ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರಕಾಲ ಎಳೆಯುವ ಕುಣಿಕೆ

Last Updated 6 ಸೆಪ್ಟೆಂಬರ್ 2019, 18:28 IST
ಅಕ್ಷರ ಗಾತ್ರ

ಕ್ಷಣವೊಂದರೊಳೆ ಪೂರ್ತಿ ಕೊಲ್ಲುವುದು ಯಮಶೂಲ |

ಕ್ಷಣವನುಕ್ಷಣ ಕೊಲ್ಲುವುವು ಮೋಹಮಮತೆ ||

ಕುಣಿಕೆಯನು ನಿನ್ನ ಕೊರಳಿಗೆ ಹೂಡಿ ಚಿರಕಾಲ |

ವಣುವಣುವೆ ಬಿಗಿಯುವುವೊ – ಮಂಕುತಿಮ್ಮ || 181 ||

ಪದ-ಅರ್ಥ: ಕ್ಷಣವೊಂದರೊಳೆ=ಕ್ಷಣ+ಒಂದರೊಳೆ (ಒಂದರಲ್ಲೇ), ಕ್ಷಣವನುಕ್ಷಣ=ಕ್ಷಣ+ಅನುಕ್ಷಣ, ಕುಣಿಕೆ=ನೇಣು, ವಣುವಣುವೆ=ಅಣುಅಣುವೆ, ಸ್ವಲ್ಪಸ್ವಲ್ಪವಾಗಿ

ವಾಚ್ಯಾರ್ಥ: ಯಮನ ಶೂಲ ಮನುಷ್ಯನನ್ನು ಒಂದು ಕ್ಷಣದಲ್ಲೇ ಕೊಂದುಬಿಡುತ್ತದೆ. ಆದರೆ ಮೋಹ ಮಮತೆಗಳು ನಮ್ಮನ್ನು ಕ್ಷಣ, ಪ್ರತಿಕ್ಷಣವೂ ಕೊಲ್ಲುತ್ತವೆ. ಮಮತೆಯ ಹಗ್ಗಗಳು ನಮ್ಮ ಕೊರಳಿಗೆ ಸುತ್ತಿ ಬದುಕಿರುವವರೆಗೆ ಸ್ವಲ್ಪ ಸ್ವಲ್ಪವಾಗಿ ಬಿಗಿಯುತ್ತಲೇ ಇರುತ್ತವೆ.

ವಿವರಣೆ: ಯಮರಾಜ ತುಂಬ ಕೃಪಾಳು. ಅವನ ಮನಸ್ಸಿಗೆ ಬಂದರೆ ಮನುಷ್ಯನ ಪ್ರಾಣವನ್ನು ಕ್ಷಣ ಮಾತ್ರದಲ್ಲಿ ತೆಗೆದುಕೊಂಡು ಹೋಗುತ್ತಾನೆ. ಆದರೆ, ಮೋಹ ಮಮತೆಗಳು ಕೊರಳಿಗೆ ಹಾಕಿದ ನೇಣಿನಂತೆ. ಅವು ಪ್ರಾಣವನ್ನು ಒಮ್ಮೆಲೇ ತೆಗೆಯದೆ ಬದುಕಿನುದ್ದಕ್ಕೂ ಕಾಡಿ ಕಾಡಿ ಹೈರಾಣ ಮಾಡುತ್ತವೆ.

ಭರತ ಚಕ್ರವರ್ತಿ, ಅಸಾಧ್ಯ ಪರಾಕ್ರಮಿ. ಅವನ ವೈಭವ, ಸಂತೋಷಗಳಿಗೆ ಮಿತಿಯಿರಲಿಲ್ಲ. ಹಾಗಿದ್ದ ಭರತ ವಯಸ್ಸಾದಂತೆ ಎಲ್ಲವನ್ನೂ ತೊರೆದು ಕಾಡಿಗೆ ವಾನಪ್ರಸ್ತಕ್ಕೆ ಹೊರಟ. ರಾಜ್ಯದ, ಪರಿವಾರದ, ಪ್ರಜೆಗಳ, ಯಾವ ವಸ್ತುಗಳ ಮೋಹವೂ ಬೇಡವೆಂದು ನಿರ್ಮೋಹಿಯಾಗಿರಲು ಕಾಡಿಗೆ ಬಂದ ಭರತ ನದೀತೀರದಲ್ಲಿ ತಾನೇ ಒಂದು ಗುಡಿಸಲು ಕಟ್ಟಿಕೊಂಡ. ಯಾರ ಸಂಪರ್ಕವೂ ಬೇಡವೆಂದು ಧ್ಯಾನದಲ್ಲಿ ತೊಡಗಿದ. ಒಂದು ದಿನ ನದಿ ತೀರದಲ್ಲಿ ಒಂದು ತುಂಬ ಗರ್ಭಿಣಿಯಾದ ಜಿಂಕೆ ನೀರು ಕುಡಿಯಲು ಬಂದಾಗ ಸಿಂಹದ ಘರ್ಜನೆಯನ್ನು ಕೇಳಿ ಹಾರಿದ ಜಿಂಕೆ ಮರಿಗೆ ಜನ್ಮವಿತ್ತು ಸತ್ತು ಹೋಯಿತು.ಮರಿ ನೀರಿನಲ್ಲಿ ಕೊಚ್ಚಿ ಹೋಗುತ್ತಿತ್ತು. ಅದನ್ನು ಕಂಡ ಭರತ ಕರುಣೆಯಿಂದ ಅದನ್ನು ಪಾರುಮಾಡಿ ಗುಡಿಸಲಿಗೆ ತಂದು ಆರೈಕೆ ಮಾಡಿದ.

ಮೋಹದ, ಮಮತೆಯ ಸಸಿಯ ಚಿಗುರು ಮೂಡಿತು. ಅದರ ಆರೈಕೆಯೇ ಅವನ ಬದುಕಿನ ಗುರಿಯಾಯಿತು. ಎಲ್ಲವನ್ನೂ ಬಿಟ್ಟುಬಂದ ರಾಜ ಜಿಂಕೆಯ ಮೋಹದ ಬಲೆಗೆ ಸಿಲುಕಿದ. ಧ್ಯಾನ, ಆತ್ಮಜ್ಞಾನದ ಬಯಕೆ ಹಿಂದೆ ಸರಿದವು. ತಾನು ಸಾಯುವ ಕೊನೆಯ ಗಳಿಗೆಯಲ್ಲೂ ಭಗವಂತನನ್ನೂ ನೆನೆಯದೆ ಜಿಂಕೆಯನ್ನು ನೆನೆದದ್ದರಿಂದ ಮುಂದಿನ ಜನ್ಮದಲ್ಲಿ ಜಿಂಕೆಯಾಗಿಯೇ ಹುಟ್ಟಿದ. ಇದು ಮೋಹದ, ಮಮತೆಯ ಕುಣಿಕೆ. ಅದು ಮನುಷ್ಯನನ್ನು ಬಿಗಿದು, ಎಳೆದಾಡಿ ಹಣ್ಣುಮಾಡುತ್ತದೆ. ಮನುಷ್ಯನ ಬದುಕಿನಲ್ಲಿ ಅದೆಷ್ಟೋ ಆಕರ್ಷಣೆಗಳಿವೆ.

ಅವುಗಳಲ್ಲಿ ಮುಖ್ಯವಾದ ಮೂರನ್ನು ಏಷಣಾತ್ರಯಗಳು ಎನ್ನುತ್ತಾರೆ. ಅವು ಪುತ್ರೈಷಣ, ದಾರೈಷಣ, ಹಾಗೂ ವಿತ್ತೈಷಣ. ಪುತ್ರೈಷಣ ಎಂದರೆ ಮಕ್ಕಳ ಮೋಹ. ಮಕ್ಕಳು ನೀಚರೆಂದು ತಿಳಿದೂ ಮೋಹದಿಂದ ಪ್ರೋತ್ಸಾಹಿಸಿದ ಧೃತರಾಷ್ಟ್ರ ಕೊನೆಯವರೆಗೂ ನರಳಿದ. ದಾರೈಷಣವೆಂದರೆ ಪರನಾರೀಮೋಹ. ಒಬ್ಬ ರಾವಣ ಇದಕ್ಕೆ ಮಾದರಿಯಾಗಿ ಸಾಲದೆ? ಎಂಥ ಪರಾಕ್ರಮಿ, ಜ್ಞಾನಿ, ತನ್ನ ಬದುಕನ್ನೇ ನರಕಮಾಡಿಕೊಂಡನಲ್ಲ! ಇಂದಿಗೂ ಅಂಥ ರಾವಣರಿದ್ದಾರೆ. ಅವರ ಗತಿಯೂ ಹಾಗೆಯೇ. ವಿತ್ತೈಷಣವೆಂದರೆ ಹಣದ ಮೋಹ. ಹಣಕ್ಕಾಗಿ ಬದುಕೆಲ್ಲ ಸೆಣಸಿದವರನ್ನು, ಅಪರಾಧಗಳನ್ನು ಮಾಡಿದವರನ್ನು, ಜೈಲು ಸೇರಿದವರನ್ನು ಕಂಡಿದ್ದೇವೆ. ಅದರ ಕುಣಿಕೆ ಚಿರಕಾಲ ನಮ್ಮನ್ನು ಎಳೆದಾಡುತ್ತದೆ – ಮೋಹದ, ಮಮತೆಯ ರೂಪದಲ್ಲಿ !

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT