ಮುಗ್ಧತೆಯ ಅಪಾಯ

ಭಾನುವಾರ, ಜೂನ್ 16, 2019
22 °C

ಮುಗ್ಧತೆಯ ಅಪಾಯ

Published:
Updated:

ಒಂದಾನೊಂದು ಕಾಲದಲ್ಲಿ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ, ಬೋಧಿಸತ್ವ ಒಂದು ಪ್ರಮುಖ ಗ್ರಾಮದ ವೈಶ್ಯರ ಮನೆಯಲ್ಲಿ ಹುಟ್ಟಿದ. ಅವನು ಮುಂದೆ ಬೆಳೆದು ದೊಡ್ಡವನಾಗಿ ಮನೆತನವನ್ನು ಬಹಳ ಶ್ರಿಮಂತಿಕೆಗೆ ತಂದ. ಆಗ ಮದುವೆಯಾಗಿ ಮಕ್ಕಳನ್ನು ಪಡೆದು ಅವರನ್ನು ಸಜ್ಜನರನ್ನಾಗಿ ಬೆಳೆಸಿದ. ಆತನ ಮಗನಿಗೆ ಮದುವೆಯ ವಯಸ್ಸಾಯಿತೆಂದು ಹೆಣ್ಣುಗಳನ್ನು ನೋಡುತ್ತ ವಾರಣಾಸಿಯ ಶ್ರೇಷ್ಠಿಯ ಮಗಳೊಂದಿಗೆ ಮಗನ ಮದುವೆ ಮಾಡಲು ಒಪ್ಪಿಕೊಂಡ.

ವಾರಣಾಸಿಯ ಶ್ರೇಷ್ಠಿಯ ಮಗಳು ಅತ್ಯಂತ ಸುಂದರಿಯಾದ ಹುಡುಗಿ. ಆದರೆ ಅಷ್ಟೇ ಮುಗ್ಧೆ ,ಎಲ್ಲವನ್ನು ನಂಬಿಬಿಡುವ ಸ್ವಭಾವ. ಅವರ
ಮನೆಯಲ್ಲಿ ಕೃಷಿ ಕಾರ್ಯವೂ ಇದ್ದದ್ದರಿಂದ ಆಗಾಗ್ಗೆ ಎತ್ತಿನ ಪೂಜೆ ಮಾಡುತ್ತಿದ್ದರು. ಈ ವೃಷಭ ಪೂಜೆ ಆಕೆಯ ಮನದಲ್ಲಿ ಅಚ್ಚೊತ್ತಿದ್ದಿತು.
ವೃಷಭ ಪ್ರಾಣಿಗಳಲ್ಲಿ ತುಂಬ ಮುಖ್ಯವಾದದ್ದು, ಶ್ರೇಷ್ಠವಾದದ್ದು ಎಂಬ ನಂಬಿಕೆ ಬಲಿಯಿತು. ಅದರಲ್ಲೂ ಒಂದು ವಿಶೇಷ ಹಬ್ಬದ ದಿನ ರಾಜ ವೃಷಭದ ಪೂಜೆ ಮಾಡಿದ್ದನ್ನು ಕಂಡು ವೃಷಭದ ಬಗ್ಗೆ ಇನ್ನೂ ಹೆಚ್ಚಿನ ಪೂಜ್ಯ ಭಾವನೆ ಬಂದಿತು.

ಒಂದು ದಿನ ರಸ್ತೆಯಲ್ಲಿ ಒಬ್ಬ ಗೂನ ನಡೆದುಹೋಗುತ್ತಿದ್ದ. ಅವನ ಬಾಗಿದ ಬೆನ್ನಿನ ಮೇಲಿದ್ದ ಗಂಟನ್ನು ಕಂಡು ಆತ ವೃಷಭನೆ ಇರಬೇಕು ಎಂದುಕೊಂಡಳು. ಈತ ಪುರುಷರಲ್ಲಿ ವೃಷಭ ಎಂದು ತಿಳಿದು ತನ್ನ ಅತ್ಯಂತ ಬೆಲೆಬಾಳುವ ಆಭರಣಗಳನ್ನು ಬಟ್ಟೆಗಂಟಿನಲ್ಲಿ ಕಟ್ಟಿಕೊಂಡು ಅವನೊಂದಿಗೆ ಹೊರಟೇ ಬಿಟ್ಟಳು.

ಬೋಧಿಸತ್ವ ತನ್ನ ದೊಡ್ಡ ಪರಿವಾರದೊಂದಿಗೆ ವಾರಾಣಸಿಯ ಶ್ರೇಷ್ಠಿಯ ಮನೆಗೆ ಹೊರಟಿದ್ದ. ಶ್ರೇಷ್ಠಿಯ ಜೊತೆಗೆ ಮಾತನಾಡಿ ಮದುವೆಯ ವಿಷಯದ ಬಗ್ಗೆ ಚರ್ಚೆ ಮಾಡುವುದು ಅವನ ಉದ್ದೇಶವಾಗಿತ್ತು. ಅದೇ ದಾರಿಯಲ್ಲಿ ಗೂನನೊಂದಿಗೆ ಶ್ರೇಷ್ಠಿಯ ಮಗಳು ಹೊರಟಿದ್ದಳು. ಇಬ್ಬರೂ ರಾತ್ರಿಯಿಡೀ ಚಳಿಯಲ್ಲಿ ನಡೆಯುತ್ತಿದ್ದರು. ಗೂನನದು ವಾಯು ಪ್ರಕೃತಿಯಾದ್ದರಿಂದ ಚಳಿಯಲ್ಲಿ ಅದು ಮತ್ತಷ್ಟು ಉಲ್ಬಣವಾಯಿತು. ಮೈ ಸಂದುಗಳಲ್ಲೆಲ್ಲ ವಿಪರೀತ ನೋವು ಕಾಣಿಸಿಕೊಂಡಿತು. ಅವನಿಗೆ ನಡೆಯಲು ಸಾಧ್ಯವಾಗದೆ ರಸ್ತೆಯಿಂದ ಸರಿದು ಒಂದು ಮರದ ಬುಡದಲ್ಲಿ ಮರದ ತುಂಡಿನಂತೆ ಸುರುಳಿ ಸುತ್ತಿಕೊಂಡು ಎಚ್ಚರತಪ್ಪಿ ಬಿದ್ದುಕೊಂಡ. ಶ್ರೇಷ್ಠಿಯ ಮಗಳಿಗೆ ಏನೂ ತೋಚದೆ ಅವನ ಪಕ್ಕದಲ್ಲಿಯೇ ಕುಳಿತಿದ್ದಳು. ಸ್ವಲ್ಪ ಹೊತ್ತಿನ ನಂತರ ಅಲ್ಲಿಗೆ ಬಂದ ಬೋಧಿಸತ್ವನ ಪರಿವಾರದವರು ಈಕೆಯನ್ನು ಕಂಡು ಮಾತನಾಡಿಸಿದಾಗ ಆಕೆಯ ಶ್ರೇಷ್ಠಿಯ ಮಗಳು ಎಂದು ತಿಳಿಯಿತು. ಬೋಧಿಸತ್ವ ಆಕೆಯೊಂದಿಗೆ ಮಾತನಾಡಿ ತನ್ನ ಜೊತೆಗೆ ಕರೆದುಕೊಂಡು ವಾರಾಣಸಿಯ ಶ್ರೇಷ್ಠಿಯ ಮನೆಗೆ ಬಂದ. ಅಲ್ಲಿ ಮನೆಯಲ್ಲಿ ಮದುಮಗಳನ್ನು ಕಾಣದೆ ಮನೆಯವರೆಲ್ಲ ಕಂಗಾಲಾಗಿದ್ದರು. ನೀನೇಕೆ ಅವನ ಜೊತೆಗೆ ಹೋದೆ ಎಂದು ಕೇಳಿದರೆ, ಆಕೆ, “ಪ್ರಾಣಿಗಳಲ್ಲಿ ಶ್ರೇಷ್ಠವಾದ ವೃಷಭಕ್ಕೆ ಬೆನ್ನಿನ ಮೇಲೆ ಹಿಣಿಲು ಎಂಬ ಗಂಟು ಇರುತ್ತದಲ್ಲವೆ? ಇವನ ಬೆನ್ನಿನ ಮೇಲೂ ಆ ತರಹದ ಗಂಟಿರುವುದರಿಂದ ಈತ ಪುರುಷರಲ್ಲಿ ಅತ್ಯಂತ ಶ್ರೇಷ್ಠವಾದವನೇ ಇರಬೇಕು ಎಂದು ಹೊರಟುಹೋದೆ” ಎಂದಳು. ಬೋಧಿಸತ್ವ ಆಕೆಯ ಮುಗ್ಧತನಕ್ಕೆ ಮರುಗಿ ಆಕೆಗೆ ಸರಿಯಾಗಿ ಬುದ್ಧಿ ಹೇಳಿ ನಂತರ ಮಗನೊಂದಿಗೆ ಮದುವೆ ಮಾಡಿದ.

ಮುಗ್ಧತೆ ಚೆಂದ. ಆದರೆ ಅತಿಯಾದ ಮುಗ್ಧತೆ ಮೂರ್ಖತನವೂ ಆಗಬಹುದು, ದೋಷವೂ ಆಗಬಹುದು. ಅದನ್ನು ಬೇರೆಯವರು ಬಳಸಿಕೊಂಡು ಯಾವ ಅಪಾಯವನ್ನೂ ತರಬಹುದು. ಅದಕ್ಕಾಗಿ ಮಕ್ಕಳನ್ನು ಬೆಳೆಸುವಾಗ ಪ್ರೀತಿಯೊಂದಿಗೆ ಎಚ್ಚರಿಕೆಯೂ ಮುಖ್ಯ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !