ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ನಿರಪೇಕ್ಷ ಬದುಕು

Last Updated 16 ಫೆಬ್ರುವರಿ 2022, 20:30 IST
ಅಕ್ಷರ ಗಾತ್ರ

ಆರಣ್ಯಕದ ಪುಷ್ಪಗಳ ಮೂಸುವವರಾರು ? |
ಆರಿಹರು ಪತಗದುಡುಪನು ಹುಡುಕಿ ಮೆಚ್ಚಲ್ ? ||
ಬೇರೊಬ್ಬರೆಣಿಕೆಯಿಲ್ಲದೆ ಪ್ರಕೃತಿ ತನಗೆಂದೆ |
ಸ್ವಾರಸ್ಯವೆಸಗುವಳೊ ! – ಮಂಕುತಿಮ್ಮ || 566 |
|

ಪದ-ಅರ್ಥ: ಆರಣ್ಯಕದ=ಅರಣ್ಯದ, ಆರಿಹರು=ಯಾರಿದ್ದಾರೆ, ಪತಗದುಡುಪನು=ಪತಗದ
(ಪತಂಗದ)+ಉಡುಪನು, ಮೆಚ್ಚಲ್=ಮೆಚ್ಚಲು, ಬೇರೊಬ್ಬರೆಣಿಕೆಯಿಲ್ಲದೆ=ಬೇರೊಬ್ಬರ+
ಎಣಿಕೆ+ಇಲ್ಲದೆ, ಸ್ವಾರಸ್ಯವೆಸಗುವಳೊ=ಸ್ವಾರಸ್ಯವ+ಎಸಗುವಳೊ.

ವಾಚ್ಯಾರ್ಥ: ಅಡವಿಯಲ್ಲಿರುವ ಹೂವುಗಳನ್ನು ಮೂಸುವವರು ಯಾರು? ಪತಂಗದ ಉಡುಪುಗಳನ್ನು ಹುಡುಕಿ ಮೆಚ್ಚಲು ಯಾರಿದ್ದಾರೆ? ಮತ್ತೊಬ್ಬರ ಮೆಚ್ಚುವಿಕೆಯಿಲ್ಲದೆ ಪ್ರಕೃತಿ ತನಗಾಗಿಯೇ ಅನೇಕ ಸ್ವಾರಸ್ಯಗಳನ್ನು ಉಂಟು ಮಾಡುತ್ತಾಳೆ.

ವಿವರಣೆ: ನನಗೆ ಈ ಕಗ್ಗ ಯಾವಾಗಲೂ ಅತ್ಯಂತ ಅಧ್ಯಾತ್ಮಿಕ ಅನುಭವವನ್ನು ನೀಡುತ್ತದೆ. ಸಾಮಾನ್ಯವಾಗಿ ಇದು ಕಗ್ಗದ ವೈಶಿಷ್ಟ್ಯ. ಅದು ಮೇಲ್ನೋಟಕ್ಕೆ ಒಂದರ್ಥವನ್ನು ನೀಡಿದರೆ, ಸ್ವಲ್ಪ ಒಳಹೊಕ್ಕು ನೋಡಿದರೆ ಅತ್ಯಂತ ಮಾರ್ಮಿಕವಾದ ಅರ್ಥವನ್ನು ಹೊಳೆಯಿಸುತ್ತದೆ.

ಈ ಕಗ್ಗದಲ್ಲಿ ಕಣ್ಣಿಗೆ ಕಾಣದ ಚಮತ್ಕಾರವನ್ನು ಯಾರು ಮೆಚ್ಚುತ್ತಾರೆ ಎಂಬ ಭಾವವಿದೆ. ದಟ್ಟವಾದ ಕಾಡಿನಲ್ಲಿ ಅನೇಕಾನೇಕ ಹೂವುಗಳು ಅರಳಿ ನಿಂತಿವೆ. ಅವುಗಳ ಮೃದುತ್ವವನ್ನು, ಬಣ್ಣವನ್ನು, ಸುವಾಸನೆಯನ್ನು, ಚೆಂದವನ್ನು ಗಮನಿಸುವವರು ಯಾರೂ ಇಲ್ಲ. ಅದು ವ್ಯರ್ಥವಾಯಿತು ಎಂದು ಜನರು ಭಾವಿಸುತ್ತಾರೆ. ಯಾಕೆಂದರೆ ಚಪ್ಪಾಳೆ ತಟ್ಟಿದರೆ ಕಲಾವಿದರಿಗೆ ಸಂತೋಷ. ಚಿತ್ರಕಲೆಯನ್ನು ಮೆಚ್ಚಿ ಪ್ರಶಸ್ತಿ ನೀಡಿದರೆ ಚಿತ್ರಕಾರನಿಗೆ ತೃಪ್ತಿ. ನೋಡುವವರೇ ಇಲ್ಲದೆ ಹೋದರೆ ಆಟಗಾರನಿಗೇನು ಸಮಾಧಾನವಾದೀತು? ಅಂದರೆ ನಮ್ಮ ಸಾಮಾನ್ಯ ಪ್ರಪಂಚದಲ್ಲಿ ಯಾರೂ ಗುರುತಿಸದಿದ್ದರೆ, ಮೆಚ್ಚದಿದ್ದರೆ ಪ್ರಯತ್ನ ನಿಷ್ಟ್ರಯೋಜಕ ಎಂಬ ಭಾವ ಬಲಿತಿದೆ.

ಯಾರಿಗೋಸ್ಕರ ಮಾಡಬೇಕು ಎನ್ನಿಸುತ್ತದೆ. ಅಂತೆಯೇ ಅದೇ ಕಾಡಿನಲ್ಲಿ ಹೂವಿನಿಂದ ಹೂವಿಗೆ ಹಾರುವ ಪತಂಗದ ರೆಕ್ಕೆಗಳ ಮೇಲಿನ ಸುಂದರ ಚಿತ್ತಾರಗಳನ್ನು ಮೆಚ್ಚುವವರು ಯಾರು? ಅದನ್ನು ಕಗ್ಗ ಕಾವ್ಯಾತ್ಮಕವಾಗಿ ‘ಪತಗದ ಉಡುಪನು’ ಎನ್ನುತ್ತದೆ. ಪತಂಗ ಹೊಸ ಹೊಸ ಉಡುಪುಗಳನ್ನು ತೊಡುವುದು ಹಾರಾಡುವುದು ಯಾರಿಗಾಗಿ? ನಾವೆಲ್ಲ ಅಲಂಕಾರ ಮಾಡಿಕೊಳ್ಳುವುದು, ಹೊಸ ಹೊಸ ಬಟ್ಟೆಗಳನ್ನು ಹಾಕಿಕೊಳ್ಳುವುದು ಚೆಂದ ಕಾಣಲಿ ಎಂದಲ್ಲವೆ? ಚೆಂದ ಕಾಣುವುದು ಯಾರಿಗೆ?
ಹಾಗಾದರೆ ಚೆಂದ ಕಾಣುವುದಕ್ಕೆ, ಒಳ್ಳೆಯದನ್ನು ಮಾಡುವುದಕ್ಕೆ ಏನಾದರೂ ಕಾರಣವಿರಬೇಕು ಅಲ್ಲವೆ? ಆದರೆ ಕಾಡಿನ ವಿಷಯ ಹಾಗಲ್ಲ. ಪ್ರಕೃತಿ ಯಾರನ್ನೂ ಮೆಚ್ಚಿಸಲು ನೋಡುವುದಿಲ್ಲ. ಅದು ಏನು ಮಾಡಿದರೂ ತನ್ನ ತೃಪ್ತಿಗೆಂದೇ ಎಲ್ಲವನ್ನು ತುಂಬ ಸ್ವಾರಸ್ಯವಾಗಿ ಮಾಡುತ್ತದೆ.

ಇದು ನಮಗೊಂದು ಸುಂದರ ಪಾಠ. ಬದುಕಿನಲ್ಲಿ ಅದೆಷ್ಟೋ ಜನರಿದ್ದಾರೆ. ಅವರು ಇದ್ದಾರೆಂಬುದೇ ನಮಗೆ ತಿಳಿದಿಲ್ಲ. ಆದರೆ ನಮ್ಮ ಬದುಕಿಗೆ, ಸಂತೋಷಕ್ಕೆ ಅವರ ಕಾಣಿಕೆ ತುಂಬ ದೊಡ್ಡದು. ಅವರು ಮಾಡುವ ಕಾರ್ಯಕ್ಕೆ ಯಾರೊಬ್ಬರ ಮೆಚ್ಚುಗೆ, ಮರ್ಯಾದೆ ದೊರೆಯಲಿಕ್ಕಿಲ್ಲ. ಆದರೆ ಅವರು ಮಾಡುವುದೆಲ್ಲ ತಮ್ಮ ಆತ್ಮತೃಪ್ತಿಗೆ. ಶಿವರುದ್ರಪ್ಪನವರ ಕೋಗಿಲೆ ಹೇಳುವುದೂ ಇದನ್ನೇ ಅಲ್ಲವೆ? ‘ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ.... ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ?’. ಅದು ಬಿರುದಿಗೆ, ಸನ್ಮಾನಕ್ಕೆ ಹಾಡುವುದಿಲ್ಲ. ಹಾಡುವುದು ಕೇವಲ ಆತ್ಮತೃಪ್ತಿಗೆ. ಕಗ್ಗದ ಆಶಯವಿರುವುದು, ಈ ತರಹದ ಮನಸ್ಥಿತಿ ನಮಗೆಲ್ಲ ಸಾಧ್ಯವಾದೀತೇ? ಹಾಗಾದರೆ ಕಾಡು ಹೂವಿನ ಹಾಗೆ, ಪತಂಗದ ಹಾಗೆ ನಿರಪೇಕ್ಷೆಯಿಂದ ಬದುಕಬಹುದಲ್ಲವೆ? ನಿರೀಕ್ಷೆಗಳಿಂದ, ಅಪೇಕ್ಷೆಗಳಿಂದಬದುಕುಭಾರವಾಗದೆ ಉಳಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT