ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಸೇವಿಸುವ ಉದ್ದೇಶ

Last Updated 23 ಜೂನ್ 2019, 19:41 IST
ಅಕ್ಷರ ಗಾತ್ರ

ಬಹಳ ಕಾಲದ ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಂದು ಗಿಳಿಯಾಗಿ ಹುಟ್ಟಿದ್ದ. ಆತ ಹಿಮಾಲಯ ಪ್ರದೇಶಕ್ಕೆ ಹೋಗಿ ಅಲ್ಲಿಯೇ ನೆಲೆಸಿದ. ಸಮುದ್ರ ಪ್ರದೇಶದ ಹತ್ತಿರವಿದ್ದ ಸಾವಿರಾರು ಗಿಳಿಗಳಿಗೆ ಆತ ನಾಯಕನಾದ. ಅವನ ದೂರದರ್ಶಿತ್ವ. ತಿಳಿವಳಿಕೆ, ಸಹಚರರ ಬಗ್ಗೆ ಅನುಕಂಪೆ ಇವೆಲ್ಲ ಅವನನ್ನು ಸಹಜವಾಗಿಯೇ ಆದರ್ಶ ನಾಯಕನನ್ನಾಗಿ ಮಾಡಿದ್ದವು. ಬೋಧಿಸತ್ವನಿಗೊಬ್ಬ ಮಗ ಹುಟ್ಟಿದ. ಅವನು ಬೆಳೆದು ದೊಡ್ಡವನಾಗುವ ಹೊತ್ತಿಗೆ ಬೋಧಿಸತ್ವನ ದೇಹಶಕ್ತಿ ಕುಂದುತ್ತಲಿತ್ತು. ಅವನ ಕಣ್ಣು ಮಂಜಾಗತೊಡಗಿದವು, ಹೊರಗೆ ಹಾರಿ ಆಹಾರ ಸಂಪಾದನೆ ಕಷ್ಟವೆನ್ನಿಸಿತು. ಆಗ ಅವನ ಮಗನಾಗಿದ್ದ ಗಿಳಿ, ತಂದೆಯನ್ನು ಗೂಡಿನಲ್ಲೇ ಕುಳಿತುಕೊಳ್ಳಲು ಹೇಳಿ ತಾನೇ ಹಣ್ಣು-ತಿಂಡಿಗಳನ್ನು ತಂದುಕೊಟ್ಟು ಪೋಷಿಸಿದ್ದ.

ಒಂದು ದಿನ ಪುತ್ರ ಗಿಳಿ ಹಾರುತ್ತ ಹಿಮಾಲಯದ ಪರ್ವತ ಶಿಖರದ ಮೇಲೆ ಕುಳಿತು ಸಮುದ್ರದೆಡೆಗೆ ನೋಡುತ್ತಿತ್ತು. ಅದಕ್ಕೆ ದೂರದಲ್ಲಿ ಒಂದು ದ್ವೀಪ ಕಂಡಿತು. ಅಲ್ಲಿ ಏನು ಇರಬಹುದು ಎಂಬ ಕುತೂಹಲದಿಂದ ಅಲ್ಲಿಗೆ ಹಾರಿತು. ಆ ದ್ವೀಪದಲ್ಲಿ ದೊಡ್ಡ ಮಾವಿನ ತೋಪು ಇತ್ತು. ಅದರಲ್ಲಿ ಬಂಗಾರ ಬಣ್ಣದ ದೊಡ್ಡ ದೊಡ್ಡ ಮಾವಿನಹಣ್ಣುಗಳು ಸುರಿದಿದ್ದವು. ಗಿಳಿ ತೃಪ್ತಿಯಾಗುವವರೆಗೂ ಮಾವಿನಹಣ್ಣುಗಳನ್ನು ತಿಂದಿತು. ನಂತರ ಒಂದು ರಸದಿಂದ ತುಂಬಿದ ಮಾಗಿದ ಮಾವಿನಹಣ್ಣನ್ನು ಕೊಕ್ಕಿನಲ್ಲಿ ಹಿಡಿದುಕೊಂಡು ಸಮುದ್ರವನ್ನು ಹಾರಿ ಗೂಡಿಗೆ ಬಂದು ವಯಸ್ಸಾದ ತಂದೆ-ತಾಯಿಗಳಿಗೆ ಕೊಟ್ಟಿತು. ಬೋಧಿಸತ್ವ ಹಣ್ಣಿನ ರಸವನ್ನು ಹೀರಿ ತಕ್ಷಣವೇ ಕೇಳಿತು, ‘ಮಗೂ, ಇದು ಸಮುದ್ರ ಮಧ್ಯದ ದ್ವೀಪದಲ್ಲಿರುವ ಮಾವಿನತೋಪಿನ ಗಿಡಗಳ ಹಣ್ಣಲ್ಲವೇ?’ ಮಗ ಗಿಳಿ ಹೌದೆಂದಿತು. ಆಗ ಬೋಧಿಸತ್ವ ಗಿಳಿ ಹೇಳಿತು, ‘ಮಗೂ, ಇನ್ನು ಆ ದ್ವೀಪಕ್ಕೆ ಎಂದಿಗೂ ಹೋಗಬೇಡ. ಅಲ್ಲಿಗೆ ಹೋದ ಗಿಳಿಗಳ ಆಯುಷ್ಯ ಕಡಿಮೆಯಾಗುತ್ತದೆ. ಅಲ್ಲಿಯ ಮಾವಿನ ಹಣ್ಣುಗಳಲ್ಲಿ ಒಂದು ಯಾವುದೋ ಮತ್ತಿನ ಅಂಶವಿದೆ. ಅದು ಒಂದೆರಡು ಬಾರಿ ತಿಂದವರನ್ನು ಎಚ್ಚರ ತಪ್ಪಿಸುತ್ತದೆ’.

ಮಗ ತಂದೆಯ ಮಾತನ್ನು ಕೇಳಲಿಲ್ಲ. ಮತ್ತೆ ಮರುದಿನ ಅಲ್ಲಿಗೆ ಹೋದ. ಹಣ್ಣಿನ ರುಚಿಗೆ ಮರುಳಾಗಿ ದಿನವೂ ಹೋಗಲಾರಂಭಿಸಿದ. ಹೀಗೆ ಒಂದು ದಿನ ಹೋಗಿ ಹೊಟ್ಟೆ ತುಂಬುವ ತನಕ ಮಾವಿನ ಹಣ್ಣಿನ ರಸ ಕುಡಿದ. ಮರಳಿ ತನ್ನ ಗೂಡಿನ ಕಡೆಗೆ ಹಾರಿದ. ಹೊಟ್ಟೆಯಲ್ಲಿದ್ದ ಹಣ್ಣಿನ ರಸ ಕೆಲಸ ಮಾಡುತ್ತಿತ್ತು. ಅವನ ದೃಷ್ಟಿ ಮಂಜಾಗತೊಡಗಿತು, ಹಾರುತ್ತಿದ್ದಂತೆಯೇ ನಿದ್ರೆ ಆವರಿಸತೊಡಗಿತು. ಕೊಕ್ಕಿನಲ್ಲಿ ಹಿಡಿದುಕೊಂಡಿದ್ದ ಮಾವಿನಹಣ್ಣು ಜಾರಿ ನೀರಿನಲ್ಲಿ ಬಿತ್ತು. ಪ್ರತಿದಿನ ಹಾರಿಬರುತ್ತಿದ್ದ ದಾರಿ ಮರೆತುಹೋಯಿತು. ರೆಕ್ಕೆ ಬಡಿಯಲು ಸುಸ್ತಾಯಿತು. ಹಾರುತ್ತ ಕೆಳಗೆ ಬರುತ್ತಿರುವುದು ಅದಕ್ಕೆ ತಿಳಿಯಲೇ ಇಲ್ಲ. ನೀರಿನಲ್ಲಿ ಬಿದ್ದೇ ಬಿಟ್ಟಿತು. ಕರಗಸದಂತೆ ಹಲ್ಲಿರುವ ದೊಡ್ಡ ಮೀನೊಂದು ಅದನ್ನು ತಿಂದು ಹಾಕಿತು. ತನ್ನ ಮಗ ದಿನನಿತ್ಯ ಬರುವ ಸಮಯಕ್ಕೆ ಬರದಿದ್ದನ್ನು ಗಮನಿಸಿ ಬೋಧಿಸತ್ವ ಆತ ಸಮುದ್ರದಲ್ಲಿ ಬಿದ್ದು ನಿಧನ ಹೊಂದಿರಬಹುದೆಂದು ಊಹಿಸಿದ. ತನ್ನ ಮಾತನ್ನು ಕೇಳದೆ ಮಗ ಪ್ರಾಣಕಳೆದುಕೊಂಡ ಎಂದು ದುಃಖಿಸಿದ. ತನ್ನ ಹೆಂಡತಿ ಮಗನ ಬಗ್ಗೆ ಕೇಳಿದಾಗ ಹೇಳಿದ, ‘ಚೆನ್ನಾಗಿ ವಿಚಾರಮಾಡಿ ಆಹಾರವನ್ನು ಸೇವಿಸುವುದು ಕ್ರೀಡೆಗಲ್ಲ, ಬರೀ ಪುಷ್ಟಿಗಲ್ಲ, ಅಲಂಕಾರಕ್ಕಾಗಿ ಅಲ್ಲ, ಶರೀರ ಇರುವವರೆಗೆ ಅದನ್ನು ಚೈತನ್ಯಶೀಲವನ್ನಾಗಿಸಿ ಇಡುವುದಕ್ಕೆ, ಅವಶ್ಯವಿದ್ದಷ್ಟೇ ಹಸಿವನ್ನು ಹಿಂಗಿಸಲಿಕ್ಕೆ, ಉತ್ತಮ ಜೀವನವನ್ನು ಸಾಗಿಸಲಿಕ್ಕೆ. ನಿನ್ನ ಮಗ ಅದನ್ನು ಅರಿಯಲಿಲ್ಲ. ಆದ್ದರಿಂದ ದೀರ್ಘಾಯುಸ್ಸನ್ನು ಪಡೆಯಲಿಲ್ಲ”.

ಈ ಮಾತು ಇಂದಿಗೂ, ನಮಗೆಲ್ಲರಿಗೂ ಅತ್ಯಂತ ಮನನೀಯವಾದದ್ದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT