ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಚ್ಚಿಡಬೇಕೋ, ಸಮಾಜ ಬದಲಾಗಬೇಕೋ?

ಲೈಂಗಿಕ ದೌರ್ಜನ್ಯವನ್ನು ಹೇಳಿಕೊಳ್ಳಲೇಬಾರದು ಅನ್ನುವ ಹಿಂಜರಿಕೆ ಮೂಡಬಾರದು
Last Updated 13 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಒಂದು ಹೆಣ್ಣು ಅತ್ಯಾಚಾರಕ್ಕೆ ಒಳಗಾಗುತ್ತಾಳೆಂದರೆ, ಅದು ಕೇವಲ ಪುರುಷನ ಲೈಂಗಿಕ ವಿಕೃತಿಯ ವಿಷಯವಲ್ಲ. ಅದು ಒಟ್ಟು ಸಮಾಜದ ಮಾನಸಿಕತೆಯ ಫಲಶ್ರುತಿ. ಹೀಗಿದ್ದರೂ ಸಮಾಜವು ಅತ್ಯಾಚಾರ ಸಂತ್ರಸ್ತೆಯನ್ನು ತಿರಸ್ಕಾರದಿಂದ ನೋಡುತ್ತದೆ. ಈ ಹಿನ್ನೆಲೆಯಲ್ಲಿ ಆಕೆ ಮತ್ತೆ ಮತ್ತೆ ಅತ್ಯಾಚಾರಕ್ಕೆ ಒಳಗಾಗುವ ಅಪಾಯವೂ ಇರುತ್ತದೆ.

ಈ ಕಾರಣವನ್ನು ಮುಂದಿಟ್ಟು, ಸುಪ್ರೀಂ ಕೋರ್ಟ್ ಡಿ.11ರಂದು ‘ಅತ್ಯಾಚಾರ ಸಂತ್ರಸ್ತರ ಗುರುತನ್ನು ಯಾವ ಮಾಧ್ಯ
ಮದಲ್ಲೂ, ಯಾವುದೇ ಬಗೆಯಲ್ಲೂ ಬಹಿರಂಗಪಡಿಸಬಾರದು. ಹಾಗೊಮ್ಮೆ ಬಹಿರಂಗಪಡಿಸಿದರೆ, ಎರಡು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಭಾರತೀಯ ದಂಡ ಸಂಹಿತೆಯಲ್ಲಿ ಅವಕಾಶವಿದೆ’ ಎಂದು ಕಟ್ಟುನಿಟ್ಟಿನ ಸೂಚನೆ ಹೊರಡಿಸಿದೆ. ‘ವರದಿ ಮಾತ್ರವಲ್ಲ, ಪ್ರತಿಭಟನೆಯ ಸಂಕೇತವಾಗಿಯೂ ಸಂತ್ರಸ್ತೆಯ ಹೆಸರನ್ನು ಬಳಸಿಕೊಳ್ಳುವಂತಿಲ್ಲ’ ಎಂದು ದ್ವಿಸದಸ್ಯ ನ್ಯಾಯಪೀಠ ಪ್ರತಿಪಾದಿಸಿದೆ.

ನಮ್ಮ ಸಮಾಜದ ವಿಕೃತಿಯೇ ಇಂಥದೊಂದು ಸೂಚನೆಗೆ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಸೂಚನೆ ನೀಡಬೇಕಾಗಿರುವುದು ಸಮಾಜಕ್ಕೋ, ಸಂತ್ರಸ್ತೆಯ ಹೆಸರು ನಮೂದಿಸುವವರಿಗೋ? ವರದಿ ಮಾಡಲು, ಪ್ರತಿಭಟಿಸಲು ಹೆಸರು ಬಳಸುವುದು ತಪ್ಪೋ? ಆ ಮೂಲಕ ಬಹಿರಂಗಗೊಂಡ ಹೆಸರನ್ನು ನಿಂದಿಸಲು, ಅವಮಾನಿಸಲು ಬಳಸುವುದು ತಪ್ಪೋ? ಇಲ್ಲಿ ನಿರ್ಬಂಧಿಸಬೇಕಿರುವುದು ಯಾರನ್ನು? ಇದು ಸದ್ಯದ ಪ್ರಶ್ನೆ.

‘ಸಮಾಜ ಹೀಗಿದೆ, ಆದ್ದರಿಂದ ಹೆಸರನ್ನು ಬಹಿರಂಗಗೊಳಿಸಬಾರದು’ ಅನ್ನುವಾಗ, ಬೆದರಿಸುವ ಸಮಾಜಕ್ಕೆ ಹೆದರಬೇಕು ಅನ್ನುವ ಒಳಧೋರಣೆ ನಿಚ್ಚಳವಾಗುತ್ತದೆ ಅಲ್ಲವೇ? ಅತ್ಯಾಚಾರಕ್ಕೆ ಒಳಗಾದ ಹೆಣ್ಣನ್ನು ಕೀಳಾಗಿ ಕಾಣುವುದು, ನಿಂದಿಸುವುದು, ಬಹಿಷ್ಕರಿಸುವುದೇ ಮೊದಲಾದ ಕೃತ್ಯಗಳಿಗೆ ಕಠಿಣ ಶಿಕ್ಷೆ ನೀಡುವ ಎಚ್ಚರಿಕೆ ಮತ್ತೆ ಮತ್ತೆ ಮೊಳಗಬೇಕು. ಅದರ ಬದಲು, ಹೆಸರು ಬಹಿರಂಗ ಪಡಿಸಿದರೆ ಎರಡು ವರ್ಷ ಜೈಲು ಶಿಕ್ಷೆಯಾಗುವ ಸಂಗತಿಯೇ ಹೆಚ್ಚು ಚರ್ಚೆಯಾಗುತ್ತಿದೆ. ಈ ಆಲೋಚನಾ ಕ್ರಮ ಏನನ್ನು ಸೂಚಿ
ಸುತ್ತದೆ? ನ್ಯಾಯಾಲಯದ ತೀರ್ಪುಗಳನ್ನು ಸಮಾಜವೇ ಉತ್ತೇಜಿಸುವುದರಿಂದ, ಇದು ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ.

ಕಳೆದ ಐದಾರು ವರ್ಷಗಳಿಂದ ಅತ್ಯಾಚಾರ ಸಂತ್ರಸ್ತೆಯ ಗುರುತು ಬಹಿರಂಗಗೊಳಿಸುವ ಬಗ್ಗೆ ದೊಡ್ಡ ದನಿಯ ಚರ್ಚೆ ನಡೆಯುತ್ತಲೇ ಇದೆ. ನಿರ್ಭಯಾ ಪ್ರಕರಣದ ನಂತರ ಕೋರ್ಟ್ ಕೂಡಾ ಈ ಬಗ್ಗೆ ಹಲವು ಹಂತಗಳಲ್ಲಿ ತೀರ್ಪು ನೀಡುತ್ತಲೇ ಬಂದಿದೆ. ಅತ್ಯಾಚಾರ ವರದಿಗಳಲ್ಲಿ, ಪ್ರತಿಭಟನೆಯಲ್ಲಿ ಸಂತ್ರಸ್ತೆಯ ಹೆಸರು ಬಳಸಿದ್ದಕ್ಕೆ ಕೆಲವರು ವಿಚಾರಣೆ ಎದುರಿಸಿದ್ದಾರೆ, ಶಿಕ್ಷೆಯನ್ನೂ ಅನುಭವಿಸಿದ್ದಾರೆ.

ಈ ಎಲ್ಲದರ ನಡುವೆಯೇ ನಿರ್ಭಯಾಳ ತಾಯ್ತಂದೆಯರು ಆಕೆಯ ನಿಜವಾದ ಹೆಸರನ್ನು ಬಹಿರಂಗಪಡಿಸಿದ್ದರು. ‘ನನ್ನ ಮಗಳು ಯಾವ ತಪ್ಪನ್ನೂ ಮಾಡಿರಲಿಲ್ಲ. ಅವಳ ಹೆಸರು ಹೇಳಲು ಭಯವೇಕೆ, ನಾಚಿಕೆ ಏಕೆ?’ ಎಂದು ಪ್ರಶ್ನಿಸಿದ್ದರು. ಇಂಥ ಮನಸ್ಥಿತಿಯನ್ನು ಪ್ರತಿಯೊಬ್ಬರಲ್ಲೂ ಬೆಳೆಸುವ ಪ್ರಯತ್ನ ನಡೆಯಬೇಕಿತ್ತು. ‘ಸಮಾಜ ಅವಮಾನಿಸುತ್ತದೆ’ ಅನ್ನುವ ಚಿಂತನೆಗೆ ಬದಲಾಗಿ, ‘ಅವ
ಮಾನಿಸುವುದು ಸಮಾಜದ ವಿಕೃತಿ. ಅದನ್ನು ಮೀರಬೇಕು’ ಎನ್ನುವ ಆಲೋಚನೆ ರೂಪುಗೊಳ್ಳಬೇಕಿತ್ತು. ಆದರೆ ಆಗಿದ್ದೇನು!? ಮತ್ತೆ ಮತ್ತೆ ಅದೇ ‘ನಾಯಿ ಮುಟ್ಟಿದ ಮಡಿಕೆ’ ಚಿಂತನೆ!

ಇಲ್ಲಿ ಇನ್ನೂ ಒಂದು ವಾದ ಮುಂದಿಡಲಾಗುತ್ತದೆ. ಅತ್ಯಾಚಾರ ಸಂತ್ರಸ್ತೆಯ ಗುರುತು ಬಹಿರಂಗವಾದರೆ, ಸಮಾಜದ ವರ್ತನೆಯಿಂದ ಆಕೆಯ ಮಾನಸಿಕ ಸ್ವಾಸ್ಥ್ಯ ಕೆಡುತ್ತದೆ ಎಂದು ಕೆಲವರು ಹೇಳುತ್ತಾರೆ. ಆದರೆ; ಗುರುತು ಬಹಿರಂಗಗೊಂಡರೆ ಸಮಾಜ ನನ್ನನ್ನು ಹೀಗೆ ನಡೆಸಿಕೊಳ್ಳಬಹುದು ಅನ್ನುವ ಆಲೋಚನೆ, ಅದಕ್ಕಾಗಿ ಹೆಸರು ಮರೆಮಾಚಬೇಕು ಅನ್ನುವ ಚಿಂತನೆ ಹೆಣ್ಣು ಮನಸ್ಸಿನ ಮೇಲೆ ಯಾವ ಪರಿಣಾಮ ಬೀರಬಲ್ಲದು ಗೊತ್ತೇ? ತನ್ನದಲ್ಲದ ತಪ್ಪಿಗೆ ಅವಮಾನಿತಳಾಗಬೇಕು; ಆದ್ದರಿಂದ ಅಜ್ಞಾತಳಾಗಿ ಉಳಿಯಬೇಕು ಅನ್ನುವ ಸಂಗತಿ ನೀಡುವ ಯಾತನೆ ಗೊತ್ತೇ? ಮತ್ತೊಬ್ಬರು ತನ್ನ ಗುರುತು ಬಹಿರಂಗಪಡಿಸಿದರೆ, ತನ್ನ ಬದುಕು ಹಾಳಾಗುತ್ತದೆ ಅನ್ನುವ ಯೋಚನೆಯೇ ಅಸ್ತಿತ್ವಕ್ಕೆ ಅತಿ ದೊಡ್ಡ ಪೆಟ್ಟು. ಆದ್ದರಿಂದ, ನಿಜವಾಗಿಯೂ ಸಂತ್ರಸ್ತೆಯ ಮನಸ್ವಾಸ್ಥ್ಯದ ಕಾಳಜಿ ಇದ್ದಲ್ಲಿ, ಗುರುತು ಮುಚ್ಚಿಡುವ ಆಲೋಚನೆಯನ್ನೇ ಮೊದಲು ಕೈಬಿಡಬೇಕು.

ಆಕೆಯನ್ನೂ ಆಕೆಯ ಸಂಬಂಧಿಕರನ್ನೂ ಮುಕ್ತವಾಗಿ ಮಾತಾಡಲು ಪ್ರೇರೇಪಿಸಬೇಕು. ಸಮಾಜದಲ್ಲಿ ಸಹಜವಾಗಿ ಬದುಕುವುದನ್ನು ಆಕೆಗೂ; ಆಕೆಯನ್ನು ಸಹಜವಾಗಿ ನಡೆಸಿಕೊಳ್ಳಲು ಸಮಾಜಕ್ಕೂ ಕಲಿಸಬೇಕು. ಅದರ ಬದಲು ಮುಚ್ಚಿಡುವುದನ್ನು ಪ್ರೋತ್ಸಾಹಿಸಿದರೆ, ಲೈಂಗಿಕ ದೌರ್ಜನ್ಯವನ್ನು ಹೇಳಿಕೊಳ್ಳಲೇಬಾರದು ಅನ್ನುವ ಹಿಂಜರಿಕೆ ಮೂಡುವ ಅಪಾಯವಿದೆ.

ನ್ಯಾಯಪೀಠ ತನ್ನ ಸೂಚನೆಯಲ್ಲಿ, ‘ಸಂತ್ರಸ್ತೆಯ ಒಪ್ಪಿಗೆ ಇದ್ದಲ್ಲಿ ಹೆಸರು ಬಹಿರಂಗಪಡಿಸಬಹುದು’ ಅನ್ನುವ ವಿನಾಯಿತಿ ನೀಡಿದೆ. ಅದರ ಬದಲು, ‘ಒಪ್ಪಿಗೆ ಇಲ್ಲದೆ ಹೋದಲ್ಲಿ ಹೆಸರು ಪ್ರಕಟಿಸಬಾರದು’ ಎಂದಿದ್ದರೆ ಸಮರ್ಪಕವಾಗುತ್ತಿತ್ತೇನೋ. ಆಗ, ಸಂತ್ರಸ್ತೆಯ ಭಯಕ್ಕೆ ಕಾರಣ ವಿಚಾರಿಸಿ, ಅದನ್ನು ನಿವಾರಿಸಲು ಅನುಕೂಲವಾಗುತ್ತಿತ್ತು. ಅಥವಾ, ಅದಕ್ಕೆ ‘ಮರ್ಯಾದೆ’ ಕಾರಣವಾಗಿದ್ದರೆ, ‘ಅತ್ಯಾಚಾರದಿಂದ ಕಳೆಯುವುದು ಹೆಣ್ಣಿನ ಮರ್ಯಾದೆಯಲ್ಲ, ಕೃತ್ಯ ಎಸಗಿದ ಗಂಡಸಿನದು’ ಎಂದು ಮನದಟ್ಟು ಮಾಡಲು ಸಹಾಯವಾಗುತ್ತಿತ್ತು.

ಗುರುತು ಬಹಿರಂಗಪಡಿಸಲು ಒಪ್ಪಿಗೆ ಸೂಚಿಸುವ ಹೆಣ್ಣು, ಬಹುತೇಕ ಮಾನಸಿಕವಾಗಿ ಸಜ್ಜಾಗಿರುತ್ತಾಳೆ. ಅದರಲ್ಲಿ ವಿಶೇಷವಿಲ್ಲ. ಆದರೆ, ನಿರಾಕರಿಸುವ ಹೆಣ್ಣು ಸಮಾಜದ ಭಯದಲ್ಲಿರುತ್ತಾಳೆ. ಸಮಾಜ ತನ್ನನ್ನು ಎಲ್ಲಿ ಕಾಡಬಹುದು, ಅದನ್ನು ಎಲ್ಲಿ ತಿದ್ದಬೇಕು ಅನ್ನುವುದರತ್ತ ಗಮನ ಸೆಳೆಯುತ್ತಾಳೆ. ಆದ್ದರಿಂದ, ಆಕೆಯ ಸಮ್ಮತಿಗಿಂತ ನಿರಾಕರಣೆಯನ್ನು ಅರ್ಥ ಮಾಡಿಕೊಳ್ಳುವುದು ಹೆಚ್ಚು ಮುಖ್ಯವಾಗುತ್ತದೆ.

ಅತ್ಯಾಚಾರ ಕುರಿತಂತೆ ಸಮಾಜದ ಚಿಂತನೆಯನ್ನು ತಿದ್ದುವುದು ಸುಲಭದ ಮಾತಲ್ಲ. ಅದು ಸಾಧ್ಯವಾಗಬೇಕೆಂದರೆ, ಸಾಮ ದಾನಾದಿ ಪಂಚ ತಂತ್ರಗಳನ್ನೂ ಅನುಸರಿಸಬೇಕಾಗುತ್ತದೆ. ಇದು ಆಂತರಿಕ ಬದಲಾವಣೆಯ ಸಂಗತಿಯಾದರೂ ಶತಮಾನಗಟ್ಟಲೆಯ ಜಿಗುಟು ಅಂಟಿರುವುದರಿಂದ, ಬಾಹ್ಯ ಪ್ರೇರಣೆ ಅವಶ್ಯವಾಗುತ್ತದೆ. ಈ ಬಾಹ್ಯ ಪ್ರೇರಣೆ ಅಥವಾ ಒತ್ತಡ ನಮ್ಮನ್ನು ಪುನಃ ನ್ಯಾಯಾಂಗದ ಅಂಗಳದಲ್ಲಿ ನಿಲ್ಲಿಸುತ್ತದೆ. ಶಿಸ್ತನ್ನೂ ಅದರ ಅನಿವಾರ್ಯತೆಯನ್ನೂ ಮೂಡಿಸುವ ಸಾಮರ್ಥ್ಯ ಇರುವುದು ನ್ಯಾಯಾಂಗಕ್ಕೆ ಮಾತ್ರ. ಲಿಂಗತ್ವ ಸೂಕ್ಷ್ಮತೆ ಮತ್ತು ಸಾಮಾಜಿಕ ಪ್ರಜ್ಞೆ ಅನಿವಾರ್ಯವಾಗುವಂಥ ನಡಾವಳಿಯನ್ನು ಕಾನೂನು ಮಾತ್ರವೇ ರೂಪಿಸಬಲ್ಲದು. ಅವು ಸಹಜವಾಗಿ ಮೂಡುವಷ್ಟು ನಮ್ಮ ಸಮಾಜ ಪ್ರಬುದ್ಧವಾಗಿಲ್ಲ.

ಒಂದು ತೀರ್ಪಿನ ಹಿಂದೆ ಕಾನೂನು ಸೂಕ್ಷ್ಮಗಳು ಏನಿರುತ್ತವೆಯೋ, ಅರಿಯುವುದು ಸುಲಭವಲ್ಲ. ಆದರೆ, ತೀರ್ಪಿನ ಮಾನಸಿಕತೆ ಕೆಲವೊಮ್ಮೆ ಕಂಗೆಡಿಸಿಬಿಡುತ್ತದೆ. ಹೆಸರು ಬರೆಯುವುದು, ಬರೆಯದಿರುವುದು ದೊಡ್ಡ ವಿಷಯವಲ್ಲ. ಬರೆಯಬಾರದು ಅನ್ನುತ್ತಾ ಮುಂದಿಡುವ ಕಾರಣಗಳು ಸಮಾಜ ಮತ್ತು ಹೆಣ್ಣನ್ನು ಪ್ರತ್ಯೇಕಿಸಿಬಿಡುತ್ತವೆ. ಅದು ಸ್ತ್ರೀ ಅಸ್ಮಿತೆಯನ್ನು ‘ಯಥಾಸ್ಥಿತಿ’ಯಲ್ಲಿ ಕಾಯ್ದಿಡುವ ಹುನ್ನಾರದಂತೆಯೂ ತೋರುತ್ತದೆ.

ಹೆಣ್ಣಿನ ದರ್ಜೆ, ಮಿತಿ, ಸಮಾಜದ ಪಾರಂಪರಿಕ ವಿಕೃತಿ ಮತ್ತು ಅದರಿಂದ ತೊಂದರೆಯಾಗುತ್ತದೆ ಅನ್ನುವ ಭಯ; ಆ ಭಯವನ್ನು ನಿವಾರಿಸಲಾಗದ ವ್ಯವಸ್ಥೆಯ ವೈಫಲ್ಯ; ಆ ವೈಫಲ್ಯವನ್ನು ನಿಭಾಯಿಸಲು ರೂಪಿಸಲಾಗುವ ನಿಯಮಗಳು… ಇವೆಲ್ಲವೂ ದೇಹದ ನಂತರ ಹೆಣ್ಣಿನ ಮನಸ್ಸು, ಗುರುತು, ಹೆಸರುಗಳ ಮೇಲೆ ನಡೆಯುವ ಅತ್ಯಾಚಾರದಂತೆಯೇ ಭಾಸವಾಗುತ್ತವೆ. ವಾಸ್ತವದಲ್ಲಿ, ಹೆಣ್ಣಿನ ಘನತೆಗೆ ಆದ್ಯತೆ ನೀಡಿ, ಅದಕ್ಕೆ ತಕ್ಕಂತೆ ಸಮಾಜವನ್ನು ಕಟ್ಟುವ ಕೆಲಸ ಆಗಬೇಕು. ಹಾಗಿಲ್ಲದೆ, ಸಮಾಜದತ್ತ ಬೆಟ್ಟು ಮಾಡಿ ಅದಕ್ಕೆ ತಕ್ಕಂತೆ ನಿಯಮ ರೂಪಿಸುವುದು ಸಮಾಜದ ವಿಕೃತಿಯನ್ನು ಪೋಷಿಸಿದಂತೆ ಆಗುತ್ತದೆ.

ಈ ಚಿಂತನೆಯನ್ನು ಬದಲಿಸಲು ಸಾಧ್ಯವಿಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT