ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಅಗೋಚರ ಕೈಗಳಿಗೆ ಋಣ ಸಂದಾಯ

Last Updated 13 ಮಾರ್ಚ್ 2023, 22:09 IST
ಅಕ್ಷರ ಗಾತ್ರ

ನಿನ್ನೆಂಜಲಗುಳಾವ ಕಾಲುವೆಯ ಸೇರುವುದೊ! |
ಮಣ್ಣಾವುದದರಿಂದೆ ಗರ್ಭವತಿಯಹುದೋ ! ||
ಅನ್ನವದರಿಂದರ‍್ಗೊ! ಲೋಕಕವರಿಂದೇನೊ ! |
ಬಣ್ಣಿಸುವರಾರದನು? – ಮಂಕುತಿಮ್ಮ || 841 ||

ಪದ-ಅರ್ಥ: ನಿನ್ನೆಂಜಲಗುಳಾವ=ನಿನ್ನ+ಎಂಜಲ+ಅಗಳು+ಆವ, ಮಣ್ಣಾವುದದರಿಂದೆ=ಮಣ್ಣು+ಆವುದು+ಅದರಿಂದೆ, ಅನ್ನವದರಿಂದರ‍್ಗೊ=ಅನ್ನವು+ಅದರಿಂದ+ರ‍್ಗೊ(ಯಾರಿಗೊ), ಲೋಕಕವರಿಂದೇನೊ=ಲೋಕಕೆ+ಅವರಿಂದ+ಏನೊ, ಬಣ್ಣಿಸುವರಾರದನು=ಬಣ್ಣಿಸುವರು +ಯಾರು+ಅದನು.

ವಾಚ್ಯಾರ್ಥ: ನಿನ್ನ ಎಂಜಲದ ಅಗುಳು ಯಾವ ಕಾಲುವೆಯನ್ನು ಸೇರುತ್ತದೋ, ಯಾವ ಮಣ್ಣು ಆ ನೀರಿನಿಂದ ಗರ್ಭಧರಿಸಿ ಬೆಳೆ ಕೊಡುತ್ತದೊ, ಅದರಿಂದ ಯಾರಿಗೆ ಅನ್ನ ಸಿಕ್ಕೀತೋ, ಆ ಅನ್ನ ತಿಂದವರಿಂದ ಲೋಕಕ್ಕೆ ಏನಾದೀತೋ, ಇದನ್ನು ವರ್ಣಿಸುವರಾರು?

ವಿವರಣೆ: ನಾವು ಇಂದು ಪ್ರಪಂಚದಲ್ಲಿ ಸಂತೋಷದಿಂದ ಬದುಕಿದ್ದರೆ ಅದಕ್ಕೆ ನಾವಷ್ಟೇ ಕಾರಣವಲ್ಲ. ನಮ್ಮ ಸುಖಕ್ಕೆ ಅನೇಕರು, ಅನೇಕ ಸ್ಥಳಗಳಲ್ಲಿ ದುಡಿದು ಕಾರಣರಾಗಿದ್ದಾರೆ. ನಮ್ಮ ನಮ್ಮ ಮನೆಗಳಲ್ಲಿ ಆರಾಮವಾಗಿ ಕುಳಿತು ಟಿ.ವಿ. ನೋಡಿ ಸಂತೋಷಪಡುವಾಗ ಒಂದು ಚಿಂತನೆ ನಮ್ಮಲ್ಲಿ ಮೂಡಬೇಕು. ಯಾರೋ ಒಬ್ಬ ವಾಸ್ತುಶಿಲ್ಪಿ ನಿಮ್ಮ ಮನೆಯ ನಕ್ಷೆ ಮಾಡಿದರು, ಎಂಜಿನಿಯರ್ ಒಬ್ಬರು ಅದಕ್ಕೆ ಬೇಕಾದ ವಸ್ತುಗಳನ್ನು ಯೋಜಿಸಿದರು, ಹತ್ತಾರು ಕೆಲಸಗಾರರು ಕಬ್ಬಿಣ, ಮರಳು, ಸಿಮೆಂಟ್ ಬಳಸಿ ನಿಮ್ಮ ಮನೆಯನ್ನು ಕಟ್ಟಿದರು. ಯಾರೋ ಕಷ್ಟಪಟ್ಟು ತಯಾರಿಸಿದ ಪೀಠೋಪಕರಣಗಳು ಬಂದವು, ಯಾವುದೋ ವಿಜ್ಞಾನಿ ಮಾಡಿದ ಅವಿಷ್ಕಾರದ ಫಲವಾದ ಟಿ.ವಿ. ನಿಮ್ಮ ಮನೆ ಸೇರಿತು.

ನೂರಾರು, ಸಾವಿರಾರು ತಂತ್ರಜ್ಞರು, ಕಲಾವಿದರು ಸೇರಿ, ತಿಂಗಳುಗಟ್ಟಲೆ ಪರಿಶ್ರಮಿಸಿ ನೂರಾರು ಚಾನೆಲ್‌ಗಳಲ್ಲಿ ಮನರಂಜನೆಯನ್ನು ರೂಪಿಸಿದರು. ನೂರಾರು ಕೆಲಸಗಾರರು, ಮಳೆ, ಗಾಳಿ ಎನ್ನದೆ ಶ್ರಮಿಸಿ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಿದರು. ಮತ್ತೆ ನೂರಾರು ಜನ ಎಲ್ಲಿಯೂ ತಂತಿ ಕತ್ತರಿಸಿ ಹೋಗದಂತೆ, ಅಕಸ್ಮಾತ್ ಕತ್ತರಿಸಿದರೆ, ತಕ್ಷಣ ಅವುಗಳನ್ನು ಸೇರಿಸಿ ನಿಮಗೆ ತೊಂದರೆಯಾಗದಂತೆ ವಿದ್ಯುತ್‌ನ್ನು ಮನೆಗೆ ತಲುಪಿಸಿದರು. ಇಂದು ನೀವು ವಿರಾಮವಾಗಿ ಅನುಭವಿಸುವ ಸುಖದ ಹಿಂದೆ ಇವೆಲ್ಲರ ಪರಿಶ್ರಮ, ದುಡಿಮೆ, ಬುದ್ಧಿವಂತಿಕೆ ಇದೆ. ನಾವು ಅವರಿಗೆಲ್ಲ ಋಣಿಯಾಗಿರಬೇಕಲ್ಲವೆ? ಹೀಗೆ ಋಣದ ಜಾಲ ಅನಂತವಾದದ್ದು. ಇದನ್ನು ಈ ಕಗ್ಗ ಎಷ್ಟು ಸುಂದರವಾಗಿ ತಿಳಿಸುತ್ತದೆ. ನೀನು ಊಟಮಾಡಿ ಕೈ ತೊಳೆದಾಗ, ಕೈಗಂಟಿದ ಎಂಜಲು ಮತ್ತು ಒಂದೆರಡು ಅಗುಳುಗಳು ನೆಲ ಸೇರುತ್ತವೆ.

ಆ ನೀರು ನೆಲದಲ್ಲಿ ಇಂಗಿ, ಮುಂದೆ ಸಾಗಿ ಯಾವ ಕಾಲುವೆಯನ್ನು ಸೇರುತ್ತದೋ? ಕೈಯಿಂದ ಇಳಿದು ಹೋದ ಅಗುಳು ಯಾವ ಮಣ್ಣನನ್ನು ಸೇರಿ ತಾನೂ ಗೊಬ್ಬರವಾಗುತ್ತದೋ? ಆ ಮಣ್ಣು ಮತ್ತೊಂದು ಬೀಜದ ಸಂಪರ್ಕದಿಂದ ಯಾವಾಗ ಗರ್ಭ ಧರಿಸುತ್ತದೋ? ಅದರಿಂದ ಬೆಳೆದ ಧಾನ್ಯ ಯಾರಿಗೆ ಆಹಾರವಾಗುತ್ತದೋ ತಿಳಿಯದು. ಅಷ್ಟೇ ಅಲ್ಲ, ಆ ಅನ್ನ ಉಂಡವನಿಂದ ಜಗತ್ತಿಗೆ ಏನಾಗುತ್ತದೋ? ಆ ಅನ್ನ ಉಂಡು ಒಬ್ಬ ಮಹಾನ್ ದೇಶ ಪ್ರೇಮಿಯಾಗಬಹುದು, ವಿಜ್ಞಾನಿಯಾಗಬಹುದು, ಕಲಾವಿದನಾಗಬಹುದು. ಆಟಗಾರನಾಗಬಹುದು. ಅಂತೆಯೇ ಆತನೊಬ್ಬ ಮಹಾ ದೇಶದ್ರೋಹಿ, ಲೋಕಕಂಟಕನಾಗಬಹುದಲ್ಲವೆ? ಹೀಗೆ ನಮ್ಮ ಕಣ್ಣಿಗೆ ಕಾಣದಂತೆ ಹರಡಿದ ಈ ಋಣದ ಬಲೆಯನ್ನು ವರ್ಣಿಸುವುದು ಅಸಾಧ್ಯ. ಕಗ್ಗದ ಒಟ್ಟು ಅರ್ಥ, ನಮ್ಮ ಮನಸ್ಸಿನಲ್ಲಿ ಸದಾಕಾಲ ಉಳಿಯಲೇಬೇಕಾದ ಕೃತಜ್ಞತೆ. ನಮ್ಮ ಬದುಕಿನ ಪ್ರತಿಕ್ಷಣದ ಆನಂದಕ್ಕೆ, ಕಣ್ಣಿಗೆ ಕಾಣದ ಸಾವಿರಾರು ಕೈಗಳಿಗೆ ನಮ್ಮ ಋಣಸಂದಾಯವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT