ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ತತ್ವದ ಸ್ಫುರಣೆ

Last Updated 11 ಜನವರಿ 2022, 19:30 IST
ಅಕ್ಷರ ಗಾತ್ರ

ಬರಿಯ ಬುದ್ಧಿವಿಮರ್ಶೆಗರಿದು ಜೀವನತತ್ತ್ವ |
ಪರಿಶೋಧಿಸುವರಾರು ಬುದ್ಧಿ ಋಜುತೆಯನು? ||
ಸ್ಫುರಿಸುವುದದೆಂದೊ ತಾನೆ ಮಿಂಚುಬಳ್ಳಿವೊಲು |
ಪರಸತ್ತ್ವ ಮನದೊಳಗೆ – ಮಂಕುತಿಮ್ಮ || 539 ||

ಪದ-ಅರ್ಥ: ಬುದ್ಧಿವಿಮರ್ಶೆಗರಿದು=
ಬುದ್ಧಿ+ವಿಮರ್ಶೆಗೆ+ಅರಿದು(ತಿಳಿಯದು), ಪರಿಶೋಧಿಸುವರಾರು=ಪರಿಶೋಧಿಸುವರು(ವಿಶ್ಲೇಷಣೆ ಮಾಡಿದವರು)+ಆರು(ಯಾರು), ಋಜತೆಯನ್ನು=ಪ್ರಾಮಾಣಿಕತೆಯನ್ನು, ಸ್ಫುರಿಸುವುದದೆಂದೊ=ಸ್ಫುರಿಸುವುದು+ಅದು+ಎಂದೊ, ಮಿಂಚುಬಳ್ಳಿವೊಲು=ಮಿಂಚುಬಳ್ಳಿ(ಮಿಂಚಿನ ಸೆಳಕು)+ವೊಲು.

ವಾಚ್ಯಾರ್ಥ: ಜೀವನದ ತತ್ವ ಕೇವಲ ಬುದ್ಧಿಗೆ, ವಿಮರ್ಶೆಗೆ ನಿಲುಕದು. ಬುದ್ಧಿಯ ಪ್ರಾಮಾಣಿಕತೆಯನ್ನು ಪರೀಕ್ಷಿಸುವರಾರು? ಆ ತತ್ವ ತಾನೆ ಎಂದಿಗೋ ಒಂದು ಮಿಂಚಿನ ಸೆಳಕಿನಂತೆ ಒಂದು ಕ್ಷಣದಲ್ಲಿ ಮನದಲ್ಲಿ ಹೊಳೆಯುತ್ತದೆ.

ವಿವರಣೆ: ಶಿಷ್ಯನೊಬ್ಬ ಝೆನ್ ಗುರುವಿನ ಬಳಿಗೆ ಹೋದ. ಅವನಿಗೆ ಜೀವನದ ಮತ್ತು ಝೆನ್ ತತ್ವಗಳನ್ನು ತಿಳಿದುಕೊಳ್ಳುವ ಆಸೆ. ಅವನ ಮುಂದೆ ಕುಳಿತು ತನಗಿರುವ ಸಮಸ್ಯೆಗಳು, ತಾನು ತತ್ವಗಳೆಂದು ತಿಳಿದುಕೊಂಡ ವಿಷಯಗಳನ್ನು ದೀರ್ಘವಾಗಿ ವಿವರಿಸಿದ. ತಾನು ತರ್ಕದ ಮೂಲಕ ಅದನ್ನು ತಿಳಿಯಲು ಮಾಡಿದ ವ್ಯರ್ಥ ಪ್ರಯತ್ನಗಳ ಬಗ್ಗೆ ಹೇಳಿದ. ಗುರು ನಕ್ಕು ಶಿಷ್ಯನನ್ನು ಕರೆದು ಕುಳ್ಳರಿಸಿದ. ಅವನಿಗೋಸ್ಕರ ಚಹಾ ತಯಾರು ಮಾಡಿದ. ಶಿಷ್ಯನ ಮುಂದೆ ಕಪ್ಪು ಬಸಿಗಳನ್ನಿಟ್ಟು, ಕಪ್‌ನಲ್ಲಿ ಚಹಾ ಸುರಿಯತೊಡಗಿದ. ಶಿಷ್ಯ ನೋಡುತ್ತಿದ್ದ. ಗುರು ಶಿಷ್ಯನ ಮುಖ ನೋಡುತ್ತ ಚಹಾ ಹಾಕುತ್ತಲೇ ಹೋದ. ಕಪ್ ತುಂಬಿತು. ಗುರು ಹಾಕುವುದನ್ನು ನಿಲ್ಲಿಸಲಿಲ್ಲ. ಚಹಾ ಬಸಿಯಲ್ಲಿ ಬೀಳತೊಡಗಿತು. ಶಿಷ್ಯ ಆತುರದಲ್ಲಿ ಹೇಳಿದ. ‘ಗುರುಗಳೇ ಕಪ್ ತುಂಬಿ ಹೋಗಿದೆ’. ಗುರು ಮತ್ತೆ ನಕ್ಕು ಚಹಾ ಸುರಿಯುವುದನ್ನು ಮುಂದುವರೆಸಿದ. ಈಗ ಚಹಾ ಬಸಿ ತುಂಬಿ ಮೇಜಿನ ಮೇಲೆ ಹರಿಯತೊಡಗಿತು. ಶಿಷ್ಯ ಕೂಗಿದ, ‘ಗುರುಗಳೇ ಕಪ್ ತುಂಬಿ ಹರಿಯತೊಡಗಿದೆ’. ಗುರು ಶಿಷ್ಯನನ್ನೇ ನೋಡುತ್ತ ‘ಅದು ಕಾಣುತ್ತಿದೆ’ ಎಂದ. ‘ಕಪ್ ತುಂಬಿದ್ದು ಕಾಣುತ್ತಿದೆ ಆದರೆ ನಿನ್ನ ಮನಸ್ಸು ಹಾಗೆಯೇ ತರ್ಕದಿಂದ ತುಂಬಿದೆ. ಅದನ್ನು ಖಾಲಿ ಮಾಡಿ ಬಾ. ಆಗ ನಾನೇನಾದರೂ ಹೇಳಬಹುದು’ ಎಂದ. ಬರಿಯ ತರ್ಕದಿಂದ, ಬುದ್ಧಿಯಿಂದ ಜೀವನದ ತತ್ವಗಳು ತಿಳಿಯುವುದು ಸಾಧ್ಯವಿಲ್ಲ. ಎಲ್ಲ ಚಿಂತನೆಗಳೂ ಬುದ್ಧಿಯ ಚಮತ್ಕಾರಗಳು.

ಮನುಷ್ಯನ ಬುದ್ಧಿಯ ಸ್ವರೂಪವೇ ವಿಚಿತ್ರವಾದದ್ದು. ಕಂಡದ್ದನ್ನೆಲ್ಲ ತಿಳಿಯಬಯಸುತ್ತದೆ. ಹೊಸ ವಿಷಯ ಬಂದಾಗ ತನಗೆ ಹಿಂದೆ ತಿಳಿದದ್ದರ ಆಧಾರದ ಮೇಲೆ ತರ್ಕವನ್ನು ಕಟ್ಟುತ್ತದೆ. ಅದೇ ಸರಿಯೆಂದು ನಂಬತೊಡಗುತ್ತದೆ. ಒಮ್ಮೆ ನಂಬಿಕೆ ಸ್ಥಿರವಾದರೆ, ಉಳಿದ ಚಿಂತನೆಗಳನ್ನು ನಿರಾಕರಿಸುತ್ತದೆ. ಇಂಥ ಬುದ್ಧಿಯ ಪ್ರಾಮಾಣಿಕತೆಯನ್ನು ಪರೀಕ್ಷಿಸುವುದು ಹೇಗೆ? ಕಗ್ಗ ಹೇಳುತ್ತದೆ, ಬುದ್ಧಿಯಿಂದ, ತರ್ಕದಿಂದ ತತ್ವವನ್ನು ತಿಳಿಯುವುದು ಸಾಧ್ಯವಿಲ್ಲ. ಅದು ಸಾಧಕನಿಗೆ ಅವನ ಭಾವದ ಉತ್ಕಟತೆಯಲ್ಲಿ ಮಿಂಚಿನಂತೆ ಹೊಳೆದು ಪರಿವರ್ತನೆಯನ್ನು ಮಾಡಿಬಿಡುತ್ತದೆ. ಆಗ ತತ್ವ ಅವನಿಗೆ ಅರಿವಾಗದಂತೆ ಮನದಲ್ಲಿ ಇಳಿಯುತ್ತದೆ. ಶ್ರೀ ರಾಮಕೃಷ್ಣರ ಒಂದು ಸ್ಪರ್ಶ ನರೇಂದ್ರನನ್ನು ವಿವೇಕಾನಂದರನ್ನಾಗಿಸಿದರೆ, ವಿವೇಕಾನಂದರ ಪ್ರಭಾವಶಾಲೀ ಕಣ್ಣುಗಳನ್ನು ಕಂಡ ಆಳ್ವಾರ್‌ದ ರೇಲ್ವೆ ಸ್ಟೇಶನ್‌ಮಾಸ್ಟರ್ ಅವರ ಮೊದಲ ಶಿಷ್ಯನಾಗಿದ್ದು ಒಂದೇ ಕ್ಷಣದಲ್ಲಿ. ಶ್ರೀಶಂಕರರ ಸನ್ಯಾಸ, ಅಣ್ಣಾ ಹಜಾರೆಯವರ ಸಮಾಜಮುಖಿಯಾಗುವ ತೀರ್ಮಾನ, ಸಿದ್ಧಾರ್ಥ ಬುದ್ಧನಾಗುವ ಕ್ಷಣ, ಇವೆಲ್ಲ ಸಿದ್ಧವಾದ ಅರಿವಿನಲ್ಲಿ ಹೊಳೆಯುವ ಮಿಂಚುಗಳು. ಅದರ ಸ್ಫುರಣೆಯಾಗಬೇಕಾದರೆ ಮನಸ್ಸು,ದೇಹಗಳು, ಎಣ್ಣೆ ತುಂಬಿದ ಹಣತೆಯಂತೆ ಕಿಡಿಗಾಗಿ ಕಾಯ್ದು ಕೂಡ್ರಬೇಕು. ಅಲ್ಲಿ ಬುದ್ಧಿಯ ಜಾಣಾಕ್ಷತೆಗೆ, ತರ್ಕಕ್ಕೆ ಯಾವ ಸ್ಥಾನವೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT