ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಮೇಶನ್: ವಿದ್ಯಾರ್ಥಿಗಳ ಭವಿಷ್ಯಕ್ಕೆ ಕನ್ನ

Last Updated 15 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವಿಶ್ವದ ಪ್ರಸಿದ್ಧ ವಾಣಿಜ್ಯ ಸಲಹೆಗಾರ ಸಂಸ್ಥೆ ‘ಇ ಅಂಡ್ ವೈ’ ಮತ್ತು ಭಾರತದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಉದ್ದಿಮೆಯ ಪ್ರಾತಿನಿಧಿಕ ಸಂಘಟನೆ ನಾಸ್‌ಕಾಂ ಸೇರಿ 2008ರಲ್ಲಿ ಒಂದು ಸಮೀಕ್ಷಾ ವರದಿ ಹೊರತಂದವು. ‘ನಾಸ್‌ಕಾಂ ಅನಿಮೇಷನ್ ಅಂಡ್ ಗೇಮಿಂಗ್ ಇಂಡಿಯಾ 2008’ ಎಂಬ ಶೀರ್ಷಿಕೆಯ ಈ ವರದಿಯನ್ನು ಬಿಡುಗಡೆ ಮಾಡಿದ ನಾಸ್‌ಕಾಂ ಅಧ್ಯಕ್ಷ ಸೋಮ್ ಮಿತ್ತಲ್ ‘ಭಾರತ ಅನಿಮೇಷನ್ ಮತ್ತು ಗೇಮಿಂಗ್‌ನ ಕೇಂದ್ರವಾಗಿ ಬೆಳೆಯುವುದನ್ನು ಇಡೀ ವಿಶ್ವ ಎದುರು ನೋಡುತ್ತಿದೆ. ಈ ಉದ್ಯಮ ವಾರ್ಷಿಕ ಶೇಕಡಾ 27ರ ದರದಲ್ಲಿ ಅಭಿವೃದ್ಧಿ ಹೊಂದ­ಲಿದೆ’ ಎಂದೆಲ್ಲಾ ಹೇಳಿದ್ದರು. ಈ ಉದ್ಯಮ ನಿರೀಕ್ಷೆಯ ವೇಗದಲ್ಲಿ ಬೆಳೆಯುತ್ತಿಲ್ಲ ಎಂಬುದು ನಾಸ್‌ಕಾಂ ಮತ್ತು ‘ಇ ಅಂಡ್ ವೈ’ಗೆ ಕೆಲವೇ ತಿಂಗಳುಗಳಲ್ಲಿ ತಿಳಿಯಿತು.

ಮೊದಲ ವರದಿ ಬಿಡುಗಡೆಯಾದ ಕೆಲವೇ ತಿಂಗಳುಗಳಲ್ಲಿ ಮತ್ತೊಮ್ಮೆ ಪ್ರಗತಿಯ ಪ್ರಮಾಣದ ಪರಿಷ್ಕೃತ ದರಗಳನ್ನು ಜನತೆಯ ಮುಂದಿಟ್ಟರು. ಅದರ ಪ್ರಕಾರ ಅನಿಮೇಶನ್ ಉದ್ಯಮ ಶೇಕಡಾ 22ರ ಪ್ರಮಾಣದಲ್ಲಿ ಬೆಳೆದರೆ ಗೇಮಿಂಗ್ ಉದ್ಯಮ ಶೇಕಡಾ 49ರ ದರದಲ್ಲಿ ಬೆಳೆಯಬೇಕಿತ್ತು.

ಇದೆಲ್ಲಾ ಸಂಭವಿಸಿದ್ದರೆ 2012ರ ವೇಳೆಗೆ ಭಾರತೀಯ ಅನಿಮೇಶನ್ ಉದ್ಯಮ 2012ರ ವೇಳೆಗೆ ಶತಕೋಟಿ ಡಾಲರ್ ಮೌಲ್ಯಕ್ಕೆ ಬೆಳೆದು ನಿಲ್ಲಬೇಕಿತ್ತು. ಗೇಮಿಂಗ್ ಉದ್ಯಮ 830 ಕೋಟಿ ಡಾಲರ್ ಮೌಲ್ಯದಷ್ಟು ದೊಡ್ಡದಾಗಬೇಕಿತ್ತು. ಈ ಅಂಕಿ-ಅಂಶಗಳನ್ನೇ ಮನಸ್ಸಿನಲ್ಲಿ ಇಟ್ಟು­ಕೊಂಡಿದ್ದ ಕರ್ನಾಟಕ ಸರ್ಕಾರ ಕೂಡಾ 2012ರಲ್ಲಿ ಭಾರತದ ಮೊದಲ ಅನಿಮೇಶನ್ ಮತ್ತು ಗೇಮಿಂಗ್ ಉದ್ಯಮ ನೀತಿಯನ್ನು ಪ್ರಕಟಿಸಿತು.

ಇದರಲ್ಲಿ ವಿಶ್ವವ್ಯಾಪಿಯಾಗಿ ಅನಿ­ಮೇಶನ್ ಮತ್ತು ಗೇಮಿಂಗ್ ಉದ್ಯಮ ತ್ವರಿತಗತಿ­ಯಲ್ಲಿ ಬೆಳೆಯುತ್ತಿರುವ ಕುರಿತಂತೆ ದೊಡ್ಡ ದೊಡ್ಡ ಮಾತುಗಳಿದ್ದವು. ಬೆಂಗ­ಳೂರನ್ನು ಭಾರತದ ಅನಿಮೇಶನ್ ಮತ್ತು ಗೇಮಿಂಗ್ ಉದ್ಯಮದ ಕೇಂದ್ರವನ್ನಾಗಿ ಮಾರ್ಪ­ಡಿಸುವ ಗುರಿಯಿತ್ತು. 2013ರ ಆರ್ಥಿಕ ವರ್ಷದ ಅರ್ಧ ಭಾಗ ಮುಗಿಯುವುದಕ್ಕೆ ಇನ್ನೊಂದು ತಿಂಗಳಿರುವ ಈ ಹೊತ್ತಿನಲ್ಲಿ ಹಿಂದಿ­ರುಗಿ ನೋಡಿದರೆ ನಮಗೆ ಕಾಣಿಸುತ್ತಿರುವುದೇನು?

ಭಾರತದ ಅನಿಮೇಶನ್ ಉದ್ಯಮದ ದೊಡ್ಡ ದೊಡ್ಡ ಹೆಸರುಗಳೆಲ್ಲವೂ ಕಾಣೆಯಾಗಿವೆ. ಕಳೆದ ತಿಂಗಳಷ್ಟೇ ಇಂಥದ್ದೇ ಒಂದು ದೊಡ್ಡ ಹೆಸರಾದ ಕ್ರೆಸ್ಟ್ ಅನಿಮೇಶನ್ ಬಾ ಗಿಲು ಮುಚ್ಚಿತು. ಪ್ರಮುಖ ಉದ್ಯಮ ಸಮೂಹವಾದ ರಿಲಯನ್ಸ್ ನಡೆಸುತ್ತಿರುವ ಅನಿಮೇಶನ್ ಸಂಸ್ಥೆಯೂ ವರ್ಷ­ದಿಂದ ವರ್ಷಕ್ಕೆ ನಿವ್ವಳ ನಷ್ಟವನ್ನಷ್ಟೇ ಅನುಭ­ವಿಸುತ್ತಿದೆ. ಹಾಗಿದ್ದರೆ ನಾಸ್ಕಾಂನ ಭವಿಷ್ಯ ನುಡಿ, ಅನಿಮೇಶನ್ ಉದ್ಯಮವನ್ನು ಪ್ರೋತ್ಸಾಹಿಸುವ ನೀತಿಗಳೆಲ್ಲದರಿಂದ ಏನೂ ಪ್ರಯೋಜನವಾಗಲಿಲ್ಲವೇ?

ಖಂಡಿತವಾಗಿಯೂ ಪ್ರಯೋಜನ­ವಾಯಿತು. ಬಹುತೇಕ ಭಾರತದ ಎಲ್ಲಾ ಪ್ರಮುಖ ನಗರ ಮತ್ತು ಪಟ್ಟಣಗಳಲ್ಲಿ ಹುಟ್ಟಿಕೊಂಡಿದ್ದ ನೂರಾರು ಅನಿಮೇಶನ್ ತರಬೇತಿ ಶಾಲೆಗಳನ್ನು ನಡೆಸುವವರು ಒಳ್ಳೆಯ ಲಾಭ ಮಾಡಿ­ಕೊಂಡರು. ಈಗ ಅವರ ಲಾಭದ ಯುಗವೂ ಮುಗಿದಂತೆ ಕಾಣಿಸುತ್ತಿದೆ.

ವಿವಿಧ ಮಾಧ್ಯಮ­ಗಳಲ್ಲಿ ದೊಡ್ಡ ದೊಡ್ಡ ಜಾಹೀರಾತುಗಳನ್ನು ನೀಡಿ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದ ಈ ಸಂಸ್ಥೆಗಳೆಲ್ಲವೂ ಈಗ ಸದ್ದುಗದ್ದಲವಿಲ್ಲದೆ ಬಾಗಿಲು ಮುಚ್ಚುತ್ತಿವೆ. ಇಲ್ಲಿ ತಥಾಕಥಿತ ಅನಿ­ಮೇಶನ್ ತರಬೇತಿ ಪಡೆದು ಲಕ್ಷಾಂತರ ರೂಪಾಯಿ­ಗಳ ಸಂಬಳದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳು ಪ್ರಮಾಣ ಪತ್ರವನ್ನೂ ಪಡೆ­ಯಲಾಗದೆ ಒದ್ದಾಡುತ್ತಿದ್ದಾರೆ. ಪ್ರಮಾಣ ಪತ್ರ ಪಡೆದವರು ಅದಕ್ಕೆ ಯಾವ ಬೆಲೆಯೂ ಇಲ್ಲ ಎಂದು ಅರಿತು ಚಿಂತಾಕ್ರಾಂತ­ರಾಗಿದ್ದಾರೆ.

ಒಂದರ್ಥದಲ್ಲಿ ಇಡೀ ಅನಿಮೇಶನ್ ತರಬೇತಿ ಉದ್ಯಮ ಎಂಬುದೇ ಒಂದು ದೊಡ್ಡ ಹಗರಣ. ಆದರೆ ಅದನ್ನು ಇನ್ನೂ ಯಾರೂ ಹಾಗೆಂದು ಗುರುತಿಸಿಲ್ಲ ಅಷ್ಟೇ. ಇಂಥದ್ದು ಈ ಹಿಂದೆಯೂ ನಡೆದಿತ್ತು. ತೊಂಬತ್ತರ ದಶಕದ ಮಧ್ಯ­ಭಾಗದಲ್ಲಿ ಕಂಪ್ಯೂಟರ್ ತರಬೇತಿ ಕೊಡುವ ಸಾವಿರಾರು ಸಂಸ್ಥೆಗಳು ಚಿಕ್ಕ ಪಟ್ಟಣಗಳಿಂದ ಆರಂಭಿಸಿ ಮಹಾನಗರಗಳ ಸಕಲ ಬಡಾವಣೆಗಳ ತನಕ ವ್ಯಾಪಿಸಿಬಿಟ್ಟವು. ಟೈಪಿಂಗ್ ತರಬೇತಿ ನೀಡುತ್ತಿದ್ದ ಸಂಸ್ಥೆಗಳೊಂದಿಗೆ ಸ್ಪರ್ಧೆಗಿಳಿದಂತೆ ಇವು ಎಲ್ಲಾ ಬೀದಿಗಳಲ್ಲಿಯೂ ಕಾಣಿಸಿ­ಕೊಂಡವು.

ಟೈಪಿಂಗ್  ತರಬೇತಿ ನೀಡುತ್ತಿದ್ದ ಸಂಸ್ಥೆಗಳು ಕರ್ನಾಟಕ ಸರ್ಕಾರದ ಪ್ರೌಢಶಿಕ್ಷಣ ಮಂಡಳಿ ನಡೆಸುವ ಟೈಪಿಂಗ್ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಿ ಒಂದು ಅಧಿಕೃತ ಪ್ರಮಾಣ ಪತ್ರವನ್ನು ಕೊಡುತ್ತಿದ್ದವು. ಇದನ್ನು ಬಳಸಿ ಕೆಲಸ ಹುಡುಕಿಕೊಳ್ಳಬೇಕಿದ್ದದ್ದು ಟೈಪಿಂಗ್ ಕಲಿತವನ ಬುದ್ಧಿಮತ್ತೆಗೆ ಬಿಟ್ಟ ವಿಷಯವಾಗಿತ್ತು. ಆದರೆ ಬೀದಿ ಬೀದಿಯಲ್ಲಿ ಹುಟ್ಟಿಕೊಂಡ ಕಂಪ್ಯೂಟರ್ ತರಬೇತಿ ಸಂಸ್ಥೆಗಳು ಮಾತ್ರ ‘ಪ್ಲೇಸ್‌ಮೆಂಟ್’ ಅಥವಾ ಕೆಲಸ ಕೊಡಿಸುವ ಭರವಸೆಯನ್ನು ನೀಡ ತೊಡಗಿದವು.

ಈ ಸಂಸ್ಥೆಗಳಲ್ಲಿ ಕಂಪ್ಯೂಟರ್ ತರಬೇತಿ ಪಡೆದವರು ಏನಾದರೂ ಎಂಬುದು ಈಗ ಬಹಿರಂಗ ರಹಸ್ಯ. ಮೊದಲ ಕೆಲವು ವರ್ಷಗಳ ಕಾಲ ಸಾವಿರಾರು ರೂಪಾಯಿಗಳನ್ನು ಪಡೆದು ಕಂಪ್ಯೂಟರ್ ತರಬೇತಿ ಕೊಟ್ಟು ತಾವೇ ವಿನ್ಯಾಸಗೊಳಿಸಿದ ಚೆಂದದ ಪ್ರಮಾಣ ಪತ್ರವನ್ನೂ ಈ ಸಂಸ್ಥೆಗಳು ನೀಡಿದವು. ಈ ಸಂಸ್ಥೆಗಳು ನೀಡಿದ ಪ್ಲೇಸ್‌­ಮೆಂಟ್ ಭರವಸೆ ಈಡೇರದೇ ಇದ್ದಾಗ ಕೆಲವರು ತಾವೇ ಕೆಲಸ ಹುಡುಕಿಕೊಳ್ಳಲು ತೀರ್ಮಾನಿಸಿ ಐ.ಟಿ. ಕಂಪೆನಿಗಳನ್ನು ಸಂಪರ್ಕಿಸಿದರು. “ನಾವು ಕಂಪ್ಯೂಟರ್ ಸೈನ್ಸ್‌ನಲ್ಲಿ ಅಧಿಕೃತ ಪದವಿ­ಗಳಿಸಿದವರನ್ನು ಮಾತ್ರ ಪರಿಗಣಿಸುತ್ತೇವೆ” ಎಂಬ ಉತ್ತರ ಐ.ಟಿ. ಕಂಪೆನಿಗಳಿಂದ ಬಂದಾಗ ಅವರಿಗೆ ವಾಸ್ತವ ಅರ್ಥವಾಯಿತು.

ಅನಿಮೇಶನ್ ವಿಷಯದಲ್ಲಿ ಸಂಭವಿಸಿದ್ದು ಹೆಚ್ಚು ಕಡಿಮೆ ಇದುವೇ. ಐ.ಟಿ. ಉದ್ಯಮದ ಕೆಲಸಕ್ಕೆ ಇದ್ದ ‘ದೊಡ್ಡ ಸಂಬಳ’ ಭ್ರಮೆಯನ್ನು ಈ ಖಾಸಗಿ ಅನಿಮೇಶನ್ ತರಬೇತಿ ಸಂಸ್ಥೆಗಳು ಬಳಸಿಕೊಂಡವು. ಕಲಾ ವಿಷಯ ಓದಿದ್ದರೂ ಪರವಾಗಿಲ್ಲ. ನಾವು ಕೊಡುವ ತರಬೇತಿಯನ್ನು ಪಡೆದುಕೊಂಡರೆ ನಿಮಗೆ ಆರು ಅಥವಾ ಏಳಂಕೆಯ ಸಂಬಳ ದೊರೆಯುತ್ತದೆ ಎಂದರೆ ಮರುಳಾಗದವರು ಯಾರು? ಅದಕ್ಕೆ ತಕ್ಕಂತೆ ಸಾಮಾನ್ಯ ಶಿಕ್ಷಣ ಪಡೆದರೆ ಯಾವ ಉದ್ಯೋಗವೂ ದೊರೆಯುವುದಿಲ್ಲ ಎಂಬ ಭ್ರಮೆ­ಯಂತೂ ವ್ಯಾಪಕವಾಗಿದೆ.

ಇದರ ಜೊತೆಗೆ ಸರ್ಕಾರವೊಂದು ಅನಿಮೇಶನ್ ಮತ್ತು ಗೇಮಿಂಗ್ ನೀತಿಯನ್ನು ಪ್ರಕಟಿಸುವುದು, ಉದ್ಯ­ಮಿ­ಗಳ ಪ್ರತಿಷ್ಠಿತ ಸಂಘಟನೆಯೊಂದು ಅಂತಾ­ರಾಷ್ಟ್ರೀಯ ಖ್ಯಾತಿಯ ಸಂಸ್ಥೆಯೊಂದರ ಜೊತೆ ಸೇರಿ ಉದ್ಯಮ ಭಾರೀ ಭವಿಷ್ಯದ ಬಗ್ಗೆ ವರದಿ ಪ್ರಕಟಿಸುವುದು ಎಲ್ಲವೂ ಒಟ್ಟಿಗೆ ಸೇರಿದಾಗ ಒಂದಷ್ಟು ಸಾವಿರಾರು ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ತಲಾ ಲಕ್ಷಾಂತರ ರೂಪಾ­ಯಿಗಳನ್ನು ಕಳೆದು­ಕೊಳ್ಳುತ್ತಾರೆ. ಲಾಭ­ಕೋರ ತರಬೇತಿ ಮಾಫಿಯಾ ಕೋಟ್ಯಂತರ ರೂಪಾಯಿಗಳನ್ನು ಸಂಪಾದಿಸುತ್ತದೆ.


ಈ ಹಿಂದೆ ಕಂಪ್ಯೂಟರ್ ತರಬೇತಿಯಲ್ಲಿ ಆದ ವಂಚನೆಗಾಗಲೀ ಈಗ ಅನಿಮೇಶನ್ ತರ­ಬೇತಿಯ ಹೆಸರಿನಲ್ಲಿ ನಡೆದ ಮತ್ತು ನಡೆಯು­ತ್ತಿರುವ ವಂಚನೆಯನ್ನಾಗಲೀ ತಡೆಯುವುದಕ್ಕೆ ಸರ್ಕಾರ ಏನನ್ನೂ ಮಾಡಿಲ್ಲ. ಮೈಸೂರು ಸೇರಿದಂತೆ ಕರ್ನಾಟಕದ ಕೆಲವು ನಗರಗಳಲ್ಲಿ ಹಣ ಕಳೆದುಕೊಂಡು ಪ್ರಮಾಣ ಪತ್ರವನ್ನೂ ಪಡೆಯಲಾಗದ ವಿದ್ಯಾರ್ಥಿಗಳು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದಾಗ ‘ಅನಿಮೇಶನ್ ತರಬೇತಿ ಮಾಫಿಯಾ’ ಹೊಸತೊಂದು ತಂತ್ರ ಬಳಸಲಾರಂಭಿಸಿತು. ಅನಿಮೇಶನ್ ತರಬೇತಿ ಜಾಹೀರಾತುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ­ದವರಿಗೆಲ್ಲಾ ಇದು ತಿಳಿದ ವಿಚಾರವೇ.

‘ನಮ್ಮ ಸಂಸ್ಥೆಯು .... ವಿಶ್ವವಿದ್ಯಾಲಯದ ಜೊತೆ ಒಪ್ಪಂದ ಮಾಡಿಕೊಂಡಿದೆ’ ಎಂಬ ಸಾಲೊಂದು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳತೊಡಗಿತು. ಸಾಮಾನ್ಯವಾಗಿ ದೂರಶಿಕ್ಷಣ ಪದವಿಯನ್ನು ನೀಡುವ ವಿಶ್ವವಿದ್ಯಾಲಯಗಳೊಂದಿಗೆ ಈ ‘ಒಪ್ಪಂದ’ ಆಗಿರುತ್ತದೆ. ಅಂದರೆ ನಿರ್ದಿಷ್ಟ ವಿಶ್ವವಿದ್ಯಾಲಯ ದೂರಶಿಕ್ಷಣ ಪದವಿ ಕೋರ್ಸ್‌ಗೆ ವಿದ್ಯಾರ್ಥಿಗಳನ್ನು ಸೇರಿಸಲಾ­ಗುತ್ತದೆ.

ಆ ವಿಶ್ವವಿದ್ಯಾಲಯ ನಡೆಸುವ ಪರೀಕ್ಷೆ­ಯಲ್ಲಿ ಪಾಸಾದರೆ ಪದವಿ ಪ್ರಮಾಣ ಪತ್ರ ದೊರೆಯುತ್ತದೆ. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ, ಕರ್ನಾಟಕ ಮುಕ್ತ ವಿಶ್ವವಿದ್ಯ­ಾಲಯ ಹೀಗೆ ಅನೇಕ ವಿಶ್ವವಿದ್ಯಾಲಯಗಳು ದೂರಶಿಕ್ಷಣದಲ್ಲಿ ಅನಿಮೇಶನ್ ಪದವಿ ನೀಡಲು ಹೊರಟವು. ಇದರ ಮೂಲಕ ಅನಿಮೇಶನ್ ಶಿಕ್ಷಣಕ್ಕೆ ಒಂದು ಕ್ರಮಬದ್ಧ ಚೌಕಟ್ಟು ದೊರೆಯುವುದಕ್ಕಿಂತ ಹೆಚ್ಚಾಗಿ ‘ತರಬೇತಿ ಮಾಫಿಯಾ’ ನಡೆಸುವ ಅಕ್ರಮಕ್ಕೆ ಒಂದು ಮೊಹರು ಬಿದ್ದಂತಾಯಿತು.

ಮೂವತ್ತು ಸಾವಿರ ರೂಪಾಯಿಗಳ ಪದವಿಯಲ್ಲದ ಅಲ್ಪಾವಧಿಯ ಕೋರ್ಸ್‌ನಿಂದ ಆರಂಭಿಸಿ ವರ್ಷಕ್ಕೆ ಒಂದು ಲಕ್ಷದಷ್ಟು ಶುಲ್ಕವಿರುವ ಪದವಿ ಕೋರ್ಸ್‌ಗೆ ಸೇರಿದವರೀಗ ಮುಂದೇನು ಎಂಬ ದೊಡ್ಡ ಪ್ರಶ್ನೆಯನ್ನಿಟ್ಟುಕೊಂಡು ಅಲೆಯುತ್ತಿದ್ದಾರೆ. ಹೀಗೆ ಶುಲ್ಕ ಪಡೆದ ಹಲವು ಸಂಸ್ಥೆಗಳು ಸದ್ದಿಲ್ಲದೆ ಮುಚ್ಚಿ ಹೋಗಿವೆ.

ಇಷ್ಟರ ಮೇಲೆ ತರಬೇತಿ ಮುಗಿಸಿಕೊಂಡವರಿಗಾದರೂ ಕೆಲಸವಿದೆಯೇ ಎಂಬ ಪ್ರಶ್ನೆಗೆ ಪ್ರತೀ ತಿಂಗಳೂ ಮುಚ್ಚಿ ಹೋಗುತ್ತಿರುವ ಅನಿಮೇಶನ್ ಕಂಪೆನಿಗಳೇ ಉತ್ತರ ನೀಡುತ್ತಿವೆ. ಹೊರಗುತ್ತಿಗೆಯ ಸುವರ್ಣ ಕಾಲಘಟ್ಟದಲ್ಲಿ ಭಾರತಕ್ಕೆ ಬಂದ ಕೆಲವು ಹಾಲಿವುಡ್ ಅನಿಮೇಶನ್ ಕೆಲಸಗಳನ್ನು ಕಂಡು ಇದೊಂದು ದೊಡ್ಡ ಉದ್ಯಮ ಎಂಬ ಭ್ರಮೆಯನ್ನು ಬೆಳೆಸಿಕೊಂಡದ್ದರಲ್ಲಿ ಯಾರ್‍ಯಾರ ತಪ್ಪಿದೆ ಎಂದು ಹುಡುಕುವುದರಲ್ಲಿ ಹೆಚ್ಚಿನ ಅರ್ಥವೇನೂ ಉಳಿದಿಲ್ಲ. ಉದ್ಯಮ ಜಗತ್ತಿನಲ್ಲಿ ಇಂಥ ಏರಿಳಿತಗಳು ಸಾಮಾನ್ಯ. ಡಾಟ್ ಕಾಮ್ ಗುಳ್ಳೆ ಒಡೆದ ಘಟನೆಯಂತೂ ಎಲ್ಲರಿಗೂ ನೆನಪಿದೆ. ಆದರೆ ಇಂಥ ಸಂದರ್ಭಗಳನ್ನು ದುರುಪಯೋಗ ಪಡಿಸಿಕೊಳ್ಳುವ ‘ತರಬೇತಿ ಮಾಫಿಯಾ’ಕ್ಕೆ ತಡೆಯೊಡ್ಡುವಲ್ಲಿ ನಮ್ಮ ಸರ್ಕಾರ ವಿಫಲವಾಯಿತು ಎಂಬುದಂತೂ ನಿಜ.

ಮಾಹಿತಿ ತಂತ್ರಜ್ಞಾನದ ಹೊದಿಕೆಯಿರುವ ಎಲ್ಲವೂ ಒಳ್ಳೆಯದು ಮತ್ತು ಅಭಿವೃದ್ಧಿಗೆ ಪೂರಕ ಎಂಬ ಆಡಳಿತಾರೂಢರ ಭ್ರಮೆಯೇ ಈ ಬಗೆಯ ಶಕ್ತಿಗಳು ಪ್ರಬಲವಾಗುವುದಕ್ಕೆ ಮುಖ್ಯ ಕಾರಣ. ಕರ್ನಾಟಕ ಸರ್ಕಾರ 2012ರಲ್ಲಿ ಬಹಳ ಉತ್ಸಾಹದಿಂದ ಅನಿಮೇಶನ್ ಮತ್ತು ಗೇಮಿಂಗ್ ನೀತಿಯನ್ನು ಪ್ರಕಟಿಸುವ ಮೊದಲು ಕರ್ನಾಟಕದ ವಿವಿಧ ಅನಿಮೇಶನ್ ಸಂಸ್ಥೆಗಳ ಹಿನ್ನೆಲೆ­ಯ­ನ್ನೊಮ್ಮೆ ವಿಚಾರಿಸಿದ್ದರೆ ಸಾವಿರಾರು ವಿದ್ಯಾರ್ಥಿ­ಗಳು ಹಣ ಕಳೆದುಕೊಳ್ಳುವು­ದನ್ನಾದರೂ ತಡೆ­ಯ­ಬಹುದಿತ್ತು.

ಸದ್ಯಕ್ಕೆ ಅನಿಮೇಶನ್ ಕೋರ್ಸ್‌­ಗಳ ಹುಚ್ಚಿಗೆ ಕಾಲವೇ ಒಂದು ಅಲ್ಪವಿರಾಮ ಹಾಕಿದೆ. ಮುಂದಿನ ದಿನಗಳಲ್ಲಿ ಇನ್ನೊಂದು ಭ್ರಮೆಯನ್ನು ಹಣವಾಗಿ ಮಾರ್ಪಡಿಸಿಕೊಳ್ಳಲು ಇದೇ ಶಕ್ತಿಗಳು ಕಾಯುತ್ತಿರುತ್ತವೆ. ಅದಕ್ಕೂ ಮೊದಲು ಈ ಬಗೆಯ ‘ತರಬೇತಿ’ಗಳನ್ನು ನಿಯಂತ್ರಿಸುವುದಕ್ಕೆ ಸರ್ಕಾರವೊಂದು ವ್ಯವಸ್ಥೆ ಮಾಡುವುದು ಒಳಿತು. ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಟೈಪಿಂಗ್ ಮತ್ತು ಶೀಘ್ರಲಿಪಿ ಪರೀಕ್ಷೆಗಳಿಗೆ ಈಗ ಇರುವ ವಿದ್ಯಾರ್ಥಿಗಳ ಸಂಖ್ಯೆ ಒಂದೆರಡು ಸಾವಿರ ಮಾತ್ರ.

ಅದೇ ವ್ಯವಸ್ಥೆಯನ್ನು ಬಳಸಿಕೊಂಡು ಕಂಪ್ಯೂಟರ್ ತರಬೇತಿ, ಅನಿಮೇಶನ್ ತರಬೇತಿ ಮುಂತಾದ ತಥಾಕಥಿತ ತರಬೇತಿಗಳ ಮೇಲೊಂದು ನಿಗಾ ಇರಿಸುವ ವ್ಯವಸ್ಥೆ ಮಾಡಬೇಕು. ಕನಿಷ್ಠ ಸಂತ್ರಸ್ತ ವಿದ್ಯಾರ್ಥಿಗಳು ದೂರು ಕೊಡುವುದಕ್ಕೆ ಒಂದು ಅಧಿಕೃತ ಪ್ರಾಧಿಕಾರವೊಂದನ್ನಾದರೂ ಸರ್ಕಾರ ರೂಪಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT