ್ನಲಾಗುತ್ತದೆ.  ಪ್ರಥಮ ಜಾಗತಿಕ ಯುದ್ಧದ ಬಳಿಕ ವೀಸಾಗಳ ಬಳಕೆ ಚಾಲ್ತಿಗೆ ಬಂತು. 

ಅಂತಾರಾಷ್ಟ್ರೀಯ ಪ್ರಯಾಣಿಕರು ನಿರ್ದಿಷ್ಟ ಗಮ್ಯ ಸ್ಥಾನಕ್ಕೆ ಹೋಗಲು ರಾಷ್ಟ್ರಗಳ ಅನುಮತಿ ಅಗತ್ಯವಾಗಿರುವುದರಿಂದ, ವೀಸಾಗಳನ್ನು ಪ್ರವಾಸದ ಮುಖ್ಯ ದಾಖಲೆಗಳು ಎಂದು ಪರಿಗಣಿಸಲಾಗುತ್ತದೆ.  ತನ್ನ ಗಡಿಯನ್ನು ಯಾರು ದಾಟಬಹುದು, ಹಾಗೂ ಯಾರು ತನ್ನ ನೆಲದಲ್ಲಿರಬಹುದು ಎಂಬುದನ್ನು ನಿರ್ಧರಿಸುವ ಸಾಧನಗಳಾಗಿ ವೀಸಾಗಳನ್ನು ರಾಷ್ಟ್ರಗಳು ಬಳಸುತ್ತವೆ.

5. ಎಚ್.ಎಂ. ಶಶಿರೇಖ, ವ್ಯಾಸನಕೆರೆ, ಹೊಸಪೇಟೆ ತಾಲ್ಲೂಕು
ಅಮೆರಿಕದಲ್ಲಿ ಹೆಣ್ಣುಮಕ್ಕಳಿಗೆ ಯಾವ ಪ್ರಾಧಾನ್ಯ ಇದೆ ?

ಅಮೆರಿಕದಲ್ಲಿ ಪುರುಷರು ಅನುಭವಿಸುವ ಎಲ್ಲ ಕಾನೂನು ಹಾಗೂ ನಾಗರಿಕ ಹಕ್ಕುಗಳನ್ನು ಮಹಿಳೆಯರೂ ಸಮಾನವಾಗಿ ಅನುಭವಿಸುತ್ತಾರೆ. ಆದರೆ, ಅಮೆರಿಕದಲ್ಲಿಯೂ ಮಹಿಳೆಯರ ಸಮಾನತೆಯ ಹಕ್ಕನ್ನು ಬಹುಕಾಲದವರೆಗೂ ಗುರುತಿಸಲಾಗಿರಲಿಲ್ಲ. ಅಮೆರಿಕಾ ಸಂವಿಧಾನಕ್ಕೆ 19ನೇ ತಿದ್ದುಪಡಿ ಬಂದ ಬಳಿಕ, ಅಂದರೆ 1920ರಲ್ಲಿ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲಾಯಿತು. 

ಅಮೆರಿಕದ ಉದ್ಯೋಗ ಪಡೆಯಲ್ಲಿ ಸರಿ ಸುಮಾರು ಅರ್ಧ ಭಾಗದಷ್ಟು ಹಾಗೂ ಕಾಲೇಜು ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ಸಮುದಾಯದಲ್ಲಿ ಬಹುಪಾಲು ಮಹಿಳೆಯರೇ ಇದ್ದಾರೆ.  ಅಮೆರಿಕದ ಮಹಿಳೆಯರು ಬಾಹ್ಯಾಕಾಶ ಯಾನಿಗಳಾಗಿ ಗಗನವನ್ನು ಚುಂಬಿಸಿದ್ದಾರೆ.  ಉದ್ಯಮಿಗಳಾಗಿ, ಉದ್ಯೋಗದಾತರಾಗಿ, ಉದ್ದಿಮೆಗಳ ನೇತಾರರಾಗಿ ಅಮೆರಿಕದ ಆರ್ಥಿಕತೆಯ ದಿಗಂತವನ್ನು ವಿಸ್ತರಿಸಿದ್ದಾರೆ.  ರಕ್ಷಣಾ ಪಡೆಯ ಕಾರ್ಯಗಳಲ್ಲೂ ತೊಡಗಿಸಿಕೊಂಡು ರಾಷ್ಟ್ರ ರಕ್ಷಣೆಯ ಹೊಣೆ ಹಂಚಿಕೊಂಡಿದ್ದಾರೆ.

ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರಂಥವರು ಸರ್ಕಾರದ ಅತ್ಯುನ್ನತ ಹುದ್ದೆಗಳನ್ನೂ ಅಲಂಕರಿಸಿ, ಆ ಹೊಣೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.  ಸಮಾಜದಲ್ಲಿ ಪುರುಷರ ಸಮಾನ ಸ್ಥಾನಮಾನ ಹೊಂದಲು ಶತ-ಶತಮಾನಗಳ ಹೋರಾಟವನ್ನು ಮಹಿಳೆಯರು ವಿಶ್ವದಾದ್ಯಂತ ಮಾಡಿದ್ದಾರೆ. 

ಸಮಾನ ಹಕ್ಕು, ಸಮಾನ ಅಭಿವ್ಯಕ್ತಿ ಹಾಗೂ ಸಮಾನ ಅವಕಾಶಗಳನ್ನು ತಮ್ಮ ಮಹಿಳಾ ನಾಗರಿಕರಿಗೂ ಕಲ್ಪಿಸಿದಾಗ ಮಾತ್ರ  ರಾಷ್ಟ್ರಗಳು ಹೆಚ್ಚು ಶಾಂತಿಯುತ ಹಾಗೂ ಸಮೃದ್ಧವಾಗಬಲ್ಲವು ಎಂಬುದನ್ನು ಅಮೆರಿಕ ಸಂಯುಕ್ತ ಸಂಸ್ಥಾನದ ಸರ್ಕಾರ ಮನಗಂಡಿದೆ.

ಮಹಿಳೆಯರ ಹಕ್ಕುಗಳ ರಕ್ಷಣೆ ಹಾಗೂ ಮಹಿಳಾ ಸಬಲೀಕರಣಕ್ಕೆ ಬೆಂಬಲ ನೀಡುವ ಕಾರ್ಯಕ್ರಮಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸುವ ಮೂಲಕ ಅಮೆರಿಕ ಸಂಯುಕ್ತ ಸಂಸ್ಥಾನ ಇಡೀ ವಿಶ್ವಕ್ಕೆ ಮಾದರಿಯಾಗಿ ನಿಲ್ಲ ಬೇಕಿದೆ. ಸಮಸ್ತ ನಾಗರಿಕರ ಶಕ್ತಿ, ಸಾಮರ್ಥ್ಯ ಹಾಗೂ ಪ್ರತಿಭೆಗಳನ್ನು ಸದ್ಬಳಕೆ ಮಾಡಿಕೊಳ್ಳುವುದೇ ರಾಷ್ಟ್ರದ ಆರ್ಥಿಕ ಪ್ರಗತಿ ಹಾಗೂ ಸಮೃದ್ಧತೆಯ ಮೂಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT